رِسَالَةٌ
فِي الدِّمَاءِ الطَّبِيعِيَّةِ لِلنِّسَاءِ
ಮಹಿಳೆಯರ ನೈಸರ್ಗಿಕ ರಕ್ತಸ್ರಾವದ ನಿಯಮಗಳು
بِقَلَمِ فَضِيلَةِ الشَّيْخِ العَلَّامَةِ
مُحَمَّدِ بْنِ صَالِحٍ العُثَيْمِينِ
غَفَرَ اللَّهُ لَهُ وَلِوَالِدَيْهِ وَلِلمُسْلِمِينَ
ಲೇಖಕರು: ಫದೀಲತು ಶ್ಶೈಖ್ ಅಲ್-ಅಲ್ಲಾಮಾ
ಮುಹಮ್ಮದ್ ಬಿನ್ ಸ್ವಾಲಿಹ್ ಅಲ್-ಉಸೈಮೀನ್
ಅಲ್ಲಾಹು ಅವರನ್ನು, ಅವರ ತಂದೆ-ತಾಯಿಯನ್ನು ಹಾಗೂ ಸಮಸ್ತ ಮುಸ್ಲಿಮರನ್ನು ಕ್ಷಮಿಸಲಿ – ಆಮೀನ್
بِسْمِ اللهِ الرَّحمَنِ الرَّحِيمِ
ಮಹಿಳೆಯರ ನೈಸರ್ಗಿಕ ರಕ್ತಸ್ರಾವದ ನಿಯಮಗಳು
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಸರ್ವಸ್ತುತಿಗಳೂ ಅಲ್ಲಾಹನಿಗೆ ಮೀಸಲು. ನಾವು ಅವನನ್ನು ಸ್ತುತಿಸುತ್ತೇವೆ, ಅವನ ಸಹಾಯವನ್ನು ಕೋರುತ್ತೇವೆ, ಅವನಲ್ಲಿ ಕ್ಷಮೆಯಾಚಿಸುತ್ತೇವೆ ಮತ್ತು ಪಶ್ಚಾತ್ತಾಪದೊಂದಿಗೆ ಅವನತ್ತ ಮರಳುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ಮತ್ತು ನಮ್ಮ ಕರ್ಮಗಳ ದುಷ್ಫಲದಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ. ಮುಹಮ್ಮದ್(ಸ) ರವರು ಅವನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅಲ್ಲಾಹು ಅವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಾಬಾಗಳ ಮೇಲೆ ಮತ್ತು ಪ್ರತಿಫಲ ದಿನದ ತನಕ ಅವರನ್ನು ಅತ್ಯುತ್ತಮವಾಗಿ ಅನುಸರಿಸಿದವರ ಮೇಲೆ ಕೃಪೆ ಮತ್ತು ಶಾಂತಿಯನ್ನು ವರ್ಷಿಸುತ್ತಿರಲಿ – ಆಮೀನ್.
ಮುಂದುವರಿದು ಹೇಳುವುದೇನೆಂದರೆ: ಮಹಿಳೆಯರಲ್ಲಿ ಗೋಚರವಾಗುವ ಹೈದ್ (ಋತುಸ್ರಾವ), ಇಸ್ತಿಹಾದ (ರಕ್ತಸ್ರಾವ) ಮತ್ತು ನಿಫಾಸ್ (ಹೆರಿಗೆಸ್ರಾವ) ಬಹಳ ಪ್ರಾಮುಖ್ಯತೆಯಿರುವ ವಿಷಯಗಳಾಗಿವೆ. ಅವುಗಳನ್ನು ವಿವರಿಸುವುದು, ಅವುಗಳ ನಿಯಮಗಳನ್ನು ತಿಳಿಯುವುದು ಮತ್ತು ಅವುಗಳ ಬಗ್ಗೆ ವಿದ್ವಾಂಸರು ಹೇಳಿದ ಅಭಿಪ್ರಾಯಗಳಲ್ಲಿ ಸರಿ-ತಪ್ಪುಗಳನ್ನು ಪ್ರತ್ಯೇಕಿಸಿ ತಿಳಿಯುವುದು ಅತ್ಯಗತ್ಯವಾಗಿದೆ. ಅದೇ ರೀತಿ ವಿದ್ವಾಂಸರು ಹೇಳಿದ ಈ ಅಭಿಪ್ರಾಯಗಳಲ್ಲಿ ಯಾವುದು ಪ್ರಬಲ ಮತ್ತು ಯಾವುದು ದುರ್ಬಲ ಎಂದು ತಿಳಿಯಲು ನಾವು ಅವಲಂಬಿಸಬೇಕಾದುದು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ(ಸ) ರವರ ಸುನ್ನತ್ತನ್ನಾಗಿದೆ. ಏಕೆಂದರೆ:
1. ಇವೆರಡು ಇಸ್ಲಾಂ ಧರ್ಮದ ಮೂಲಭೂತ ಅಡಿಪಾಯಗಳಾಗಿವೆ. ಸರ್ವಶಕ್ತನಾದ ಅಲ್ಲಾಹನ ನಿಯಮಗಳನ್ನು ಇವುಗಳ ಆಧಾರದಲ್ಲಿ ನಿರ್ಮಿಸಲಾಗುತ್ತದೆ. ಈ ನಿಯಮಗಳ ಮೂಲಕವೇ ತನ್ನನ್ನು ಆರಾಧಿಸಬೇಕೆಂದು ಅಲ್ಲಾಹು ತನ್ನ ದಾಸರಿಗೆ ಆದೇಶಿಸಿದ್ದಾನೆ ಮತ್ತು ಅದನ್ನು ಅವರಿಗೆ ಹೊಣೆಗಾರಿಕೆಯನ್ನಾಗಿ ಮಾಡಿದ್ದಾನೆ.
2. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತನ್ನು ಅವಲಂಬಿಸಿ ಜೀವಿಸುವುದರಿಂದ ಹೃದಯಕ್ಕೆ ಶಾಂತಿ ದೊರಕುತ್ತದೆ, ಎದೆಯು ನಿರಾಳವಾಗುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಹೊಣೆಗಾರಿಕೆಯನ್ನು ನೆರವೇರಿಸಿದಂತಾಗುತ್ತದೆ.
3. (ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ ಅಲ್ಲದ) ಇತರ ಮೂಲಗಳ ಬಗ್ಗೆ ಹೇಳುವುದಾದರೆ, ಅವುಗಳಿಗೆ ಪುರಾವೆಗಳನ್ನು ನೀಡಲಾಗುತ್ತದೆಯೇ ವಿನಾ ಅವುಗಳ ಮೂಲಕ ಪುರಾವೆಗಳನ್ನು ಪಡೆಯಲಾಗುವುದಿಲ್ಲ.
ಆದ್ದರಿಂದ ಪುರಾವೆಯಿರುವುದು ಸರ್ವಶಕ್ತನಾದ ಅಲ್ಲಾಹನ ವಚನಗಳಲ್ಲಿ ಮತ್ತು ಅವನ ಸಂದೇಶವಾಹಕರ(ಸ) ವಚನಗಳಲ್ಲಿ ಮಾತ್ರ. ಪ್ರಬಲವಾದ ಅಭಿಪ್ರಾಯದ ಪ್ರಕಾರ, ಸಹಾಬಾಗಳಲ್ಲಿರುವ ವಿದ್ವಾಂಸರ ಮಾತುಗಳಲ್ಲೂ ಪುರಾವೆಯಿದೆ. ಆದರೆ ಅವರು ಹೇಳಿದ ಮಾತು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿರುವ ವಚನಗಳಿಗೆ ವಿರುದ್ಧವಾಗಿರಬಾರದು ಎಂಬ ಷರತ್ತಿನ ಮೇರೆಗೆ ಮಾತ್ರ. ಅದೇ ರೀತಿ ಒಬ್ಬ ಸಹಾಬಿಯ ಮಾತು ಇನ್ನೊಬ್ಬ ಸಹಾಬಿಯ ಮಾತಿಗೆ ವಿರುದ್ಧವಾಗಿರಬಾರದು ಎಂಬ ಷರತ್ತು ಕೂಡ ಇದೆ. ಸಹಾಬಿಗಳ ಮಾತು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿಗೆ ವಿರುದ್ಧವಾಗಿದ್ದರೆ, ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿರುವುದನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ. ಒಬ್ಬ ಸಹಾಬಿಯ ಮಾತು ಇನ್ನೊಬ್ಬ ಸಹಾಬಿಯ ಮಾತಿಗೆ ವಿರುದ್ಧವಾಗಿದ್ದರೆ, ಈ ಎರಡು ಮಾತುಗಳಲ್ಲಿ ಯಾವುದು ಹೆಚ್ಚು ಪ್ರಬಲವೆಂದು ನೋಡಿ ಅದನ್ನು ಸ್ವೀಕರಿಸತಕ್ಕದ್ದು. ಏಕೆಂದರೆ ಅಲ್ಲಾಹನು ಹೇಳುತ್ತಾನೆ:
﴿...فَإِن تَنَٰزَعۡتُمۡ فِي شَيۡءٖ فَرُدُّوهُ إِلَى ٱللَّهِ وَٱلرَّسُولِ إِن كُنتُمۡ تُؤۡمِنُونَ بِٱللَّهِ وَٱلۡيَوۡمِ ٱلۡأٓخِرِۚ ذَٰلِكَ خَيۡرٞ وَأَحۡسَنُ تَأۡوِيلًا﴾
ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ. [ಅನ್ನಿಸಾ:59]
ಇದು ಮಹಿಳೆಯರಲ್ಲಿ ಗೋಚರವಾಗುವ ನೈಸರ್ಗಿಕ ರಕ್ತದ ಬಗ್ಗೆ ಅತ್ಯಗತ್ಯವಾಗಿ ತಿಳಿದಿರಬೇಕಾದ ವಿಷಯಗಳನ್ನು ಮತ್ತು ಅದರ ನಿಯಮಗಳನ್ನು ಒಳಗೊಂಡ ಸಂಕ್ಷಿಪ್ತ ಕೃತಿಯಾಗಿದೆ. ಇದು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಅಧ್ಯಾಯ ಒಂದು: ಋತುಸ್ರಾವದ ಅರ್ಥ ಮತ್ತು ಅದರ ಯುಕ್ತಿ.
ಅಧ್ಯಾಯ ಎರಡು: ಋತುಸ್ರಾವದ ಕಾಲ ಮತ್ತು ಅವಧಿ.
ಅಧ್ಯಾಯ ಮೂರು: ಋತುಸ್ರಾವದ ಸಮಯದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳು.
ಅಧ್ಯಾಯ ನಾಲ್ಕು: ಋತುಸ್ರಾವದ ನಿಯಮಗಳು.
ಅಧ್ಯಾಯ ಐದು: ರಕ್ತಸ್ರಾವ ಮತ್ತು ಅದರ ನಿಯಮಗಳು.
ಅಧ್ಯಾಯ ಆರು: ಹೆರಿಗೆಸ್ರಾವ ಮತ್ತು ಅದರ ನಿಯಮಗಳು.
ಅಧ್ಯಾಯ ಏಳು: ಋತುಸ್ರಾವವನ್ನು ನಿಲ್ಲಿಸುವ ಅಥವಾ ಆರಂಭಿಸುವ ಔಷಧಿಗಳನ್ನು ಮತ್ತು ಗರ್ಭವನ್ನು ನಿಲ್ಲಿಸುವ ಅಥವಾ ಗರ್ಭಪಾತಕ್ಕೆ ಕಾರಣವಾಗುವ ಔಷಧಿಗಳನ್ನು ಸೇವಿಸುವುದು.
ಅಧ್ಯಾಯ ಒಂದು: ಋತುಸ್ರಾವದ ಅರ್ಥ ಮತ್ತು ಅದರ ಯುಕ್ತಿ
ಅರೇಬಿಕ್ ಭಾಷೆಯಲ್ಲಿ ಹೈದ್ (ಋತುಸ್ರಾವ) ಎಂದರೆ, ದ್ರವವು ಸ್ರವಿಸುವುದು ಅಥವಾ ಹರಿಯುವುದು.
ಇಸ್ಲಾಂ ಧರ್ಮದ ಪಾರಿಭಾಷಿಕ ಅರ್ಥದಲ್ಲಿ ಹೈದ್ (ಋತುಸ್ರಾವ) ಎಂದರೆ, ಮಹಿಳೆಯರಲ್ಲಿ ಯಾವುದೇ ಕಾರಣವಿಲ್ಲದೆ ನಿಶ್ಚಿತ ಸಮಯಗಳಲ್ಲಿ ನೈಸರ್ಗಿಕವಾಗಿ ಉಂಟಾಗುವ ರಕ್ತ. ಅದೊಂದು ನೈಸರ್ಗಿಕ ರಕ್ತವಾಗಿದ್ದು, ಅದಕ್ಕೆ ಕಾಯಿಲೆ, ಗಾಯ, ಗರ್ಭಪಾತ, ಹೆರಿಗೆ ಮುಂತಾದ ಯಾವುದೇ ಕಾರಣಗಳಿರುವುದಿಲ್ಲ. ಇದೊಂದು ನೈಸರ್ಗಿಕ ರಕ್ತವಾಗಿರುವುದರಿಂದ ಇದು ಮಹಿಳೆಯರ ಸ್ತಿತಿ, ಪರಿಸರ ಮತ್ತು ವಾತಾವರಣಕ್ಕೆ ಅನುಗುಣವಾಗಿ ಬದಲಾಗುತ್ತದೆ. ಆದ್ದರಿಂದ ಋತುಸ್ರಾವದ ವಿಷಯದಲ್ಲಿ ಮಹಿಳೆಯರ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿರುತ್ತವೆ.
ಋತುಸ್ರಾವದ ಯುಕ್ತಿ: ಭ್ರೂಣವು ತಾಯಿಯ ಗರ್ಭಾಶಯದಲ್ಲಿರುವುದರಿಂದ, ಅದಕ್ಕೆ ಗರ್ಭಾಶಯದ ಹೊರಗಿರುವ ಶಿಶುಗಳಂತೆ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ತಲುಪಿಸಲು ಮನುಷ್ಯರಲ್ಲೇ ಅತ್ಯಧಿಕ ದಯಾಳುವಾಗಿರುವ ವ್ಯಕ್ತಿಗೂ (ತಾಯಿಗೂ) ಸಾಧ್ಯವಿಲ್ಲ. ಆದ್ದರಿಂದ ಸರ್ವಶಕ್ತನಾದ ಅಲ್ಲಾಹು ಮಹಿಳೆಯ ಗರ್ಭಾಶಯದಲ್ಲಿ ದ್ರವ್ಯವನ್ನು ಸ್ರವಿಸುವ ರಕ್ತಕಣಗಳನ್ನು ಉಂಟು ಮಾಡುತ್ತಾನೆ. ಭ್ರೂಣವು ಆಹಾರ ಸೇವನೆ ಅಥವಾ ಜೀರ್ಣವ್ಯವಸ್ಥೆಯ ಅಗತ್ಯವಿಲ್ಲದೆ ಗರ್ಭಾಶಯದೊಳಗೆ ಇದರ ಸಹಾಯದಿಂದ ಪೋಷಕಾಂಶಗಳನ್ನು ಪಡೆಯುತ್ತದೆ. ಈ ರಕ್ತಕಣಗಳು ಹೊಕ್ಕುಳ ಬಳ್ಳಿಯ ಮೂಲಕ ಭ್ರೂಣದ ದೇಹದ ರಕ್ತನಾಳಗಳನ್ನು ಪ್ರವೇಶಿಸಿ ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅತ್ಯುತ್ತಮ ಸೃಷ್ಟಿಕರ್ತನಾದ ಅಲ್ಲಾಹು ಅನುಗ್ರಹಪೂರ್ಣನಾಗಿದ್ದಾನೆ.
ಇದು ಋತುಸ್ರಾವದ ಹಿಂದಿರುವ ಯುಕ್ತಿಯಾಗಿದೆ. ಈ ಕಾರಣದಿಂದಲೇ ಮಹಿಳೆ ಗರ್ಭಿಣಿಯಾದಾಗ ಋತುಸ್ರಾವ ನಿಲ್ಲುತ್ತದೆ. ಅಪರೂಪವಾಗಿಯಲ್ಲದೆ ಆಕೆಗೆ ಋತುಸ್ರಾವವಾಗುವುದಿಲ್ಲ. ಅದೇ ರೀತಿ, ಸ್ತನಪಾನ ಮಾಡುವ ತಾಯಂದಿರಿಗೂ ಕೂಡ. ಇವರಿಗೆ ವಿಶೇಷವಾಗಿ ಸ್ತನಪಾನದ ಆರಂಭಿಕ ಘಟ್ಟಗಳಲ್ಲಿ ಋತುಸ್ರಾವವಾಗುವುದು ಬಹಳ ಅಪರೂಪ.
ಅಧ್ಯಾಯ ಎರಡು: ಋತುಸ್ರಾವದ ಕಾಲ ಮತ್ತು ಅವಧಿ
ಈ ಅಧ್ಯಾಯವನ್ನು ಎರಡು ಹಂತಗಳಲ್ಲಿ ವಿವರಿಸಲಾಗುತ್ತದೆ:
ಮೊದಲನೆಯ ಹಂತ: ಋತುಸ್ರಾವ ಆರಂಭವಾಗುವ ಪ್ರಾಯ.
ಎರಡನೆಯ ಹಂತ: ಋತುಸ್ರಾವದ ಅವಧಿ
ಮೊದಲನೆಯ ಹಂತ: ಮಹಿಳೆಯರಿಗೆ ಸಾಮಾನ್ಯವಾಗಿ 12ನೇ ಪ್ರಾಯದಿಂದ ತೊಡಗಿ 50ನೇ ಪ್ರಾಯದವರೆಗೆ ಋತುಸ್ರಾವವಾಗುತ್ತದೆ. ಕೆಲವೊಮ್ಮೆ ಮಹಿಳೆಯರ ಸ್ಥಿತಿ, ಪರಿಸರ ಮತ್ತು ವಾತಾವರಣಕ್ಕೆ ಅನುಗುಣವಾಗಿ 12ನೇ ಪ್ರಾಯಕ್ಕಿಂತ ಮೊದಲೇ ಋತುಸ್ರಾವವಾಗಬಹುದು. ಹಾಗೆಯೇ ಕೆಲವೊಮ್ಮೆ 50ನೇ ಪ್ರಾಯದ ನಂತರವೂ ಋತುಸ್ರಾವವಾಗಬಹುದು.
ಮಹಿಳೆಯರಿಗೆ ಋತುಸ್ರಾವವು ಪ್ರಾರಂಭವಾಗುವ ಮತ್ತು ಅದು ಸಂಪೂರ್ಣವಾಗಿ ನಿಂತುಹೋಗುವ ನಿಶ್ಚಿತ ಪ್ರಾಯವಿದೆಯೇ? ಅಂದರೆ ಆ ಪ್ರಾಯಕ್ಕೆ ಮೊದಲು ಮತ್ತು ನಂತರ ಅವರಿಗೆ ಋತುಸ್ರಾವವಾಗದ, ಮತ್ತು ಆ ಪ್ರಾಯಕ್ಕೆ ಮೊದಲು ಅಥವಾ ನಂತರ ರಕ್ತ ಸ್ರವಿಸಿದರೆ ಅದು ಕೆಟ್ಟ ರಕ್ತ ಋತುಸ್ರಾವವಲ್ಲ ಎಂದು ಖಚಿತವಾಗಿ ಹೇಳಬಹುದಾದಂತಹ ನಿಶ್ಚಿತ ಪ್ರಾಯವಿದೆಯೇ? ಈ ವಿಷಯದಲ್ಲಿ ವಿದ್ವಾಂಸರಿಗೆ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಭಿನ್ನಾಭಿಪ್ರಾಯಗಳಿವೆ.
ವಿದ್ವಾಂಸರು ಈ ವಿಷಯದಲ್ಲಿ ಭಿನ್ನಮತದಲ್ಲಿದ್ದಾರೆ. ವಿದ್ವಾಂಸರ ಎಲ್ಲಾ ವಿಭಿನ್ನ ಅಭಿಪ್ರಾಯಗಳನ್ನು ಉಲ್ಲೇಖಿಸಿದ ನಂತರ ಇಮಾಂ ದಾರಿಮಿ ಹೇಳುತ್ತಾರೆ: “ನನ್ನ ಪ್ರಕಾರ ಇವೆಲ್ಲವೂ ತಪ್ಪು ಅಭಿಪ್ರಾಯಗಳು. ಏಕೆಂದರೆ ಈ ಎಲ್ಲಾ ವಿಷಯಗಳಲ್ಲೂ ನಾವು ರಕ್ತವು ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬುದನ್ನು ನೋಡಬೇಕಾಗಿದೆ. ರಕ್ತವು ಅಸ್ತಿತ್ವದಲ್ಲಿದೆ ಎಂದಾದರೆ, ಅದು ಎಷ್ಟೇ ಚಿಕ್ಕ ಪ್ರಮಾಣದಲ್ಲಿದ್ದರೂ, ಅಥವಾ ಯಾವುದೇ ಸ್ಥಿತಿಯಲ್ಲಿ ಅಥವಾ ವಯಸ್ಸಿನಲ್ಲಾದರೂ ಅದನ್ನು ಋತುಸ್ರಾವದ ರಕ್ತವೆಂದು ಪರಿಗಣಿಸುವುದು ಕಡ್ಡಾಯವಾಗಿದೆ.” ಅಲ್ಲಾಹನು ಹೆಚ್ಚಾಗಿ ಬಲ್ಲವನು.1
ದಾರಿಮಿ ಹೇಳಿದ ಈ ಅಭಿಪ್ರಾಯವೇ ಸರಿಯಾಗಿದೆ. ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯ ಈ ಅಭಿಪ್ರಾಯವನ್ನು ಆರಿಸಿದ್ದಾರೆ. ಮಹಿಳೆ ಯಾವುದೇ ವಯಸ್ಸಿನಲ್ಲಿ ಋತುಸ್ರಾವದ ರಕ್ತವನ್ನು ಕಂಡರೂ ಆಕೆಯನ್ನು ಋತುಮತಿಯೆಂದೇ ಪರಿಗಣಿಸಬೇಕು. ಅದು 9 ವರ್ಷಕ್ಕಿಂತ ಕಡಿಮೆ ಪ್ರಾಯದಲ್ಲಾದರೂ ಅಥವಾ 50 ವರ್ಷಕ್ಕಿಂತ ಹೆಚ್ಚು ಪ್ರಾಯದಲ್ಲಾದರೂ ಸರಿ.2 ಏಕೆಂದರೆ, ಅಲ್ಲಾಹು ಮತ್ತು ಪ್ರವಾದಿ(ಸ) ರವರು ಋತುಸ್ರಾವದ ನಿಯಮಗಳನ್ನು ಅದರ ಅಸ್ತಿತ್ವದೊಡನೆ ಜೋಡಿಸಿದ್ದಾರೆ. ಅಲ್ಲಾಹು ಮತ್ತು ಪ್ರವಾದಿ(ಸ) ರವರು ಋತುಸ್ರಾವಕ್ಕೆ ಒಂದು ನಿರ್ದಿಷ್ಟ ಪ್ರಾಯವನ್ನು ನಿಗದಿಪಡಿಸಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಾವು ರಕ್ತದ ಅಸ್ತಿತ್ವದ ಕಡೆಗೆ ಮರಳಬೇಕಾದುದು ಕಡ್ಡಾಯವಾಗಿದೆ. ಏಕೆಂದರೆ ರಕ್ತದ ಅಸ್ತಿತ್ವದೊಂದಿಗೆ ಋತುಸ್ರಾವದ ನಿಯಮಗಳನ್ನು ಜೋಡಿಸಲಾಗಿದೆ. ಋತುಸ್ರಾವಕ್ಕೆ ನಿರ್ದಿಷ್ಟ ಪ್ರಾಯವನ್ನು ನಿಗದಿಪಡಿಸಬೇಕಾದರೆ ಅದಕ್ಕೆ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಿಂದ ಪುರಾವೆಯನ್ನು ತರಬೇಕಾದ ಅಗತ್ಯವಿದೆ. ಆದರೆ ಅವುಗಳಲ್ಲಿ ಅಂತಹ ಯಾವುದೇ ಪುರಾವೆಯಿಲ್ಲ.
ಎರಡನೆಯ ಹಂತ: ಋತುಸ್ರಾವದ ಅವಧಿ. ಅಂದರೆ ಋತುಸ್ರಾವವು ಅಸ್ತಿತ್ವದಲ್ಲಿರುವ ಸಮಯ.
ಈ ವಿಷಯದಲ್ಲೂ ಕೂಡ ವಿದ್ವಾಂಸರಿಗೆ ಸುಮಾರು ಆರೇಳು ವಿಭಿನ್ನ ಅಭಿಪ್ರಾಯಗಳಿವೆ. ಇಬ್ನ್ ಮುಂದಿರ್ (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೇಳುತ್ತಾರೆ: “ಒಂದು ಗುಂಪು ವಿದ್ವಾಂಸರ ಅಭಿಪ್ರಾಯ ಹೀಗಿದೆ: ಋತುಸ್ರಾವದ ಕನಿಷ್ಠ ಅವಧಿ ಅಥವಾ ಗರಿಷ್ಠ ಅವಧಿಯನ್ನು ದಿನಗಳಲ್ಲಿ ನಿಗದಿಪಡಿಸಲಾಗಿಲ್ಲ.”3
ನಾನು ಹೇಳುತ್ತೇನೆ: ಈ ಅಭಿಪ್ರಾಯವು ಈ ಹಿಂದೆ ಇಮಾಂ ದಾರಿಮಿಯವರು ಹೇಳಿದ ಅಭಿಪ್ರಾಯದಂತಿದೆ. ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯರವರೂ ಈ ಅಭಿಪ್ರಾಯವನ್ನೇ ಆಯ್ಕೆ ಮಾಡಿದ್ದಾರೆ. ಇದು ಸರಿಯಾದ ಅಭಿಪ್ರಾಯವಾಗಿದೆ. ಏಕೆಂದರೆ ಪವಿತ್ರ ಕುರ್‌ಆನ್, ಪ್ರವಾದಿ ಸುನ್ನತ್ ಮತ್ತು ಕಿಯಾಸ್ ಇದನ್ನೇ ಸೂಚಿಸುತ್ತದೆ.
ಮೊದಲನೇ ಪುರಾವೆ ಅಲ್ಲಾಹನ ವಚನ:
﴿وَيَسۡـَٔلُونَكَ عَنِ ٱلۡمَحِيضِۖ قُلۡ هُوَ أَذٗى فَٱعۡتَزِلُواْ ٱلنِّسَآءَ فِي ٱلۡمَحِيضِ وَلَا تَقۡرَبُوهُنَّ حَتَّىٰ يَطۡهُرۡنَۖ...﴾
ಅವರು ನಿಮ್ಮೊಂದಿಗೆ ಋತುಸ್ರಾವದ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಹೊಲಸು. ಆದ್ದರಿಂದ ಋತುಸ್ರಾವದ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ. ಅವರು ಶುದ್ಧವಾಗುವ ತನಕ ಅವರ ಬಳಿಗೆ ಹೋಗಬೇಡಿ... [ಅಲ್-ಬಖರ:222], ಋತುಸ್ರಾವದ ಗರಿಷ್ಠ ಅವಧಿಯು ಅವರು ಶುದ್ಧರಾಗುವ ತನಕ ಎಂದು ಅಲ್ಲಾಹು ಇಲ್ಲಿ ಹೇಳಿದ್ದಾನೆ. ಒಂದು ದಿನ-ರಾತ್ರಿಯನ್ನೋ, ಮೂರು ದಿನಗಳನ್ನೋ, ಅಥವಾ 15 ದಿನಗಳನ್ನೋ ಋತುಸ್ರಾವದ ಗರಿಷ್ಠ ಅವಧಿಯೆಂದು ಹೇಳಿಲ್ಲ. ಆದ್ದರಿಂದ ಈ ಆಯತ್ ಸೂಚಿಸುವಂತೆ, ಇಲ್ಲಿ ಮಹಿಳೆಯರಿಂದ ದೂರವಿರಬೇಕು ಎಂಬ ನಿಯಮಕ್ಕೆ ಕಾರಣವು (ಇಲ್ಲತ್) ಋತುಸ್ರಾವವು ಅಸ್ತಿತ್ವದಲ್ಲಿರುವುದು ಅಥವಾ ಅಸ್ತಿತ್ವದಲ್ಲಿಲ್ಲದಿರುವುದಾಗಿದೆ. ಆದ್ದರಿಂದ ಋತುಸ್ರಾವವು ಅಸ್ತಿತ್ವದಲ್ಲಿರುವಾಗ ಈ ನಿಯಮವು ಸಾಬೀತಾಗುತ್ತದೆ ಮತ್ತು ಮಹಿಳೆಯು ಶುದ್ಧಳಾದಾಗ ಅದರ ನಿಯಮಗಳು ಕೊನೆಗೊಳ್ಳುತ್ತವೆ.
ಎರಡನೇ ಪುರಾವೆ: ಸಹೀಹ್ ಮುಸ್ಲಿಂನಲ್ಲಿರುವ ಒಂದು ಹದೀಸಿನಲ್ಲಿ ಹೀಗಿದೆ: ಉಮ್ರ ನಿರ್ವಹಿಸಲು ಇಹ್ರಾಮ್ ಧರಿಸಿದ ನಂತರ ಆಯಿಶ(ರ) ರಿಗೆ ಋತುಸ್ರಾವವಾಯಿತು. ಆಗ ಪ್ರವಾದಿ(ಸ) ರವರು ಅವರೊಡನೆ ಹೇಳಿದರು:
«افْعَلِي مَا يَفْعَلُ الْحَاجُّ، غَيْرَ أَنْ لَا تَطُوفِي بِالْبَيْتِ حَتَّى تَطْهُرِي». قَالَتْ: فَلَمَّا كَانَ يَوْمُ النَّحْرِ طَهُرَتْ، فَأَفَاضَتْ.
“ಹಾಜಿಗಳು ಮಾಡುವುದನ್ನೆಲ್ಲಾ ಮಾಡು. ಆದರೆ ಶುದ್ಧಳಾಗುವ ತನಕ ನೀನು ಕಅಬಾಲಯಕ್ಕೆ ತವಾಫ್ ಮಾಡಬಾರದು.” ಆಯಿಶ(ರ) ಹೇಳುತ್ತಾರೆ: “ಕುರ್ಬಾನಿಯ ದಿನ ನಾನು ಶುದ್ಧಿಯಾದೆ ಮತ್ತು ತವಾಫ್ ಮಾಡಿದೆನು.” ಹದೀಸ್4.
ಸಹೀಹ್ ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಪ್ರವಾದಿ (ಸ) ರವರು ಆಕೆಗೆ ಹೇಳಿದರು:
«انتَظِرِي فَإِذَا طَهُرْتِ فَاخْرُجِي إِلَى التَّنْعِيمِ».
ಕಾದಿರು. ನೀನು ತಹಾರಃ ಹೊಂದಿದಾಗ ತನ್ಈಮ್‌ಗೆ ಹೊರಡು."5, ಪ್ರವಾದಿ(ಸ) ರವರು ಋತುಸ್ರಾವದ ಗರಿಷ್ಠ ಅವಧಿಯನ್ನು ಶುದ್ಧಿಯಾಗುವ ತನಕ ಎಂದು ಹೇಳಿದ್ದಾರೆ. ಒಂದು ನಿರ್ದಿಷ್ಟ ಸಮಯವನ್ನು ಅದರ ಗರಿಷ್ಠ ಅವಧಿಯೆಂದು ಹೇಳಲಿಲ್ಲ. ಆದ್ದರಿಂದ, ಋತುಸ್ರಾವದ ನಿಯಮವು ಋತುಸ್ರಾವವು ಅಸ್ತಿತ್ವದಲ್ಲಿರುವುದು ಅಥವಾ ಅಸ್ತಿತ್ವದಲ್ಲಿಲ್ಲದಿರುವುದನ್ನು ಹೊಂದಿಕೊಂಡಿದೆಯೆಂದು ಇದು ಸೂಚಿಸುತ್ತದೆ.
ಮೂರನೇ ಪುರಾವೆ: ಋತುಸ್ರಾವದ ಅವಧಿಯ ಬಗ್ಗೆ ಕೆಲವು ಕರ್ಮಶಾಸ್ತ್ರಜ್ಞರು ವ್ಯಕ್ತಪಡಿಸಿದ ವಿಭಿನ್ನ ಅಂದಾಜುಗಳು ಮತ್ತು ವಿವರಣೆಗಳು, ಅವುಗಳ ವಿವರಣೆಯ ಅಗತ್ಯ ಮತ್ತು ಬೇಡಿಕೆ ಇದ್ದೂ ಸಹ, ಅಲ್ಲಾಹನ ಗ್ರಂಥದಲ್ಲೋ ಪ್ರವಾದಿ ಸುನ್ನತ್ತಿನಲ್ಲೋ ಕಂಡುಬರುವುದಿಲ್ಲ. ಅಲ್ಲಾಹನ ದಾಸರು ಈ ಅಂದಾಜುಗಳು ಮತ್ತು ವಿವರಣೆಗಳನ್ನು ತಿಳಿಯುವುದು ಮತ್ತು ಅವುಗಳ ಪ್ರಕಾರ ಅಲ್ಲಾಹನನ್ನು ಆರಾಧಿಸುವುದು ಕಡ್ಡಾಯವಾಗಿದ್ದರೆ, ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಅಲ್ಲಾಹು ಮತ್ತು ಪ್ರವಾದಿ(ಸ) ರವರು ಅದನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತಿದ್ದರು. ಏಕೆಂದರೆ, ನಮಾಝ್, ಉಪವಾಸ, ವಿವಾಹ, ತಲಾಕ್, ವಾರೀಸು ಹಕ್ಕು ಮುಂತಾದ ಆರಾಧನಾ ಕರ್ಮಗಳ ಅನೇಕ ಪ್ರಮುಖ ನಿಯಮಗಳು ಋತುಸ್ರಾವದ ಮೇಲೆ ಅವಲಂಬಿತವಾಗಿವೆ. ನಮಾಝ್‌ಗಳ ಸಂಖ್ಯೆ, ಅವುಗಳ ಸಮಯ, ರುಕೂ ಮತ್ತು ಸುಜೂದ್ ಮುಂತಾದವುಗಳನ್ನು ಅಲ್ಲಾಹು ಮತ್ತು ಪ್ರವಾದಿ(ಸ) ರವರು ವಿವರಿಸಿಕೊಟ್ಟಂತೆ ಇದನ್ನೂ ವಿವರಿಸಿಕೊಡುತ್ತಿದ್ದರು. ಅದೇ ರೀತಿ ಯಾವೆಲ್ಲಾ ಸಂಪತ್ತಿಗೆ ಝಕಾತ್ ಕಡ್ಡಾಯವಾಗಿದೆ, ಅವುಗಳ ನಿಸಾಬ್ ಎಷ್ಟು, ಯಾವ ಪ್ರಮಾಣದಲ್ಲಿ ಝಕಾತ್ ಕೊಡಬೇಕು, ಯಾರಿಗೆ ಕೊಡಬೇಕು, ಅದೇ ರೀತಿ ಉಪವಾಸದ ಅವಧಿ, ಯಾವಾಗ ಉಪವಾಸ ಆಚರಿಸಬೇಕು, ಹಜ್ಜ್ ಯಾವಾಗ ಮತ್ತು ಹೇಗೆ ನಿರ್ವಹಿಸಬೇಕು ಮುಂತಾದವುಗಳನ್ನು ವಿವರಿಸಿಕೊಟ್ಟಂತೆ ಇದನ್ನೂ ವಿವರಿಸಿಕೊಡುತ್ತಿದ್ದರು. ಎಲ್ಲಿಯವರೆಗೆಂದರೆ, ಅಲ್ಲಾಹು ಮತ್ತು ಪ್ರವಾದಿ(ಸ) ರವರು ಆಹಾರ ಸೇವಿಸುವುದು, ಮಲಗುವುದು, ಸಂಭೋಗ ಮಾಡುವುದು, ಸಭೆಯಲ್ಲಿ ಕುಳಿತುಕೊಳ್ಳುವುದು, ಮನೆಯನ್ನು ಪ್ರವೇಶ ಮಾಡುವುದು ಮತ್ತು ಮನೆಯಿಂದ ಹೊರಡುವುದು ಮುಂತಾದ ಅನೇಕ ಶಿಷ್ಟಾಚಾರಗಳನ್ನು ವಿವರಿಸಿಕೊಟ್ಟಿದ್ದಾರೆ. ಅದೇ ರೀತಿ ಮಲಮೂತ್ರ ವಿಸರ್ಜನೆಯ ಶಿಷ್ಟಾಚಾರಗಳನ್ನೂ ವಿವರಿಸಿಕೊಟ್ಟಿದ್ದಾರೆ. ಇಸ್ತಿಜ್ಮಾರ್(ಮಲಮೂತ್ರವನ್ನು ಶುಚಿಗೊಳಿಸಲು ಕಲ್ಲುಗಳನ್ನು ಬಳಸುವುದು) ಮಾಡುವಾಗ ಎಷ್ಟು ಬಾರಿ ಸವರಬೇಕೆಂಬ ಅತ್ಯಂತ ಸೂಕ್ಷ್ಮ ವಿಚಾರಗಳನ್ನೂ ಸಹ ವಿವರಿಸಿಕೊಟ್ಟು ಅಲ್ಲಾಹು ಈ ಧರ್ಮವನ್ನು ಪೂರ್ತೀಕರಿಸಿದ್ದಾನೆ ಮತ್ತು ಸತ್ಯವಿಶ್ವಾಸಿಗಳಿಗೆ ತಮ್ಮ ಅನುಗ್ರಹವನ್ನು ಪೂರ್ಣಗೊಳಿಸಿದ್ದಾನೆ, ಅಲ್ಲಾಹು ತಆಲಾ ಹೇಳಿದಂತೆ:
﴿...وَنَزَّلۡنَا عَلَيۡكَ ٱلۡكِتَٰبَ تِبۡيَٰنٗا لِّكُلِّ شَيۡءٖ...﴾
ನಾವು ಎಲ್ಲಾ ವಿಷಯಗಳಿಗೂ ವಿವರಣೆ ನೀಡುವ ಈ ಗ್ರಂಥವನ್ನು ನಾವು ನಿಮಗೆ ಅವತೀರ್ಣಗೊಳಿಸಿದ್ದೇವೆ. [ಅನ್ನಹ್ಲ್:89], ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...مَا كَانَ حَدِيثًا يُفْتَرَى وَلَـكِن تَصْدِيقَ الَّذِي بَيْنَ يَدَيْهِ وَتَفْصِيلَ كُلَّ شَيْءٍ...﴾
ಇದು (ಕುರ್‌ಆನ್) ಸ್ವಯಂ ರಚಿಸಲಾದ ಗ್ರಂಥವಲ್ಲ. ಬದಲಿಗೆ, ಇದು ಇದಕ್ಕಿಂತ ಮೊದಲಿನ ಗ್ರಂಥಗಳ ದೃಢೀಕರಣವಾಗಿದೆ ಮತ್ತು ಎಲ್ಲಾ ವಿಷಯಗಳ ವಿವರಣೆಯಾಗಿದೆ. [ಯೂಸುಫ್:111].
ಈ ಅಂದಾಜುಗಳು ಮತ್ತು ವಿವರಣೆಗಳು ಅಲ್ಲಾಹನ ಗ್ರಂಥದಲ್ಲಾಗಲಿ ಪ್ರವಾದಿ(ಸ) ರವರ ಸುನ್ನತ್ತಿನಲ್ಲಾಗಲಿ ಅಸ್ತಿತ್ವದಲ್ಲಿಲ್ಲವಾದ್ದರಿಂದ, ಅವುಗಳನ್ನು ಅವಲಂಬಿಸಬೇಕಾಗಿಲ್ಲವೆಂದು ಇಲ್ಲಿ ಸ್ಪಷ್ಟವಾಗುತ್ತದೆ. ಬದಲಾಗಿ ನಾವು ಋತುಸ್ರಾವ ಎಂಬ ಹೆಸರನ್ನು ಮಾತ್ರ ಅವಲಂಬಿಸಬೇಕಾಗಿದೆ. ಏಕೆಂದರೆ ಋತುಸ್ರಾವವು ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬ ಆಧಾರದಲ್ಲಿ ಶರಿಯತ್ತಿನ ನಿಯಮಗಳನ್ನು ಅದಕ್ಕೆ ಜೋಡಿಸಲಾಗಿದೆ. ಈ ಪುರಾವೆಯು — ಅಂದರೆ ಒಂದು ನಿಯಮದ ಬಗ್ಗೆ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿ ಪ್ರಸ್ತಾಪಿಸದೇ ಇರುವುದು ಆ ನಿಯಮವನ್ನು ಪರಿಗಣಿಸಬೇಕಾಗಿಲ್ಲ ಎಂಬುದಕ್ಕೆ ಪುರಾವೆಯಾಗಿದೆ — ನಿಮಗೆ ಈ ವಿಷಯದಲ್ಲೂ ಜ್ಞಾನಕ್ಕೆ ಸಂಬಂಧಿಸಿದ ಇತರೆಲ್ಲಾ ವಿಷಯಗಳಲ್ಲೂ ಉಪಯುಕ್ತವಾಗಿದೆ. ಏಕೆಂದರೆ ಶರಿಯತ್ತಿನ ನಿಯಮಗಳನ್ನು ಅಲ್ಲಾಹನ ಗ್ರಂಥ, ಪ್ರವಾದಿ(ಸ) ರವರ ಸುನ್ನತ್, ಸುಪರಿಚಿತ ಒಮ್ಮತಾಭಿಪ್ರಾಯ (ಇಜ್ಮಾ) ಮತ್ತು ಸರಿಯಾದ ಕಿಯಾಸ್( ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿ ಸಾಬೀತಾಗದ ಪುರಾವೆಗಳನ್ನು ಸಾಬೀತಾಗಿರುವ ಪುರಾವೆಗಳೊಂದಿಗೆ ಹೋಲಿಸಿ ಶರಈ ನಿಯಮಗಳನ್ನು ಜಾರಿಗೊಳಿಸುವುದು) ಮುಂತಾದ ಶರಈ ಪುರಾವೆಗಳ ಮೂಲಕವಲ್ಲದೆ ಸ್ಥಾಪಿಸಲಾಗುವುದಿಲ್ಲ. ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯ ತತ್ವಗಳನ್ನು ವಿವರಿಸುವ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ: “ಇವುಗಳಲ್ಲೊಂದು ಋತುಸ್ರಾವ ಎಂಬ ಹೆಸರು. ಅಲ್ಲಾಹು ಇದಕ್ಕೆ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿ ಅನೇಕ ನಿಯಮಗಳನ್ನು ರಚಿಸಿದ್ದಾನೆ. ಇದು ಸಂಪೂರ್ಣ ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಮತ್ತು ಇದರ ಅವಧಿಯ ಬಗ್ಗೆ ತಿಳಿಯುವುದು ಸಮುದಾಯದ ಪಾಲಿಗೆ ಅತ್ಯಗತ್ಯವಾಗಿದ್ದೂ ಸಹ, ಅಲ್ಲಾಹು ಋತುಸ್ರಾವದ ಕನಿಷ್ಠ ಅಥವಾ ಗರಿಷ್ಠ ಅವಧಿಯನ್ನು, ಅಥವಾ ಎರಡು ಋತುಸ್ರಾವಗಳ ನಡುವಿನ ಶುದ್ಧಿಯ ಅವಧಿಯನ್ನು ನಿರ್ಣಯಿಸಿಲ್ಲ. ಭಾಷಾರ್ಥವು ಒಂದು ನಿರ್ಣಯವನ್ನು ಇನ್ನೊಂದು ನಿರ್ಣಯದಿಂದ ಪ್ರತ್ಯೇಕಿಸುವುದಿಲ್ಲ. ಆದ್ದರಿಂದ ಯಾರಾದರೂ ಋತುಸ್ರಾವಕ್ಕೆ ಅವಧಿಯನ್ನು ನಿರ್ಣಯಿಸಿದರೆ, ಅವನು ಪವಿತ್ರ ಕುರ್‌ಆನ್ ಮತ್ತು ಪವಾದಿ ಸುನ್ನತ್ತಿಗೆ ವಿರುದ್ಧವಾಗಿ ಸಾಗಿದ್ದಾನೆ.” ಅವರ ಮಾತು ಇಲ್ಲಿಗೆ ಮುಕ್ತಾಯವಾಗುತ್ತದೆ.6
ನಾಲ್ಕನೇ ಪುರಾವೆ: ಪರಿಗಣನೆ, ಅಂದರೆ ಸರಿಯಾದ ರೂಪದಲ್ಲಿರುವ ಒಂಟಿ ಅಭಿಪ್ರಾಯಗಳಿಂದ ಮುಕ್ತವಾದ ಕಿಯಾಸ್ (ಹೋಲಿಕೆ). ಋತುಸ್ರಾವದ ಸಮಯದಲ್ಲಿ ನೀವು ಮಹಿಳೆಯರಿಂದ ದೂರವಿರಬೇಕು ಎಂಬುದಕ್ಕೆ ಅದರಲ್ಲಿರುವ ಮಾಲಿನ್ಯವನ್ನು ಅಲ್ಲಾಹು ಕಾರಣವಾಗಿ ತೋರಿಸಿದ್ದಾನೆ. ಆದ್ದರಿಂದ ಋತುಸ್ರಾವ ಅಸ್ತಿತ್ವದಲ್ಲಿರುವಾಗಲೆಲ್ಲಾ ಮಾಲಿನ್ಯವು ಅಸ್ತಿತ್ವದಲ್ಲಿರುತ್ತದೆ. ಇದರಲ್ಲಿ ಎರಡನೇ ದಿನ ಮತ್ತು ಮೊದಲನೇ ದಿನ ಎಂಬ ವ್ಯತ್ಯಾಸವಿಲ್ಲ. ಅದೇ ರೀತಿ, ನಾಲ್ಕನೇ ದಿನ ಮತ್ತು ಮೂರನೇ ದಿನ ಎಂಬ ವ್ಯತ್ಯಾಸವಿಲ್ಲ. ಅದೇ ರೀತಿ 16ನೇ ದಿನ ಮತ್ತು 15ನೇ ದಿನ ಎಂಬ ವ್ಯತ್ಯಾಸವಿಲ್ಲ. 18ನೇ ದಿನ ಮತ್ತು 17ನೇ ದಿನ ಎಂಬ ವ್ಯತ್ಯಾಸವಿಲ್ಲ. (ದಿನ ಯಾವುದೇ ಆದರೂ) ಋತುಸ್ರಾವ ಋತುಸ್ರಾವವೇ ಆಗಿದೆ ಮತ್ತು ಮಾಲಿನ್ಯ ಮಾಲಿನ್ಯವೇ ಆಗಿದೆ. ಯಾವುದೇ ಎರಡು ದಿನಗಳನ್ನು ತೆಗೆದುಕೊಂಡರೂ ಆ ಎರಡು ದಿನಗಳಲ್ಲೂ ಋತುಸ್ರಾವದ ಕಾರಣವು (ಮಾಲಿನ್ಯವು) ಒಂದೇ ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತದೆ. ಹೀಗೆ ಕಾರಣವು ಎರಡು ದಿನಗಳಲ್ಲೂ ಒಂದೇ ರೀತಿಯಲ್ಲಿ ಅಸ್ತಿತ್ವದಲ್ಲಿರುವಾಗ ಅವೆರಡಕ್ಕೂ ಬೇರೆ ಬೇರೆ ನಿಯಮಗಳನ್ನು ರಚಿಸುವುದು ಹೇಗೆ ಸರಿಯಾಗಬಹುದು? ಇದು ಸರಿಯಾದ ಕಿಯಾಸ್‌ಗೆ ವಿರುದ್ಧವಲ್ಲವೇ? ಸರಿಯಾದ ಕಿಯಾಸ್ ಪ್ರಕಾರ ಕಾರಣವು ಎರಡು ದಿನಗಳಲ್ಲೂ ಒಂದೇ ರೀತಿಯಲ್ಲಿ ಅಸ್ತಿತ್ವದಲ್ಲಿದ್ದರೆ, ಆ ಎರಡು ದಿನಗಳ ನಿಯಮವು ಒಂದೇ ಆಗಿರಬೇಕಲ್ಲವೇ?
ಐದನೇ ಪುರಾವೆ: ಋತುಸ್ರಾವಕ್ಕೆ ಅವಧಿ ನಿಶ್ಚಯಿಸಿದವರ ಅಭಿಪ್ರಾಯಗಳಲ್ಲಿರುವ ವ್ಯತ್ಯಾಸ ಮತ್ತು ಗೊಂದಲಗಳು. ಈ ವಿಷಯದಲ್ಲಿ ಕಡ್ಡಾಯವಾಗಿ ಅವಲಂಬಿಸಬೇಕಾದ ಯಾವುದೇ ಪುರಾವೆಯಿಲ್ಲ ಎಂದು ಇದು ಸೂಚಿಸುತ್ತದೆ. ಇವೆಲ್ಲವೂ ಸರಿ-ತಪ್ಪುಗಳು ಉಂಟಾಗಬಹುದಾದ ಇಜ್ತಿಹಾದ್‌ನಿಂದ ಉದ್ಭವಿಸಿದ ನಿಯಮಗಳು. ಇವುಗಳಲ್ಲಿ ಒಂದಕ್ಕಿಂತ ಇನ್ನೊಂದು ಅನುಸರಿಸಲು ಹೆಚ್ಚು ಯೋಗ್ಯ ಎನ್ನುವಂತಿಲ್ಲ. ವಿವಾದಗಳ ಸಂದರ್ಭದಲ್ಲಿ ನಾವು ಮರಳಬೇಕಾದುದು ಪವಿತ್ರ ಕುರ್‌ಆನ್ ಮತ್ತು ಪ್ರವಾದಿಯವರ ಸುನ್ನತ್ತಿನ ಕಡೆಗಾಗಿದೆ.
ಋತುಸ್ರಾವಕ್ಕೆ ಕನಿಷ್ಠ ಅಥವಾ ಗರಿಷ್ಠ ಅವಧಿಯಿಲ್ಲ ಎಂಬ ಅಭಿಪ್ರಾಯವೇ ಅತ್ಯಂತ ಪ್ರಬಲ ಅಭಿಪ್ರಾಯವೆಂದು ನಿಮಗೆ ಮನವರಿಕೆಯಾದರೆ, ನೀವು ಒಂದು ವಿಷಯವನ್ನು ತಿಳಿದಿರಬೇಕಾಗಿದೆ. ಅದೇನೆಂದರೆ, ಗಾಯ ಮುಂತಾದ ಕಾರಣಗಳಿಲ್ಲದೆ ಮಹಿಳೆಯು ನೈಸರ್ಗಿಕವಾಗಿ ಸ್ರವಿಸುವ ರಕ್ತಗಳೆಲ್ಲವೂ ಋತುಸ್ರಾವದ ರಕ್ತಗಳಾಗಿವೆ. ಇಷ್ಟು ಸಮಯ ಮಾತ್ರ ಅಥವಾ ಇಷ್ಟು ಪ್ರಾಯವಾಗುವಾಗ ಮಾತ್ರ ಅದು ಸ್ರವಿಸುತ್ತದೆ ಎಂಬ ಯಾವುದೇ ನಿರ್ಣಯವು ಅದಕ್ಕಿಲ್ಲ. ಆದರೆ ಮಹಿಳೆಯು ಯಾವುದೇ ತಡೆಯಿಲ್ಲದೆ ನಿರಂತರವಾಗಿ ರಕ್ತವನ್ನು ಸ್ರವಿಸುತ್ತಿದ್ದರೆ, ಅಥವಾ ತಿಂಗಳಲ್ಲಿ ಒಂದೆರಡು ದಿನ ಮಾತ್ರ ರಕ್ತವು ನಿಲ್ಲುವುದಾದರೆ, ಅದು ರಕ್ತಸ್ರಾವದ ರಕ್ತವಾಗಿದೆ (ಋತುಸ್ರಾವದ ರಕ್ತವಲ್ಲ). ರಕ್ತಸ್ರಾವ ಮತ್ತು ಅದರ ನಿಯಮಗಳ ಬಗ್ಗೆ ಮುಂದೆ ವಿವರಿಸಲಾಗುವುದು – ಇನ್ ಶಾ ಅಲ್ಲಾಹ್.
ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ ಹೇಳುತ್ತಾರೆ: “ಮೂಲ ನಿಯಮದ ಪ್ರಕಾರ ಗರ್ಭದಿಂದ ಹೊರಬರುವ ರಕ್ತಗಳೆಲ್ಲವೂ ಋತುಸ್ರಾವದ ರಕ್ತಗಳಾಗಿವೆ. ಅದು ರಕ್ತಸ್ರಾವವೆಂದು ಸಾಬೀತುಪಡಿಸುವ ಪುರಾವೆಯನ್ನು ಸ್ಥಾಪಿಸುವ ತನಕ.”7
ಇನ್ನೊಂದು ಕಡೆ ಅವರು ಹೇಳುತ್ತಾರೆ: “ಗರ್ಭದಿಂದ ಸ್ರವಿಸುವ ರಕ್ತಗಳೆಲ್ಲವೂ ಋತುಸ್ರಾವದ ರಕ್ತಗಳಾಗಿವೆ. ಅದು ನಾಡಿಯಿಂದ ಅಥವಾ ಗಾಯದಿಂದ ಸ್ರವಿಸುವ ರಕ್ತವೆಂದು ತಿಳಿಯಲಾಗದಿದ್ದರೆ.”8
ಈ ಅಭಿಪ್ರಾಯವು ಪುರಾವೆಯ ದೃಷ್ಟಿಯಲ್ಲಿ ಪ್ರಬಲವಾಗಿರುವುದು ಮಾತ್ರವಲ್ಲದೆ, ಅರ್ಥ ಮಾಡಿಕೊಳ್ಳಲು ಕೂಡ ಹೆಚ್ಚು ಸರಳವಾಗಿದೆ. ಇತರ ವಿದ್ವಾಂಸರ ಅಭಿಪ್ರಾಯಗಳಿಗಿಂತ ಈ ಅಭಿಪ್ರಾಯವನ್ನು ಕಾರ್ಯಗತಗೊಳಿಸುವುದು ಬಹಳ ಸುಲಭವಾಗಿದೆ. ಯಾವ ಅಭಿಪ್ರಾಯ ಹೀಗಿರುತ್ತದೋ ಅದು ಸ್ವೀಕಾರಕ್ಕೆ ಹೆಚ್ಚು ಅರ್ಹವಾಗಿದೆ. ಏಕೆಂದರೆ ಇದು ಇಸ್ಲಾಮ್ ಧರ್ಮದ ಆತ್ಮವೆಂದು ಪರಿಗಣಿಸಲಾಗುವ “ನಿಯಮಗಳು ಸುಲಭ ಮತ್ತು ಅನುಕೂಲಕರವಾಗಿರಬೇಕು” ಎಂಬ ತತ್ವಕ್ಕೆ ಹೊಂದಾಣಿಕೆಯಾಗುತ್ತದೆ. ಮಹಾ ಪಾವನನಾದ ಅಲ್ಲಾಹು ಹೇಳುತ್ತಾನೆ:
﴿...وَمَا جَعَلَ عَلَيۡكُمۡ فِي ٱلدِّينِ مِنۡ حَرَجٖۚ...﴾
ಅವನು ನಿಮಗೆ ಧರ್ಮದಲ್ಲಿ ಯಾವುದೇ ಕಷ್ಟವನ್ನು ಮಾಡಿಲ್ಲ. [ಅಲ್-ಹಜ್ಜ್:78] ಪ್ರವಾದಿ (ﷺ) ರವರು ಹೇಳಿದರು:
«إِنَّ الدِّينَ يُسْرٌ وَلَنْ يُشَادَّ الدِّينَ أَحَدٌ إِلَّا غَلَبَهُ فَسَدِّدُوا وَقَارِبُوا وَأَبْشِرُوا».
ಖಂಡಿತವಾಗಿಯೂ ಧರ್ಮವು ಸುಲಭವಾಗಿದೆ. ಯಾರು ಧರ್ಮವನ್ನು ಕಠಿಣಗೊಳಿಸುತ್ತಾರೋ ಅವರು ಪರಾಭವಗೊಳ್ಳದೇ ಇರಲಾರರು. ಆದ್ದರಿಂದ ನೇರವಾಗಿರಿ, ಮಧ್ಯಮ ನಿಲುವನ್ನು ಅವಲಂಬಿಸಿರಿ ಮತ್ತು ಶುಭಸುದ್ದಿಯನ್ನು ತಿಳಿಸಿರಿ. ಇದನ್ನು ಬುಖಾರಿ ವರದಿ ಮಾಡಿದ್ದಾರೆ9.
ಪ್ರವಾದಿ(ಸ) ರವರ ನಡವಳಿಕೆಗಳಲ್ಲಿ ಒಂದಾಗಿತ್ತು
«أَنَّهُ مَا خُيِّرَ بَيْنَ أَمْرَيْنِ إِلَّا اخْتَارَ أَيْسَرَهُمَا مَا لَمْ يَكُنْ إِثْمًا».
“ಅವರ ಮುಂದೆ ಎರಡು ಕಾರ್ಯಗಳ ಆಯ್ಕೆ ಬಂದರೆ ಅವರು ಪಾಪಕರವಲ್ಲದ ಅತ್ಯಂತ ಸರಳವಾದುದನ್ನು ಆಯ್ಕೆ ಮಾಡುತ್ತಿದ್ದರು”10.
ಗರ್ಭಿಣಿಯ ಋತುಸ್ರಾವ:
ಸಾಮಾನ್ಯವಾಗಿ, ಮಹಿಳೆ ಗರ್ಭಿಣಿಯಾದರೆ ರಕ್ತದ ಸ್ರವಿಸುವಿಕೆ ನಿಲ್ಲುತ್ತದೆ. ಇಮಾಮ್ ಅಹ್ಮದ್(ರ) ಹೇಳುತ್ತಾರೆ: “ರಕ್ತದ ಸ್ರವಿಸುವಿಕೆ ನಿಂತಾಗ ಮಹಿಳೆ ತಾನು ಗರ್ಭಿಣಿ ಎಂದು ತಿಳಿಯುತ್ತಾಳೆ.”11
ಗರ್ಭಿಣಿ ಮಹಿಳೆಯು ಹೆರಿಗೆಗೆ ಸ್ವಲ್ಪ ಮೊದಲು – ಉದಾಹರಣೆಗೆ, ಎರಡು ಅಥವಾ ಮೂರು ದಿನ ಮೊದಲು – ರಕ್ತವನ್ನು ಕಂಡರೆ ಮತ್ತು ಅದರೊಂದಿಗೆ ಹೆರಿಗೆ ನೋವು ಕೂಡ ಅನುಭವವಾದರೆ ಅದು ಹೆರಿಗೆ ಸ್ರಾವದ (ನಿಫಾಸ್) ರಕ್ತವಾಗಿದೆ. ಆದರೆ ಆಕೆ ರಕ್ತವನ್ನು ಕಾಣುವುದು ಹೆರಿಗೆಗಿಂತ ಬಹಳ ಮುಂಚೆಯಾಗಿದ್ದರೆ ಅಥವಾ ಆಕೆ ಅದನ್ನು ಕಾಣುವುದು ಹೆರಿಗೆಗೆ ಸ್ವಲ್ಪ ಮುಂಚೆಯಾಗಿದ್ದು ಅದರೊಂದಿಗೆ ಹೆರಿಗೆ ನೋವು ಇಲ್ಲದಿದ್ದರೆ ಅದು ಹೆರಿಗೆಸ್ರಾವದ ರಕ್ತವಲ್ಲ. ಹಾಗಾದರೆ ಅದು ಋತುಸ್ರಾವದ ನಿಯಮಗಳು ಅನ್ವಯವಾಗುವ ಋತುಸ್ರಾವದ ರಕ್ತವಾಗಿದೆಯೇ? ಅಥವಾ ಋತುಸ್ರಾವದ ನಿಯಮಗಳು ಅನ್ವಯವಾಗದ ಸಾಮಾನ್ಯ ರಕ್ತವಾಗಿದೆಯೇ?
ಈ ವಿಷಯದಲ್ಲಿ ವಿದ್ವಾಂಸರ ನಡುವೆ ಭಿನ್ನಾಭಿಪ್ರಾಯವಿದೆ. ಸರಿಯಾದ ಅಭಿಪ್ರಾಯದ ಪ್ರಕಾರ ಅದು ಸಾಮಾನ್ಯವಾಗಿ ಋತುಸ್ರಾವವಾಗುವ ಅವಧಿಯಲ್ಲೇ ಕಂಡುಬಂದರೆ ಅದು ಋತುಸ್ರಾವದ ರಕ್ತ. ಏಕೆಂದರೆ, ಮೂಲ ನಿಯಮದ ಪ್ರಕಾರ ಮಹಿಳೆಯರು ಸ್ರವಿಸುವ ರಕ್ತಗಳೆಲ್ಲವೂ ಋತುಸ್ರಾವದ ರಕ್ತಗಳಾಗಿವೆ. ಅದು ಋತುಸ್ರಾವದ ರಕ್ತವಲ್ಲ ಎಂದು ಹೇಳಲು ಕಾರಣವಿಲ್ಲದಿದ್ದರೆ. ಗರ್ಭಿಣಿಯರಿಗೆ ಋತುಸ್ರಾವವಾಗುವುದಿಲ್ಲ ಎಂದು ಹೇಳಲು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿ ಯಾವುದೇ ಪುರಾವೆಯಿಲ್ಲ.
ಇದು ಇಮಾಂ ಮಾಲಿಕ್ ಮತ್ತು ಇಮಾಂ ಶಾಫಿಈಯವರ ಅಭಿಪ್ರಾಯವಾಗಿದೆ. ಶೈಖುಲ್ ಇಸ್ಲಾಂ ಇಬ್ನ್ ತೈಮಿಯ್ಯ ಈ ಅಭಿಪ್ರಾಯವನ್ನು ಆರಿಸಿದ್ದಾರೆ. ‘ಇಖ್ತಿಯಾರಾತ್’ ಎಂಬ ಪುಸ್ತಕದಲ್ಲಿ (ಪುಟ 30) ಅವರು ಹೇಳುತ್ತಾರೆ: “ಇದನ್ನು ಇಮಾಮ್ ಅಹ್ಮದ್(ರ)ರ ಒಂದು ಅಭಿಪ್ರಾಯವಾಗಿ ಇಮಾಮ್ ಬೈಹಕಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಇಮಾಮ್ ಅಹ್ಮದ್(ರ)ರು ತಮ್ಮ ಹಿಂದಿನ ಅಭಿಪ್ರಾಯವನ್ನು ಬಿಟ್ಟು ಈ ಅಭಿಪ್ರಾಯಕ್ಕೆ ಮರಳಿದ್ದಾರೆಂದೂ ಅವರು ಉಲ್ಲೇಖಿಸಿದ್ದಾರೆ.”1213
ಇದರ ಆಧಾರದಲ್ಲಿ, ಗರ್ಭಿಣಿಯಲ್ಲದ ಮಹಿಳೆಗೆ ಋತುಸ್ರಾವವಾದರೆ ಅನ್ವಯವಾಗುವ ನಿಯಮಗಳೆಲ್ಲವೂ ಗರ್ಭಿಣಿ ಮಹಿಳೆಗೆ ಋತುಸ್ರಾವವಾದರೂ ಅನ್ವಯವಾಗುತ್ತವೆ. ಆದರೆ ಎರಡು ವಿಷಯಗಳ ಹೊರತು:
ಒಂದನೇ ವಿಷಯ: ತಲಾಕ್. ಇದ್ದತ್ ಆಚರಿಸುವುದು ಕಡ್ಡಾಯವಾಗಿರುವ ಗರ್ಭಿಣಿಯಲ್ಲದ ಮಹಿಳೆಗೆ ತಲಾಕ್ ನೀಡುವುದು ನಿಷಿದ್ಧವಾಗಿದೆ. ಆದರೆ ಗರ್ಭಿಣಿಗೆ ತಲಾಕ್ ನೀಡುವುದು ನಿಷಿದ್ಧವಲ್ಲ. ಏಕೆಂದರೆ, ಗರ್ಭಿಣಿಯಲ್ಲದ ಮಹಿಳೆಗೆ ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡುವುದು ಅಲ್ಲಾಹನ ಈ ವಚನಕ್ಕೆ ವಿರುದ್ಧವಾಗಿದೆ:
﴿...فَطَلِّقُوهُنَّ لِعِدَّتِهِنَّ...﴾
ಅವರನ್ನು ಇದ್ದತ್‌ನ ಪ್ರಕಾರ ವಿಚ್ಛೇದಿಸಿರಿ (ಅತ್ತಲಾಖ್:1) ಆದರೆ ಗರ್ಭಿಣಿಗೆ ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡಿದರೆ ಅದು ಈ ವಚನಕ್ಕೆ ವಿರುದ್ಧವಾಗುವುದಿಲ್ಲ. ಏಕೆಂದರೆ, ಗರ್ಭಿಣಿ ಮಹಿಳೆಗೆ ಯಾರಾದರೂ ತಲಾಕ್ ನೀಡುವುದಾದರೆ, ಅವರು ತಲಾಕ್ ನೀಡುವುದು ಅವರ ಇದ್ದತ್‌ನಲ್ಲಾಗಿದೆ. ಆಗ ಅವರು ಋತುಮತಿಯಾಗಿದ್ದರೂ ಅಲ್ಲದಿದ್ದರೂ ಅದರಲ್ಲೇನೂ ವ್ಯತ್ಯಾಸವಿಲ್ಲ. ಏಕೆಂದರೆ ಗರ್ಭಿಣಿಯರ ಇದ್ದತ್ ಹೆರಿಗೆಯ ತನಕ ಇದೆ. ಆದ್ದರಿಂದ ಗರ್ಭಿಣಿ ಮಹಿಳೆಯೊಂದಿಗೆ ಸಂಭೋಗ ಮಾಡಿ ನಂತರ ತಲಾಕ್ ನೀಡುವುದು ನಿಷಿದ್ಧವಲ್ಲ. ಆದರೆ ಗರ್ಭಿಣಿಯಲ್ಲದ ಮಹಿಳೆಯೊಂದಿಗೆ ಸಂಭೋಗ ಮಾಡಿ ನಂತರ (ಅವರಿಗೆ ಪುನಃ ಋತುಸ್ರಾವವಾಗಿ ಅದರಿಂದ ಶುದ್ಧಿಯಾಗುವುದಕ್ಕೆ ಮುಂಚೆ) ತಲಾಕ್ ನೀಡುವುದು ನಿಷಿದ್ಧವಾಗಿದೆ.
ಎರಡನೇ ವಿಷಯ: ಗರ್ಭಿಣಿಗೆ ಋತುಸ್ರಾವವಾದರೆ ಅದರಿಂದ ಆಕೆಯ ಇದ್ದತ್'ನ ಅವಧಿ ಮುಕ್ತಾಯವಾಗುವುದಿಲ್ಲ. ಆದರೆ ಗರ್ಭಿಣಿಯಲ್ಲದವರಿಗೆ ಋತುಸ್ರಾವವಾದರೆ ಅದರಿಂದ ಅವರ ಇದ್ದತ್ ಅವಧಿ ಮುಕ್ತಾಯವಾಗುತ್ತದೆ. ಏಕೆಂದರೆ ಗರ್ಭಿಣಿಯ ಇದ್ದತ್ ಆಕೆಯ ಹೆರಿಗೆಯೊಂದಿಗಲ್ಲದೆ ಮುಕ್ತಾಯವಾಗುವುದಿಲ್ಲ. ಆಗ ಆಕೆಗೆ ಋತುಸ್ರಾವವಾಗುತ್ತಿದ್ದರೂ ಇಲ್ಲದಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಸರ್ವಶಕ್ತನಾದ ಅಲ್ಲಾಹನ ಮಾತಿನಂತೆ:
﴿...وَأُوْلَاتُ الأَحْمَالِ أَجَلُهُنَّ أَن يَضَعْنَ حَمْلَهُنَّ...﴾
ಗರ್ಭಿಣಿಯರ ಇದ್ದತ್ ಅವರು ಮಗುವಿಗೆ ಜನ್ಮ ನೀಡುವ ತನಕ. [ಅತ್ತಲಾಖ್:4]
ಅಧ್ಯಾಯ ಮೂರು: ಋತುಸ್ರಾವದ ಸಮಯದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳು:
ಋತುಸ್ರಾವದ ಸಮಯದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳು ಅನೇಕ ವಿಧಗಳಲ್ಲಿವೆ:
ಒಂದನೇ ವಿಧ: ಹೆಚ್ಚು ಕಡಿಮೆಯಾಗುವುದು. ಉದಾಹರಣೆಗೆ, ಸಾಮಾನ್ಯವಾಗಿ ಒಬ್ಬ ಮಹಿಳೆಗೆ ಆರು ದಿನಗಳ ಕಾಲ ಋತುಸ್ರಾವವಾಗುತ್ತದೆ. ಆದರೆ ಕೆಲವೊಮ್ಮೆ ಅದು ಏಳನೇ ದಿನದವರೆಗೆ ಮುಂದುವರಿಯುವುದು. ಅಥವಾ ಸಾಮಾನ್ಯವಾಗಿ ಒಬ್ಬ ಮಹಿಳೆಗೆ ಏಳು ದಿನಗಳ ಕಾಲ ಋತುಸ್ರಾವವಾಗುತ್ತದೆ. ಆದರೆ ಕೆಲವೊಮ್ಮೆ ಆರೇ ದಿನಗಳಲ್ಲಿ ಆಕೆ ಶುದ್ಧಿಯಾಗುತ್ತಾಳೆ.
ಎರಡನೇ ವಿಧ: ಹಿಂದೆ ಮುಂದೆಯಾಗುವುದು. ಉದಾಹರಣೆಗೆ, ಸಾಮಾನ್ಯವಾಗಿ ಒಬ್ಬ ಮಹಿಳೆಗೆ ತಿಂಗಳ ಅಂತ್ಯದಲ್ಲಿ ಋತುಸ್ರಾವವಾಗುತ್ತದೆ. ಆದರೆ ಒಮ್ಮೊಮ್ಮೆ ಅದು ತಿಂಗಳ ಆರಂಭದಲ್ಲೇ ಉಂಟಾಗುವುದು. ಅಥವಾ ಸಾಮಾನ್ಯವಾಗಿ ಒಬ್ಬ ಮಹಿಳೆಗೆ ತಿಂಗಳ ಆರಂಭದಲ್ಲಿ ಋತುಸ್ರಾವವಾಗುತ್ತದೆ. ಆದರೆ ಒಮ್ಮೊಮ್ಮೆ ಅದು ತಿಂಗಳ ಅಂತ್ಯದಲ್ಲಿ ಆರಂಭವಾಗುತ್ತದೆ.
ಈ ಎರಡೂ ವಿಧಗಳ ಋತುಸ್ರಾವದ ನಿಯಮವೇನು ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಾಭಿಪ್ರಾಯವಿದೆ. ಸರಿಯಾದ ಅಭಿಪ್ರಾಯವೇನೆಂದರೆ, ಯಾವ ವೇಳೆಯಲ್ಲೆಲ್ಲಾ ಆಕೆ ರಕ್ತವನ್ನು ಕಾಣುತ್ತಾಳೋ ಆಗ ಆಕೆ ಋತುಮತಿಯಾಗಿದ್ದಾಳೆ. ಯಾವ ವೇಳೆಯಲ್ಲೆಲ್ಲಾ ಆಕೆ (ರಕ್ತ ನಿಂತು) ಶುದ್ಧಿಯಾಗುತ್ತಾಳೋ ಆಗ ಆಕೆ ಶುದ್ಧಿಯುಳ್ಳವಳಾಗುತ್ತಾಳೆ. ಸಾಮಾನ್ಯವಾಗಿ ಆಕೆಗೆ ಋತುಸ್ರಾವವಾಗುವ ಅವಧಿಗಿಂತ ಅದು ಸ್ವಲ್ಪ ಹೆಚ್ಚಾದರೂ ಕಡಿಮೆಯಾದರೂ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಾಗೆಯೇ ಅದು ಆ ಅವಧಿಗಿಂತ ಬೇಗನೆ ಆದರೂ ತಡವಾದರೂ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದರ ಪುರಾವೆಯನ್ನು ಹಿಂದಿನ ಅಧ್ಯಾಯದಲ್ಲಿ, ಅಂದರೆ ಪ್ರವಾದಿ(ಸ ) ಋತುಸ್ರಾವದ ನಿಯಮಗಳನ್ನು ಅದರ ಅಸ್ತಿತ್ವದೊಂದಿಗೆ ಜೋಡಿಸಿದ್ದನ್ನು ವಿವರಿಸಿದ ಸ್ಥಳದಲ್ಲಿ ನೀಡಲಾಗಿದೆ.
ಇದು ಇಮಾಮ್ ಶಾಫಿಈಯವರ ಅಭಿಪ್ರಾಯವಾಗಿದ್ದು, ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ(ರ) ಈ ಅಭಿಪ್ರಾಯವನ್ನೇ ಆಯ್ಕೆ ಮಾಡಿದ್ದಾರೆ. ಮುಗ್ನೀ ಎಂಬ ಗ್ರಂಥದ ಲೇಖಕರು ಈ ಅಭಿಪ್ರಾಯವನ್ನು ಬಲಪಡಿಸಿ ಬೆಂಬಲಿಸಿದ್ದಾರೆ. ನಂತರ ಅವರು ಹೀಗೆ ಹೇಳಿದ್ದಾರೆ: “(ಹಂಬಲಿ) ಮದ್ಹಬ್‌ನಲ್ಲಿ ವಿವರಿಸಲಾದ ರೀತಿಯಲ್ಲಿ ಸಾಮಾನ್ಯ ರೂಢಿಯನ್ನು ಪರಿಗಣಿಸಬಹುದಾಗಿದ್ದರೆ, ಪ್ರವಾದಿ(ಸ)ರು ಅದನ್ನು ತಮ್ಮ ಸಮುದಾಯಕ್ಕೆ ವಿವರಿಸಿಕೊಡುತ್ತಿದ್ದರು. ಇಂತಹ ವಿಷಯಗಳಲ್ಲಿ ಅವರು ವಿವರಣೆ ನೀಡುವುದರಲ್ಲಿ ವಿಳಂಬ ಮಾಡುವುದಾದರೆ:.1415 ಏಕೆಂದರೆ ಯಾವುದೇ ಒಂದು ವಿಷಯದ ವಿವರಣೆಯು ಅಗತ್ಯವಿರುವಾಗಲೇ ಅದನ್ನು ವಿವರಿಸಬೇಕಲ್ಲದೆ ಅದನ್ನು ವಿಳಂಬ ಮಾಡುವುದಕ್ಕೆ ಅನುಮತಿಯಿಲ್ಲ. ಪ್ರವಾದಿ(ಸ)ರ ಪತ್ನಿಯರು ಮತ್ತು ಇತರ ಮಹಿಳೆಯರಿಗೆ ಎಲ್ಲಾ ಸಮಯಗಳಲ್ಲೂ ಈ ವಿವರಣೆಯ ಅಗತ್ಯವಿದೆ. ಆದ್ದರಿಂದ ಪ್ರವಾದಿ(ಸ)ರು ಅದನ್ನು ವಿವರಿಸಿಕೊಡದೆ ನಿರ್ಲಕ್ಷ್ಯ ತಾಳಿದರೆಂದು ಹೇಳಲಾಗದು. ಸಾಮಾನ್ಯ ರೂಢಿ ಮತ್ತು ಅದರ ವಿವರಣೆಯ ಬಗ್ಗೆ ಪ್ರವಾದಿ(ಸ)ರಿಂದ ವರದಿಯಾಗಿರುವುದು ರಕ್ತಸ್ರಾವದ ವಿಷಯದಲ್ಲಿ ಮಾತ್ರ. ಇತರ ಯಾವುದೇ ವಿಷಯದಲ್ಲೂ ಅಲ್ಲ.”16
ಮೂರನೇ ವಿಧ: ಹಳದಿ ಅಥವಾ ಕಂದು ಬಣ್ಣ. ಅಂದರೆ ಮಹಿಳೆಯು ಗಾಯದ ಕೀವಿನಂತೆ ಹಳದಿ ರಕ್ತವನ್ನು, ಅಥವಾ ಹಳದಿ ಮತ್ತು ಕಪ್ಪು ಮಿಶ್ರಿತ ಕಂದು ರಕ್ತವನ್ನು ಕಾಣುವುದು. ಇದು ಋತುಸ್ರಾವದ ಸಮಯದಲ್ಲಿ ಕಂಡ ರಕ್ತವಾಗಿದ್ದರೆ, ಅಥವಾ ಋತುಸ್ರಾವಕ್ಕೆ ಸಂಬಂಧಿಸಿ ಶುದ್ಧಿಯಾಗುವುದಕ್ಕೆ ಮೊದಲು ಕಂಡ ರಕ್ತವಾಗಿದ್ದರೆ, ಅದು ಋತುಸ್ರಾವದ ರಕ್ತವಾಗಿದೆ. ಋತುಸ್ರಾವಕ್ಕೆ ಅನ್ವಯವಾಗುವ ನಿಯಮಗಳೆಲ್ಲವೂ ಇದಕ್ಕೆ ಅನ್ವಯವಾಗುತ್ತವೆ. ಆದರೆ ಇದು ಶುದ್ಧಿಯಾದ ನಂತರ ಕಂಡ ರಕ್ತವಾಗಿದ್ದರೆ ಅದು ಋತುಸ್ರಾವದ ರಕ್ತವಲ್ಲ; ಏಕೆಂದರೆ ಉಮ್ಮು ಅತೀಯ್ಯ ರಝಿಯಲ್ಲಾಹು ಅನ್ಹಾ ಅವರು ಹೇಳುತ್ತಾರೆ: ಶುದ್ಧಿಯಾದ ನಂತರ ನಾವು ಹಳದಿ ಬಣ್ಣ ಅಥವಾ ಕಂದು ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ. ಇದನ್ನು ಅಬೂ ದಾವೂದ್ ಸಹೀಹ್ ಸನದ್‌ನೊಂದಿಗೆ ವರದಿ ಮಾಡಿದ್ದಾರೆ17, ಇಮಾಮ್ ಬುಖಾರಿ ಕೂಡ ಇದನ್ನು ವರದಿ ಮಾಡಿದ್ದಾರೆ. ಆದರೆ ಅವರ ವರದಿಯಲ್ಲಿ “ಶುದ್ಧಿಯಾದ ನಂತರ” ಎಂಬ ಭಾಗವಿಲ್ಲ. ಆದರೆ ಅವರು ಈ ಹದೀಸಿಗೆ ನೀಡಿದ ಶೀರ್ಷಿಕೆ ಹೀಗಿದೆ: “ಅಧ್ಯಾಯ - ಋತುಸ್ರಾವವಲ್ಲದ ಸಮಯದಲ್ಲಿ ಕಂಡುಬರುವ ಹಳದಿ ಮತ್ತು ಕಂದು ಬಣ್ಣದ ರಕ್ತ.”18
ಸಹೀಹುಲ್ ಬುಖಾರಿಯ ವ್ಯಾಖ್ಯಾನವಾದ ಫತ್ಹುಲ್ ಬಾರಿಯಲ್ಲಿ ಹೀಗಿದೆ: “ಇಮಾಮ್ ಬುಖಾರಿಯವರು ಈ ಶೀರ್ಷಿಕೆಯನ್ನು ನೀಡುವ ಮೂಲಕ ಈಗಾಗಲೇ ಉಲ್ಲೇಖಿಸಲಾದ ಆಯಿಶಾ(ರ) ರವರ “ನೀವು ಬಿಳಿ ಬಣ್ಣದ ದ್ರವ ಕಾಣುವ ತನಕ” ಎಂಬ ಮಾತಿಗೆ ಮತ್ತು ಈ ಅಧ್ಯಾಯದಲ್ಲಿ ಉಲ್ಲೇಖಿಸಲಾದ ಉಮ್ಮು ಅತಿಯ್ಯ(ರ)ರವರ ಹದೀಸಿಗೆ ಪರಸ್ಪರ ಸಂಬಂಧವಿದೆಯೆಂದು ಸೂಚಿಸಿದ್ದಾರೆ. ಅದು ಹೇಗೆಂದರೆ, ಋತುಸ್ರಾವದ ಸಮಯದಲ್ಲಿ ಹಳದಿ ಅಥವಾ ಕಂದು ರಕ್ತವನ್ನು ಕಂಡರೆ ಅದಕ್ಕೆ ಆಯಿಶ(ರ)ರವರ ಮಾತು ಅನ್ವಯವಾಗುತ್ತದೆ ಮತ್ತು ಋತುಸ್ರಾವವಲ್ಲದ ಸಮಯದಲ್ಲಿ ಕಂಡರೆ ಅದಕ್ಕೆ ಉಮ್ಮು ಅತಿಯ್ಯ(ರ)ರವರ ಮಾತು ಅನ್ವಯವಾಗುತ್ತದೆ.”19
ಅವರು ಸೂಚಿಸಿದ ಆಯಿಶಾ(ರ)ರ ಹದೀಸನ್ನು ಇಮಾಮ್ ಬುಖಾರಿಯವರು ಈ ಅಧ್ಯಾಯಕ್ಕಿಂತ ಮುಂಚಿನ ಅಧ್ಯಾಯದಲ್ಲಿ20 ಮುಅಲ್ಲಕ್ ಆಗಿ ಮತ್ತು ಖಚಿತ (ಜಝ್ಮ್) ಶೈಲಿಯಲ್ಲಿ ಉಲ್ಲೇಖಿಸಿದ್ದಾರೆ. ಅದರ ಪ್ರಕಾರ, ಮಹಿಳೆಯರು ಆಯಿಶಾ(ರ)ರ ಬಳಿಗೆ ದಿರಜಗಳನ್ನು (ಅಂದರೆ ಋತುಸ್ರಾವ ನಿಂತಿದೆಯೋ ಇಲ್ಲವೋ ಎಂದು ತಿಳಿಯಲು ಮಹಿಳೆಯರು ತಮ್ಮ ಗುಹ್ಯ ಭಾಗದಲ್ಲಿಡುತ್ತಿದ್ದ ವಸ್ತು) ಕಳುಹಿಸಿಕೊಡುತ್ತಿದ್ದರು. ಅದರಲ್ಲಿರುವ ಹತ್ತಿಯ ತುಂಡಿನಲ್ಲಿ ಹಳದಿ ರಕ್ತವಿರುತ್ತಿತ್ತು. ಆಗ ಆಯಿಶ(ರ) ಹೇಳುತ್ತಿದ್ದರು: “ನೀವು ಬಿಳಿ ಬಣ್ಣದ ದ್ರವ ಕಾಣುವ ತನಕ ಆತುರಪಡಬೇಡಿರಿ.”21.
ಬಿಳಿ ದ್ರವ ಎಂದರೆ ಋತುಸ್ರಾವದ ಅಂತ್ಯದಲ್ಲಿ ಗರ್ಭದಿಂದ ಹೊರಬರುವ ಬಳಿ ಲೋಳೆ ಪದಾರ್ಥ.
ನಾಲ್ಕನೇ ವಿಧ: ಋತುಸ್ರಾವದಲ್ಲಿ ಅಡೆತಡೆಗಳು ಉಂಟಾಗುವುದು. ಅಂದರೆ ಒಂದು ದಿನ ರಕ್ತವನ್ನು ಹಾಗೂ ಮರುದಿನ ಸ್ವಚ್ಛತೆಯನ್ನು ಕಾಣುವುದು ಇತ್ಯಾದಿ. ಇದಕ್ಕೆ ಎರಡು ಸ್ಥಿತಿಗಳಿವೆ:
ಮೊದಲನೇ ಸ್ಥಿತಿ: ಇದು ಮಹಿಳೆಗೆ ನಿತ್ಯ ಎಲ್ಲಾ ಸಮಯಗಳಲ್ಲೂ ಉಂಟಾಗುವುದಾದರೆ ಇದು(ಇಸ್ತಿಹಾಝಃ) ರಕ್ತಸ್ರಾವವಾಗಿದೆ. ಈ ರಕ್ತವನ್ನು ಕಾಣುವ ಮಹಿಳೆಯರಿಗೆ (ಇಸ್ತಿಹಾಝಃ) ರಕ್ತಸ್ರಾವವಾಗುವ ಮಹಿಳೆಯರ ನಿಯಮ ಅನ್ವಯವಾಗುತ್ತದೆ.
ಎರಡನೇ ಸ್ಥಿತಿ: ಇದು ಮಹಿಳೆಗೆ ನಿತ್ಯ ಉಂಟಾಗುವುದಿಲ್ಲ. ಬದಲಾಗಿ ಕೆಲವು ಸಮಯಗಳಲ್ಲಿ ಮಾತ್ರ ಉಂಟಾಗುತ್ತದೆ. ಈ ಮಹಿಳೆಗೆ (ರಕ್ತ ಸ್ರವಿಸದ) ಸರಿಯಾಗಿ ಶುದ್ಧಿಯಾಗುವ ಒಂದು ಅವಧಿಯೂ ಇರುತ್ತದೆ. ಇಂತಹ ಸ್ವಚ್ಛತೆಯ ಅವಧಿಯ ವಿಷಯದಲ್ಲಿ (ಅಂದರೆ ಆಕೆ ಶುದ್ಧಿಯಾಗುವ ಆ ಅವಧಿಯ ವಿಷಯದಲ್ಲಿ) ಅದನ್ನು ಶುದ್ಧಿಯೆಂದು ಪರಿಗಣಿಸಬೇಕೇ? ಅಥವಾ ಅದಕ್ಕೆ ಋತುಸ್ರಾವದ ನಿಯಮಗಳು ಅನ್ವಯವಾಗುತ್ತವೆಯೇ? ಎಂಬ ಬಗ್ಗೆ ವಿದ್ವಾಂಸರಿಗೆ ಭಿನ್ನಮತವಿದೆ.
ಇಮಾಮ್ ಶಾಫಿಈ(ರ )ರ ಎರಡು ಅಭಿಪ್ರಾಯಗಳಲ್ಲಿ ಅತ್ಯಂತ ಸರಿಯಾದ ಅಭಿಪ್ರಾಯದ ಪ್ರಕಾರ, ಅದಕ್ಕೆ ಋತುಸ್ರಾವದ ನಿಯಮಗಳು ಅನ್ವಯವಾಗುತ್ತವೆ. ಆದ್ದರಿಂದ ಅದು ಋತುಸ್ರಾವದ ಅವಧಿಯಾಗಿದೆ. ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ(ರ ) ಮತ್ತು ‘ಫಾಇಕ್’ ಗ್ರಂಥದ ಲೇಖಕರು ಈ ಅಭಿಪ್ರಾಯವನ್ನು ಆರಿಸಿದ್ದಾರೆ. ಇದು ಅಬೂಹನೀಫ(ರ )ರ ಅಭಿಪ್ರಾಯ ಕೂಡ ಆಗಿದೆ.222324 ಏಕೆಂದರೆ ಈ ಅವಧಿಯಲ್ಲಿ ಬಿಳಿ ದ್ರವ ಗೋಚರವಾಗುವುದಿಲ್ಲ. ಇನ್ನು ಈ ಅವಧಿಯನ್ನು ಶುದ್ಧಿಯ ಅವಧಿ ಎಂದು ಪರಿಗಣಿಸಿದರೆ ಇದಕ್ಕಿಂತ ಮೊದಲಿನ ಅವಧಿಯನ್ನು ಮತ್ತು ಇದರ ನಂತರದ ಅವಧಿಯನ್ನು ಋತುಸ್ರಾವದ ಅವಧಿಯೆಂದು ಪರಿಗಣಿಸಬೇಕಾಗುತ್ತದೆ. ಆದರೆ ಯಾವುದೇ ವಿದ್ವಾಂಸರೂ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಏಕೆಂದರೆ, ಒಂದು ವೇಳೆ ಹೀಗೆ ಪರಿಗಣಿಸಿದರೆ, (ತಲಾಕ್‌ನ) ಇದ್ದತ್ ಕೇವಲ ಐದು ದಿನಗಳಲ್ಲಿ ಮುಗಿದುಬಿಡುತ್ತದೆ! ಅದೇ ರೀತಿ ಇದನ್ನು ಶುದ್ಧಿಯ ಅವಧಿಯೆಂದು ಪರಿಗಣಿಸಿದರೆ, ಮಹಿಳೆಯರು ಪ್ರತಿ ಎರಡು ದಿನಕ್ಕೊಮ್ಮೆ ಸ್ನಾನ ಮಾಡುವುದು ಮುಂತಾದ ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಕಷ್ಟಕ್ಕೀಡು ಮಾಡುವುದನ್ನು ಇಸ್ಲಾಮೀ ಶರಿಯತ್ ವಿರೋಧಿಸುತ್ತದೆ. ಅಲ್ಲಾಹನಿಗೆ ಸರ್ವಸ್ತುತಿ.
ಹಂಬಲಿ ಮದ್ಹಬ್‌ನ ಪ್ರಸಿದ್ಧ ಅಭಿಪ್ರಾಯದ ಪ್ರಕಾರ ರಕ್ತವು ಗೋಚರವಾಗುವ ಅವಧಿಯು ಋತುಸ್ರಾವದ ಅವಧಿಯಾಗಿದೆ ಮತ್ತು ಸ್ವಚ್ಛತೆಯ ಅವಧಿಯು ಶುದ್ಧಿಯ ಅವಧಿಯಾಗಿದೆ. ಆದರೆ ಈ ಎರಡು ಅವಧಿಗಳು ಋತುಸ್ರಾವದ ಅತಿದೊಡ್ಡ ಅವಧಿಗಿಂತ (ಅಂದರೆ ಹಂಬಲಿಗಳ ಪ್ರಕಾರ 15 ದಿನಗಳು) ಹೆಚ್ಚಾಗಬಾರದು. ಹಾಗೇನಾದರೂ ಹೆಚ್ಚಾದರೆ, ಆ ಹೆಚ್ಚಿನ ಅವಧಿಯಲ್ಲಿ ಗೋಚರವಾಗುವ ರಕ್ತವು (ಇಸ್ತಿಹಾಝಃ) ರಕ್ತಸ್ರಾವದ ರಕ್ತವಾಗಿದೆ.25
'ಮುಗ್ನಿ'ಯಲ್ಲಿ ಹೀಗೆ ಹೇಳಲಾಗಿದೆ: “ರಕ್ತವು ಒಂದು ದಿನಕ್ಕಿಂತ ಕಡಿಮೆ ಅವಧಿಯವರೆಗೆ ನಿಂತರೆ, (ಅಂದರೆ ಉದಾಹರಣೆಗೆ ಸುಮಾರು 15 ಅಥವಾ 20 ತಾಸುಗಳ ತನಕ ನಿಂತರೆ) ಆ ಅವಧಿಯು ಶುದ್ಧಿಯ ಅವಧಿಯಲ್ಲ. ಹೆರಿಗೆ ಸ್ರಾವದ (ನಿಫಾಸ್) ರಕ್ತದ ಕುರಿತು ನಾವು ಉಲ್ಲೇಖಿಸಿದ ವರದಿ ಇದಕ್ಕೆ ಆಧಾರವಾಗಿದೆ. ಆ ವರದಿಯಲ್ಲಿ ಒಂದು ದಿನಕ್ಕಿಂತ ಕಡಿಮೆಯ ಅವಧಿಯನ್ನು ಪರಿಗಣಿಸಬೇಕಾಗಿಲ್ಲ ಎಂದಿದೆ. ಅಲ್ಲಾಹು ಇಚ್ಛಿಸಿದರೆ ಇದೇ ಸರಿಯಾದ ಅಭಿಪ್ರಾಯ. ಏಕೆಂದರೆ ರಕ್ತವು ಒಮ್ಮೆ ಸ್ರವಿಸಿದರೆ ಇನ್ನೊಮ್ಮೆ ನಿಲ್ಲುತ್ತದೆ. ಹೀಗೆ ತಾಸಿಗೊಮ್ಮೆ ಶುದ್ಧಿಯಾಗುವ ಮಹಿಳೆಗೆ ಸ್ನಾನವನ್ನು ಕಡ್ಡಾಯಗೊಳಿಸುವುದು ಆಕೆಯನ್ನು ತೊಂದರೆಗೀಡು ಮಾಡುವುದಾಗಿದೆ. ಸರ್ವೋನ್ನತನಾದ ಅಲ್ಲಾಹನ ಈ ಮಾತಿನಂತೆ ಈ ತೊಂದರೆಯನ್ನು ನಿವಾರಿಸಲಾಗಿದೆ:
﴿...وَمَا جَعَلَ عَلَيۡكُمۡ فِي ٱلدِّينِ مِنۡ حَرَجٖ...﴾
ಅವನು ನಿಮಗೆ ಧರ್ಮದಲ್ಲಿ ಯಾವುದೇ ಕಷ್ಟವನ್ನು ಮಾಡಿಲ್ಲ. [ಅಲ್-ಹಜ್ಜ್:78], ಅವರು ಮುಂದುವರಿದು ಹೇಳುತ್ತಾರೆ: “ಇದರ ಆಧಾರದಲ್ಲಿ, ರಕ್ತವು ಒಂದು ದಿನಕ್ಕಿಂತ ಕಡಿಮೆ ಅವಧಿಯವರೆಗೆ ನಿಂತರೆ ಆ ಅವಧಿಯು ಶುದ್ಧಿಯ ಅವಧಿಯಲ್ಲ. ಅದು ಶುದ್ಧಿಯ ಅವಧಿ ಎಂದು ಸೂಚಿಸುವ ಸ್ಪಷ್ಟ ಪುರಾವೆಯನ್ನು ಕಾಣುವವರೆಗೆ. ಉದಾಹರಣೆಗೆ, ಸಾಮಾನ್ಯವಾಗಿ ಋತುಸ್ರಾವವು ನಿಲ್ಲುವ ಸಮಯದಲ್ಲಿ ಅದು ನಿಲ್ಲುವುದು ಅಥವಾ ಬಿಳಿ ದ್ರವವನ್ನು ಕಾಣುವುದು ಇತ್ಯಾದಿ.”26
ಮುಗ್ನಿಯ ಲೇಖಕರ ಈ ಅಭಿಪ್ರಾಯವು ಎರಡು ವಿಪರೀತ ಅಭಿಪ್ರಾಯಗಳ ನಡುವಿನ ಮಧ್ಯಮ ಅಭಿಪ್ರಾಯವಾಗಿದೆ. ಸರಿಯಾದ ಅಭಿಪ್ರಾಯವೇನೆಂದು ಅಲ್ಲಾಹು ಮಾತ್ರ ಬಲ್ಲ.
ಐದನೇ ವಿಧ: ರಕ್ತವು ಒಣಗಿರುವುದು. ಅಂದರೆ ಮಹಿಳೆ ಕೇವಲ ಒದ್ದೆ ಸ್ರಾವವನ್ನು ಮಾತ್ರ ಕಾಣುವುದು. ಇದು ಋತುಸ್ರಾವದ ಅವಧಿಯಲ್ಲಾದರೆ, ಅಥವಾ ಶುದ್ಧಿಯಾಗುವುದಕ್ಕೆ ಮುಂಚೆ ಋತುಸ್ರಾವಕ್ಕೆ ಸಂಬಂಧಿಸಿ ಉಂಟಾದರೆ ಇದು ಋತುಸ್ರಾವವಾಗಿದೆ. ಇದು ಶುದ್ಧಿಯಾದ ನಂತರ ಉಂಟಾದರೆ ಇದು ಋತುಸ್ರಾವವಲ್ಲ. ಏಕೆಂದರೆ ಸಾಮಾನ್ಯವಾಗಿ ಋತುಸ್ರಾವದ ರಕ್ತವು ಹಳದಿ ಅಥವಾ ಕಂದು ಆಗಿರುತ್ತದೆ. ಇದು ಅದರ ನಿಯಮವಾಗಿದೆ.
ಅಧ್ಯಾಯ ನಾಲ್ಕು: ಋತುಸ್ರಾವದ ನಿಯಮಗಳು
ಋತುಸ್ರಾವಕ್ಕೆ 20ಕ್ಕಿಂತಲೂ ಹೆಚ್ಚು ನಿಯಮಗಳಿವೆ. ಅತ್ಯಗತ್ಯವಾಗಿರುವ ಕೆಲವು ನಿಯಮಗಳನ್ನು ಮಾತ್ರ ನಾವು ಇಲ್ಲಿ ಉಲ್ಲೇಖಿಸುತ್ತೇವೆ. ಅವುಗಳಲ್ಲಿ ಕೆಲವು ಹೀಗಿವೆ:
ಒಂದು: ನಮಾಝ್, ಋತುಸ್ರಾವವಿರುವ ಮಹಿಳೆಗೆ ಕಡ್ಡಾಯ ಮತ್ತು ಐಚ್ಛಿಕ(ಸುನ್ನತ್) ನಮಾಝ್‌ಗಳು ನಿಷಿದ್ಧವಾಗಿವೆ. ಆಕೆ ನಮಾಝ್ ನಿರ್ವಹಿಸಿದರೆ ಅದು ಸಿಂಧುವಾಗದು. ಅದೇ ರೀತಿ, ನಮಾಝಿನ ಸಮಯದಲ್ಲಿ ಒಂದು ರಕಅತನ್ನು ಪೂರ್ತಿಯಾಗಿ ನಿರ್ವಹಿಸುವಷ್ಟು ಸಮಯವು ಆಕೆಗೆ ದೊರಕದಿದ್ದರೆ ಆ ನಮಾಝ್ ಆಕೆಗೆ ಕಡ್ಡಾಯವಿಲ್ಲ. ಅಷ್ಟು ಸಮಯ ದೊರಕಿದರೆ ಆ ನಮಾಝನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ. ಸಮಯ ದೊರಕುವುದೆಂದರೆ, ಅದು ನಮಾಝಿನ ಸಮಯದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಆಗಿದ್ದರೂ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ನಮಾಝಿನ ಸಮಯದ ಆರಂಭದಲ್ಲಿ ಆ ಸಮಯ ದೊರಕುವುದಕ್ಕೆ ಉದಾಹರಣೆ: ಸೂರ್ಯಾಸ್ತವಾಗಿ (ಅಂದರೆ ಮಗ್ರಿಬ್ ನಮಾಝಿನ ಸಮಯ ಆರಂಭವಾಗಿ) ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ಕಳೆದ ಬಳಿಕ ಮಹಿಳೆಗೆ ಋತುಸ್ರಾವವಾದರೆ, ಆಕೆ ಶುದ್ಧಿಯಾದ ನಂತರ ಆ ಮಗ್ರಿಬ್ ನಮಾಝನ್ನು ಕಝಾ ನಿರ್ವಹಿಸಬೇಕು. ಏಕೆಂದರೆ ಋತುಸ್ರಾವವಾಗುವುದಕ್ಕೆ ಮೊದಲು ಆಕೆಗೆ ಮಗ್ರಿಬ್ ನಮಾಝಿನ ಒಂದು ರಕಅತ್ ನಿರ್ವಹಿಸುವಷ್ಟು ಸಮಯ ದೊರಕಿತ್ತು.
ನಮಾಝಿನ ಸಮಯದ ಕೊನೆಯಲ್ಲಿ ಆ ಸಮಯ ದೊರಕುವುದಕ್ಕೆ ಉದಾಹರಣೆ: ಸೂರ್ಯೋದಯಕ್ಕಿಂತ (ಅಂದರೆ ಫಜ್ರ್ ನಮಾಝಿನ ಸಮಯ ಮುಗಿಯುವುದಕ್ಕಿಂತ) ಮುಂಚೆ, ಅಂದರೆ ಒಂದು ರಕಅತ್ ನಿರ್ವಹಿಸುವಷ್ಟು ಸಮಯವಿರುವಾಗ ಮಹಿಳೆ ಋತುಸ್ರಾವದಿಂದ ಶುದ್ಧಿಯಾದರೆ ಸ್ನಾನ ಮಾಡಿದ ಬಳಿಕ ಫಜ್ರ್ ನಮಾಝನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಏಕೆಂದರೆ ಆಕೆಗೆ ಫಜ್ರ್ ನಮಾಝಿನ ಒಂದು ರಕಅತ್ ನಿರ್ವಹಿಸುವಷ್ಟು ಸಮಯ ದೊರಕಿತ್ತು.
ಆದರೆ ಋತುಸ್ರಾವವಿರುವ ಮಹಿಳೆಗೆ ಒಂದು ಪೂರ್ಣ ರಕಅತ್ ನಿರ್ವಹಿಸುವಷ್ಟು ಸಮಯವು ದೊರಕದಿದ್ದರೆ, ಅಂದರೆ ಮೊದಲನೆಯ ಉದಾಹರಣೆಯ ಪ್ರಕಾರ, ಸೂರ್ಯ ಅಸ್ತಮಿಸಿದ ಕೆಲವೇ ಕ್ಷಣಗಳಲ್ಲಿ ಋತುಸ್ರಾವವಾದರೆ ಅಥವಾ ಎರಡನೆಯ ಉದಾರಹಣೆಯ ಪ್ರಕಾರ, ಸೂರ್ಯೋದಯಕ್ಕೆ ಕೆಲವೇ ಕ್ಷಣಗಳಿರುವಾಗ ಶುದ್ಧಿಯಾದರೆ, ಆಕೆಗೆ ಆ ನಮಾಝ್ ಕಡ್ಡಾಯವಿಲ್ಲ. ಪ್ರವಾದಿ(ಸ)ರ ಈ ಕೆಳಗಿನ ವಚನ ಇದಕ್ಕೆ ಆಧಾರವಾಗಿದೆ:
«مَنْ أَدْرَكَ رَكْعَةً مِنَ الصَّلَاةِ فَقَدْ أَدْرَكَ الصَّلَاةَ».
“ಯಾರಿಗೆ ನಮಾಝಿನ (ಸಮಯವು ಮುಗಿಯುವುದಕ್ಕೆ ಮೊದಲು ಅದರ) ಒಂದು ರಕಅತ್ ದೊರಕುತ್ತದೋ ಅವನಿಗೆ ಆ ನಮಾಝ್ ದೊರಕುತ್ತದೆ.” (ಮುತ್ತಫಕುನ್ ಅಲೈಹಿ)27، ಈ ಹದೀಸಿನ ಮಫ್‌ಹೂಮ್ (ವಿರುದ್ಧಾರ್ಥದ ಮೂಲಕ ಅರ್ಥ ಮಾಡಿಕೊಳ್ಳುವ) ಪ್ರಕಾರ ಯಾರಿಗೆ (ನಮಾಝಿನ ಸಮಯವು ಮುಗಿಯುವುದಕ್ಕೆ ಮುಂಚೆ ಅದರ) ಒಂದು ರಕಅತ್ ಕೂಡ ದೊರಕುವುದಿಲ್ಲವೋ ಅವನಿಗೆ ಆ ನಮಾಝ್ ದೊರಕುವುದಿಲ್ಲ.
ಆದರೆ ಒಬ್ಬ ಮಹಿಳೆಗೆ ಅಸರ್ ನಮಾಝಿನ ಸಮಯದಲ್ಲಿ ಒಂದು ರಕಅತ್ ನಿರ್ವಹಿಸುವಷ್ಟು ಸಮಯವು ದೊರಕಿದರೆ ಆಕೆ ಅಸರ್ ನಮಾಝಿನೊಂದಿಗೆ ಝುಹರ್ ನಮಾಝ್ ಕೂಡ ನಿರ್ವಹಿಸುವುದು ಕಡ್ಡಾಯವೇ? ಅದೇ ರೀತಿ ಒಬ್ಬ ಮಹಿಳೆಗೆ ಇಶಾ ನಮಾಝಿನ ಸಮಯದಲ್ಲಿ ಒಂದು ರಕಅತ್ ನಿರ್ವಹಿಸುವಷ್ಟು ಸಮಯ ದೊರಕಿದರೆ ಆಕೆ ಇಶಾ ನಮಾಝಿನೊಂದಿಗೆ ಮಗ್ರಿಬ್ ನಮಾಝ್ ಕೂಡ ನಿರ್ವಹಿಸುವುದು ಕಡ್ಡಾಯವೇ?
ಈ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಾಭಿಪ್ರಾಯಗಳಿವೆ. ಸರಿಯಾದ ಅಭಿಪ್ರಾಯ ಪ್ರಕಾರ ಆಕೆಗೆ ಯಾವ ನಮಾಝಿನ ಸಮಯ ದೊರಕುತ್ತದೋ ಆ ನಮಾಝ್ ಮಾತ್ರ ಕಡ್ಡಾಯವಾಗಿದೆ. ಅಂದರೆ ಅಸರ್ ನಮಾಝ್ ಮತ್ತು ಇಶಾ ನಮಾಝ್ ಮಾತ್ರ; ಏಕೆಂದರೆ ಪ್ರವಾದಿ(ಸ) ಹೇಳುತ್ತಾರೆ:
«مَنْ أَدْرَكَ رَكْعَةً مِنَ الْعَصْرِ قَبْلَ أَنْ تَغْرُبَ الشَّمْسُ فَقَدْ أَدْرَكَ الْعَصْرَ».
“ಯಾರಿಗೆ ಸೂರ್ಯಾಸ್ತವಾಗುವುದಕ್ಕೆ ಮೊದಲು ಅಸರ್ ನಮಾಝಿನ ಒಂದು ರಕಅತ್ ದೊರಕುತ್ತದೋ ಅವನಿಗೆ ಅಸರ್ ನಮಾಝ್ ದೊರಕುತ್ತದೆ.” (ಮುತ್ತಫಕುನ್ ಅಲೈಹಿ)28, “ಅವನಿಗೆ ಝುಹರ್ ಮತ್ತು ಅಸರ್ ನಮಾಝ್ ದೊರೆಯುತ್ತದೆ.” ಎಂದು ಪ್ರವಾದಿ(ಸ)ರು ಹೇಳಲಿಲ್ಲ.
ಅದೇ ರೀತಿ ಅವನಿಗೆ ಝುಹರ್ ನಮಾಝ್ ಕಡ್ಡಾಯವಾಗಿದೆಯೆಂದೂ ಪ್ರವಾದಿ(ಸ) ಹೇಳಲಿಲ್ಲ. ಮೂಲನಿಯಮದ ಪ್ರಕಾರ ಯಾರಿಗೂ ಯಾವುದೇ ಹೊಣೆಗಾರಿಕೆಯಿಲ್ಲ. ಇದು ಇಮಾಮ್ ಅಬೂ ಹನೀಫ ಮತ್ತು ಇಮಾಮ್ ಮಾಲಿಕ್‌ರ ಅಭಿಪ್ರಾಯವಾಗಿದೆ. ಶರ್ಹುಲ್ ಮುಹದ್ದಬ್‌ನಲ್ಲಿ (ಇಮಾಮ್ ನವವಿ) ಇವರಿಬ್ಬರಿಂದ ಈ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ.29
ಆದರೆ ದಿಕ್ರ್, ತಕ್ಬೀರ್, ತಸ್ಬೀಹ್, ತಹ್ಮೀದ್‌ಗಳನ್ನು ಪಠಿಸುವುದು, ಆಹಾರ ಸೇವಿಸುವುದು ಮುಂತಾದ ಸಂದರ್ಭಗಳಲ್ಲಿ ಬಿಸ್ಮಿಲ್ಲಾ ಹೇಳುವುದು, ಹದೀಸ್, ಫಿಕ್ಹ್, ದುಆಗಳನ್ನು ಪಠಿಸುವುದು, ದುಆಗಳಿಗೆ ಆಮೀನ್ ಹೇಳುವುದು, ಕುರ್‌ಆನ್ ಪಾರಾಯಣಕ್ಕೆ ಕಿವಿಗೊಡುವುದು ಮುಂತಾದ ಯಾವುದೂ ಅವಳಿಗೆ ನಿಷಿದ್ಧವಲ್ಲ (ಹರಾಮ್ ಅಲ್ಲ). ಇದು ಸಹೀಹೈನ್ ಹಾಗೂ ಇತರ ಗ್ರಂಥಗಳಲ್ಲಿ ದೃಢಪಟ್ಟಿದೆ.
«أَنَّ النَّبِيَّ صَلَّى اللهُ عَلَيْهِ وَسَلَّمَ كَانَ يَتَّكِئُ فِي حِجْرِ عَائِشَةَ رَضِيَ اللهُ عَنْهَا وَهِيَ حَائِضٌ فَيَقْرَأُ الْقُرْآنَ».
“ಆಯಿಶಾ(ರ)ರು ಋತುಮತಿಯಾಗಿರುವಾಗ, ಅವರ ಮಡಿಲಲ್ಲಿ ಒರಗಿ ಕುಳಿತು ಪ್ರವಾದಿ(ಸ) ರವರು ಕುರ್‌ಆನ್ ಪಾರಾಯಣ ಮಾಡುತ್ತಿದ್ದರು”30.
ಸಹೀಹುಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್'ನಲ್ಲಿರುವ ಇನ್ನೊಂದು ಹದೀಸಿನ ಪ್ರಕಾರ, ಪ್ರವಾದಿ(ಸ)ರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆಂದು ಉಮ್ಮು ಅತಿಯ್ಯ(ರ) ಹೇಳುತ್ತಾರೆ:
«يَخْرُجُ الْعَوَاتِقُ وَذَوَاتُ الْخُدُورِ وَالْحُيَّضُ -يَعْنِي: إِلَى صَلَاةِ الْعِيدَيْنِ- وَلْيَشْهَدْنَ الْخَيْرَ، وَدَعْوَةَ الْمُؤْمِنِينَ، وَيَعْتَزِلُ الْحُيَّضُ الْمُصَلَّى».
“ಯುವತಿಯರು, ಪರ್ದಾಧಾರಿಗಳು ಮತ್ತು ಋತುಸ್ರಾವವಿರುವ ಮಹಿಳೆಯರು ಈದ್ ನಮಾಝ್ ನಿರ್ವಹಿಸಲು ಈದ್ಗಾಹ್‌ಗೆ ಹೋಗಬೇಕು ಮತ್ತು ಮುಸಲ್ಮಾನರ ಒಳಿತು ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಋತುಸ್ರಾವವಿರುವ ಮಹಿಳೆಯರು ನಮಾಝ್ ಮಾಡುವ ಸ್ಥಳದಿಂದ ಬಿಟ್ಟು ನಿಲ್ಲಬೇಕು.”31
ಆದರೆ ಋತುಸ್ರಾವವಿರುವ ಮಹಿಳೆಯರು ಸ್ವತಃ ಕುರ್‌ಆನ್ ಪಠಿಸುವುದರ ಬಗ್ಗೆ ಹೇಳುವುದಾದರೆ, ಅವರು ಕುರ್‌ಆನಿನ ಆಯತ್‌ಗಳನ್ನು ಪಾರಾಯಣ ಮಾಡದೆ, ಕೇವಲ ನೋಡಿ (ಮನಸ್ಸಿನಲ್ಲಿಯೇ) ಪಠಿಸುವುದಾದರೆ, ಅಥವಾ ಹೃದಯದ ಮೂಲಕ ಚಿಂತಿಸುತ್ತಾ ಪಠಿಸುವುದಾದರೆ ಅದರಲ್ಲಿ ತೊಂದರೆಯಿಲ್ಲ. ಉದಾಹರಣೆಗೆ, ಮುಸ್‌ಹಫನ್ನು ಅಥವಾ (ಮುಸ್‌ಹಫ್ ಇರುವ) ಹಲಗೆಯನ್ನು ಅವರ ಮುಂದೆ ಇಡಲಾಗಿ, ಅವರು ಅದರಲ್ಲಿರುವ ಸೂಕ್ತಿಗಳನ್ನು ನೋಡಿ ಮನಸ್ಸಿನಲ್ಲಿ ಪಠಿಸುವುದು. ಇಮಾಮ್ ನವವಿ ಶರ್ಹುಲ್ ಮುಹದ್ದಬ್‌ನಲ್ಲಿ ಹೇಳುತ್ತಾರೆ: “ಇದು ಸಮ್ಮತಾರ್ಹವಾಗಿದೆ. ಇದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ”32.
ಆದರೆ ಕುರ್‌ಆನಿನ ಆಯತ್‌ಗಳನ್ನು ಬಾಯಿಯಿಂದ ಪಾರಾಯಣ ಮಾಡುವುದನ್ನು ಬಹುತೇಕ ವಿದ್ವಾಂಸರು ನಿಷಿದ್ಧ ಮತ್ತು ಸಮ್ಮತಾರ್ಹವಲ್ಲ ಎಂದಿದ್ದಾರೆ. ಆದರೆ ಇಮಾಮ್ ಬುಖಾರಿ, ಇಬ್ನ್ ಜರೀರ್ ತ್ವಬ್ರೀ ಮತ್ತು ಇಬ್ನ್ ಮುಂದಿರ್ ಅದನ್ನು ಸಮ್ಮತಾರ್ಹವೆಂದಿದ್ದಾರೆ.333435
ಇದನ್ನು ಇಮಾಮ್ ಮಾಲಿಕ್‌ರ ಅಭಿಪ್ರಾಯವೆಂದು ಮತ್ತು ಇಮಾಮ್ ಶಾಫಿಈಯವರ ಹಳೆಯ ಅಭಿಪ್ರಾಯವೆಂದು ಉಲ್ಲೇಖಿಸಲಾಗಿದೆ36. ಇವೆರಡು ಅಭಿಪ್ರಾಯಗಳನ್ನು ಫತ್'ಹುಲ್ ಬಾರಿಯಲ್ಲಿ ಉಲ್ಲೇಖಿಸಲಾಗಿದೆ37.
ಇಮಾಮ್ ಬುಖಾರಿಯವರು ಇಮಾಮ್ ಇಬ್ರಾಹೀಂ ನಖ್ಈರಿಂದ ಮುಅಲ್ಲಕ್ ಆಗಿ ಉಲ್ಲೇಖಿಸಿದ ವರದಿಯಲ್ಲಿ ಹೀಗಿದೆ: “ಋತುಸ್ರಾವವಿರುವ ಮಹಿಳೆ ಕುರ್‌ಆನಿನ ಆಯತ್ತನ್ನು38 ಪಠಿಸುವುದರಲ್ಲಿ ತೊಂದರೆಯಿಲ್ಲ.”
ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯರು ‘ಫತಾವಾ ಮಜ್ಮೂಅ ಇಬ್ನ್ ಕಾಸಿಮ್’ ಎಂಬ ಗ್ರಂಥದಲ್ಲಿ ಹೇಳುತ್ತಾರೆ: ಆಕೆಯನ್ನು ಕುರ್‌ಆನ್‌ನಿಂದ ತಡೆಯುವುದಕ್ಕೆ ಸುನ್ನತ್ತಿನಲ್ಲಿ ಮೂಲತಃ ಯಾವುದೇ ಆಧಾರವಿಲ್ಲ. ಏಕೆಂದರೆ ಪ್ರವಾದಿಯವರ ವಚನ:
«لَا تَقْرَأُ الحَاِئُض وَلَا الجُنُبُ شَيْئًا مِنَ الْقُرْآنِ».
«ಮುಟ್ಟಾದವಳಾಗಲಿ, ಜುನೂಬಿಯಾಗಲಿ ಕುರ್‌ಆನ್‌ನಿಂದ ಏನನ್ನೂ ಪಠಿಸಬಾರದು»39 ಹದೀಸ್ ಪರಿಣತರ ಒಮ್ಮತದಿಂದ ಇದೊಂದು ದುರ್ಬಲ ಹದೀಸ್ ಆಗಿದೆ40.
ಪ್ರವಾದಿ(ಸ) ರವರ ಕಾಲದಲ್ಲಿ ಮಹಿಳೆಯರಿಗೆ ಋತುಸ್ರಾವವಾಗುತ್ತಿತ್ತು. ನಮಾಝಿನಂತೆ ಕುರ್‌ಆನ್ ಪಾರಾಯಣವು ಕೂಡ ಅವರಿಗೆ ನಿಷಿದ್ಧವಾಗಿದ್ದರೆ, ಪ್ರವಾದಿ(ಸ)ರು ಅದನ್ನು ತಮ್ಮ ಸಮುದಾಯಕ್ಕೆ ವಿವರಿಸಿಕೊಡುತ್ತಿದ್ದರು, ಸತ್ಯವಿಶ್ವಾಸಿಗಳ ಮಾತೆಯರು (ಪ್ರವಾದಿ ಪತ್ನಿಯರು) ಅದನ್ನು ಕಲಿಸುತ್ತಿದ್ದರು ಹಾಗೂ ಸಹಾಬಾಗಳು ಅದನ್ನು ಜನರ ಮಧ್ಯೆ ವರದಿ ಮಾಡುತ್ತಿದ್ದರು. ಪ್ರವಾದಿ(ಸ) ರವರಿಂದ ಯಾರೂ ಈ ವಿಷಯದಲ್ಲಿ ವಿರೋಧವನ್ನು ವರದಿ ಮಾಡದಿರುವುದರಿಂದ, ಅದನ್ನು ನಿಷಿದ್ಧವೆಂದು ಹೇಳಲಾಗದು. ವಿಶೇಷವಾಗಿ, ಪ್ರವಾದಿ(ಸ) ರವರು ಅದನ್ನು ವಿರೋಧಿಸಿಲ್ಲ ಎಂದಿರುವಾಗ. ಅವರ ಕಾಲದಲ್ಲಿ ಋತುಸ್ರಾವವಾಗುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದೂ ಸಹ ಅವರು ಅದನ್ನು ವಿರೋಧಿಸಿಲ್ಲ ಎಂದಿರುವಾಗ ಅದು ನಿಷಿದ್ಧವಲ್ಲ ಎಂದು ಮನದಟ್ಟಾಗುತ್ತದೆ.”41
ವಿದ್ವಾಂಸರ ನಡುವಿನ ತರ್ಕವನ್ನು ಅರ್ಥ ಮಾಡಿಕೊಂಡ ನಂತರ ಹೀಗೆ ಹೇಳುವುದು ನಮಗೆ ಅನಿವಾರ್ಯವಾಗುತ್ತದೆ: ಋತುಸ್ರಾವವಿರುವ ಮಹಿಳೆ ಬಾಯಿಂದ ಓದಿ ಕುರ್‌ಆನ್ ಪಾರಾಯಣ ಮಾಡದಿರುವುದೇ ಉತ್ತಮ. ಆದರೆ ಅತ್ಯಗತ್ಯ ಸಂದರ್ಭಗಳ ಹೊರತು. ಅಂದರೆ ಉದಾಹರಣೆಗೆ, ಆಕೆ ಅಧ್ಯಾಪಕಿಯಾಗಿದ್ದು ವಿದ್ಯಾರ್ಥಿನಿಯರಿಗೆ ಕುರ್‌ಆನ್ ಕಲಿಸಿಕೊಡಬೇಕಾದ ಅಗತ್ಯ ಬಂದರೆ, ಅಥವಾ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಮಾಡುವುದಕ್ಕಾಗಿ ಅಧ್ಯಾಪಕಿಗೆ ಕುರ್‌ಆನ್ ಪಾರಾಯಣ ಮಾಡಬೇಕಾಗಿ ಬಂದರೆ ಇತ್ಯಾದಿ.
ಎರಡು: ಉಪವಾಸ. ಋತುಸ್ರಾವವಿರುವ ಮಹಿಳೆಗೆ ಕಡ್ಡಾಯ ಮತ್ತು ಐಚ್ಛಿಕ ಉಪವಾಸಗಳು ನಿಷಿದ್ಧವಾಗಿವೆ. ಆಕೆ ಉಪವಾಸ ಆಚರಿಸಿದರೆ ಅದು ಸಿಂಧುವಲ್ಲ. ಆದರೆ ಕಡ್ಡಾಯ ಉಪವಾಸಗಳನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಏಕೆಂದರೆ ಆಯಿಶ(ರ) ರವರ ಹದೀಸಿನಲ್ಲಿ ಹೀಗೆ ವರದಿಯಾಗಿದೆ:
"كَانَ يُصِيبُنَا ذَلِكَ -تَعْنِي: الْحَيْضَ- فَنُؤْمَرُ بِقَضَاءِ الصَّوْمِ وَلَا نُؤْمَرُ بِقَضَاءِ الصَّلَاةِ".
“ನಮಗೆ ಅದು (ಋತುಸ್ರಾವ) ಆಗುತ್ತಿತ್ತು. ಆಗ ನಮಗೆ ಉಪವಾಸವನ್ನು ಕಝಾ ನಿರ್ವಹಿಸಲು ಆದೇಶಿಸಲಾಗುತ್ತಿತ್ತು. ಆದರೆ ನಮಾಝನ್ನು ಕಝಾ ನಿರ್ವಹಿಸಲು ಆದೇಶಿಸಲಾಗುತ್ತಿರಲಿಲ್ಲ.” (ಮುತ್ತಫಕುನ್ ಅಲೈಹಿ)42.
ಉಪವಾಸವಿರುವ ಸಂದರ್ಭದಲ್ಲಿ ಋತುಸ್ರಾವವಾದರೆ ಉಪವಾಸ ಅಸಿಂಧುವಾಗುತ್ತದೆ. ಅದು ಸೂರ್ಯಾಸ್ತಮಾನಕ್ಕೆ ಕೆಲವೇ ಕ್ಷಣಗಳಿರುವಾಗ ಆದರೂ ಸರಿ. ಅದು ಕಡ್ಡಾಯ ಉಪವಾಸವಾಗಿದ್ದರೆ ಅದನ್ನು ಕಝಾ ನಿರ್ವಹಿಸುವುದು ಕಡ್ಡಾಯವಾಗಿದೆ. ಆದರೆ ಸೂರ್ಯಾಸ್ತಮಾನಕ್ಕಿಂತ ಮುಂಚೆ ಋತುಸ್ರಾವವಾದಂತೆ ಅನುಭವವಾಗಿ, ಸೂರ್ಯಾಸ್ತಮಾನದ ನಂತರ ಸ್ರವಿಸಿದರೆ, ಆ ಉಪವಾಸವು ಪೂರ್ಣವಾಗಿದೆ. ಸರಿಯಾದ ಅಭಿಪ್ರಾಯ ಪ್ರಕಾರ ಆ ಉಪವಾಸ ಅಸಿಂಧುವಾಗುವುದಿಲ್ಲ. ಏಕೆಂದರೆ ಗರ್ಭದ ಒಳಗಿರುವ ರಕ್ತಕ್ಕೆ ಯಾವುದೇ ನಿಯಮವಿಲ್ಲ.
ಪುರುಷರಿಗೆ ಸ್ವಪ್ನಸ್ಖಲನವಾಗುವಂತೆ ಸ್ವಪ್ನಸ್ಖಲನವಾಗುವ ಮಹಿಳೆಯ ಬಗ್ಗೆ, ಆಕೆಗೆ ಸ್ನಾನ ಕಡ್ಡಾಯವೇ ಎಂದು ಪ್ರವಾದಿ(ಸ) ರೊಡನೆ ಕೇಳಲಾದಾಗ,
قال: «نَعَمْ إِذَا هِيَ رَأَتِ الْمَاءَ»
ಅವರು ಹೀಗೆ ಉತ್ತರಿಸಿದರು: “ಹೌದು, ಆಕೆ ದ್ರವವನ್ನು ಕಂಡರೆ.”43 ಇಲ್ಲಿ ನಿಯಮವನ್ನು ದ್ರವವು ಕಾಣುವುದರೊಂದಿಗೆ ಜೋಡಿಸಲಾಗಿದೆಯೇ ಹೊರತು ಅದು ಚಲಿಸುವುದರೊಡನೆ ಜೋಡಿಸಲಾಗಿಲ್ಲ. ಅದೇ ರೀತಿ ಋತುಸ್ರಾವದ ನಿಯಮಗಳು ಅನ್ವಯವಾಗುವುದು ಅದು ಹೊರಗೆ ಗೋಚರವಾದರೆ ಮಾತ್ರ. ಅದು ಚಲಿಸಿದರೆ ಅಲ್ಲ.
ಪ್ರಭಾತದ ಉದಯವಾಗುವಾಗ ಮಹಿಳೆ ಋತುಸ್ರಾವದಲ್ಲಿದ್ದರೆ ಆ ದಿನದ ಉಪವಾಸ ಸಿಂಧುವಲ್ಲ. ಪ್ರಭಾತವಾದ ಕೆಲವೇ ಕ್ಷಣಗಳಲ್ಲಿ ಆಕೆ ಶುದ್ಧಿಯಾದರೂ ಸರಿ.
ಪ್ರಭಾತಕ್ಕೆ ಮೊದಲು ಶುದ್ಧಿಯಾಗಿ ಆ ದಿನದ ಉಪವಾಸ ಆಚರಿಸಿದರೆ ಆ ಉಪವಾಸ ಸಿಂಧುವಾಗಿದೆ. ಆಕೆ ಪ್ರಭಾತದ ಬಳಿಕ ಸ್ನಾನ ಮಾಡಿದರೂ ಸರಿ. ಅದೇ ರೀತಿ, ದೊಡ್ಡ ಅಶುದ್ಧಿಯುಳ್ಳವರು ಆ ಸ್ಥಿತಿಯಲ್ಲೇ ಉಪವಾಸದ ನಿಯ್ಯತ್ ಮಾಡಿ ಪ್ರಭಾತವಾದ ಬಳಿಕ ಸ್ನಾನ ಮಾಡಿದರೆ ಆ ಉಪವಾಸ ಸಿಂಧುವಾಗಿದೆ. ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"كَانَ النَّبِيُّ صَلَّى اللَّهُ عَلَيْهِ وَسَلَّمَ يُصْبِحُ جُنُبًا مِنْ جِمَاعٍ غَيْرِ احْتِلَامٍ ثُمَّ يَصُومُ فِي رَمَضَانَ".
ಪ್ರವಾದಿ(ಸ)ರು ರಮದಾನ್ ತಿಂಗಳಲ್ಲಿ ದೊಡ್ಡ ಅಶುದ್ಧಿಯ ಸ್ಥಿತಿಯಲ್ಲಿ – ಸ್ವಪ್ನಸ್ಖಲನದಿಂದ ಉಂಟಾದ ದೊಡ್ಡ ಅಶುದ್ಧಿಯಲ್ಲ, (ಬದಲಾಗಿ ಲೈಂಗಿಕ ಕ್ರಿಯೆಯಿಂದ ಉಂಟಾದ ದೊಡ್ಡ ಅಶುದ್ಧಿ) – ಬೆಳಗನ್ನು (ಪ್ರಭಾತವನ್ನು) ಪ್ರವೇಶಿಸುತ್ತಿದ್ದರು, ನಂತರ ಉಪವಾಸ ಆಚರಿಸುತ್ತಿದ್ದರು. (ಮುತ್ತಫಕುನ್ ಅಲೈಹಿ)44.
ಮೂರನೇ ನಿಯಮ: ಕಅಬಾಲಯಕ್ಕೆ ತವಾಫ್ ಮಾಡುವುದು. ಋತುಸ್ರಾವವಿರುವ ಮಹಿಳೆ ಕಅಬಾಲಯಕ್ಕೆ ತವಾಫ್ ಮಾಡುವುದು ನಿಷಿದ್ಧವಾಗಿದೆ. ಅದು ಕಡ್ಡಾಯ ಅಥವಾ ಐಚ್ಛಿಕ ತವಾಫ್ ಆಗಿದ್ದರೂ ಸರಿ. ಆಕೆ ತವಾಫ್ ಮಾಡಿದರೆ ಅದು ಸಿಂಧುವಾಗದು. ಆದರೆ ತವಾಫ್ ಅಲ್ಲದ ಇತರ ಕರ್ಮಗಳಾದ ಸಫಾ ಮತ್ತು ಮರ್ವಾಗಳ ನಡುವೆ ಸಈ ಮಾಡುವುದು, ಅರಫಾದಲ್ಲಿ ನಿಲ್ಲುವುದು, ಮುಝ್ದಲಿಫ ಮತ್ತು ಮಿನಾದಲ್ಲಿ ರಾತ್ರಿ ಕಳೆಯುವುದು, ಜಮ್ರಗಳಿಗೆ ಕಲ್ಲೆಸೆಯುವುದು, ಮುಂತಾದ ಹಜ್ಜ್ ಮತ್ತು ಉಮ್ರದ ಇತರ ಕರ್ಮಗಳನ್ನು ನಿರ್ವಹಿಸುವುದು ಅವಳಿಗೆ ನಿಷಿದ್ಧವಲ್ಲ. ಆಯಿಶಾ(ರ)ರಿಗೆ ಋತುಸ್ರಾವವಾದಾಗ ಪ್ರವಾದಿ(ಸ)ರು ಹೇಳಿದ ಮಾತು:
«افْعَلِي مَا يَفْعَلُ الْحَاجُّ غَيْرَ أَلَّا تَطُوفِي بِالْبَيْتِ حَتَّى تَطْهُرِي».
“ಹಾಜಿಗಳು ಮಾಡುವುದನ್ನೆಲ್ಲಾ ಮಾಡು. ಆದರೆ ಶುದ್ಧಳಾಗುವ ತನಕ ನೀನು ಕಅಬಾಲಯಕ್ಕೆ ತವಾಫ್ ಮಾಡಬಾರದು.”45
ಅದೇ ರೀತಿ ಶುದ್ಧಿಯಾಗಿರುವ ಸ್ಥಿತಿಯಲ್ಲಿ ತವಾಫ್ ಮಾಡಿ ಮುಗಿಸಿದ ನಂತರ ಋತುಸ್ರಾವವಾದರೆ, ಅಥವಾ ಸಈ ಮಾಡುವಾಗ ಋತುಸ್ರಾವವಾದರೆ ಅದರಲ್ಲಿ ತೊಂದರೆಯಿಲ್ಲ. (ಆ ತವಾಫ್ ಸಿಂಧುವಾಗಿದೆ).
ನಾಲ್ಕನೇ ನಿಯಮ: ವಿದಾಯದ ತವಾಫ್‌ನಲ್ಲಿ ವಿನಾಯಿತಿ. ಹಜ್ಜ್ ಮತ್ತು ಉಮ್ರ ಕರ್ಮಗಳೆಲ್ಲವನ್ನೂ ಮುಗಿಸಿ, ಊರಿಗೆ ಹೊರಡುವುದಕ್ಕೆ ಮೊದಲು ಮಹಿಳೆಗೆ ಋತುಸ್ರಾವವಾದರೆ, ಮತ್ತು ಹೊರಡುವ ದಿನದ ತನಕ ಅದು ಮುಂದುವರಿದರೆ, ಆಕೆ ವಿದಾಯದ ತವಾಫ್ ನಿರ್ವಹಿಸದೆ ಊರಿಗೆ ಹೊರಡಬಹುದು. ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಅವರ ಹದೀಸಿನಂತೆ, ಅವರು ಹೇಳಿದರು:
"أُمِرَ النَّاسُ أَنْ يَكُونَ آخِرُ عَهْدِهِمْ بِالْبَيْتِ، إِلَّا أَنَّهُ خُفِّفَ عَنِ الْمَرْأَةِ الْحَائِضِ".
ಜನರಿಗೆ ಅವರ ಕೊನೆಯ ಕರ್ಮವು ಕಅಬಾದಲ್ಲಿ ಇರಬೇಕೆಂದು ಆದೇಶಿಸಲಾಯಿತು. ಆದರೆ ಋತುಮತಿಯಾದ ಮಹಿಳೆಗೆ ವಿನಾಯಿತಿ ನೀಡಲಾಯಿತು. (ಮುತ್ತಫಕುನ್ ಅಲೈಹಿ)46.
ಋತುಸ್ರಾವವಿರುವ ಮಹಿಳೆಯರು ಮಕ್ಕಾದಿಂದ ಹೊರಡುವಾಗ ಮಸ್ಜಿದುಲ್ ಹರಾಮಿನ ಬಾಗಿಲಿಗೆ ಬಂದು ಪ್ರಾರ್ಥಿಸುವುದು ಸುನ್ನತ್ತಲ್ಲ. ಏಕೆಂದರೆ ಹೀಗೆ ಮಾಡಬೇಕೆಂದು ಪ್ರವಾದಿ(ಸ)ರಿಂದ ವರದಿಯಾಗಿಲ್ಲ. ಕುರ್‌ಆನ್ ಮತ್ತು ಸುನ್ನತ್ತನ್ನು ಆಧಾರವಾಗಿಟ್ಟು ಆರಾಧನೆಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಪ್ರವಾದಿ(ಸ)ರಿಂದ ಇದಕ್ಕೆ ವಿರುದ್ಧವಾಗಿ ವರದಿಯಾಗಿದೆ. ಸಫಿಯ್ಯ(ರ)ರ ಘಟನೆಯಲ್ಲಿ, ಅವರು ತವಾಫುಲ್ ಇಫಾದ ನಿರ್ವಹಿಸಿದ ಬಳಿಕ ಋತುಮತಿಯಾದಾಗ, ಪ್ರವಾದಿ(ಸ)ರು ಅವರಿಗೆ ಹೇಳಿದರು:
«فَلْتَنْفِرْ إِذَنْ».
ಹಾಗಾದರೆ ಹೊರಡಿರಿ. (ಮುತ್ತಫಕುನ್ ಅಲೈಹಿ)47
ಮಸೀದಿಯ ಬಾಗಿಲಿಗೆ ಹೋಗಲು ಅವರು ಆಜ್ಞಾಪಿಸಲಿಲ್ಲ. ಒಂದು ವೇಳೆ ಅದು ಧರ್ಮದೊಳಗೆ ಸೇರಿದ್ದಾಗಿದ್ದರೆ ಅವರು ಅದನ್ನು ಸ್ಪಷ್ಟಪಡಿಸುತ್ತಿದ್ದರು. ಆದರೆ ಋತುಸ್ರಾವವಿರುವ ಮಹಿಳೆಗೆ ಹಜ್ಜ್ ಅಥವಾ ಉಮ್ರದ ತವಾಫ್‌ನಿಂದ ವಿನಾಯಿತಿ ನೀಡಲಾಗಿಲ್ಲ. ಅವರು ಶುದ್ಧಿಯಾದ ಬಳಿಕ ಆ ತವಾಫನ್ನು ನಿರ್ವಹಿಸಬೇಕಾಗಿದೆ.
ಐದನೇ ನಿಯಮ: ಮಸೀದಿಯಲ್ಲಿ ತಂಗುವುದು. ಋತುಸ್ರಾವವಿರುವ ಮಹಿಳೆ ಮಸೀದಿಯಲ್ಲಿ ತಂಗುವುದು ನಿಷಿದ್ಧವಾಗಿದೆ. ಅದು ಈದ್ಗಾಹ್‌ನಲ್ಲಿರುವ ನಮಾಝಿನ ಸ್ಥಳವಾದರೂ ಸರಿ. ಋತುಸ್ರಾವವಿರುವ ಮಹಿಳೆ ಅಲ್ಲಿ ತಂಗುವುದು ನಿಷಿದ್ಧವಾಗಿದೆ. ಉಮ್ಮು ಅತಿಯ್ಯ(ರ) ಅವರು, ಪ್ರವಾದಿ(ಸ)ಯವರು ಹೀಗೆ ಹೇಳುವುದನ್ನು ತಾನು ಕೇಳಿದ್ದೇನೆಂದು ಹೇಳುತ್ತಾರೆ:
«يَخْرُجُ الْعَوَاتِقُ وَذَوَاتُ الْخُدُورِ وَالْحُيَّضُ».
“ಯುವತಿಯರು, ಪರ್ದಾಧಾರಿಗಳು ಮತ್ತು ಋತುಮತಿಯರು ಹೊರಬರಬೇಕು.” ಅದರಲ್ಲೇ ಹೀಗಿದೆ:
«يَعْتَزِلُ الْحُيَّضُ الْمُصَلَّى».
“ಋತುಸ್ರಾವವಿರುವವರು ನಮಾಝ್ ಮಾಡುವ ಸ್ಥಳದಿಂದ ದೂರವಿರಬೇಕು.” (ಮುತ್ತಫಕುನ್ ಅಲೈಹಿ)48
ಆರನೇ ನಿಯಮ: ಸಂಭೋಗ. ಋತುಸ್ರಾವವಿರುವ ಪತ್ನಿಯೊಂದಿಗೆ ಸಂಭೋಗ ಮಾಡುವುದು ಗಂಡನಿಗೆ ನಿಷಿದ್ಧವಾಗಿದೆ. ಅದೇ ರೀತಿ ಋತುಸ್ರಾವವಿರುವಾಗ ಸಂಭೋಗಕ್ಕೆ ಅವಕಾಶ ಮಾಡಿಕೊಡುವುದು ಪತ್ನಿಗೆ ನಿಷಿದ್ಧವಾಗಿದೆ; ಏಕೆಂದರೆ ಅಲ್ಲಾಹು ತಆಲಾ ಹೇಳುತ್ತಾನೆ:
﴿وَيَسۡـَٔلُونَكَ عَنِ ٱلۡمَحِيضِۖ قُلۡ هُوَ أَذٗى فَٱعۡتَزِلُواْ ٱلنِّسَآءَ فِي ٱلۡمَحِيضِ وَلَا تَقۡرَبُوهُنَّ حَتَّىٰ يَطۡهُرۡنَۖ...﴾
ಅವರು ನಿಮ್ಮೊಂದಿಗೆ ಋತುಸ್ರಾವದ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಹೊಲಸು. ಆದ್ದರಿಂದ ಋತುಸ್ರಾವದ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ. ಅವರು ಶುದ್ಧವಾಗುವ ತನಕ ಅವರ ಬಳಿಗೆ ಹೋಗಬೇಡಿ... [ಅಲ್-ಬಖರ:222]، ಋತುಸ್ರಾವದ ಬಗ್ಗೆ ಕೇಳುತ್ತಾರೆ ಎಂದರೆ ಋತುಸ್ರಾವದ ಸಮಯದ ಬಗ್ಗೆ ಮತ್ತು ಅದರ ಸ್ಥಳದ (ಅಂದರೆ ಗುಹ್ಯಾಂಗ) ಬಗ್ಗೆ ಕೇಳುತ್ತಾರೆ ಎಂದರ್ಥ. ಪ್ರವಾದಿ(ಸ) ರವರು ಹೇಳುತ್ತಾರೆ:
«اصْنَعُوا كُلَّ شَيْءٍ إِلَّا النِّكَاحَ».
“ನೀವು ನಿಕಾಹ್'ನ (ಸಂಭೋಗದ) ಹೊರತು ಬೇರೆ ಎಲ್ಲವನ್ನೂ ಮಾಡಬಹುದು.” ಅಂದರೆ: ಸಂಭೋಗ. ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ49; ಋತುಸ್ರಾವವಿರುವ ಮಹಿಳೆಯ ಗುಹ್ಯಾಂಗದಲ್ಲಿ ಸಂಭೋಗ ಮಾಡುವುದು ನಿಷಿದ್ಧವಾಗಿದೆ ಎಂಬ ವಿಷಯದಲ್ಲಿ ಮುಸ್ಲಿಮ್ ವಿದ್ವಾಂಸರ ನಡುವೆ ಒಮ್ಮತಾಭಿಪ್ರಾಯವಿದೆ.
ಆದ್ದರಿಂದ, ಅಲ್ಲಾಹನ ಗ್ರಂಥ, ಪ್ರವಾದಿ(ಸ)ರವರ ಸುನ್ನತ್ ಮತ್ತು ಮುಸ್ಲಿಮ್ ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ ನಿಷಿದ್ಧವಾಗಿರುವ ಈ ನೀಚಕೃತ್ಯಕ್ಕೆ ಮುಂದಾಗುವುದು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ಯಾವುದೇ ವ್ಯಕ್ತಿಗೂ ಧರ್ಮಸಮ್ಮತವಲ್ಲ. ಆತ ಹಾಗೇನಾದರೂ ಮಾಡಿದರೆ ಆತ ಅಲ್ಲಾಹು ಮತ್ತು ಪ್ರವಾದಿ(ಸ)ರಿಗೆ ವಿರುದ್ಧವಾಗಿ ಸಾಗಿ ಸತ್ಯವಿಶ್ವಾಸಿಗಳದ್ದಲ್ಲದ ಮಾರ್ಗವನ್ನು ಹಿಂಬಾಲಿಸಿದವನಾಗುತ್ತಾನೆ. ‘ಮಜ್ಮೂಅ್ ಶರ್ಹುಲ್ ಮುಹದ್ದಬ್’ ಗ್ರಂಥದಲ್ಲಿ (2/374) ಹೀಗೆ ಹೇಳಲಾಗಿದೆ: ಇಮಾಮ್ ಶಾಫಿಈ(ರ) ಹೇಳಿದರು: “ಯಾರಾದರೂ ಋತುಸ್ರಾವವಿರುವ ಪತ್ನಿಯೊಂದಿಗೆ ಸಂಭೋಗ ಮಾಡಿದರೆ ಅವನು ಮಹಾಪಾಪವನ್ನು ಮಾಡಿದನು. ”ನಮ್ಮ ಮದ್ಹಬ್‌ನವರು ಹಾಗೂ ಇತರ ವಿದ್ವಾಂಸರು ಹೇಳುತ್ತಾರೆ: “ಯಾರಾದರೂ ಋತುಸ್ರಾವವಿರುವ ಮಹಿಳೆಯೊಂದಿಗೆ ಸಂಭೋಗ ಮಾಡುವುದು ಧರ್ಮಸಮ್ಮತವೆಂದು ಹೇಳಿದರೆ, ಅವನನ್ನು ಸತ್ಯನಿಷೇಧಿಯೆಂದು ತೀರ್ಪು ನೀಡಲಾಗುವುದು.” ಇಮಾಮ್ ನವವಿಯವರ ಮಾತು ಇಲ್ಲಿಗೆ ಮುಕ್ತಾಯವಾಗುತ್ತದೆ.
ಆದರೆ ಕಾಮೋದ್ರೇಕವನ್ನು ತಣಿಸಲು ಸಂಭೋಗವಲ್ಲದ ಇತರ ಕಾರ್ಯಗಳನ್ನು ಮಾಡಲು ಅನುಮತಿಯಿದೆ. ಅಲ್ಲಾಹನಿಗೆ ಸರ್ವಸ್ತುತಿ. ಉದಾಹರಣೆಗೆ, ಚುಂಬಿಸುವುದು, ಅಪ್ಪಿಕೊಳ್ಳುವುದು, ಗುಹ್ಯಾಂಗವಲ್ಲದ ಇತರ ಭಾಗಗಳನ್ನು ಸ್ಪರ್ಶಿಸುವುದು ಇತ್ಯಾದಿ. ಆದರೆ ಹೊಕ್ಕುಳ ಮತ್ತು ಮಂಡಿಗಳ ನಡುವಿನ ಭಾಗಗಳನ್ನು ಬಟ್ಟೆಯ ಮೇಲಿಂದಲ್ಲದೆ ಸ್ಪರ್ಶಿಸದಿರುವುದು ಉತ್ತಮ. ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಹೇಳಿಕೆಯಂತೆ:
"كَانَ النَّبِيُّ صَلَّى اللَّهُ عَلَيْهِ وَسَلَّمَ يَأْمُرُنِي فَأَتَّزِرُ فَيُبَاشِرُنِي وَأَنَا حَائِضٌ".
ಪ್ರವಾದಿ(ಸ) ರವರು ನನಗೆ ಆದೇಶ ನೀಡುತ್ತಿದ್ದರು. ನಾನು ಅವರ ಆದೇಶದಂತೆ ಸೊಂಟದ ಕೆಳಗಿನ ಬಟ್ಟೆ ಧರಿಸುತ್ತಿದ್ದೆ. ಆಗ ನಾನು ಮುಟ್ಟಿನಲ್ಲಿದ್ದರೂ ಸಹ ಅವರು ನನ್ನನ್ನು ಮುದ್ದಾಡುತ್ತಿದ್ದರು. ಈ ಹದೀಸನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ50.
ಏಳನೇ ನಿಯಮ: ತಲಾಕ್: ಅಲ್ಲಾಹನ ಈ ವಚನದ ಆಧಾರದಲ್ಲಿ, ಪತ್ನಿ ಋತುಸ್ರಾವದ ಸ್ಥಿತಿಯಲ್ಲಿರುವಾಗ ಪತಿ ಆಕೆಗೆ ತಲಾಕ್ ನೀಡುವುದು ನಿಷಿದ್ಧವಾಗಿದೆ:
﴿يَاأَيُّهَا النَّبِيُّ إِذَا طَلَّقْتُمُ النِّسَاء فَطَلِّقُوهُنَّ لِعِدَّتِهِنَّ...﴾
ಓ ಪ್ರವಾದಿಯವರೇ! (ನಿಮ್ಮ ಅನುಯಾಯಿಗಳೊಡನೆ ಹೇಳಿರಿ): “ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ (ತಲಾಕ್) ನೀಡುವುದಾದರೆ, ಅವರ ಇದ್ದತ್‌ನ (ದೀಕ್ಷಾಕಾಲದ) ಆರಂಭವನ್ನು ಲೆಕ್ಕಹಾಕಿ ವಿಚ್ಛೇದಿಸಿರಿ... [ಅತ್ತಲಾಖ್:1] ಇದ್ದತ್‌ನ ಅವಧಿಯಲ್ಲಿ ಎಂದರೆ, ತಲಾಕ್ ನೀಡುವ ಸಂದರ್ಭ ಅವರಿಗೆ ತಮ್ಮ ಮುಂಬರುವ ಇದ್ದತ್ತನ್ನು (ದೀಕ್ಷಾಕಾಲವನ್ನು) ತಿಳಿಯಲು ಸಾಧ್ಯವಿರುವ ಸ್ಥಿತಿಯಲ್ಲಿ. ಮಹಿಳೆ ಗರ್ಭಿಣಿಯಾಗಿರುವಾಗ, ಅಥವಾ ಸಂಭೋಗದ ನಂತರ ಋತುಸ್ರಾವವಾಗಿ ಅದರಿಂದ ಶುದ್ಧಿಯಾಗಿರುವಾಗ ತಲಾಕ್ ನೀಡಿದರೆ ಮಾತ್ರ ಇದ್ದತ್ತನ್ನು ತಿಳಿಯಲು ಸಾಧ್ಯವಾಗುತ್ತದೆ. ಏಕೆಂದರೆ ಋತುಸ್ರಾವದ ಅವಧಿಯಲ್ಲಿ ಆಕೆಗೆ ತಲಾಕ್ ನೀಡಿದರೆ, ಇದ್ದತ್ ಆಚರಿಸಬೇಕಾದ ಅವಧಿಯನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಆಕೆಗೆ ತಲಾಕ್ ನೀಡಲಾದ ಋತುಸ್ರಾವದ ಅವಧಿಯು ಇದ್ದತ್‌ನಲ್ಲಿ ಒಳಪಡುವುದಿಲ್ಲ. ಅದೇ ರೀತಿ, ಅವಳು ಶುದ್ಧಿಯಾಗಿರುವಾಗ ಸಂಭೋಗ ಮಾಡಿ, ನಂತರ ತಲಾಕ್ ನೀಡಿದರೆ, ಆಕೆ ಆಚರಿಸಬೇಕಾದ ಇದ್ದತ್‌ನ ಅವಧಿಯನ್ನು ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಆ ಸಂಭೋಗದ ಮೂಲಕ ಆಕೆ ಗರ್ಭಿಣಿಯಾಗಿರುವ ಸಾಧ್ಯತೆಯಿದ್ದು ಆಕೆ ಹೆರಿಗೆಯ ಇದ್ದತ್ ಆಚರಿಸಬೇಕೋ, ಅಥವಾ ಗರ್ಭಿಣಿಯಾಗುವ ಸಾಧ್ಯತೆಯಿಲ್ಲದೆ ಆಕೆ ಋತುಸ್ರಾವದ ಇದ್ದತ್ ಆಚರಿಸಬೇಕೋ ಎಂದು ತಿಳಿಯಲಾಗುವುದಿಲ್ಲ. ಆಕೆ ಯಾವ ಇದ್ದತ್ ಆಚರಿಸಬೇಕೆಂಬ ಸ್ಪಷ್ಟ ಅರಿವು ಸಿಗದ ಕಾರಣ, ಯಾವ ಇದ್ದತ್ ಆಚರಿಸಬೇಕೆಂದು ಸ್ಪಷ್ಟವಾಗುವುದಕ್ಕಾಗಿ ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡುವುದನ್ನು ಗಂಡನಿಗೆ ನಿಷಿದ್ಧಗೊಳಿಸಲಾಗಿದೆ.
ಆದ್ದರಿಂದ ಈ ಮೇಲಿನ ಆಯತ್ತಿನ ಆಧಾರದಲ್ಲಿ ಮಹಿಳೆಯು ಋತುಸ್ರಾವದಲ್ಲಿರುವಾಗ ಆಕೆಗೆ ತಲಾಕ್ ನೀಡುವುದು ನಿಷಿದ್ಧವಾಗಿದೆ. ಸಹೀಹುಲ್ ಬುಖಾರಿ, ಸಹೀಹ್ ಮುಸ್ಲಿಮ್ ಹಾಗೂ ಇತರ ಹದೀಸ್ ಗ್ರಂಥಗಳಲ್ಲಿರುವ ಇಬ್ನ್ ಉಮರ್(ರ)ರ ಹದೀಸ್ ಇದಕ್ಕೆ ಆಧಾರವಾಗಿದೆ: ಅವರು ಋತುಸ್ರಾವದಲ್ಲಿದ್ದ ತಮ್ಮ ಪತ್ನಿಗೆ ತಲಾಕ್ ನೀಡಿದರು. ಆಗ ಉಮರ್(ರ)ರು ಈ ವಿಷಯವನ್ನು ಪ್ರವಾದಿ(ಸ)ರಿಗೆ ತಿಳಿಸಿದರು. ಆಗ ಅಲ್ಲಾಹನ ಸಂದೇಶವಾಹಕರು(ಸ) ಕೋಪಗೊಂಡು ಹೇಳಿದರು:
«مُرْهُ فَلْيُرَاجِعْهَا ثُمَّ لِيُمْسِكْهَا حَتَّى تَطْهُرَ، ثُمَّ تَحِيضَ، ثُمَّ تَطْهُرَ، ثُمَّ إِنْ شَاءَ أَمْسَكَ بَعْدُ، وَإِنْ شَاءَ طَلَّقَ قَبْلَ أَنْ يَمَسَّ، فَتِلْكَ الْعِدَّةُ الَّتِي أَمَرَ اللَّهُ أَنْ تُطَلَّقَ لَهَا النِّسَاءُ».
“ಅವನೊಂದಿಗೆ ಆಕೆಯನ್ನು ಮರಳಿ ಪಡೆಯಲು ಹೇಳಿರಿ. ನಂತರ ಆಕೆ ಶುದ್ಧಿಯಾಗುವ ತನಕ ಅವನೊನೊಂದಿಗಿರಲಿ. ನಂತರ ಆಕೆಗೆ ಪುನಃ ಋತುಸ್ರಾವವಾಗಿ, ಪುನಃ ಶುದ್ಧಿಯಾದ ಬಳಿಕ ಅವನು ಬಯಸಿದರೆ ಅವಳನ್ನು ತನ್ನ ಬಳಿಯಲ್ಲೇ ಇಟ್ಟುಕೊಳ್ಳಲಿ ಅಥವಾ ಅವನು ಬಯಸಿದರೆ, ಆಕೆಯೊಡನೆ ಸಂಭೋಗ ಮಾಡುವುದಕ್ಕೆ ಮುನ್ನ ತಲಾಕ್ ನೀಡಲಿ. ಇದು ಅಲ್ಲಾಹು ಮಹಿಳೆಯರಿಗೆ ತಲಾಕ್ ನೀಡಬೇಕೆಂದು ಹೇಳಿದ ಇದ್ದತ್ ಆಗಿದೆ”51.
ಋತುಸ್ರಾವದಲ್ಲಿರುವ ಪತ್ನಿಗೆ ಯಾರಾದರೂ ತಲಾಕ್ ನೀಡಿದರೆ ಅವನು ದೋಷಿಯಾಗುತ್ತಾನೆ. ಅವನು ಅಲ್ಲಾಹನ ಕಡೆಗೆ ತೌಬಾ ಮಾಡುವುದು ಮತ್ತು ಪತ್ನಿಗೆ ಶರಿಯತ್ತಿನ ನಿಯಮಕ್ಕೆ ಬದ್ಧವಾಗಿ, ಅಲ್ಲಾಹು ಹಾಗೂ ಪ್ರವಾದಿ(ಸ)ರ ಆಜ್ಞೆಗಳಿಗೆ ಅನುಗುಣವಾಗಿ ತಲಾಕ್ ನೀಡಲು ಆಕೆಯನ್ನು ತನ್ನ ಬಳಿಗೆ ಕರೆಸಿಕೊಳ್ಳುವುದು ಕಡ್ಡಾಯವಾಗಿದೆ. ಆಕೆಯನ್ನು ತನ್ನ ಬಳಿಗೆ ಕರೆಸಿಕೊಂಡ ನಂತರ, ಆಕೆಗೆ ತಲಾಕ್ ನೀಡಲಾದ ಆ ಋತುಸ್ರಾವದಿಂದ ಶುದ್ಧಳಾಗುವ ತನಕ ಅವಳನ್ನು ಹಾಗೆಯೇ ಬಿಟ್ಟುಬಿಡಬೇಕು. ನಂತರ ಆಕೆಗೆ ಪುನಃ ಋತುಸ್ರಾವವಾಗಿ, ಪುನಃ ಅದರಿಂದ ಶುದ್ಧಿಯಾದ ಬಳಿಕ ಅವನು ಬಯಸಿದರೆ ಆಕೆಯನ್ನು ಇಟ್ಟುಕೊಳ್ಳಬಹುದು ಅಥವಾ ಅವನು ಬಯಸಿದರೆ ಆಕೆಯೊಂದಿಗೆ ಸಂಭೋಗ ಮಾಡುವುದಕ್ಕೆ ಮೊದಲೇ ಅವಳಿಗೆ ತಲಾಕ್ ನೀಡಬಹುದು.
ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡುವುದು ನಿಷಿದ್ಧ ಎಂಬ ನಿಯಮಕ್ಕೆ ಈ ಕೆಳಗಿನ ಮೂರು ವಿನಾಯಿತಿಗಳಿವೆ:
ಒಂದು: ಆಕೆಯೊಂದಿಗೆ ಒಂಟಿಯಾಗುವುದಕ್ಕೆ ಅಥವಾ ಆಕೆಯೊಂದಿಗೆ ಸಂಭೋಗ ಮಾಡುವುದಕ್ಕೆ ಮೊದಲು ತಲಾಕ್ ನೀಡುವುದು. ಇಂತಹ ಸ್ಥಿತಿಯಲ್ಲಿ ಆಕೆ ಋತುಸ್ರಾವದಲ್ಲಿದ್ದರೂ ತಲಾಕ್ ನೀಡಬಹುದು. ಏಕೆಂದರೆ ಇಂತಹ ಸ್ಥಿತಿಯಲ್ಲಿ ಆಕೆ ಇದ್ದತ್ ಆಚರಿಸಬೇಕಾಗಿಲ್ಲ. ಆದ್ದರಿಂದ ಅವಳಿಗೆ ತಲಾಕ್ ನೀಡುವುದು ಅಲ್ಲಾಹನ ವಚನಕ್ಕೆ ವಿರುದ್ಧವಾಗುವುದಿಲ್ಲ:
﴿...فَطَلِّقُوهُنَّ لِعِدَّتِهِنَّ...﴾
ಅವರನ್ನು ಅವರ ಇದ್ದತ್‌ಗೆ ಅನುಗುಣವಾಗಿ ವಿಚ್ಛೇದಿಸಿರಿ... [ಅತ್ತಲಾಖ್:1]
ಎರಡು: ಪತ್ನಿ ಗರ್ಭಿಣಿಯಾಗಿದ್ದು ಋತುಸ್ರಾವದಲ್ಲಿರುವಾಗ ತಲಾಕ್ ನೀಡುವುದು. ಇದರ ಬಗ್ಗೆ ಈಗಾಗಲೇ ವಿವರಿಸಲಾಗಿದೆ.
ಮೂರು: ಅದು ಬದಲಿ ತಲಾಕ್ ಆಗಿದ್ದರೆ, ಇಂತಹ ಸ್ಥಿತಿಯಲ್ಲಿ ಆಕೆ ಋತುಸ್ರಾವದಲ್ಲಿದ್ದರೂ ತಲಾಕ್ ನೀಡುವುದರಲ್ಲಿ ತೊಂದರೆಯಿಲ್ಲ.
ಉದಾಹರಣೆಗೆ, ದಂಪತಿಯ ನಡುವೆ ಕಲಹ ಮತ್ತು ಕೆಟ್ಟ ವರ್ತನೆಗಳಿದ್ದು, ಗಂಡ ಬದಲಿಯನ್ನು ಪಡೆದು ಆಕೆಗೆ ತಲಾಕ್ ನೀಡುವುದು. ಈ ತಲಾಕನ್ನು ಋತುಸ್ರಾವದ ಅವಧಿಯಲ್ಲಿಯೂ ನೀಡಬಹುದು. ಇದಕ್ಕೆ ಆಧಾರ ಇಬ್ನ್ ಅಬ್ಬಾಸ್(ರ)ರ ಈ ಹದೀಸ್: ಸಾಬಿತ್ ಬಿನ್ ಕೈಸ್ ಬಿನ್ ಶಮ್ಮಾಸ್(ರ)ರ ಪತ್ನಿ ಪ್ರವಾದಿ(ಸ)ರ ಬಳಿಗೆ ಬಂದು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವರ ನಡವಳಿಕೆ ಅಥವಾ ಧಾರ್ಮಿಕತೆಯಲ್ಲಿ ಕೊರತೆಯಿದೆಯೆಂದು ನಾನು ಹೇಳುವುದಿಲ್ಲ. ಆದರೆ ನಾನು ಇಸ್ಲಾಮ್ ಧರ್ಮದಲ್ಲಿದ್ದು ಸತ್ಯನಿಷೇಧಿಯಂತೆ ವರ್ತಿಸಲು ಇಷ್ಟಪಡುವುದಿಲ್ಲ.” ಆಗ ಪ್ರವಾದಿ(ಸ)ರು ಹೇಳಿದರು:
«أَتَرُدِّينَ عَلَيْهِ حَدِيقَتَهُ؟»
ನೀನು ಅವನ ತೋಟವನ್ನು ಅವನಿಗೆ ಹಿಂತಿರುಗಿಸುವೆಯಾ? ಆಕೆ ಹೇಳಿದರು: ಹೌದು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
«اقْبَلِ الْحَدِيقَةَ وَطَلِّقْهَا تَطْلِيقَةً»
“ಆ ತೋಟವನ್ನು ಪಡೆದುಕೊಂಡು ಆಕೆಗೆ ಒಂದೇ ತಲಾಕ್ ನೀಡು.” [ಬುಖಾರಿ]52.
ಪ್ರವಾದಿ(ಸ)ರು ಆಕೆಯೊಡನೆ ನೀನು ಋತುಸ್ರಾವದಲ್ಲಿದ್ದೀಯೋ ಅಥವಾ ಶುದ್ಧಿಯಲ್ಲಿದ್ದೀಯೋ ಎಂದು ಕೇಳಲಿಲ್ಲ. ಇನ್ನೊಂದು ಕಾರಣವೇನೆಂದರೆ, ಈ ತಲಾಕ್ ಮಹಿಳೆಯು ತನ್ನ ವತಿಯಿಂದ ಪ್ರಾಯಶ್ತಿತ್ತ ನೀಡಿ ಕೇಳುವ ತಲಾಕ್ ಆಗಿದೆ. ಆದ್ದರಿಂದ ಇದು ಅತ್ಯಗತ್ಯ ಸಂದರ್ಭದ ತಲಾಕ್ ಆಗಿರುವುದರಿಂದ ಇದು ಯಾವುದೇ ಸ್ಥಿತಿಯಲ್ಲೂ ಸಮ್ಮತಾರ್ಹವಾಗಿದೆ.
ಋತುಸ್ರಾವದ ಸಂದರ್ಭದಲ್ಲಿ ಖುಲಾ ಸಮ್ಮತಾರ್ಹವಾಗಿದೆ ಎಂಬುದಕ್ಕೆ ಕಾರಣವನ್ನು ವಿವರಿಸುತ್ತಾ ಮುಗ್ನಿಯ (7/52) ಲೇಖಕರು ಹೀಗೆ ಹೇಳುತ್ತಾರೆ: “ಇದ್ದತ್ ದೀರ್ಘವಾಗುವ ಮೂಲಕ ಮಹಿಳೆ ತೊಂದರೆ ಅನುಭವಿಸದಿರಲಿ ಎಂಬ ಉದ್ದೇಶದಿಂದ ಋತುಸ್ರಾವದ ಅವಧಿಯಲ್ಲಿ ತಲಾಕ್ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಖುಲಾ ಇರುವುದು ಮಹಿಳೆ ತಾನು ಅಸಹ್ಯಪಡುವವನ ಮತ್ತು ದ್ವೇಷಿಸುವವನ (ಗಂಡನ) ಕೆಟ್ಟ ನಡತೆಯ ಮೂಲಕ ಉಂಟಾಗುವ ಹಿಂಸೆಯನ್ನು ತಪ್ಪಿಸುವುದಕ್ಕಾಗಿದೆ. ಇದ್ದತ್ ದೀರ್ಘವಾಗುವುದರಿಂದ ಉಂಟಾಗುವ ತೊಂದರೆಗಿಂತಲೂ ಈ ಹಿಂಸೆ ದೊಡ್ಡದಾಗಿದೆ. ಆದ್ದರಿಂದ ಇಲ್ಲಿ ಚಿಕ್ಕ ತೊಂದರೆಯನ್ನು ನೀಡುವ ಮೂಲಕ ದೊಡ್ಡ ಹಿಂಸೆಯನ್ನು ನಿವಾರಿಸಲಾಗಿದೆ. ಈ ಕಾರಣದಿಂದಲೇ ಖುಲಾ ಪಡೆಯುವವಳೊಂದಿಗೆ ಆಕೆಯ (ಋತುಸ್ರಾವದ) ಸ್ಥಿತಿಯ ಬಗ್ಗೆ ಪ್ರವಾದಿ(ಸ)ರು ಪ್ರಶ್ನಿಸಲಿಲ್ಲ.”
ಆದರೆ ಋತುಸ್ರಾವದಲ್ಲಿರುವ ಮಹಿಳೆಯನ್ನು ವಿವಾಹವಾಗುವುದರಲ್ಲಿ ತೊಂದರೆಯಿಲ್ಲ. ಏಕೆಂದರೆ ಮೂಲ ನಿಯಮದ ಪ್ರಕಾರ ಎಲ್ಲವೂ ಧರ್ಮಸಮ್ಮತವಾಗಿವೆ. ಅದನ್ನು ನಿಷಿದ್ಧವೆನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ಆದರೆ ಋತುಸ್ರಾವವಿರುವ ಪತ್ನಿಯೊಡನೆ ಗಂಡನು ಸೇರುವ ವಿಷಯವು ವೀಕ್ಷಣೆಗೆ ಒಳಪಟ್ಟಿದೆ. ಆತ ಅವಳೊಡನೆ ಸಂಭೋಗ ಮಾಡಲಾರನು ಎಂಬ ಭರವಸೆಯಿದ್ದರೆ ಸೇರಿಕೊಳ್ಳುವುದರಲ್ಲಿ ತೊಂದರೆಯಿಲ್ಲ. ಇಲ್ಲದಿದ್ದರೆ ಆಕೆ ಶುದ್ಧಿಯಾಗುವ ತನಕ ಆಕೆಯೊಡನೆ ಸೇರಬಾರದು. ಏಕೆಂದರೆ ಇದರಿಂದ ಆತ ನಿಷಿದ್ಧ ಕೃತ್ಯ ಮಾಡಿಬಿಡುವ ಸಾಧ್ಯತೆಯಿದೆ.
ಎಂಟನೇ ನಿಯಮ: ಋತುಸ್ರಾವದ ಮೂಲಕ ತಲಾಕ್‌ನ ಸಂಖ್ಯೆಯನ್ನು ಎಣಿಸುವುದು. ಒಬ್ಬ ಪುರುಷ ತನ್ನ ಪತ್ನಿಯೊಡನೆ ಸಂಭೋಗ ಮಾಡಿದ ಬಳಿಕ ಅಥವಾ ಆಕೆಯೊಡನೆ ಒಂಟಿಯಾಗಿ ಕಳೆದ ಬಳಿಕ ತಲಾಕ್ ನೀಡಿದರೆ, ಆಕೆ ಮೂರು ಪೂರ್ಣ ಋತುಸ್ರಾವಗಳು ಉಂಟಾಗುವ ತನಕ ಇದ್ದತ್ ಆಚರಿಸುವುದು ಕಡ್ಡಾಯವಾಗಿದೆ. ಇದು ಆಕೆ ಋತುಸ್ರಾವವಾಗುವ ಮಹಿಳೆಯಾಗಿದ್ದು, ಗರ್ಭಿಣಿಯಲ್ಲದಿದ್ದರೆ ಮಾತ್ರ; ಯಾಕೆಂದರೆ ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ:
﴿وَٱلۡمُطَلَّقَٰتُ يَتَرَبَّصۡنَ بِأَنفُسِهِنَّ ثَلَٰثَةَ قُرُوٓءٖۚ...﴾
ವಿಚ್ಛೇದಿತ ಮಹಿಳೆಯರು ಸ್ವಯಂ ಮೂರು ಋತುಸ್ರಾವಗಳ ತನಕ ಕಾಯಬೇಕು. [ಅಲ್-ಬಖರ:228], ಅಂದರೆ ಮೂರು ಋತುಸ್ರಾವಗಳು ಉಂಟಾಗುವ ತನಕ. ಆದರೆ ಆಕೆ ಗರ್ಭಿಣಿಯಾಗಿದ್ದರೆ, ಸಂಪೂರ್ಣ ಹೆರಿಗೆಯಾಗುವ ತನಕ ಇದ್ದತ್ ಆಚರಿಸಬೇಕು. ಹೆರಿಗೆಯಾಗುವ ತನಕದ ಅವಧಿಯು ದೊಡ್ಡದಾಗಿದ್ದರೂ ಚಿಕ್ಕದಾಗಿದ್ದರೂ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದಕ್ಕೆ ಆಧಾರ ಸರ್ವಶಕ್ತನಾದ ಅಲ್ಲಾಹನ ಈ ವಚನ:
﴿...وَأُوْلَاتُ الأَحْمَالِ أَجَلُهُنَّ أَن يَضَعْنَ حَمْلَهُنَّ...﴾
ಗರ್ಭಿಣಿಯರ ಇದ್ದತ್ ಅವರು ಮಗುವಿಗೆ ಜನ್ಮ ನೀಡುವ ತನಕ. [ಅತ್ತಲಾಖ್:4]، ಆದರೆ ಆಕೆ ಋತುಸ್ರಾವವಾಗದ ಮಹಿಳೆಯಾಗಿದ್ದರೆ, ಅಂದರೆ ಇನ್ನೂ ಋತುಸ್ರಾವ ಪ್ರಾರಂಭವಾಗದ ಎಳೆಯ ಹುಡುಗಿಯಾಗಿದ್ದರೆ, ಅಥವಾ ವೃದ್ಧಾಪ್ಯದ ಕಾರಣ, ಶಸ್ತ್ರ ಚಿಕಿತ್ಸೆಯ ಮೂಲಕ ಗರ್ಭವನ್ನು ತೆಗೆದು ಹಾಕಲಾದ ಕಾರಣ ಅಥವಾ ಇತರ ಕಾರಣಗಳಿಂದ ಇನ್ನೆಂದೂ ಋತುಸ್ರಾವವಾಗುವ ನಿರೀಕ್ಷೆಯಿಲ್ಲದ ಮಹಿಳೆಯಾಗಿದ್ದರೆ, ಆಕೆಯ ಇದ್ದತ್ ಮೂರು ತಿಂಗಳುಗಳಾಗಿವೆ; ಇದಕ್ಕೆ ಆಧಾರ ಸರ್ವಶಕ್ತನಾದ ಅಲ್ಲಾಹನ ಈ ವಚನ:
﴿وَاللَّائِي يَئِسْنَ مِنَ الْمَحِيضِ مِن نِّسَائِكُمْ إِنِ ارْتَبْتُمْ فَعِدَّتُهُنَّ ثَلَاثَةُ أَشْهُرٍ وَاللَّائِي لَمْ يَحِضْنَ...﴾
ನಿಮ್ಮ ಮಹಿಳೆಯರಲ್ಲಿ ಋತುಸ್ರಾವದ ಬಗ್ಗೆ ನಿರೀಕ್ಷೆ ಕಳಕೊಂಡವರು ಯಾರೋ—ನಿಮಗೆ ಸಂದೇಹವಿದ್ದರೆ ಅವರ ಇದ್ದತ್ (ದೀಕ್ಷಾಕಾಲ) ಮೂರು ತಿಂಗಳುಗಳಾಗಿವೆ. ಅದೇ ರೀತಿ ಋತುಸ್ರಾವ ಪ್ರಾರಂಭವಾಗದಿರುವವರು ಕೂಡ... [ಅತ್ತಲಾಖ್:4], ಆದರೆ ಆಕೆ ಋತುಸ್ರಾವವಾಗುವ ಮಹಿಳೆಯಾಗಿದ್ದು, ಕಾಯಿಲೆ, ಸ್ತನಪಾನ ಮುಂತಾದ ಸ್ಪಷ್ಟ ಕಾರಣಗಳಿಂದ ಋತುಸ್ರಾವ ನಿಂತಿದ್ದರೆ, ಆಕೆ ಇದ್ದತ್‌ನಲ್ಲೇ ಇರಬೇಕು. ಅದು ಎಷ್ಟೇ ದೀರ್ಘವಾದರೂ ಸಹ ಪುನಃ ಋತುಸ್ರಾವವಾಗುವ ತನಕ ಕಾಯಬೇಕು ಮತ್ತು ಅದರ ಆಧಾರದಲ್ಲಿ ಇದ್ದತ್ ಆಚರಿಸಬೇಕು. ಆದರೆ, ಕಾರಣವು ನಿವಾರಣೆಯಾದ ಬಳಿಕವೂ ಋತುಸ್ರಾವ ಉಂಟಾಗದಿದ್ದರೆ, ಅಂದರೆ ಕಾಯಿಲೆ ಗುಣವಾದ ಬಳಿಕ ಅಥವಾ ಸ್ತನಪಾನದ ಅವಧಿ ಮುಗಿದ ಬಳಿಕವೂ ಋತುಸ್ರಾವ ಪ್ರಾರಂಭವಾಗದಿದ್ದರೆ, ಆಕೆ ಕಾರಣವು ನಿವಾರಣೆಯಾದ ದಿನದಿಂದ ತೊಡಗಿ ಒಂದು ವರ್ಷ ಪೂರ್ತಿ ಇದ್ದತ್ ಆಚರಿಸಬೇಕು. ಇದು ಶರಿಯತ್ತಿನ ನಿಯಮಗಳಿಗೆ ಅನುಗುಣವಾಗಿರುವ ಸರಿಯಾದ ಅಭಿಪ್ರಾಯವಾಗಿದೆ. ಏಕೆಂದರೆ ಕಾರಣವು ನಿವಾರಣೆಯಾದ ಬಳಿಕವೂ ಋತುಸ್ರಾವ ಪ್ರಾರಂಭವಾಗದಿದ್ದರೆ, ಆಕೆಯ ಸ್ಥಿತಿಯು ಅನಿಶ್ಚಿತ ಕಾರಣಗಳಿಂದಾಗಿ ಋತುಸ್ರಾವವಾಗದ ಮಹಿಳೆಯಂತೆ ಆಗುತ್ತದೆ. ಅನಿಶ್ಚಿತ ಕಾರಣಗಳಿಂದಾಗಿ ಋತುಸ್ರಾವವು ನಿಂತವರು ಒಂದು ವರ್ಷ ಪೂರ್ತಿ ಇದ್ದತ್ ಆಚರಿಸಬೇಕು. ಒಂಬತ್ತು ತಿಂಗಳು ಗರ್ಭಿಣಿಯೋ ಅಲ್ಲವೋ ಎಂದು ಸೂಕ್ಷ್ಮವಾಗಿ ತಿಳಿಯುವುದಕ್ಕೆ. ಏಕೆಂದರೆ ಅದು ಸಾಮಾನ್ಯವಾಗಿ ಮಹಿಳೆಯು ಗರ್ಭಿಣಿಯಾಗಿರುವ ಅವಧಿಯಾಗಿದೆ. ಉಳಿದ ಮೂರು ತಿಂಗಳು ಇದ್ದತ್‌ನಲ್ಲಿ ಸೇರಿದ್ದು.
ಆದರೆ ತಲಾಕ್ ನೀಡುವುದು ವಿವಾಹ ಕರಾರು ಮಾಡಿದ ನಂತರ ಮತ್ತು ಸಂಭೋಗ ಅಥವಾ ಒಂಟಿಯಾಗುವುದಕ್ಕೆ ಮೊದಲಾಗಿದ್ದರೆ, ಅಂತಹ ಸಂದರ್ಭದಲ್ಲಿ ಆಕೆ ಋತುಸ್ರಾವದ ಅಥವಾ ಇತರ ಯಾವುದೇ ಕಾರಣಕ್ಕೂ ಇದ್ದತ್ ಆಚರಿಸಬೇಕಾಗಿಲ್ಲ. ಏಕೆಂದರೆ ಅಲ್ಲಾಹನು ಹೇಳುತ್ತಾನೆ:
﴿يَاأَيُّهَا الَّذِينَ آمَنُوا إِذَا نَكَحْتُمُ الْمُؤْمِنَاتِ ثُمَّ طَلَّقْتُمُوهُنَّ مِن قَبْلِ أَن تَمَسُّوهُنَّ فَمَا لَكُمْ عَلَيْهِنَّ مِنْ عِدَّةٍ تَعْتَدُّونَهَا...﴾
ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿ ಮಹಿಳೆಯರನ್ನು ವಿವಾಹವಾಗಿ, ನಂತರ ಅವರೊಡನೆ ಲೈಂಗಿಕ ಸಂಪರ್ಕ ಮಾಡುವುದಕ್ಕೆ ಮೊದಲೇ ಅವರಿಗೆ ವಿಚ್ಛೇದನ ನೀಡಿದರೆ, ನೀವು ಎಣಿಸುವ ಇದ್ದಃ (ದೀಕ್ಷಾಕಾಲ) ವನ್ನು ಆಚರಿಸಬೇಕಾದ ಹೊಣೆ ಅವರಿಗಿಲ್ಲ... [ಅಲ್-ಅಹ್‌ಝಾಬ್:49]
ಒಂಬತ್ತನೇ ನಿಯಮ: ಗರ್ಭಾಶಯವನ್ನು ಮುಕ್ತಗೊಳಿಸುವುದು, ಅಂದರೆ ಗರ್ಭಾಶಯವನ್ನು ಖಾಲಿ ಮಾಡುವುದು. ಗರ್ಭಾಶಯವನ್ನು ಮುಕ್ತಗೊಳಿಸಬೇಕಾದ ಅಗತ್ಯ ಬರುವಾಗ ಈ ನಿಯಮದ ಆವಶ್ಯಕತೆ ಬರುತ್ತದೆ. ಇದರಲ್ಲಿ ಕೆಲವು ವಿಧಿಗಳಿವೆ:
ಅದರಲ್ಲೊಂದು ಹೀಗಿದೆ: ಒಬ್ಬ ವ್ಯಕ್ತಿ ನಿಧನನಾಗುವಾಗ ಅವನ ಪತ್ನಿ ಅವನ ವಾರೀಸುದಾರನಾದ ಮಗನನ್ನು ಗರ್ಭ ಧರಿಸಿರುತ್ತಾಳೆ. ಆಗ ಆಕೆ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾದರೆ, ಆಕೆಗೆ ಋತುಸ್ರಾವವಾಗುವ ತನಕ ಅಥವಾ ಆಕೆ ಗರ್ಭಿಣಿಯೆಂದು ತಿಳಿದುಬರುವ ತನಕ ಆತ ಆಕೆಯೊಂದಿಗೆ ಸಂಭೋಗ ಮಾಡಬಾರದು. ಆಕೆ ಗರ್ಭಿಣಿಯೆಂದು ತಿಳಿದುಬಂದರೆ, ಆ ಮಗು ನಿಧನನಾದ ಗಂಡನ ವಾರೀಸುದಾರ ಎಂದು ನಾವು ತೀರ್ಪು ನೀಡುತ್ತೇವೆ. ಗಂಡ ನಿಧನನಾಗುವಾಗ ಈ ಮಗು ಗರ್ಭಾಶಯದಲ್ಲಿ ಅಸ್ತಿತ್ವದಲ್ಲಿದ್ದ ಕಾರಣ ಇದು ಅವನ ವಾರೀಸುದಾರ ಎಂದು ನಾವು ತೀರ್ಪು ನೀಡುತ್ತೇವೆ. ಆದರೆ ಆಕೆಗೆ ಋತುಸ್ರಾವವಾದರೆ, ಆ ಮಗು ನಿಧನನಾದ ಗಂಡನ ವಾರೀಸುದಾರನಲ್ಲ ಎಂದು ನಾವು ತೀರ್ಪು ನೀಡುತ್ತೇವೆ. ಹೀಗೆ ಋತುಸ್ರಾವದ ಮೂಲಕ ನಾವು ಗರ್ಭಾಶಯವನ್ನು ಮುಕ್ತಗೊಳಿಸುವ ತೀರ್ಪು ನೀಡುತ್ತೇವೆ.
ಹತ್ತನೇ ನಿಯಮ: ಸ್ನಾನ ಕಡ್ಡಾಯವಾಗುವುದು. ಋತುಸ್ರಾವವಿರುವ ಮಹಿಳೆ ಶುದ್ಧಿಯಾದರೆ ಸಂಪೂರ್ಣ ದೇಹವನ್ನು ಶುಚಿಗೊಳಿಸುತ್ತಾ ಸ್ನಾನ ಮಾಡುವುದು ಕಡ್ಡಾಯವಾಗಿದೆ. ಪ್ರವಾದಿ(ಸ)ರು ಫಾತಿಮ ಬಿಂತ್ ಅಬೂ ಹುಬೈಶ್(ರ)ರಿಗೆ ಹೇಳಿದ ಈ ಮಾತು ಇದಕ್ಕೆ ಆಧಾರವಾಗಿದೆ:
«فَإِذَا أَقْبَلَتِ الْحَيْضَةُ فَدَعِي الصَّلَاةَ، وَإِذَا أَدْبَرَتْ فَاغْتَسِلِي وَصَلِّي».
“ಋತುಸ್ರಾವ ಆರಂಭವಾದರೆ ನಮಾಝನ್ನು ತೊರೆ. ಋತುಸ್ರಾವ ನಿಂತರೆ ಸ್ನಾನ ಮಾಡಿ ನಮಾಝ್ ಮಾಡು.” [ಇದನ್ನು ಬುಖಾರಿ ವರದಿ ಮಾಡಿದ್ದಾರೆ]53.
ಸ್ನಾನದಲ್ಲಿ ಕನಿಷ್ಠ ಕಡ್ಡಾಯವಾಗಿರುವುದು ತಲೆಗೂದಲಿನ ಬುಡ ಸೇರಿದಂತೆ ಸಂಪೂರ್ಣ ದೇಹವನ್ನು ನೀರಿನಿಂದ ಒದ್ದೆ ಮಾಡುವುದು. ಆದರೆ ಸ್ನಾನವು ಈ ಕೆಳಗಿನ ಹದೀಸಿನಲ್ಲಿ ಬಂದಿರುವ ರೀತಿಯಲ್ಲಾಗಿರುವುದು ಶ್ರೇಷ್ಠವಾಗಿದೆ: ಋತುಸ್ರಾವದ ಸ್ನಾನದ ಬಗ್ಗೆ ಅಸ್ಮಾ ಬಿಂತ್ ಶಕ್ಲ್(ರ) ಪ್ರವಾದಿ(ಸ)ರೊಂದಿಗೆ ಕೇಳಿದಾಗ, ಅವರು(ಸ) ಹೇಳಿದರು:
«تَأْخُذُ إِحْدَاكُنَّ مَاءَهَا وَسِدْرَتَهَا فَتَطَهَّرُ فَتُحْسِنُ الطُّهُورَ، ثُمَّ تَصُبُّ عَلَى رَأْسِهَا فَتَدْلُكُهُ دَلْكًا شَدِيدًا، حَتَّى تَبْلُغَ شُؤُونَ رَأْسِهَا، ثُمَّ تَصُبُّ عَلَيْهَا الْمَاءَ، ثُمَّ تَأْخُذُ فِرْصَةً مُمَسَّكَةً -أَيْ: قِطْعَةَ قُمَاشٍ فِيهَا مِسْكٌ- فَتَطَهَّرُ بِهَا».
“ನಿಮ್ಮಲ್ಲೊಬ್ಬರು ನೀರು ಮತ್ತು ಬೇರಿಯ(ಸಿದ್ರ್'ನ) ಎಲೆಗಳನ್ನು ತೆಗೆದುಕೊಂಡು ದೇಹವನ್ನು ಸರಿಯಾದ ರೀತಿಯಲ್ಲಿ ತೊಳೆದು ಶುಚಿಗೊಳಿಸಬೇಕು. ನಂತರ ತಲೆಯ ಮೇಲೆ ನೀರು ಸುರಿದು, ಕೂದಲಿನ ಬುಡವನ್ನು ತಲುಪುವ ತನಕ ತಲೆಯನ್ನು ಚೆನ್ನಾಗಿ ಉಜ್ಜಿ ತೊಳೆಯಬೇಕು. ನಂತರ ದೇಹಕ್ಕೆ ನೀರು ಸುರಿಯಬೇಕು. ನಂತರ ಕಸ್ತೂರಿಯನ್ನು (ಸುಗಂಧವನ್ನು) ಹೊಂದಿರುವ ಬಟ್ಟೆಯಿಂದ ಶುಚಿಗೊಳಿಸಬೇಕು.” ಅಸ್ಮಾ ಕೇಳಿದರು: “ಅದರಿಂದ ಶುಚಿಗೊಳಿಸುವುದು ಹೇಗೆ?” ಆಗ ಅವರು ಹೇಳಿದರು:
«سُبْحَانَ اللَّهِ!».
ಸುಬ್‌ಹಾನಲ್ಲಾಹ್!"" (ಅಲ್ಲಾಹನ ಪರಿಪಾವನತೆಯನ್ನು ಕೊಂಡಾಡುತ್ತೇನೆ), ಆಗ ಆಯಿಷಾ ಆಕೆಗೆ ಹೇಳಿದರು: ರಕ್ತದ ಗುರುತನ್ನು ಅನುಸರಿಸಿ.54 ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಸ್ನಾನ ಮಾಡುವಾಗ ತಲೆಗೂದಲನ್ನು ಬಿಚ್ಚುವುದು ಕಡ್ಡಾಯವಿಲ್ಲ. ಆದರೆ ನೀರು ಅದರ ಬುಡಕ್ಕೆ ತಲುಪದ ರೀತಿಯಲ್ಲಿ ಅದನ್ನು ಬಿಗಿಯಾಗಿ ಕಟ್ಟಿರದಿದ್ದರೆ ಮಾತ್ರ. ಸಹೀಹ್ ಮುಸ್ಲಿಂನಲ್ಲಿರುವ ಉಮ್ಮು ಸಲಮ(ರ)ರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಪ್ರವಾದಿ(ಸ)ರೊಂದಿಗೆ ಕೇಳಿದರು: “ನಾನು ತಲೆಗೂದಲನ್ನು ಕಟ್ಟುವ ಮಹಿಳೆಯಾಗಿದ್ದೇನೆ. ದೊಡ್ಡ ಅಶುದ್ಧಿಯ (ಜನಾಬತ್) ಸ್ನಾನ ಮಾಡುವಾಗ ನಾನು ಅದನ್ನು ಬಿಚ್ಚಬೇಕೇ?” ಇನ್ನೊಂದು ವರದಿಯಲ್ಲಿ ಹೀಗಿದೆ: “ಋತುಸ್ರಾವದ ಮತ್ತು ಜನಾಬತ್‌ನ ಸ್ನಾನಕ್ಕಾಗಿ ನಾನು ಅದನ್ನು ಬಿಚ್ಚಬೇಕೇ?” ಆಗ ಪ್ರವಾದಿ(ಸ)ರು ಹೇಳಿದರು:
«لَا، إِنَّمَا يَكْفِيكِ أَنْ تَحْثِيَ عَلَى رَأْسِكِ ثَلَاثَ حَثَيَاتٍ ثُمَّ تُفِيضِينَ عَلَيْكِ الْمَاءَ فَتَطْهُرِينَ».
ಬೇಡ, ತಲೆಯ ಮೇಲೆ ಮೂರು ಬಾರಿ ನೀರು ಸುರಿದರೆ ಸಾಕು. ನಂತರ ಸಂಪೂರ್ಣ ದೇಹಕ್ಕೆ ನೀರು ಸುರಿದು ಶುಚಿಗೊಳಿಸು."55.
ಋತುಸ್ರಾವವಿರುವ ಮಹಿಳೆ ನಮಾಝಿನ ಸಮಯದ ಮಧ್ಯೆ ಶುದ್ಧಿಯಾದರೆ, ಆ ನಮಾಝನ್ನು ಅದರ ಸಮಯದಲ್ಲೇ ನಿರ್ವಹಿಸುವುದಕ್ಕಾಗಿ ಸ್ನಾನ ಮಾಡಲು ಆತುರಪಡುವುದು ಕಡ್ಡಾಯವಾಗಿದೆ. ಒಂದು ವೇಳೆ ಆಕೆ ಪ್ರಯಾಣದಲ್ಲಿದ್ದು, ಆಕೆಯ ಬಳಿ ನೀರಿಲ್ಲದಿದ್ದರೆ, ಅಥವಾ ನೀರಿದ್ದೂ ಸಹ ಅದರ ಬಳಕೆಯಿಂದ ಹಾನಿ ಉಂಟಾಗುವುದಾದರೆ, ಅಥವಾ ನೀರಿನ ಬಳಕೆ ಮಾಡಬಾರದಂತಹ ಕಾಯಿಲೆಯನ್ನು ಹೊಂದಿದ್ದರೆ, ಆಕೆ ಸ್ನಾನಕ್ಕೆ ಬದಲು, ನೀರು ದೊರಕುವ ತನಕ, ಅಥವಾ ನೀರನ್ನು ಬಳಸಲು ಸಾಧ್ಯವಾಗುವ ತನಕ ತಯಮ್ಮುಂ ಮಾಡಬೇಕು. ನೀರು ದೊರಕಿದ ಬಳಿಕ ಅಥವಾ ನೀರನ್ನು ಬಳಸಲು ಸಾಧ್ಯವಾದ ಬಳಿಕ ಸ್ನಾನ ಮಾಡಬೇಕು.
ಕೆಲವು ಮಹಿಳೆಯರು ನಮಾಝ್‌ನ ಸಮಯದ ಮಧ್ಯೆ ಶುದ್ಧಿಯಾಗುತ್ತಾರೆ. ಆದರೆ ಸ್ನಾನ ಮಾಡುವುದನ್ನು ಮುಂದಿನ ನಮಾಝಿನ ಸಮಯಕ್ಕೆ ಮುಂದೂಡುತ್ತಾರೆ. ಇದಕ್ಕೆ ಅವರು ನೀಡುವ ಕಾರಣ ಹೀಗಿದೆ: “ಈ ಸಮಯದಲ್ಲಿ ಪೂರ್ಣವಾಗಿ ಶುದ್ಧೀಕರಿಸಲು ನಮಗೆ ಸಾಧ್ಯವಾಗುವುದಿಲ್ಲ.” ಆದರೆ ಇದು ಅದಕ್ಕಿರುವ ಸರಿಯಾದ ಆಧಾರ ಮತ್ತು ಕಾರಣವಲ್ಲ. ಏಕೆಂದರೆ ಆಕೆಗೆ ಕನಿಷ್ಠ ಕಡ್ಡಾಯವಾಗಿರುವ ಸ್ನಾನವನ್ನು ಮಾಡಿ, ನಮಾಝನ್ನು ಅದರ ಸಮಯದಲ್ಲೇ ನಿರ್ಹಹಿಸಲು ಸಾಧ್ಯವಿದೆ. ನಂತರ ಹೆಚ್ಚು ಸಮಯ ದೊರಕುವಾಗ ಆಕೆ ಪೂರ್ಣವಾದ ರೀತಿಯಲ್ಲಿ ಸ್ನಾನ ಮಾಡಬಹುದು.
ಅಧ್ಯಾಯ ಐದು: ರಕ್ತಸ್ರಾವ ಮತ್ತು ಅದರ ನಿಯಮಗಳು
ರಕ್ತಸ್ರಾವ ಎಂದರೆ ಮಹಿಳೆಯಲ್ಲಿ ಸ್ವಲ್ಪವೂ ನಿಲ್ಲದೆ ನಿರಂತರವಾಗಿ ರಕ್ತ ಸ್ರವಿಸುತ್ತಿರುವುದು, ಅಥವಾ ತಿಂಗಳಲ್ಲಿ ಒಂದು ಅಥವಾ ಎರಡು ದಿನದಂತಹ ಚಿಕ್ಕ ಅವಧಿಯಲ್ಲಿ ಮಾತ್ರ ರಕ್ತ ನಿಲ್ಲುವುದು.
ಮೊದಲನೆಯ ಸ್ಥಿತಿಗೆ, ಅಂದರೆ ಸ್ವಲ್ಪವೂ ನಿಲ್ಲದೆ ನಿರಂತರವಾಗಿ ರಕ್ತ ಸ್ರವಿಸುವುದಕ್ಕೆ ಉದಾಹರಣೆ ಸಹೀಹುಲ್ ಬುಖಾರಿಯಲ್ಲಿರುವ ಆಯಿಶ(ರ)ರ ಹದೀಸ್. ಅವರು ಹೇಳುತ್ತಾರೆ: ಫಾತಿಮ ಬಿಂತ್ ಅಬೂ ಹುಬೈಶ್ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"يَا رَسُولَ اللَّهِ إِنِّي لَا أَطْهُرُ".
ಓ ಅಲ್ಲಾಹನ ಸಂದೇಶವಾಹಕರೇ! ನಾನು ಶುದ್ಧಿಯಾಗುವುದಿಲ್ಲ. ಇನ್ನೊಂದು ವರದಿಯಲ್ಲಿ ಹೀಗಿದೆ:
"أَسْتَحَاضُ فَلَا أَطْهُرُ".
ನನಗೆ ರಕ್ತಸ್ರಾವವಾಗುತ್ತದೆ. ನಾನು ಶುದ್ಧಿಯಾಗುವುದೇ ಇಲ್ಲ."56.
ಎರಡನೇ ಸ್ಥಿತಿಗೆ, ಅಂದರೆ ಚಿಕ್ಕ ಅವಧಿಯಲ್ಲಿ ಮಾತ್ರ ರಕ್ತ ನಿಲ್ಲುವುದರ ಉದಾಹರಣೆ, ಹಮ್ನ ಬಿಂತ್ ಜಹಶ್(ರ)ರ ಹದೀಸ್. ಅವರು ಪ್ರವಾದಿ(ಸ)ರ ಬಳಿ ಬಂದು ಹೇಳಿದರು:
"يَا رَسُولَ اللَّهِ إِنِّي أَسْتَحَاضُ حَيْضَةً كَثِيرَةً شَدِيدَةً".
“ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ್ತು ತೀವ್ರರೂಪದಲ್ಲಿ ರಕ್ತ ಸ್ರವಿಸುತ್ತದೆ.” ಇದನ್ನು ಅಹ್ಮದ್, ಅಬೂ ದಾವೂದ್ ಮತ್ತು ತಿರ್ಮಿದಿಯವರು ವರದಿ ಮಾಡಿದ್ದಾರೆ57. ತಿರ್ಮಿದಿಯವರು ಇದನ್ನು ಸಹೀಹ್ ಎಂದು ದೃಢೀಕರಿಸಿದ್ದಾರೆ ಹಾಗೂ ಇಮಾಮ್ ಅಹ್ಮದ್‌ರವರು ಸಹೀಹ್ ಎಂದಿರುವುದಾಗಿಯೂ ಮತ್ತು ಬುಖಾರಿಯವರು ಹಸನ್ ಎಂದಿರುವುದಾಗಿಯೂ ಉಲ್ಲೇಖಿಸಿದ್ದಾರೆ58.
ರಕ್ತಸ್ರಾವದ ಸಂದರ್ಭಗಳು:
ರಕ್ತಸ್ರಾವವಿರುವ ಮಹಿಳೆಗೆ ಮೂರು ಸಂದರ್ಭಗಳಿವೆ:
ಮೊದಲನೇ ಸಂದರ್ಭ: ರಕ್ತಸ್ರಾವ ಆರಂಭವಾಗುವುದಕ್ಕೆ ಮೊದಲು ಆಕೆಗೆ ನಿಶ್ಚಿತ ಅವಧಿಯಲ್ಲಿ ಋತುಸ್ರಾವವಾಗುತ್ತಿತ್ತು. ಇಂತಹ ಮಹಿಳೆ ರಕ್ತಸ್ರಾವ ಆರಂಭವಾಗುವುದಕ್ಕೆ ಮೊದಲು ಉಂಟಾಗುತ್ತಿದ್ದ ಋತುಸ್ರಾವದ ನಿಶ್ಚಿತ ಅವಧಿಯನ್ನು ಅವಲಂಬಿಸಬೇಕು. (ತಿಂಗಳಿಗೊಮ್ಮೆ) ಆ ಅವಧಿಯನ್ನು ಋತುಸ್ರಾವವೆಂದು ಪರಿಗಣಿಸಬೇಕು. ಋತುಸ್ರಾವದ ನಿಯಮಗಳು ಆ ಅವಧಿಗೆ ಅನ್ವಯವಾಗುತ್ತದೆ. ಉಳಿದ ಸಮಯವು ರಕ್ತಸ್ರಾವದ ಅವಧಿಯಾಗಿದೆ. ಈ ಅವಧಿಗೆ ರಕ್ತಸ್ರಾವದ ನಿಯಮಗಳು ಅನ್ವಯವಾಗುತ್ತವೆ.
ಉದಾಹರಣೆಗೆ, ಒಬ್ಬ ಮಹಿಳೆಗೆ ಪ್ರತಿ ತಿಂಗಳ ಆರಂಭದಲ್ಲಿ ಆರು ದಿನ ಋತುಸ್ರಾವವಾಗುತ್ತಿತ್ತು. ನಂತರ ಆಕೆಗೆ ರಕ್ತಸ್ರಾವ ಆರಂಭವಾಗಿ ನಿರಂತರ ರಕ್ತ ಸ್ರವಿಸತೊಡಗಿತು. ಆದ್ದರಿಂದ ತಿಂಗಳ ಮೊದಲ ಆರು ದಿನಗಳು ಆಕೆಗೆ ಋತುಸ್ರಾವದ ಅವಧಿಯಾಗಿದೆ. ಉಳಿದ ದಿನಗಳು ರಕ್ತಸ್ರಾವದ ಅವಧಿಯಾಗಿದೆ. ಇದಕ್ಕೆ ಆಧಾರ ಆಯಿಶ(ರ)ರ ಹದೀಸ್. ಆ ಹದೀಸಿನಲ್ಲಿರುವಂತೆ ಫಾತಿಮ ಬಿಂತ್ ಅಬೂ ಹುಬೈಶ್(ರ) ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನನಗೆ ರಕ್ತಸ್ರಾವವಾಗುತ್ತದೆ. ನಾನು ಶುದ್ಧಿಯಾಗುವುದೇ ಇಲ್ಲ. ಹಾಗಾದರೆ ನಾನು ನಮಾಝನ್ನು ತೊರೆಯಬಹುದೇ?” ಪ್ರವಾದಿ(ಸ)ರು:
«لَا، إِنَّ ذَلِكَ عِرْقٌ، وَلَكِنْ دَعِي الصَّلَاةَ قَدْرَ الْأَيَّامِ الَّتِي كُنْتِ تَحِيضِينَ فِيهَا ثُمَّ اغْتَسِلِي وَصَلِّي».
“ಬೇಡ, ಅದು ನರನಾಡಿಯಿಂದ ಸ್ರವಿಸುವ ರಕ್ತ. ಬದಲಾಗಿ, ನಿನಗೆ (ಮುಂಚೆ) ಎಷ್ಟು ದಿನ ಋತುಸ್ರಾವವಾಗುತ್ತಿತ್ತೋ ಅಷ್ಟು ದಿನ ಮಾತ್ರ ನಮಾಝ್ ಮಾಡುವುದನ್ನು ತೊರೆ. ನಂತರ ಸ್ನಾನ ಮಾಡಿ ನಮಾಝ್ ಮಾಡು.” [ಬುಖಾರಿ]59.
ಸಹೀಹ್ ಮುಸ್ಲಿಂನಲ್ಲಿರುವ ವರದಿಯಲ್ಲಿ ಹೀಗಿದೆ: ಪ್ರವಾದಿ(ಸ)ರು ಉಮ್ಮು ಹಬೀಬ ಬಿಂತ್ ಜಹಶ್(ರ) ರೊಂದಿಗೆ ಹೇಳಿದರು:
«امْكُثِي قَدْرَ مَا كَانَتْ تَحْبِسُكِ حَيْضَتُكِ ثُمَّ اغْتَسِلِي وَصَلِّي».
“ಋತುಸ್ರಾವವು ನಿನ್ನನ್ನು ಎಷ್ಟು ದಿನಗಳ ಕಾಲ ತಡೆಹಿಡಿಯುತ್ತಿತ್ತೋ ಅಷ್ಟು ದಿನಗಳ ಕಾಲ ಕಾದು ನಂತರ ಸ್ನಾನ ಮಾಡಿ ನಮಾಝ್ ನಿರ್ವಹಿಸು.”60.
ಇದರ ಆಧಾರದಲ್ಲಿ ರಕ್ತಸ್ರಾವವಾಗುವ ಮಹಿಳೆ ತನಗೆ ಮುಂಚೆ ಋತುಸ್ರಾವವಾಗುತ್ತಿದ್ದ ನಿಶ್ಚಿತ ಅವಧಿಯನ್ನು ಋತುಸ್ರಾವವೆಂದು ಪರಿಗಣಿಸಿ, ನಂತರ ಸ್ನಾನ ಮಾಡಿ ನಮಾಝ್ ನಿರ್ವಹಿಸಬೇಕು. ಆಗ ಆಕೆಯಲ್ಲಿ ಸ್ರವಿಸುವ ರಕ್ತದಿಂದ ಯಾವುದೇ ತೊಂದರೆಯಿಲ್ಲ.
ಎರಡನೇ ಸಂದರ್ಭ: ರಕ್ತಸ್ರಾವ ಆರಂಭವಾಗುವುದಕ್ಕೆ ಮೊದಲು ಆಕೆಗೆ ಋತುಸ್ರಾವದ ನಿಶ್ಚಿತ ಅವಧಿಯಿಲ್ಲ. ಏಕೆಂದರೆ, ಋತುಸ್ರಾವ ಆರಂಭವಾಗುವುದಕ್ಕೆ ಮೊದಲೇ (ಚಿಕ್ಕಂದಿನಲ್ಲೇ) ಆಕೆಯಲ್ಲಿ ರಕ್ತಸ್ರಾವವಿತ್ತು. ಇಂತಹ ಮಹಿಳೆ ರಕ್ತವನ್ನು ಪ್ರತ್ಯೇಕಿಸಿ ಗುರುತಿಸುವ ಮೂಲಕ ತನ್ನ ಋತುಸ್ರಾವದ ಅವಧಿಯನ್ನು ನಿರ್ಧರಿಸಬೇಕು. ಅಂದರೆ, ರಕ್ತವು ಕಪ್ಪು, ಗಡುಸು, ಅಥವಾ ವಾಸನೆಯನ್ನು ಹೊಂದಿದ್ದರೆ ಆ ರಕ್ತ ಸ್ರವಿಸುವ ಅವಧಿಯನ್ನು ಋತುಸ್ರಾವದ ಅವಧಿಯೆಂದು ಪರಿಗಣಿಸಬೇಕು. ಆ ಅವಧಿಗೆ ಋತುಸ್ರಾವದ ನಿಯಮಗಳು ಅನ್ವಯವಾಗುತ್ತವೆ. ಉಳಿದ ಅವಧಿಯು ರಕ್ತಸ್ರಾವದ ಅವಧಿಯಾಗಿದ್ದು ಅದಕ್ಕೆ ರಕ್ತಸ್ರಾವದ ನಿಯಮಗಳು ಅನ್ವಯವಾಗುತ್ತವೆ.
ಉದಾಹರಣೆಗೆ, ಮಹಿಳೆಯು ಋತುಸ್ರಾವವಾಗುವುದಕ್ಕೆ ಮೊದಲೇ ರಕ್ತವನ್ನು ಕಾಣುತ್ತಿದ್ದಾಳೆ. ಅದು ನಿರಂತರವಾಗಿ ಸ್ರವಿಸುತ್ತಲೇ ಇದೆ. ಆದರೆ ತಿಂಗಳಲ್ಲಿ ಹತ್ತು ದಿನ ಆಕೆ ಕಪ್ಪು ಬಣ್ಣದ ರಕ್ತವನ್ನು ಕಾಣುತ್ತಾಳೆ ಮತ್ತು ಉಳಿದ ದಿನಗಳಲ್ಲಿ ಕೆಂಪು ರಕ್ತವನ್ನು ಕಾಣುತ್ತಾಳೆ. ಅಥವಾ ತಿಂಗಳಲ್ಲಿ ಹತ್ತು ದಿನ ಗಡುಸಾದ ರಕ್ತವನ್ನು ಕಾಣುತ್ತಾಳೆ ಮತ್ತು ಉಳಿದ ದಿನಗಳಲ್ಲಿ ನಯವಾದ ರಕ್ತವನ್ನು ಕಾಣುತ್ತಾಳೆ. ಅಥವಾ ತಿಂಗಳಲ್ಲಿ ಹತ್ತು ದಿನ ಋತುಸ್ರಾವದ ವಾಸನೆಯಿರುವ ರಕ್ತವನ್ನು ಕಾಣುತ್ತಾಳೆ ಮತ್ತು ಉಳಿದ ದಿನಗಳಲ್ಲಿ ವಾಸನೆಯಿಲ್ಲದ ರಕ್ತವನ್ನು ಕಾಣುತ್ತಾಳೆ. ಆದ್ದರಿಂದ ಮೊದಲನೆಯ ಉದಾಹರಣೆಯಲ್ಲಿರುವ ಕಪ್ಪು ರಕ್ತ, ಮತ್ತು ಎರಡನೆಯ ಉದಾಹರಣೆಯಲ್ಲಿರುವ ಗಡುಸಾದ ರಕ್ತ ಮತ್ತು ಮೂರನೆಯ ಉದಾಹರಣೆಯಲ್ಲಿರುವ ವಾಸನೆಯಿರುವ ರಕ್ತ ಋತುಸ್ರಾವದ ರಕ್ತವಾಗಿದೆ. ಉಳಿದ ರಕ್ತವು ರಕ್ತಸ್ರಾವದ ರಕ್ತವಾಗಿದೆ. ಪ್ರವಾದಿ(ಸ)ರು ಫಾತಿಮ ಬಿಂತ್ ಅಬೂ ಹುಬೈಶ್(ರ)ರಿಗೆ ಹೇಳಿದ ಈ ಮಾತು ಇದಕ್ಕೆ ಆಧಾರವಾಗಿದೆ:
«إِذَا كَانَ دَمُ الْحَيْضَةِ فَإِنَّهُ أَسْوَدُ يُعْرَفُ، فَإِذَا كَانَ ذَلِكَ فَأَمْسِكِي عَنِ الصَّلَاةِ فَإِذَا كَانَ الْآخَرُ فَتَوَضَّئِي وَصَلِّي؛ فَإِنَّمَا هُوَ عِرْقٌ».
“ಅದು ಋತುಸ್ರಾವದ ರಕ್ತವಾಗಿದ್ದರೆ ಅದು ಗುರುತಿಸಬಹುದಾದ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಆ ರಕ್ತದ ಅವಧಿಯಲ್ಲಿ ನಮಾಝನ್ನು ತೊರೆ. ಅದಲ್ಲದ ಬೇರೆ ರಕ್ತದ ಅವಧಿಯಲ್ಲಿ ವುಝು ಮಾಡಿ ನಮಾಝ್ ನಿರ್ವಹಿಸು. ಏಕೆಂದರೆ ಅದು ನಾಡಿಯಿಂದ ಸ್ರವಿಸುವ ರಕ್ತವಾಗಿದೆ.”61 ಇದನ್ನು ಅಬೂ ದಾವೂದ್ ಮತ್ತು ನಸಾಈ ವರದಿ ಮಾಡಿದ್ದಾರೆ. ಇಬ್ನು ಹಿಬ್ಬಾನ್ ಮತ್ತು ಹಾಕಿಮ್ ಈ ಹದೀಸನ್ನು ಸಹೀಹ್ ಎಂದು ಘೋಷಿಸಿದ್ದಾರೆ.
ಈ ಹದೀಸ್, ಇದರ ಸನದ್ ಮತ್ತು ಮತನ್‌ನಲ್ಲಿ ಕೆಲವು ದೋಷಗಳಿದ್ದರೂ ಸಹ, ವಿದ್ವಾಂಸರು (ಅಲ್ಲಾಹು ಅವರಿಗೆ ಕರುಣೆ ತೋರಲಿ) ಇದರ ಪ್ರಕಾರ ಕಾರ್ಯನಿರ್ವಹಿಸಿದ್ದಾರೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಋತುಸ್ರಾವವುಂಟಾಗುವ ಅವಧಿಯನ್ನು ಪರಿಗಣಿಸುವುದಕ್ಕಿಂತಲೂ ಈ ಹದೀಸನ್ನು ಪರಿಗಣಿಸುವುದು ಉತ್ತಮವಾಗಿದೆ.
ಮೂರನೇ ಸಂದರ್ಭ: ಆಕೆಗೆ (ರಕ್ತಸ್ರಾವ ಆರಂಭವಾಗುವುದಕ್ಕೆ ಮೊದಲು) ಋತುಸ್ರಾವದ ನಿಶ್ಚಿತ ಅವಧಿಯಿಲ್ಲ. ಅದೇ ರೀತಿ ರಕ್ತವು ಸರಿಯಾಗಿ ಗುರುತಿಸುವ ರೀತಿಯಲ್ಲಿಲ್ಲ. ಅಂದರೆ ಆಕೆಗೆ ಋತುಸ್ರಾವವುಂಟಾಗುವುದಕ್ಕೆ ಮೊದಲೇ ರಕ್ತಸ್ರಾವವಾಗುತ್ತಿದೆ ಮತ್ತು ಆ ರಕ್ತವು ಒಂದೇ ರೂಪದಲ್ಲಿದೆ. ಅಥವಾ ಅದು ಹಲವಾರು ಗೊಂದಲಾತ್ಮಕ ರೂಪಗಳಲ್ಲಿದ್ದು ಋತುಸ್ರಾವದ ರಕ್ತವೆಂದು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಹಿಳೆಯು ಇತರ ಮಹಿಳೆಯರಿಗೆ ಸಾಮಾನ್ಯವಾಗಿ ಋತುಸ್ರಾವವಾಗುವ ರೂಢಿಯಂತೆ ಕಾರ್ಯನಿರ್ವಹಿಸಬೇಕು. ಅಂದರೆ ಆಕೆಗೆ ಮೊತ್ತಮೊದಲು ರಕ್ತ ಹೊರಬರಲು ಆರಂಭವಾದ ದಿನದ ಆಧಾರದಲ್ಲಿ ಪ್ರತಿ ತಿಂಗಳ ಆರು ಅಥವಾ ಏಳು ದಿನಗಳು ಋತುಸ್ರಾವದ ಅವಧಿಯಾಗಿದೆ. ಉಳಿದ ಅವಧಿಯು ರಕ್ತಸ್ರಾವದ ಅವಧಿಯಾಗಿದೆ.
ಉದಾಹರಣೆಗೆ, ಆಕೆಗೆ ಮೊತ್ತಮೊದಲು ರಕ್ತವನ್ನು ಕಂಡದ್ದು ತಿಂಗಳ ಐದನೇ ದಿನ. ನಂತರ ಬಣ್ಣ ಮುಂತಾದವುಗಳ ಮೂಲಕ ಋತುಸ್ರಾವದ ರಕ್ತವೆಂದು ಗುರುತಿಸಲಾಗದ ರೀತಿಯಲ್ಲಿ ಅದು ನಿರಂತರ ಸ್ರವಿಸುತ್ತಿತ್ತು. ಇಂತಹ ಮಹಿಳೆಗೆ ಪ್ರತಿ ತಿಂಗಳ ಐದನೇ ದಿನದಿಂದ ತೊಡಗಿ ಆರು ಅಥವಾ ಏಳು ದಿನಗಳು ಋತುಸ್ರಾವದ ಅವಧಿಯಾಗಿದೆ. ಇದಕ್ಕೆ ಆಧಾರ ಹಮ್ನ ಬಿಂತ್ ಜಹಶ್(ರ) ರವರ ಹದೀಸ್. ಅವರು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ್ತು ತೀವ್ರರೂಪದಲ್ಲಿ ರಕ್ತ ಸ್ರವಿಸುತ್ತದೆ. ಇದರ ಬಗ್ಗೆ ತಾವೇನು ಹೇಳುತ್ತೀರಿ? ಇದು ನನ್ನನ್ನು ನಮಾಝ್ ಮತ್ತು ಉಪವಾಸದಿಂದ ತಡೆದಿದೆ.” ಆಗ ಪ್ರವಾದಿ(ಸ)ರು ಹೇಳಿದರು:
«أَنْعَتُ لَكِ (أَصِفُ لَكِ اسْتِعْـمَال) الْكُرْسُفَ (وهُـوَ القُطْنُ) تَضَعِينَهُ عَلَى الْفَرْجِ، فَإِنَّهُ يُذْهِبُ الدَّمَ».
“ನಾನು ನಿನಗೆ ಹತ್ತಿಯನ್ನು ಬಳಸುವ ವಿಧಾನವನ್ನು ವಿವರಿಸುತ್ತೇನೆ. ಅದನ್ನು ನಿನ್ನ ಗುಹ್ಯ ಭಾಗದಲ್ಲಿಡು. ಅದು ರಕ್ತವನ್ನು ಹೀರುತ್ತದೆ.” ಆಕೆ ಹೇಳಿದರು: "ಅದು ಅದಕ್ಕಿಂತ ಹೆಚ್ಚು." ಮತ್ತು ಈ ಬಗ್ಗೆ ಪ್ರವಾದಿ ﷺ ರವರು ಹೇಳಿದರು:
«إِنَّمَا هَذَا رَكْضَةٌ مِنْ رَكَضَاتِ الشَّيْطَانِ، فَتَحَيَّضِي سِتَّةَ أَيَّامٍ أَوْ سَبْعَةً فِي عِلْمِ اللَّهِ تَعَالَى، ثُمَّ اغْتَسِلِي حَتَّى إِذَا رَأَيْتِ أَنَّكِ قَدْ طَهُرْتِ وَاسْتَنْقَيْتِ فَصَلِّي أَرْبَعًا وَعِشْرِينَ أَوْ ثَلَاثًا وَعِشْرِينَ لَيْلَةً وَأَيَّامَهَا وَصُومِي».
“ಇದು ಕೇವಲ ಶೈತಾನನ ಒಂದು ತಿವಿತವಾಗಿದೆ. ನೀನು ಸರ್ವಶಕ್ತನಾದ ಅಲ್ಲಾಹನ ಜ್ಞಾನಕ್ಕನುಸಾರ ಆರು ಅಥವಾ ಏಳು ದಿನಗಳನ್ನು ಋತುಸ್ರಾವವೆಂದು ಪರಿಗಣಿಸು. ನಂತರ ಸ್ನಾನ ಮಾಡು. ನೀನು ಸಂಪೂರ್ಣ ಶುದ್ಧಳಾಗಿ ಸ್ವಚ್ಛಗೊಂಡಿರುವೆ ಎಂದು ಖಚಿತವಾದಾಗ, ಇಪ್ಪತ್ತನಾಲ್ಕು ಅಥವಾ ಇಪ್ಪತ್ಮೂರು ಹಗಲುರಾತ್ರಿ ನಮಾಝ್ ನಿರ್ವಹಿಸು ಮತ್ತು ಉಪವಾಸವಿರು.” ಇದನ್ನು ಅಹ್ಮದ್, ಅಬೂ ದಾವೂದ್ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ. ತಿರ್ಮಿದಿ ಇದನ್ನು ಸಹೀಹ್ ಎಂದು ಹೇಳಿದ್ದಾರೆ62. ಇಮಾಮ್ ಅಹ್ಮದ್ ಇದನ್ನು ಸಹೀಹ್ ಎಂದೂ ಮತ್ತು ಇಮಾಮ್ ಬುಖಾರಿ ಇದನ್ನು ಹಸನ್ ಎಂದೂ ಹೇಳಿರುವುದಾಗಿ ವರದಿಯಾಗಿದೆ63.
“ಆರು ಅಥವಾ ಏಳು ದಿನ” ಎಂಬ ಪ್ರವಾದಿ(ಸ)ರ ನುಡಿ, ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಲು ಹೇಳಿದ್ದಲ್ಲ. ಇದು ಕಷ್ಟಪಟ್ಟು ಸರಿಯಾದ ಅವಧಿಯನ್ನು ತಿಳಿಯಲು ಹೇಳಿದ ನುಡಿಯಾಗಿದೆ. ಆದ್ದರಿಂದ ಇಂತಹ ಮಹಿಳೆ ತನ್ನ ಸ್ಥಿತಿಗೆ ಹೆಚ್ಚು ಹತ್ತಿರವಾಗಿರುವ, ಅಂದರೆ ಆಕೃತಿಯಲ್ಲಿ ತನ್ನನ್ನು ಹೋಲುವ, ಪ್ರಾಯ ಮತ್ತು ಸಂಬಂಧದಲ್ಲಿ ತನಗೆ ಹೆಚ್ಚು ಹತ್ತಿರವಿರುವ ಮಹಿಳೆಯನ್ನು ನೋಡಿ, ಮತ್ತು ಅದೇ ರೀತಿ ತನ್ನ ರಕ್ತವು ಋತುಸ್ರಾವವಾಗಲು ಹೆಚ್ಚು ಸಂಭಾವ್ಯತೆಯಿರುವ ಸಮಯ ಹಾಗೂ ಇತರ ವಿಷಯಗಳನ್ನು ಪರಿಗಣಿಸಿ ತನ್ನ ಋತುಸ್ರಾವದ ಅವಧಿಯನ್ನು ತಿಳಿಯಬೇಕು. (ಇವೆಲ್ಲವನ್ನೂ ಪರಿಗಣಿಸಿ ನೋಡಿದ ನಂತರ) ಅದು ಆರು ದಿನಗಳಾಗಿರಬಹುದೆಂದು ಕಂಡು ಬಂದಲ್ಲಿ ಋತುಸ್ರಾವದ ಅವಧಿಯನ್ನು ಆರು ದಿನ ಎಂದು ಪರಿಗಣಿಸಬೇಕು. ಆದರೆ ಅದು ಏಳು ದಿನಗಳಾಗಿರಬಹುದೆಂದು ಕಂಡು ಬಂದಲ್ಲಿ ಆ ಅವಧಿಯನ್ನು ಏಳು ದಿನ ಎಂದು ಪರಿಗಣಿಸಬೇಕು.
ರಕ್ತಸ್ರಾವವಿರುವ ಮಹಿಳೆಯನ್ನು ಹೋಲುವ ಮಹಿಳೆಯ ಸ್ಥಿತಿ:
ಗರ್ಭದಲ್ಲಿ ಅಥವಾ ಇತರ ಕಡೆ ಶಸ್ತ್ರಕ್ರಿಯೆ ಮಾಡಿದ ಕಾರಣ ಕೆಲವೊಮ್ಮೆ ಮಹಿಳೆಗೆ ಗುಹ್ಯಾಂಗದಿಂದ ರಕ್ತಸ್ರಾವವಾಗುವ ಸಂಭವವಿರಬಹುದು. ಇದರಲ್ಲಿ ಎರಡು ವಿಧಗಳಿವೆ:
ಒಂದನೇ ವಿಧ: ಶಸ್ತ್ರಚಿಕಿತ್ಸೆಯ ನಂತರ ಆಕೆಗೆ ಋತುಸ್ರಾವವಾಗುವುದಿಲ್ಲ ಎಂದು ತಿಳಿದಿರುವುದು. ಅಂದರೆ ಉದಾಹರಣೆಗೆ, ಶಸ್ತ್ರಕ್ರಿಯೆಯ ಮೂಲಕ ಆಕೆಯ ಗರ್ಭಾಶಯವನ್ನು ಸಂಪೂರ್ಣವಾಗಿ ತೆಗೆದಿರುವುದು ಅಥವಾ ಅದರಿಂದ ರಕ್ತ ಹೊರಬರದಂತೆ ಅದರ ದ್ವಾರವನ್ನು ಮುಚ್ಚಿರುವುದು. ಇಂತಹ ಮಹಿಳೆಗೆ ರಕ್ತಸ್ರಾವವಿರುವ ಮಹಿಳೆಯ ನಿಯಮಗಳು ಅನ್ವಯವಾಗುವುದಿಲ್ಲ. ಇಂತಹ ಮಹಿಳೆಗೆ ಶುದ್ಧಿಯಾದ ನಂತರ ಹಳದಿ, ಕಂದು ಅಥವಾ ಒದ್ದೆ ಸ್ರಾವವನ್ನು ಕಾಣುವವಳ ನಿಯಮಗಳು ಅನ್ವಯವಾಗುತ್ತವೆ. ಈಕೆ ನಮಾಝ್ ಮತ್ತು ಉಪವಾಸಗಳನ್ನು ತೊರೆಯಬಾರದು. ಈಕೆಯೊಂದಿಗೆ ಸಂಭೋಗ ಮಾಡುವುದು ನಿಷಿದ್ಧವಲ್ಲ. ಅದೇ ರೀತಿ ಈ ರಕ್ತಕ್ಕೆ ಸ್ನಾನ ಕಡ್ಡಾಯವಿಲ್ಲ. ಆದರೆ ಆಕೆ ನಮಾಝ್ ಮಾಡಲು ಬಯಸಿದರೆ ರಕ್ತವನ್ನು ತೊಳೆದು ಶುಚಿಗೊಳಿಸಿ, ರಕ್ತಸ್ರಾವವನ್ನು ತಡೆಗಟ್ಟಲು ಗುಹ್ಯಾಂಗವನ್ನು ಬಟ್ಟೆ ತುಂಡು ಮುಂತಾದವುಗಳಿಂದ ಮುಚ್ಚಬೇಕು. ನಂತರ ನಮಾಝಿಗಾಗಿ ವುಝು ನಿರ್ವಹಿಸಬೇಕು. ಇಂತಹ ಮಹಿಳೆಯು ಸಮಯ ನಿರ್ಣಿತವಾಗಿರುವ ಐದು ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸುವುದಾದರೆ ನಮಾಝಿನ ಸಮಯ ಆರಂಭವಾದ ಬಳಿಕವೇ ವುಝು ನಿರ್ವಹಿಸಬೇಕು. ಇದಲ್ಲದ ಇತರ ಐಚ್ಛಿಕ ನಮಾಝ್‌ಗಳನ್ನು ನಿರ್ವಹಿಸುವುದಾದರೆ, ಅವುಗಳನ್ನು ನಿರ್ವಹಿಸಲು ಬಯಸುವಾಗ ವುಝು ಮಾಡಬೇಕು.
ಎರಡನೇ ವಿಧ: ಶಸ್ತ್ರಕ್ರಿಯೆಯ ಬಳಿಕ ಆಕೆಗೆ ಋತುಸ್ರಾವವು ನಿಂತಿದೆ ಎಂದು ತಿಳಿಯದಿರುವುದು. ಬದಲಾಗಿ ಆಕೆಗೆ ಋತುಸ್ರಾವವಾಗುವ ಸಾಧ್ಯತೆಯಿದೆ. ಇಂತಹ ಮಹಿಳೆಗೆ ರಕ್ತಸ್ರಾವವಾಗುವ ಮಹಿಳೆಯ ನಿಯಮಗಳು ಅನ್ವಯವಾಗುತ್ತವೆ. ಪ್ರವಾದಿ(ಸ)ರು ಫಾತಿಮ ಬಿಂತ್ ಅಬೂ ಹುಬೈಶ್(ರ) ರಿಗೆ ಹೇಳಿದ ಈ ಮಾತು ಇದಕ್ಕೆ ಆಧಾರವಾಗಿದೆ:
«إِنَّمَا ذَلِكَ عِرْقٌ وَلَيْسَ بِالْحَيْضَةِ، فَإِذَا أَقْبَلَتِ الْحَيْضَةُ فَاتْرُكِي الصَّلَاةَ».
“ಅದು ಕೇವಲ ನಾಡಿಯಿಂದ ಸ್ರವಿಸುವ ರಕ್ತವಾಗಿದೆ. ಅದು ಋತುಸ್ರಾವದ ರಕ್ತವಲ್ಲ. ನಿನಗೆ ಋತುಸ್ರಾವ ಆರಂಭವಾದರೆ, ನಮಾಝ್ ಮಾಡುವುದನ್ನು ತೊರೆ.”64
ಇನ್ನು ಅವರ ಮಾತು:
«فَإِذَا أَقْبَلَتِ الْحَيْضَةُ».
“ನಿನಗೆ ಋತುಸ್ರಾವ ಆರಂಭವಾದರೆ” ಋತುಸ್ರಾವ ಆರಂಭವಾಗುವ ಮತ್ತು ನಿಲ್ಲುವ ಸಂಭಾವ್ಯತೆಯಿರುವ ಮಹಿಳೆಗೆ ರಕ್ತಸ್ರಾವದ ಮಹಿಳೆಯ ನಿಯಮಗಳು ಅನ್ವಯವಾಗುತ್ತದೆ, ಆದರೆ ಋತುಸ್ರಾವವಾಗುವ ಸಂಭಾವ್ಯತೆಯಿಲ್ಲದ ಮಹಿಳೆಯ ರಕ್ತವು ಯಾವುದೇ ಸ್ಥಿತಿಯಲ್ಲೂ ನಾಡಿಯಿಂದ ಹೊರಬರುವ ರಕ್ತವಾಗಿದೆ ಎಂದು ಇದು ಸೂಚಿಸುತ್ತದೆ.
ರಕ್ತಸ್ರಾವದ ನಿಯಮಗಳು:
ರಕ್ತವು ಯಾವಾಗ ಋತುಸ್ರಾವದ ರಕ್ತವಾಗುತ್ತದೆ ಮತ್ತು ಯಾವಾಗ ರಕ್ತಸ್ರಾವದ ರಕ್ತವಾಗುತ್ತದೆ ಎಂದು ನಾವು ಈಗಾಗಲೇ ತಿಳಿದೆವು. ಆದ್ದರಿಂದ ಯಾವಾಗ ರಕ್ತವು ಋತುಸ್ರಾವದ ರಕ್ತವಾಗುತ್ತದೋ ಆಗ ಅದಕ್ಕೆ ಋತುಸ್ರಾವದ ನಿಯಮಗಳು ಅನ್ವಯವಾಗುತ್ತವೆ. ಯಾವಾಗ ಅದು ರಕ್ತಸ್ರಾವದ ರಕ್ತವಾಗುತ್ತದೋ ಆಗ ಅದಕ್ಕೆ ರಕ್ತಸ್ರಾವದ ನಿಯಮಗಳು ಅನ್ವಯವಾಗುತ್ತವೆ.
ಋತುಸ್ರಾವದ ಪ್ರಮುಖ ನಿಯಮಗಳನ್ನು ಈಗಾಗಲೇ ತಿಳಿಸಲಾಗಿದೆ.
ಶುದ್ಧಿಯಾಗಿರುವ ಮಹಿಳೆಯ ನಿಯಮಗಳು ರಕ್ತಸ್ರಾವವನ್ನು ಹೊಂದಿರುವ ಮಹಿಳೆಗೆ ಅನ್ವಯವಾಗುತ್ತವೆ. ಆದ್ದರಿಂದ ರಕ್ತಸ್ರಾವವಿರುವ ಮಹಿಳೆ ಮತ್ತು ಶುದ್ಧಿಯಾಗಿರುವ ಮಹಿಳೆಯ ನಡುವೆ ಈ ಕೆಳಗಿನ ವಿಷಯಗಳಲ್ಲಲ್ಲದೆ ಯಾವುದೇ ವ್ಯತ್ಯಾಸಗಳಿಲ್ಲ:
ಒಂದು: ರಕ್ತಸ್ರಾವವಿರುವ ಮಹಿಳೆಗೆ ಪ್ರತಿಯೊಂದು ನಮಾಝಿಗೂ ಪ್ರತ್ಯೇಕವಾಗಿ ವುಝು ಮಾಡುವುದು ಕಡ್ಡಾಯವಾಗಿದೆ. ಪ್ರವಾದಿ(ಸ)ರು ಫಾತಿಮ ಬಿಂತ್ ಅಬೂ ಹುಬೈಶ್(ರ)ರಿಗೆ ಹೇಳಿದ ಈ ಮಾತು ಇದಕ್ಕೆ ಆಧಾರವಾಗಿದೆ:
«ثُمَّ تَوَضَّئِي لِكُلِّ صَلَاةٍ».
“ನಂತರ ಪ್ರತಿಯೊಂದು ನಮಾಝಿಗೂ (ಪ್ರತ್ಯೇಕವಾಗಿ) ವುಝು ನಿರ್ವಹಿಸು.” ಇದನ್ನು ಬುಖಾರಿ 'ರಕ್ತವನ್ನು ತೊಳೆಯುವುದು' ಎಂಬ ಅಧ್ಯಾಯದಲ್ಲಿ ವರದಿ ಮಾಡಿದ್ದಾರೆ, ಇದರ ಅರ್ಥವೇನೆಂದರೆ, ಸಮಯ ನಿರ್ಣಿತವಾಗಿರುವ ನಮಾಝ್‌ಗಳಿಗೆ ಅದರ ಸಮಯ ಆರಂಭವಾದ ಬಳಿಕವೇ ವುಝು ನಿರ್ವಹಿಸಬೇಕು. ಆದರೆ ಸಮಯ ನಿರ್ಣಿತವಲ್ಲದ ನಮಾಝ್‌ಗಳಿಗೆ, ಅದನ್ನು ನಿರ್ವಹಿಸಲು ಬಯಸುವಾಗ ವುಝು ನಿರ್ವಹಿಸಿದರೆ ಸಾಕು.
ಎರಡು: ರಕ್ತಸ್ರಾವವಿರುವ ಮಹಿಳೆಯು ವುಝು ಮಾಡಲು ಬಯಸಿದರೆ, ರಕ್ತದ ಕಲೆಯನ್ನು ಶುದ್ಧೀಕರಿಸಿ, ರಕ್ತವನ್ನು ತಡೆಗಟ್ಟಲು ಗುಪ್ತಾಂಗವನ್ನು ಹತ್ತಿಯ ಬಟ್ಟೆಯಿಂದ ಮುಚ್ಚಬೇಕು; ಏಕೆಂದರೆ ಪ್ರವಾದಿ(ಸ)ರು ಹಮ್ನಳಿಗೆ ಹೀಗೆ ಹೇಳಿದ್ದಾರೆ:
«أَنْعَتُ لَكِ الْكُرْسُفَ فَإِنَّهُ يُذْهِبُ الدَّمَ». قَالَتْ: فَإِنَّهُ أَكْثَرُ مِنْ ذَلِكَ. قَالَ: «فَاتَّخِذِي ثَوْبًا». قَالَتْ: هُوَ أَكْثَرُ مِنْ ذَلِكَ. قَالَ: «فَتَلَجَّمِي».
“ನಾನು ನಿನಗೆ ಹತ್ತಿಯನ್ನು ಬಳಸುವ ವಿಧಾನವನ್ನು ವಿವರಿಸುತ್ತೇನೆ. ಅದು ರಕ್ತವನ್ನು ಹೀರುತ್ತದೆ.” ಆಕೆ ಹೇಳಿದರು: “ಅದು ಅದಕ್ಕಿಂತಲೂ ಹೆಚ್ಚು ಸ್ರವಿಸುತ್ತದೆ.” ಆಗ ಪ್ರವಾದಿ(ಸ)ರು ಹೇಳಿದರು: “ಹಾಗಾದರೆ ನೀನು ಬಟ್ಟೆಯನ್ನು ಕಟ್ಟು.” ಆಕೆ ಹೇಳಿದರು: “ಅದು ಅದಕ್ಕಿಂತಲೂ ಹೆಚ್ಚು ಸ್ರವಿಸುತ್ತದೆ.” ಆಗ ಪ್ರವಾದಿ(ಸ) ರವರು ಹೇಳಿದರು: “ಲಂಗೋಟಿಯನ್ನು ಕಟ್ಟಿಕೋ.” ಹದೀಸ್, ಲಂಗೋಟಿಯನ್ನು ಕಟ್ಟಿದ ಬಳಿಕವೂ ರಕ್ತ ಹೊರಬಂದರೆ ಅದರಲ್ಲೇನೂ ತೊಂದರೆಯಿಲ್ಲ. ಪ್ರವಾದಿ(ಸ)ರು ಫಾತಿಮ ಬಿಂತ್ ಅಬೂ ಹುಬೈಶ್(ರ)ರಿಗೆ ಹೇಳಿದ ಈ ಮಾತು ಇದಕ್ಕೆ ಆಧಾರವಾಗಿದೆ:
«اجْتَنِبِي الصَّلَاةَ أَيَّامَ حَيْضِكِ، ثُمَّ اغْتَسِلِي وَتَوَضَّئِي لِكُلِّ صَلَاةٍ، ثُمَّ صَلِّي، وَإِنْ قَطَرَ الدَّمُ عَلَى الْحَصِيرِ».
“ಋತುಸ್ರಾವದ ಅವಧಿಯಲ್ಲಿ ನಮಾಝನ್ನು ತೊರೆ. ನಂತರ ಸ್ನಾನ ಮಾಡಿ ಪ್ರತಿಯೊಂದು ನಮಾಝಿಗೂ ಪ್ರತ್ಯೇಕವಾಗಿ ವುಝು ನಿರ್ವಹಿಸು. ನಂತರ ನಮಾಝ್ ಮಾಡು. ಚಾಪೆಯ ಮೇಲೆ ರಕ್ತದ ಹನಿ ಬಿದ್ದರೂ ಪರವಾಗಿಲ್ಲ.”65 ಇದನ್ನು ಅಹ್ಮದ್ ಮತ್ತು, ಇಬ್ನ್ ಮಾಜ ವರದಿ ಮಾಡಿದ್ದಾರೆ.
ಮೂರು: ಸಂಭೋಗ ಮಾಡುವುದು. ಸಂಭೋಗ ಮಾಡದಿದ್ದರೆ ತನ್ನಿಂದ ವ್ಯಭಿಚಾರ ಸಂಭವಿಸಬಹುದು ಎಂಬ ಭಯವಿಲ್ಲದಿದ್ದರೆ ಗಂಡ ಆಕೆಯೊಡನೆ ಸಂಭೋಗ ಮಾಡಬಹುದೇ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಮತವಿದೆ. ಸರಿಯಾದ ಅಭಿಪ್ರಾಯ ಪ್ರಕಾರ ಭಯವಿದ್ದರೂ ಇಲ್ಲದಿದ್ದರೂ ಸಂಭೋಗ ಮಾಡಬಹುದಾಗಿದೆ. ಏಕೆಂದರೆ ಪ್ರವಾದಿ(ಸ)ರ ಕಾಲದಲ್ಲಿ ಹತ್ತು ಅಥವಾ ಅದಕ್ಕಿಂತಲೂ ಹೆಚ್ಚು ರಕ್ತಸ್ರಾವವಿರುವ ಮಹಿಳೆಯರಿದ್ದರು. ಆದರೆ ಆಕೆಯೊಡನೆ (ಆಕೆಯ ಗಂಡ) ಸಂಭೋಗ ಮಾಡುವುದನ್ನು ಅಲ್ಲಾಹನಾಗಲಿ ಪ್ರವಾದಿ(ಸ)ರಾಗಲಿ ವಿರೋಧಿಸಿಲ್ಲ. ಬದಲಾಗಿ ಅಲ್ಲಾಹುವಿನ ಮಾತಿನಲ್ಲಿ:
﴿...فَاعْتَزِلُواْ النِّسَاء فِي الْمَحِيضِ...﴾
ಆದ್ದರಿಂದ ಋತುಸ್ರಾವದ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ. [ಅಲ್-ಬಖರ:222] ಋತುಸ್ರಾವವಲ್ಲದ ಇತರ ಸಂದರ್ಭಗಳಲ್ಲಿ ಆಕೆಯಿಂದ ದೂರವಿರುವುದು ಕಡ್ಡಾಯವಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ. ಏಕೆಂದರೆ ಇಂತಹ ಸ್ಥಿತಿಯಲ್ಲಿ ಆಕೆಗೆ ನಮಾಝ್ ಮಾಡಲು ಅನುಮತಿಯಿದೆ. ಸಂಭೋಗವು ನಮಾಝ್‌ಗಿಂತಲೂ ಚಿಕ್ಕ ವಿಷಯವಾಗಿದೆ. ರಕ್ತಸ್ರಾವವಿರುವ ಮಹಿಳೆಯೊಡನೆ ಸಂಭೋಗ ಮಾಡುವುದನ್ನು ಋತುಸ್ರಾವವಿರುವ ಮಹಿಳೆಯೊಂದಿಗೆ ಸಂಭೋಗ ಮಾಡುವುದಕ್ಕೆ ಹೋಲಿಸುವುದು ಸರಿಯಲ್ಲ. ಏಕೆಂದರೆ, ಸಂಭೋಗ ಮಾಡುವುದು ನಿಷಿದ್ಧವೆಂದು ಹೇಳುವವರ ಅಭಿಪ್ರಾಯದಲ್ಲೂ ಕೂಡ ರಕ್ತಸ್ರಾವವಿರುವ ಮಹಿಳೆ ಮತ್ತು ಋತುಸ್ರಾವವಿರುವ ಮಹಿಳೆ ಸಮಾನರಲ್ಲ. ಅಸ್ತಿತ್ವದಲ್ಲಿಲ್ಲದ ವಿಷಯದೊಂದಿಗೆ ಕಿಯಾಸ್ (ಹೋಲಿಕೆ) ಮಾಡುವುದು ಸಿಂಧುವಲ್ಲ.
ಅಧ್ಯಾಯ ಆರು: ಹೆರಿಗೆಸ್ರಾವ ಮತ್ತು ಅದರ ನಿಯಮಗಳು.
ಹೆರಿಗೆಸ್ರಾವ (ನಿಫಾಸ್) ಎಂದರೆ ಹೆರಿಗೆಯ ಕಾರಣ ಗರ್ಭಾಶಯದಿಂದ ಸ್ರವಿಸುವ ರಕ್ತ. ಇದು ಹೆರಿಗೆಯೊಂದಿಗೆ, ಅಥವಾ ಹೆರಿಗೆಯ ನಂತರ, ಅಥವಾ ಹೆರಿಗೆಗೆ ಎರಡು ಅಥವಾ ಮೂರು ದಿನ ಮೊದಲು ಹೆರಿಗೆ ನೋವಿನೊಂದಿಗೆ ಉಂಟಾಗಬಹುದು.
ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ(ರ) ಹೇಳುತ್ತಾರೆ: “ಹೆರಿಗೆ ನೋವು ಆರಂಭವಾಗುವಾಗ ಕಾಣುವ ರಕ್ತ ಹೆರಿಗೆಸ್ರಾವದ ರಕ್ತವಾಗಿದೆ.” ಅವರು ಅದಕ್ಕೆ ಎರಡು ಅಥವಾ ಮೂರು ದಿನಗಳನ್ನು ನಿಶ್ಚಯಿಸಲಿಲ್ಲ. ಹೆರಿಗೆ ನೋವು ಎಂಬ ಅವರ ಮಾತಿನ ಅರ್ಥ: ಹೆರಿಗೆಗೆ ಮುಂಚೆ ಉಂಟಾಗುವ ನೋವು. ಹೆರಿಗೆ ನೋವು ಇಲ್ಲದೆ ರಕ್ತ ಸ್ರವಿಸಿದರೆ ಅದು ಹೆರಿಗೆಸ್ರಾವವಲ್ಲ. ಹೆರಿಗೆಸ್ರಾವಕ್ಕೆ ಕನಿಷ್ಠ ಅಥವಾ ಗರಿಷ್ಠ ಅವಧಿಯನ್ನು ನಿಶ್ಚಯಿಸಬಹುದೇ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಮತವಿದೆ. ಶೈಖ್ ತಕಿಯುದ್ದೀನ್(ರ) ತಮ್ಮ ‘ಅಲ್-ಅಸ್ಮಾಉಲ್ಲತೀ ಅಲ್ಲಕ ಶ್ಶಾರಿಉಲ್-ಅಹ್ಕಾಮ ಬಿಹಾ’ ಎಂಬ ಕೃತಿಯಲ್ಲಿ (ಪುಟ 37) ಹೇಳುತ್ತಾರೆ: “ಹೆರಿಗೆಸ್ರಾವಕ್ಕೆ ಕನಿಷ್ಠ ಅಥವಾ ಗರಿಷ್ಠ ಅವಧಿಗಳಿಲ್ಲ. ಉದಾಹರಣೆಗೆ, ಮಹಿಳೆ 40, 60, ಅಥವಾ 70 ದಿನಕ್ಕಿಂತಲೂ ಹೆಚ್ಚು ಅವಧಿಯವರೆಗೆ ರಕ್ತವನ್ನು ಕಂಡು ಬಳಿಕ ಅದು ನಿಂತರೆ ಅದು ಹೆರಿಗೆಸ್ರಾವವಾಗಿದೆ. ಆದರೆ ಅದು ಮುಂದುವರಿದರೆ ಅದು ಹೆರಿಗೆಸ್ರಾವವಲ್ಲ. ಇಂತಹ ಸಂದರ್ಭದಲ್ಲಿ 40 ದಿನಗಳು ಅದರ ಅವಧಿಯಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಹೆರಿಗೆಸ್ರಾವವು ನಿಲ್ಲುವ ಅವಧಿಯಾಗಿದೆ. ಇದರ ಬಗ್ಗೆ ಸಹಾಬಾಗಳಿಂದ ಅನೇಕ ವರದಿಗಳು ಬಂದಿವೆ.”
ನಾನು ಹೇಳುತ್ತೇನೆ: ಇದರ ಆಧಾರದಲ್ಲಿ, 40 ದಿನಕ್ಕಿಂತಲೂ ಹೆಚ್ಚು ಕಾಲ ರಕ್ತವು ಸ್ರವಿಸಿ, ಅದರ ನಂತರ ರಕ್ತ ನಿಲ್ಲುವುದು ಆಕೆಯ ರೂಢಿಯಾಗಿದ್ದರೆ (ಅಂದರೆ ಹಿಂದಿನ ಹೆರಿಗೆಗಳಲ್ಲಿ ಹಾಗೆ ಸಂಭವಿಸಿದ್ದರೆ), ಅಥವಾ ರಕ್ತ ನಿಲ್ಲುವ ಸೂಚನೆಗಳು ಕಂಡುಬಂದರೆ, ರಕ್ತವು ನಿಲ್ಲುವ ತನಕ ಕಾಯಬೇಕು. ಇದು ಯಾವುದೂ ಸಂಭವಿಸದಿದ್ದರೆ 40 ದಿನ ಪೂರ್ತಿಯಾಗುವಾಗ ಸ್ನಾನ ಮಾಡಬೇಕು. ಏಕೆಂದರೆ ಇದು ಸಾಮಾನ್ಯವಾಗಿ ಹೆರಿಗೆಸ್ರಾವವು ನಿಲ್ಲುವ ಅವಧಿಯಾಗಿದೆ. ಇನ್ನು 40 ದಿನ ಪೂರ್ತಿಯಾಗುವುದು ಆಕೆಯ ಋತುಸ್ರಾವದ ಅವಧಿಯಲ್ಲಾಗಿದ್ದರೆ, ಋತುಸ್ರಾವದ ಅವಧಿ ಪೂರ್ಣವಾಗುವ ತನಕ ಕಾಯಬೇಕು. ರಕ್ತವು ನಿಂತ ಬಳಿಕ ಮುಂದೆ ಆಕೆಯ ರೂಢಿಯಂತೆ ಋತುಸ್ರಾವವಾಗುತ್ತಿದ್ದರೆ, ಮುಂದೆ ಅದಕ್ಕನುಗುಣವಾಗಿ ಆಕೆ ಕಾರ್ಯನಿರ್ವಹಿಸಬೇಕು. ಆದರೆ ರಕ್ತವು ನಿಲ್ಲದಿದ್ದರೆ ಅದು ರಕ್ತಸ್ರಾವವಾಗಿದೆ. ಈಗಾಗಲೇ ವಿವರಿಸಿದ ರಕ್ತಸ್ರಾವವಿರುವವಳ ನಿಯಮಗಳು ಆಕೆಗೆ ಅನ್ವಯವಾಗುತ್ತವೆ. ಹೆರಿಗೆಸ್ರಾವವು ನಿಲ್ಲುವ ಮೂಲಕ ಆಕೆ ಶುದ್ಧಿಯಾದರೆ, ಆಕೆ ಶುದ್ಧಿಯಾಗುತ್ತಾಳೆ. ಅದು 40 ದಿನಕ್ಕಿಂತ ಮುಂಚೆಯಾದರೂ ಸರಿ. ಅಂತಹ ಸಂದರ್ಭದಲ್ಲಿ ಆಕೆ ಸ್ನಾನ ಮಾಡಿ ನಮಾಝ್ ಮತ್ತು ಉಪವಾಸವನ್ನು ಆಚರಿಸಬೇಕು. ಆಕೆಯ ಗಂಡ ಆಕೆಯೊಂದಿಗೆ ಸಂಭೋಗ ಮಾಡಬಹುದು. ಆದರೆ ರಕ್ತವು ಒಂದು ದಿನಕ್ಕಿಂತಲೂ ಕಡಿಮೆ ಅವಧಿಯವರೆಗೆ ಮಾತ್ರ ನಿಂತರೆ ಆ ರಕ್ತಕ್ಕೆ ಯಾವುದೇ ನಿಯಮಗಳಿಲ್ಲ. ಇದು ಮುಗ್ನಿಯಲ್ಲಿ ಹೇಳಿದ ವಿಷಯವಾಗಿದೆ.66
ಮನುಷ್ಯ ಸೃಷ್ಟಿ ಎಂದು ಸ್ಪಷ್ಟವಾಗಿರುವ ಮಗುವನ್ನು ಹೆತ್ತರೆ ಮಾತ್ರ ಹೆರಿಗೆಸ್ರಾವದ ನಿಯಮಗಳು ಅನ್ವಯವಾಗುತ್ತವೆ. ಆದರೆ ಗರ್ಭಪಾತವಾಗಿ ಮನುಷ್ಯ ಸೃಷ್ಟಿಯೆಂದು ಸ್ಪಷ್ಟವಾಗಿ ಹೇಳಲಾಗದ ಚಿಕ್ಕ ಭ್ರೂಣವನ್ನು ಹೆತ್ತರೆ, ಆಕೆಯಿಂದ ಸ್ರವಿಸುವ ರಕ್ತವು ಹೆರಿಗೆಸ್ರಾವದ ರಕ್ತವಲ್ಲ. ಬದಲಾಗಿ ಅದು ನಾಡಿಯಿಂದ ಸ್ರವಿಸುವ ರಕ್ತವಾಗಿದೆ. ಆಗ ಆಕೆಗೆ ರಕ್ತಸ್ರಾವವಿರುವ ಮಹಿಳೆಯ ನಿಯಮಗಳು ಅನ್ವಯವಾಗುತ್ತವೆ. ಮನುಷ್ಯ ಸೃಷ್ಟಿಯೆಂದು ಸ್ಪಷ್ಟವಾಗುವ ಕನಿಷ್ಠ ಅವಧಿಯು ಗರ್ಭಧಾರಣೆಯ ನಂತರದ 80 ದಿನಗಳು. ಸಾಮಾನ್ಯವಾಗಿ ಅದು 90 ದಿನಗಳಾಗಿವೆ.
ಮಜ್ದ್ ಬಿನ್ ತೈಮಿಯ್ಯ ಹೇಳುತ್ತಾರೆ: “ಮಹಿಳೆ ಆ ಅವಧಿಗಿಂತ ಮುಂಚೆ (ಗರ್ಭಧಾರಣೆಯಾಗಿ 80 ಅಥವಾ 90 ದಿನವಾಗುವುದಕ್ಕೆ ಮುಂಚೆ) ಯಾವುದೇ ದಿನದಲ್ಲಿ ಹೆರಿಗೆ ನೋವಿನೊಂದಿಗೆ ರಕ್ತವನ್ನು ಕಂಡರೆ, ಅದನ್ನು ಪರಿಗಣಿಸಬೇಕಾಗಿಲ್ಲ. ಆ ಅವಧಿಯ ನಂತರ ರಕ್ತವನ್ನು ಕಂಡರೆ, ನಮಾಝ್ ಮತ್ತು ಉಪವಾಸವನ್ನು ತೊರೆಯಬೇಕು. ನಂತರ ಹೆರಿಗೆಯಾಗಿ, ವಾಸ್ತವಕ್ಕೆ ವಿರುದ್ಧವಾಗಿ ಮಗು ಮನುಷ್ಯ ರೂಪವನ್ನು ಹೊಂದಿಲ್ಲ ಎಂದು ಸ್ಪಷ್ಟವಾದರೆ, ಬಿಟ್ಟುಹೋದ ನಮಾಝ್ ಮತ್ತು ಉಪವಾಸಗಳನ್ನು ಸರಿಪಡಿಸಬೇಕು. ಆದರೆ ಅದು ಸ್ಪಷ್ಟವಾಗದಿದ್ದರೆ ವಾಸ್ತವ ನಿಯಮವನ್ನು ಮುಂದುವರಿಸಬೇಕು. ನಮಾಝ್ ಮತ್ತು ಉಪವಾಸಗಳನ್ನು ಪುನಃ ನಿರ್ವಹಿಸಬೇಕಾಗಿಲ್ಲ.” ಇದನ್ನು ಅವರಿಂದ ಶರ್ಹುಲ್ ಇಕ್ನಾಅ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.67
ಹೆರಿಗೆಸ್ರಾವದ ನಿಯಮಗಳು:
ಹೆರಿಗೆಸ್ರಾವದ ನಿಯಮಗಳು ಮತ್ತು ಋತುಸ್ರಾವದ ನಿಯಮಗಳು ಈ ಕೆಳಗಿನ ವ್ಯತ್ಯಾಸಗಳನ್ನು ಬಿಟ್ಟರೆ ಒಂದೇ ರೀತಿಯಾಗಿವೆ:
ಒಂದು: ಇದ್ದತ್ ಅನ್ನು ತಲಾಕ್‌ಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆಯೇ ವಿನಾ ಹೆರಿಗೆಸ್ರಾವಕ್ಕೆ ಅನುಗುಣವಾಗಿಯಲ್ಲ. ಏಕೆಂದರೆ, ತಲಾಕ್ ನೀಡುವುದು ಹೆರಿಗೆಗೆ ಮುಂಚೆಯಾಗಿದ್ದರೆ, ಹೆರಿಗೆಯೊಂದಿಗೆ ಇದ್ದತ್ ಮುಗಿಯುತ್ತದೆಯೇ ವಿನಾ ಹೆರಿಗೆಸ್ರಾವದೊಂದಿಗೆ ಅಲ್ಲ. ಆದರೆ ತಲಾಕ್ ನೀಡುವುದು ಹೆರಿಗೆಯಾದ ಬಳಿಕವಾಗಿದ್ದರೆ, ಈಗಾಗಲೇ ವಿವರಿಸಿದಂತೆ ಋತುಸ್ರಾವವು ಬರುವ ತನಕ ಕಾಯಬೇಕಾಗಿದೆ.
ಎರಡು: ಈಲಾ-ದ ಅವಧಿಯನ್ನು ಋತುಸ್ರಾವದ ಅವಧಿಯೊಂದಿಗೆ ಎಣಿಸಲಾಗುತ್ತದೆಯೇ ವಿನಾ ಹೆರಿಗೆಸ್ರಾವದ ಅವಧಿಯೊಂದಿಗೆ ಎಣಿಸಲಾಗುವುದಿಲ್ಲ.
ಈಲಾ ಎಂದರೆ ಪತ್ನಿಯೊಡನೆ ನಾನು ಎಂದಿಗೂ ಸಂಭೋಗ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದು. ಅಥವಾ ಈ ಪ್ರತಿಜ್ಞೆಯ ಅವಧಿಯು ನಾಲ್ಕು ತಿಂಗಳಿಗಿಂತ ಹೆಚ್ಚಾಗಿರುವುದು. ಆತ ಇಂತಹ ಪ್ರತಿಜ್ಞೆ ಮಾಡಿದ ಬಳಿಕ ಆಕೆ ಅವನಿಂದ ಸಂಭೋಗವನ್ನು ಬಯಸಿದರೆ, ಆತ ಪ್ರತಿಜ್ಞೆ ಮಾಡಿದ ದಿನದಿಂದ ತೊಡಗಿ ಅವನಿಗೆ ನಾಲ್ಕು ತಿಂಗಳ ಅವಧಿ ನೀಡಲಾಗುತ್ತದೆ. ಈ ಅವಧಿ ಮುಗಿದರೆ ಪತ್ನಿಯ ಬೇಡಿಕೆಯಂತೆ ಒಂದೋ ಅವನು ಸಂಭೋಗವನ್ನು ಮುಂದುವರಿಸಲು ಅಥವಾ ವಿಚ್ಛೇದನ ನೀಡಲು ನಿರ್ಬಂಧಿಸಲಾಗುತ್ತದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಆಕೆಗೆ ಹೆರಿಗೆಸ್ರಾವವಾದರೆ, ಹೆರಿಗೆ ಸ್ರಾವದ ಅವಧಿಯು ಆ ನಾಲ್ಕು ತಿಂಗಳ ಅವಧಿಯಲ್ಲಿ ಸೇರುವುದಿಲ್ಲ. ಆ ನಾಲ್ಕು ತಿಂಗಳಿಗೆ ಹೆರಿಗೆಸ್ರಾವದ ಅವಧಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಆದರೆ ಈ ಅವಧಿಯಲ್ಲಿ ಋತುಸ್ರಾವವಾದರೆ ಅದು ಆ ನಾಲ್ಕು ತಿಂಗಳ ಅವಧಿಯಲ್ಲಿ ಸೇರುತ್ತದೆ.
ಮೂರು: ಹುಡುಗಿ ಹರೆಯವನ್ನು ತಲುಪುವುದು ಋತುಸ್ರಾವದಿಂದಲೇ ಹೊರತು ಹೆರಿಗೆಸ್ರಾವದಿಂದಲ್ಲ. ಏಕೆಂದರೆ ಅಂಡಾಣು ಹೊರಬರುವ ತನಕ ಹುಡುಗಿ ಗರ್ಭಿಣಿಯಾಗುವುದಿಲ್ಲ. ಆದ್ದರಿಂದ ಅಂಡಾಣು ಹೊರಬರುವ ಮೂಲಕ ಹುಡುಗಿ ಹರೆಯವನ್ನು ತಲುಪುತ್ತಾಳೆ. ಇದು ಹೆರಿಗೆಗಿಂತ ಮೊದಲು ಸಂಭವಿಸುತ್ತದೆ.
ನಾಲ್ಕು: ಸಾಮಾನ್ಯವಾಗಿ ಋತುಸ್ರಾವವಾಗುವ ಅವಧಿಯಲ್ಲಿ ರಕ್ತವು ನಿಂತು ನಂತರ ಮುಂದುವರಿದರೆ, ಅದು ಋತುಸ್ರಾವದ ರಕ್ತವೆಂಬುದು ಖಚಿತ. ಉದಾಹರಣೆಗೆ ಒಬ್ಬ ಮಹಿಳೆಗೆ ಸಾಮಾನ್ಯವಾಗಿ ಎಂಟು ದಿನ ಋತುಸ್ರಾವವಾಗುತ್ತದೆ. ಆದರೆ ಒಮ್ಮೆ ಆಕೆಗೆ ನಾಲ್ಕು ದಿನ ಋತುಸ್ರಾವವಾಗಿ ಮುಂದಿನ ಎರಡು ದಿನ ರಕ್ತ ನಿಲ್ಲುತ್ತದೆ. ನಂತರ ಏಳು ಮತ್ತು ಎಂಟನೇ ದಿನ ಪುನಃ ರಕ್ತ ಸ್ರವಿಸುತ್ತದೆ. ಏಳನೇ ಅಥವಾ ಎಂಟನೇ ದಿನ ಸ್ರವಿಸಿದ ರಕ್ತವು ಋತುಸ್ರಾವದ ರಕ್ತವೆಂದು ಖಚಿತವಾಗಿರುವುದರಿಂದ ಅದಕ್ಕೆ ಋತುಸ್ರಾವದ ನಿಯಮಗಳು ಅನ್ವಯವಾಗುತ್ತವೆ. ಆದರೆ ಹೆರಿಗೆಸ್ರಾವದ ರಕ್ತ ಹಾಗಲ್ಲ. ಅದು 40 ದಿನಗಳ ಮುಂಚೆಯೇ ನಿಂತು, ನಂತರ 40ನೇ ದಿನ ಪುನಃ ಬಂದರೆ, ಅದು ಸಂಶಯವಿರುವ ರಕ್ತವಾಗಿದೆ. ಆದ್ದರಿಂದ ಆಕೆ ಸಮಯ ನಿರ್ಣಿತವಾದ ಕಡ್ಡಾಯ ನಮಾಝ್ ಮತ್ತು ಉಪವಾಸಗಳನ್ನು ಅವುಗಳ ಸಮಯದಲ್ಲೇ ನಿರ್ವಹಿಸುವುದು ಕಡ್ಡಾಯವಾಗಿದೆ. ಕಡ್ಡಾಯ ಕಾರ್ಯಗಳ ಹೊರತು ಋತುಸ್ರಾವವಿರುವ ಮಹಿಳೆಗೆ ನಿಷಿದ್ಧವಾಗುವುದೆಲ್ಲವೂ ಈಕೆಗೂ ನಿಷಿದ್ಧವಾಗಿದೆ. ಋತುಸ್ರಾವವಿರುವ ಮಹಿಳೆ ಶುದ್ಧಿಯಾದ ನಂತರ ಕಝಾ ನಿರ್ವಹಿಸುವ ಎಲ್ಲವನ್ನೂ (ಕಡ್ಡಾಯ ನಮಾಝ್, ಉಪವಾಸ ಇತ್ಯಾದಿ) ಈಕೆಯೂ ಶುದ್ಧಿಯಾದ ಬಳಿಕ ಕಝಾ ನಿರ್ವಹಿಸಬೇಕು. ಇದು ಹಂಬಲೀ ಕರ್ಮಶಾಸ್ತ್ರಜ್ಞರ ಪ್ರಸಿದ್ಧ ಅಭಿಪ್ರಾಯವಾಗಿದೆ.68
ಆದರೆ ಸರಿಯಾದ ಅಭಿಪ್ರಾಯ ಏನೆಂದರೆ, ಹೆರಿಗೆಸ್ರಾವವಾಗುವ ಸಾಧ್ಯತೆಯಿರುವ ಸಮಯದಲ್ಲಿ ಒಮ್ಮೆ ನಿಂತು ನಂತರ ಸ್ರವಿಸುವ ರಕ್ತವೆಲ್ಲವೂ ಹೆರಿಗೆಸ್ರಾವದ ರಕ್ತವಾಗಿದೆ. ಅದು ಹೆರಿಗೆಸ್ರಾವವಾಗುವ ಸಾಧ್ಯತೆಯಿಲ್ಲದ ಸಮಯವಲ್ಲದಿದ್ದರೆ ಆ ರಕ್ತವು ಋತುಸ್ರಾವದ ರಕ್ತವಾಗಿದೆ. ಆದರೆ ಅದು ನಿರಂತರವಾಗಿ ಸ್ರವಿಸುವ ರಕ್ತವಾಗಿದ್ದರೆ ಅದು ರಕ್ತಸ್ರಾವದ ರಕ್ತವಾಗಿದೆ.
ಇದು ಮುಗ್ನಿ ಗ್ರಂಥದಲ್ಲಿ ಇಮಾಮ್ ಮಾಲಿಕ್‌ರಿಂದ ಉಲ್ಲೇಖಿಸಲಾದ ಅಭಿಪ್ರಾಯಕ್ಕೆ ಅತ್ಯಂತ ಹತ್ತಿರವಿರುವ ಅಭಿಪ್ರಾಯವಾಗಿದೆ. ಇಮಾಮ್ ಮಾಲಿಕ್(ರ) ಹೇಳುತ್ತಾರೆ:69 “ಹೆರಿಗೆಸ್ರಾವವು ನಿಂತ ಬಳಿಕ ಎರಡು ಅಥವಾ ಮೂರು ದಿನಗಳಲ್ಲಿ ಪುನಃ ರಕ್ತ ಸ್ರವಿಸಿದರೆ ಅದು ಹೆರಿಗೆಸ್ರಾವವಾಗಿದೆ. ಇಲ್ಲದಿದ್ದರೆ ಅದು ಋತುಸ್ರಾವವಾಗಿದೆ.” ಇದು ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯ(ರ)ರು ಆರಿಸಿದ ಅಭಿಪ್ರಾಯವಾಗಿದೆ.
ವಸ್ತುಸ್ಥಿತಿಗಳಿಗೆ ಅನುಗುಣವಾಗಿ ನೋಡುವಾಗ, ರಕ್ತದಲ್ಲಿ ಸಂಶಯಾಸ್ಪದ ರಕ್ತ ಎಂಬುದಿಲ್ಲ. ಆದರೆ ಸಂಶಯ ಎಂಬುದು ಸಂಬಂಧಿತ ವಿಷಯವಾಗಿದ್ದು, ಜನರು ತಮ್ಮ ಜ್ಞಾನ ಮತ್ತು ಗ್ರಹಿಕೆಗೆ ಅನುಗುಣವಾಗಿ ಅದರ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿ ಎಲ್ಲ ವಿಷಯಗಳಿಗೂ ವಿವರಣೆಯಿದೆ. ಎರಡು ಸಲ ಉಪವಾಸ ಆಚರಿಸಲು, ಅಥವಾ ಎರಡು ಸಲ ತವಾಫ್ ಮಾಡಲು ಸರ್ವಶಕ್ತನಾದ ಅಲ್ಲಾಹು ಯಾರಿಗೂ ಕಡ್ಡಾಯಗೊಳಿಸಿಲ್ಲ. ಉಪವಾಸ ಅಥವಾ ತವಾಫ್‌ನಲ್ಲಿ ಕೊರತೆಗಳಿದ್ದು ಅದನ್ನು ಕಝಾ ನಿರ್ವಹಿಸುವ ಮೂಲಕವಲ್ಲದೆ ಸರಿಪಡಿಸಲು ಸಾಧ್ಯವಾಗದಿದ್ದರೆ ಮಾತ್ರ ಎರಡನೇ ಸಲ ಉಪವಾಸ ಅಥವಾ ತವಾಫ್ ಮಾಡಬೇಕಾಗಿದೆ. ಆದರೆ ಮನುಷ್ಯನು ತನ್ನ ಹೊಣೆಗಾರಿಕೆಯನ್ನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತನಗೆ ಸಾಧ್ಯವಾಗುವಷ್ಟು ನಿರ್ವಹಿಸಿದರೆ ಅವನ ಹೊಣೆಗಾರಿಕೆಯು ಮುಗಿಯುತ್ತದೆ, ಸರ್ವಶಕ್ತನು ಹೇಳಿದಂತೆ:
﴿لَا يُكَلِّفُ ٱللَّهُ نَفۡسًا إِلَّا وُسۡعَهَاۚ...﴾
ಅಲ್ಲಾಹು ಯಾವುದೇ ವ್ಯಕ್ತಿಯ ಮೇಲೂ ಅವನ ಸಾಮರ್ಥ್ಯಕ್ಕೆ ಮೀರಿದ್ದನ್ನು ಹೊರಿಸುವುದಿಲ್ಲ... [ಅಲ್-ಬಕರಃ: 286]. ಅಲ್ಲಾಹು ಹೇಳುತ್ತಾನೆ:
﴿فَٱتَّقُواْ ٱللَّهَ مَا ٱسۡتَطَعۡتُمۡ...﴾
ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹನನ್ನು ಭಯಪಡಿರಿ. [ಅತ್ತಗಾಬುನ್:16].
ಋತುಸ್ರಾವ ಮತ್ತು ಹೆರಿಗೆಸ್ರಾವದ ನಡುವಿನ ಐದನೇ ವ್ಯತ್ಯಾಸ: ಋತುಸ್ರಾವದಲ್ಲಿರುವ ಮಹಿಳೆ ತನ್ನ ರೂಢಿಗಿಂತ ಮೊದಲೇ ಶುದ್ಧಿಯಾದರೆ, ಆಕೆಯ ಗಂಡನಿಗೆ ಆಕೆಯೊಂದಿಗೆ ಸಂಭೋಗ ಮಾಡಲು ಅನುಮತಿಯಿದೆ. ಇದು ಕರಾಹತ್ ಕೂಡ ಅಲ್ಲ. ಆದರೆ ಹೆರಿಗೆಸ್ರಾವದಲ್ಲಿರುವ ಮಹಿಳೆ 40 ದಿನಕ್ಕಿಂತ ಮೊದಲೇ ಶುದ್ಧಿಯಾದರೆ, ಪ್ರಸಿದ್ಧ ಅಭಿಪ್ರಾಯದ ಪ್ರಕಾರ ಆಕೆಯ ಗಂಡನಿಗೆ ಆಕೆಯೊಂದಿಗೆ ಸಂಭೋಗ ಮಾಡುವುದು ಕರಾಹತ್ ಆಗಿದೆ. ಆದರೆ ಸರಿಯಾದ ಅಭಿಪ್ರಾಯ ಪ್ರಕಾರ ಆತ ಆಕೆಯೊಂದಿಗೆ ಸಂಭೋಗ ಮಾಡುವುದು ಕರಾಹತ್ ಅಲ್ಲ. ಇದು ಬಹುಸಂಖ್ಯಾತ ವಿದ್ವಾಂಸರ ಅಭಿಪ್ರಾಯ. ಏಕೆಂದರೆ ಕರಾಹತ್ ಎನ್ನುವುದು ಶರಿಯತ್ತಿನ ನಿಯಮವಾಗಿದ್ದು ಅದಕ್ಕೆ ಶರಿಯತ್ತಿನ ಪುರಾವೆಯ ಅಗತ್ಯವಿದೆ. ಇಮಾಮ್ ಅಹ್ಮದ್‌ರವರು ಉಸ್ಮಾನ್ ಬಿನ್ ಅಬುಲ್ ಆಸ್(ರ)ರಿಂದ ವರದಿ ಮಾಡಿದ ಒಂದು ವರದಿಯಲ್ಲದೆ ಈ ವಿಷಯಕ್ಕೆ ಬೇರೆ ಯಾವುದೇ ಪುರಾವೆಯಿಲ್ಲ. ಆ ವರದಿಯಲ್ಲಿರುವ ಪ್ರಕಾರ ಅವರ ಪತ್ನಿ 40 ದಿನಗಳಿಗೆ ಮುಂಚೆಯೇ ಅವರ ಬಳಿಗೆ ಬಂದಾಗ, ಅವರು “ನನ್ನ ಹತ್ತಿರ ಬರಬೇಡ” ಎಂದು ಹೇಳಿದರು.70
ಆದರೆ ಇದು ಕರಾಹತ್ ಎಂಬ ನಿಯಮವನ್ನು ಬಳಸಲು ನಿರ್ಬಂಧಿಸುವುದಿಲ್ಲ. ಏಕೆಂದರೆ ಬಹುಶಃ ಇದು ಅವರು ಸೂಕ್ಷ್ಮತೆಗಾಗಿ, ಅಂದರೆ ಆಕೆ ಸರಿಯಾಗಿ ಶುದ್ಧಿಯಾಗಿರಲಾರಳು ಎಂಬ ಭಯದಿಂದ ಹೇಳಿರಬಹುದು. ಅಥವಾ ಸಂಭೋಗದ ಸಂದರ್ಭ ರಕ್ತ ಸ್ರವಿಸಬಹುದು ಎಂಬಂತಹ ಕಾರಣಗಳಿಂದ ಹೇಳಿರಬಹುದು. ಹೆಚ್ಚು ಬಲ್ಲವನು ಅಲ್ಲಾಹು ಮಾತ್ರ.
ಅಧ್ಯಾಯ ಏಳು: ಋತುಸ್ರಾವವನ್ನು ನಿಲ್ಲಿಸುವ ಅಥವಾ ಆರಂಭಿಸುವ ಔಷಧಿಗಳನ್ನು ಮತ್ತು ಗರ್ಭವನ್ನು ನಿಲ್ಲಿಸುವ ಅಥವಾ ಗರ್ಭಪಾತಕ್ಕೆ ಕಾರಣವಾಗುವ ಔಷಧಿಗಳನ್ನು ಸೇವಿಸುವುದು.
ಮಹಿಳೆಯು ಋತುಸ್ರಾವವನ್ನು ನಿಲ್ಲಿಸುವ ಔಷಧಿಯನ್ನು ಬಳಸುವುದು ಸಮ್ಮತಾರ್ಹವಾಗಿದೆ. ಆದರೆ ಅದಕ್ಕೆ ಎರಡು ಷರತ್ತುಗಳಿವೆ:
ಮೊದಲನೆಯದು: ಅದರಿಂದ ಆಕೆಯ ಆರೋಗ್ಯಕ್ಕೆ ಅಪಾಯವಿರಬಾರದು. ಅಪಾಯವಿದ್ದರೆ ಅದು ಸಮ್ಮತಾರ್ಹವಲ್ಲ; ಅಲ್ಲಾಹನ ಈ ಮಾತೇ ಇದಕ್ಕೆ ಆಧಾರವಾಗಿದೆ:
﴿...وَلَا تُلۡقُواْ بِأَيۡدِيكُمۡ إِلَى ٱلتَّهۡلُكَةِ...﴾
ನಿಮ್ಮ ಕೈಗಳನ್ನು ನೀವೇ ವಿನಾಶಕ್ಕೆ ತಳ್ಳಬೇಡಿ. [ಅಲ್-ಬಕರಃ: 195].
﴿...وَلَا تَقۡتُلُوٓاْ أَنفُسَكُمۡۚ إِنَّ ٱللَّهَ كَانَ بِكُمۡ رَحِيمٗا﴾
ನೀವು ನಿಮ್ಮನ್ನೇ ಕೊಲ್ಲಬೇಡಿ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮೊಡನೆ ಅತ್ಯಂತ ದಯೆಯುಳ್ಳವನಾಗಿದ್ದಾನೆ. [ಅನ್ನಿಸಾ:29].
ಎರಡು: ಅದಕ್ಕೆ ಗಂಡನ ಒಪ್ಪಿಗೆಯಿರಬೇಕು. ಆದರೆ ಅವನಿಗೆ ಋತುಸ್ರಾವದೊಂದಿಗೆ ಸಂಬಂಧವಿದ್ದರೆ ಮಾತ್ರ. ಉದಾಹರಣೆಗೆ, ಅವಳು ಇದ್ದತ್‌ನಲ್ಲಿದ್ದು ಆಕೆಯ ಖರ್ಚುವೆಚ್ಚಗಳನ್ನು ನೋಡುವುದು ಗಂಡನಿಗೆ ಕಡ್ಡಾಯವಾಗಿದ್ದರೆ. ಇಂತಹ ಸಂದರ್ಭದಲ್ಲಿ ಅವಳು ಗಂಡನಿಂದ ಹೆಚ್ಚು ಖರ್ಚುವೆಚ್ಚಗಳನ್ನು ಪಡೆಯುವುದಕ್ಕಾಗಿ ಇದ್ದತ್‌ನ ಅವಧಿಯನ್ನು ದೀರ್ಘಗೊಳಿಸಲು ಋತುಸ್ರಾವವನ್ನು ನಿಲ್ಲಿಸುವ ಔಷಧಿಯನ್ನು ದುರುಪಯೋಗಪಡಿಸಬಹುದು. ಹಾಗಿದ್ದರೆ ಆಕೆಗೆ ಗಂಡನ ಒಪ್ಪಿಗೆಯಿಲ್ಲದೆ ಅಂತಹ ಔಷಧಿಯನ್ನು ಸೇವಿಸುವುದು ಸಮ್ಮತಾರ್ಹವಲ್ಲ. ಅದೇ ರೀತಿ ಋತುಸ್ರಾವ ನಿಲ್ಲಿಸುವ ಔಷಧಿ ಸೇವಿಸಿದರೆ ಗರ್ಭಿಣಿಯಾಗುವುದಿಲ್ಲ ಎಂದು ಖಾತ್ರಿಯಾದರೆ, ಅದಕ್ಕೆ ಗಂಡನ ಒಪ್ಪಿಗೆ ಅತ್ಯಗತ್ಯವಾಗಿದೆ. ಋತುಸ್ರಾವವನ್ನು ನಿಲ್ಲಿಸುವ ಔಷಧಿ ಸೇವಿಸುವುದು ಸಮ್ಮತಾರ್ಹವಾಗಿದ್ದರೂ ಅತ್ಯಗತ್ಯ ಸಂದರ್ಭಗಳಲ್ಲೇ ಹೊರತು ಅದನ್ನು ಸೇವಿಸದಿರುವುದು ಉತ್ತಮ. ಏಕೆಂದರೆ ನೈಸರ್ಗಿಕ ಪ್ರಕ್ರಿಯೆಗಳನ್ನು ಅದರ ಪಾಡಿಗೆ ಬಿಟ್ಟುಬಿಡುವುದು ಆರೋಗ್ಯದ ಸಮತೋಲನಕ್ಕೆ ಮತ್ತು ಮಹಿಳೆಯ ಸುರಕ್ಷತೆಗೆ ಹೆಚ್ಚು ಕ್ಷೇಮವಾಗಿದೆ.
ಋತುಸ್ರಾವವನ್ನು ಆರಂಭಿಸುವ ಔಷಧಿಗಳನ್ನು ಸೇವಿಸುವುದು ಕೂಡ ಸಮ್ಮತಾರ್ಹವಾಗಿದೆ. ಅದಕ್ಕೂ ಎರಡು ಷರತ್ತುಗಳಿವೆ:
ಒಂದು: ಕಡ್ಡಾಯ ಕರ್ಮದಿಂದ ತಪ್ಪಿಸಿಕೊಳ್ಳಲು ಅದನ್ನು ದುರುಪಯೋಗಪಡಿಸಬಾರದು. ಉದಾಹರಣೆಗೆ, ಉಪವಾಸ ಆಚರಿಸುವುದರಿಂದ ತಪ್ಪಿಸಿಕೊಳ್ಳಲು ರಮದಾನ್ ತಿಂಗಳು ಹತ್ತಿರವಾಗುವಾಗ ಅದನ್ನು ಸೇವಿಸುವುದು, ಅಥವಾ ನಮಾಝಿನಿಂದ ತಪ್ಪಿಸಿಕೊಳ್ಳಲು ಅದನ್ನು ಸೇವಿಸುವುದು ಇತ್ಯಾದಿ.
ಎರಡು: ಅದಕ್ಕೆ ಗಂಡನ ಒಪ್ಪಿಗೆಯಿರಬೇಕು. ಏಕೆಂದರೆ ಋತುಸ್ರಾವದ ಕಾರಣ ಪತ್ನಿಯಿಂದ ಸಂಪೂರ್ಣ ಸಂತೋಷವನ್ನು ಪಡೆಯಲು ಅವನಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪತಿ ಒಪ್ಪದಿದ್ದರೆ ಪತಿಯ ಹಕ್ಕನ್ನು ನಿಷೇಧಿಸುವ ವಸ್ತುವನ್ನು ಬಳಸುವುದು ಸಮ್ಮತಾರ್ಹವಲ್ಲ. ಇನ್ನು ಆಕೆ ತಲಾಕ್ ನೀಡಲ್ಪಟ್ಟವಳಾಗಿದ್ದರೆ, ಮತ್ತು ಅದು ಆಕೆಯನ್ನು ಹಿಂದಕ್ಕೆ ಪಡೆಯಬಹುದಾದ ತಲಾಕ್ ಆಗಿದ್ದರೆ, ಆಕೆಯನ್ನು ಹಿಂದಕ್ಕೆ ಪಡೆಯುವ ಗಂಡನ ಹಕ್ಕನ್ನು ಅವಧಿಗೆ ಮುಂಚೆಯೇ ಅದು ಮುಗಿಸಿಬಿಡುತ್ತದೆ.
ಗರ್ಭನಿರೋಧಕಗಳನ್ನು ಬಳಸುವುದು ಎರಡು ವಿಧಗಳಲ್ಲಿದೆ:
ಒಂದು: ಗರ್ಭವನ್ನು ಶಾಶ್ವತವಾಗಿ ನಿಲ್ಲಿಸುವವುಗಳು. ಇವು ಸಮ್ಮತಾರ್ಹವಲ್ಲ. ಏಕೆಂದರೆ ಅದು ಗರ್ಭವನ್ನು ನಾಶಮಾಡಿ ವಂಶವನ್ನು ಕುಗ್ಗಿಸುತ್ತದೆ. ಇದು ಮುಸ್ಲಿಮ್ ಸಮುದಾಯದ ಜನಸಂಖ್ಯೆ ಹೆಚ್ಚಾಗಬೇಕೆಂಬ ಪ್ರವಾದಿ(ಸ)ರ ಉದ್ದೇಶಕ್ಕೆ ವಿರುದ್ಧವಾಗಿದೆ. ಏಕೆಂದರೆ, ಆಕೆಗೆ ಈಗ ಅಸ್ತಿತ್ವದಲ್ಲಿರುವ ಮಕ್ಕಳೆಲ್ಲರೂ ಬದುಕುಳಿಯುವರು ಮತ್ತು ಆಕೆ ಯಾವುದೇ ಮಕ್ಕಳಿಲ್ಲದ ವಿಧವೆಯಾಗಲಾರಳು ಎಂದು ಯಾವುದೇ ಖಾತ್ರಿಯಿಲ್ಲ.
ಎರಡು: ಗರ್ಭವನ್ನು ತಾತ್ಕಾಲಿಕವಾಗಿ ನಿಲ್ಲಿಸುವವುಗಳು. ಉದಾಹರಣೆಗೆ, ಮಹಿಳೆ ಪದೇ ಪದೇ ಗರ್ಭಿಣಿಯಾಗುತ್ತಿದ್ದು, ಇದರಿಂದ ಆಕೆ ನಿಶ್ಶಕ್ತಳಾಗಿದ್ದರೆ, ಪ್ರತಿ ಎರಡು ವರ್ಷಕ್ಕೊಮ್ಮೆ ಅಥವಾ ಮೂರು ವರ್ಷಕ್ಕೊಮ್ಮೆ ಗರ್ಭ ಧರಿಸುವಂತೆ ಮಾಡಲು ತಾತ್ಕಾಲಿಕ ಗರ್ಭ ನಿರೋಧಕಗಳನ್ನು ಬಳಸುವುದು. ಗಂಡನ ಒಪ್ಪಿಗೆಯಿದ್ದರೆ ಮತ್ತು ಅದು ಆಕೆಯ ಆರೋಗ್ಯಕ್ಕೆ ಅಪಾಯಕಾರಿ ಅಲ್ಲದಿದ್ದರೆ ಸಮ್ಮತಾರ್ಹವಾಗಿದೆ. ಪ್ರವಾದಿ(ಸ)ರ ಕಾಲದಲ್ಲಿ ಸಹಾಬಿಗಳು ತಮ್ಮ ಪತ್ನಿಯರೊಂದಿಗೆ ಅಝ್ಲ್ ಮಾಡುತ್ತಿದ್ದರು ಎಂಬುದು ಇದಕ್ಕೆ ಪುರಾವೆಯಾಗಿದೆ. ಪತ್ನಿಯರು ಗರ್ಭಿಣಿಯಾಗದಿರಲು ಅವರು ಹೀಗೆ ಮಾಡುತ್ತಿದ್ದರು. ಅವರಿಗೆ ಇದನ್ನು ವಿರೋಧಿಸಲಾಗಿರಲಿಲ್ಲ. ಅಝ್ಲ್ ಎಂದರೆ ವೀರ್ಯಸ್ಖಲನವಾಗುವಾಗ ಗುಹ್ಯಾಂಗವನ್ನು ಹೊರತೆಗೆದು ಮಹಿಳೆಯ ಗುಹ್ಯಾಂಗದ ಹೊರಭಾಗದಲ್ಲಿ ಸ್ಖಲಿಸುವಂತೆ ಮಾಡುವುದು.71
ಗರ್ಭಪಾತವಾಗುವವುಗಳನ್ನು ಬಳಸುವುದರಲ್ಲಿ ಎರಡು ವಿಧಗಳಿವೆ:
ಒಂದು: ಗರ್ಭಪಾತದ ಮೂಲಕ ಭ್ರೂಣವನ್ನು ನಾಶ ಮಾಡಲು ಉದ್ದೇಶಿಸುವುದು. ಭ್ರೂಣಕ್ಕೆ ಆತ್ಮವನ್ನು ಊದಲಾದ ಬಳಿಕ ಇದನ್ನು ಮಾಡುವುದು ನಿಷಿದ್ಧವಾಗಿದೆ. ಅದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಅದು ಒಂದು ಪವಿತ್ರ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಾಗಿದೆ. ಪವಿತ್ರ ಕುರ್‌ಆನ್, ಪ್ರವಾದಿ ಸುನ್ನತ್ ಮತ್ತು ಮುಸ್ಲಿಮ್ ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ ಪವಿತ್ರ ಜೀವವನ್ನು ಕೊಲ್ಲುವುದು ನಿಷಿದ್ಧವಾಗಿದೆ. ಆದರೆ ಅದು ಆತ್ಮವನ್ನು ಊದುವುದಕ್ಕೆ ಮುಂಚೆಯಾಗಿದ್ದರೆ ಅದು ಸಮ್ಮತಾರ್ಹವೋ ಅಲ್ಲವೋ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಭಿನ್ನಾಭಿಪ್ರಾಯವಿದೆ. ಕೆಲವು ವಿದ್ವಾಂಸರು ಅದನ್ನು ಸಮ್ಮತಿಸಿದ್ದಾರೆ ಇನ್ನು ಕೆಲವು ವಿದ್ವಾಂಸರು ಅದನ್ನು ವಿರೋಧಿಸಿದ್ದಾರೆ. ಅದು ಅಲಕದ ರೂಪದಲ್ಲಿರದಿದ್ದರೆ, ಅಂದರೆ ಅದಕ್ಕೆ 40 ದಿನಗಳಾಗದಿದ್ದರೆ ಅದು ಸಮ್ಮತಾರ್ಹವೆಂದು ಇತರ ಕೆಲವು ವಿದ್ವಾಂಸರು ಹೇಳಿದ್ದಾರೆ. ಅದೇ ರೀತಿ, ಅದು ಸ್ಪಷ್ಟ ಮನುಷ್ಯ ಸೃಷ್ಟಿಯ ರೂಪದಲ್ಲಿರದಿದ್ದರೆ, ಸಮ್ಮತಾರ್ಹವೆಂದು ಇತರ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಅತ್ಯಗತ್ಯ ಸಂದರ್ಭಗಳಲ್ಲೇ ಹೊರತು ಗರ್ಭಪಾತ ಮಾಡದಿರುವುದು ಹೆಚ್ಚು ಸೂಕ್ಷ್ಮ. ಉದಾಹರಣೆಗೆ, ತಾಯಿ ರೋಗಿಯಾಗಿದ್ದು ಗರ್ಭಧಾರಣೆಗೆ ಯೋಗ್ಯಳಲ್ಲದಿದ್ದರೆ ಇತ್ಯಾದಿ. ಇಂತಹ ಸಂದರ್ಭಗಳಲ್ಲಿ, ಭ್ರೂಣವು ಸ್ಪಷ್ಟ ಮನುಷ್ಯ ಆಕೃತಿಯನ್ನು ಪಡೆಯುವಷ್ಟು ಸಮಯ ಕಳೆಯದಿದ್ದರೆ, ಗರ್ಭಪಾತ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಗರ್ಭಪಾತ ಮಾಡಿಕೊಳ್ಳಬಾರದು. ಹೆಚ್ಚು ಬಲ್ಲವನು ಅಲ್ಲಾಹು ಮಾತ್ರ.
ಎರಡು: ಗರ್ಭಪಾತದ ಮೂಲಕ ಭ್ರೂಣವನ್ನು ನಾಶ ಮಾಡುವ ಉದ್ದೇಶವಿಲ್ಲದಿರುವುದು. ಉದಾಹರಣೆಗೆ, ಗರ್ಭಧಾರಣೆಯ ಅವಧಿ ಮುಗಿದು ಹೆರಿಗೆ ಹತ್ತಿರವಾಗುವಾಗ ಮಗುವನ್ನು ಹೊರತೆಗೆಯುವುದು. ಇದು ಸಮ್ಮತಾರ್ಹವಾಗಿದೆ. ಆದರೆ ತಾಯಿಯ ಅಥವಾ ಮಗುವಿನ ಜೀವಕ್ಕೆ ಅಪಾಯವಿರಬಾರದು, ಶಸ್ತ್ರಕ್ರಿಯೆ ಮಾಡಬಾರದು ಎಂಬ ಷರತ್ತುಗಳಿವೆ. ಶಸ್ತ್ರಕ್ರಿಯೆ ಮಾಡಬೇಕಾಗಿ ಬಂದರೆ, ಅದಕ್ಕೆ ನಾಲ್ಕು ಸ್ಥಿತಿಗಳಿವೆ:
ಒಂದು: ತಾಯಿ ಮತ್ತು ಮಗು ಜೀವಂತವಾಗಿರುವುದು. ಇಂತಹ ಸಂದರ್ಭಗಳಲ್ಲಿ ಅನಿವಾರ್ಯ ಘಟ್ಟದಲ್ಲಲ್ಲದೆ ಶಸ್ತ್ರಕ್ರಿಯೆ ಮಾಡಬಾರದು. ಅಂದರೆ ಹೆರಿಗೆಯು ಪ್ರಯಾಸಕರವಾಗಿದ್ದು ಶಸ್ತ್ರಕ್ರಿಯೆ ಮಾಡಲೇಬೇಕಾಗಿ ಬರುವುದು ಇತ್ಯಾದಿ. ಇದಕ್ಕೆ ಕಾರಣವೇನೆಂದರೆ ದೇಹವು ಮನುಷ್ಯನಿಗೆ ನೀಡಲಾದ ಅಮಾನತ್ (ಜೋಪಾನವಾಗಿ ಕಾಪಾಡಬೇಕಾದ ಸೊತ್ತು) ಆಗಿದೆ. ಒಂದು ದೊಡ್ಡ ಹಿತಕ್ಕಾಗಿಯಲ್ಲದೆ ಮನುಷ್ಯನು ತನ್ನ ದೇಹವನ್ನು ಅಪಾಯಕ್ಕೊಡ್ಡುವಂತಹ ಯಾವುದೇ ಪ್ರಕ್ರಿಯೆಗೂ ಮುಂದಾಗಬಾರದು. ಅದೂ ಅಲ್ಲದೆ, ಸಾಮಾನ್ಯವಾಗಿ ಶಸ್ತ್ರಕ್ರಿಯೆ ಮಾಡಿದರೆ ಯಾವುದೇ ಅಪಾಯವಿಲ್ಲವೆಂದು ಭಾವಿಸಲಾಗುತ್ತದೆ. ಆದರೆ ಅದರಿಂದ ಅಪಾಯ ಸಂಭವಿಸುತ್ತದೆ.
ಎರಡು: ತಾಯಿ ಮತ್ತು ಮಗು ಸತ್ತಿರುವುದು. ಇಂತಹ ಸಂದರ್ಭದಲ್ಲಿ ಮಗುವನ್ನು ಹೊರತೆಗೆಯಲು ಶಸ್ತ್ರಕ್ರಿಯೆ ಮಾಡಬಾರದು. ಏಕೆಂದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.
ಮೂರು: ತಾಯಿ ಜೀವಂತವಿರುವುದು ಮತ್ತು ಮಗು ಸತ್ತಿರುವುದು. ಇಂತಹ ಸಂದರ್ಭದಲ್ಲಿ ತಾಯಿಯ ಜೀವಕ್ಕೆ ಅಪಾಯವಿಲ್ಲದಿದ್ದರೆ ಮಗುವನ್ನು ಹೊರತೆಗೆಯಲು ಶಸ್ತ್ರಕ್ರಿಯೆ ಮಾಡಬಹುದು. ಏಕೆಂದರೆ, ಸಾಮಾನ್ಯವಾಗಿ – ಹೆಚ್ಚು ಬಲ್ಲವನು ಅಲ್ಲಾಹು ಮಾತ್ರ – ಮಗು ಗರ್ಭದಲ್ಲಿ ಸತ್ತರೆ ಅದನ್ನು ಶಸ್ತ್ರಕ್ರಿಯೆಯ ಮೂಲಕವಲ್ಲದೆ ಹೊರತೆಗೆಯಲು ಸಾಧ್ಯವಿಲ್ಲ. ಅದನ್ನು ಗರ್ಭದಲ್ಲಿ ಹಾಗೆಯೇ ಬಿಟ್ಟರೆ ತಾಯಿ ಪುನಃ ಗರ್ಭಿಣಿಯಾಗುವುದಕ್ಕೆ ಅದು ತಡೆಯಾಗುತ್ತದೆ ಮತ್ತು ಅದರಿಂದ ಆಕೆಗೆ ತೊಂದರೆಗಳೂ ಉಂಟಾಗುತ್ತವೆ. ಮಾತ್ರವಲ್ಲದೆ, ಆಕೆ ಗಂಡನಿಂದ ತಲಾಕ್ ನೀಡಲಾಗಿ ಇದ್ದತ್‌ನಲ್ಲಿದ್ದರೆ ಆಕೆ ಗಂಡನಿಲ್ಲದೆ ಬದುಕುವಂತಾಗಲು ಇದು ಕೆಲವೊಮ್ಮೆ ಕಾರಣವಾಗುತ್ತದೆ.
ನಾಲ್ಕು: ತಾಯಿ ಸತ್ತಿರುವುದು ಮತ್ತು ಮಗು ಜೀವಂತವಿರುವುದು. ಮಗು ಬದುಕಬಹುದು ಎಂಬ ನಿರೀಕ್ಷೆಯಿಲ್ಲದಿದ್ದರೆ ಶಸ್ತ್ರಕ್ರಿಯೆ ಮಾಡಬಾರದು.
ಮಗು ಬದುಕಬಹುದೆಂಬ ನಿರೀಕ್ಷೆಯಿದ್ದರೆ ಮತ್ತು ಅದರ ಒಂದು ಭಾಗವು ಗರ್ಭದಿಂದ ಹೊರಬಂದಿದ್ದರೆ, ತಾಯಿಯ ಹೊಟ್ಟೆಯನ್ನು ಸೀಳಿ ಅದನ್ನು ಹೊರತೆಗೆಯಬೇಕು. ಆದರೆ ಅದರ ಯಾವುದೇ ಭಾಗವು ಹೊರಬರದಿದ್ದರೆ, ನಮ್ಮ ಸಂಗಡಿಗರು (ಅಲ್ಲಾಹು ಅವರಿಗೆ ಕರುಣೆ ತೋರಲಿ) ಹೀಗೆ ಅಭಿಪ್ರಾಯಪಡುತ್ತಾರೆ: ಮಗುವನ್ನು ಹೊರತೆಗೆಯುವುದಕ್ಕಾಗಿ ತಾಯಿಯ ಹೊಟ್ಟೆಯನ್ನು ಸೀಳಬಾರದು. ಏಕೆಂದರೆ ಅದು ಅಂಗಾಂಗಗಳನ್ನು ವಿರೂಪಗೊಳಿಸುವುದಾಗಿದೆ. ಆದರೆ ಸರಿಯಾದ ಅಭಿಪ್ರಾಯವೇನೆಂದರೆ, ಮಗುವನ್ನು ಹೊರತೆಗೆಯಲು ಬೇರೆ ದಾರಿಯಿಲ್ಲದಿದ್ದರೆ ಹೊಟ್ಟೆಯನ್ನು ಸೀಳಿ ಹೊರತೆಗೆಯಬೇಕು. ಈ ಅಭಿಪ್ರಾಯವನ್ನು ಇಬ್ನ್ ಹುಬೈರ ಆರಿಸಿದ್ದಾರೆ. ಇನ್ಸಾಫ್ ಎಂಬ ಪುಸ್ತಕದಲ್ಲಿ ಇದನ್ನು ಸೂಕ್ತ ಅಭಿಪ್ರಾಯವೆಂದು ಹೇಳಲಾಗಿದೆ.72
ನಾನು ಹೇಳುತ್ತೇನೆ: ವಿಶೇಷವಾಗಿ ನಮ್ಮ ಈ ಕಾಲದಲ್ಲಿ ಶಸ್ತ್ರಕ್ರಿಯೆ ಮಾಡುವುದು ದೇಹವನ್ನು ವಿರೂಪಗೊಳಿಸುವುದಲ್ಲ. ಏಕೆಂದರೆ ಈಗ ಹೊಟ್ಟೆಯನ್ನು ಸೀಳಿ ಹೊಲಿಯಲಾಗುತ್ತದೆ. ಜೀವವಿರುವ ವಸ್ತುವಿನ ಪಾವಿತ್ರತೆಯು ಜೀವವಿಲ್ಲದ ವಸ್ತುವಿನ ಪಾವಿತ್ರತೆಗಿಂತಲೂ ದೊಡ್ಡದಾಗಿದೆ. ಅದೇ ರೀತಿ, ಮುಗ್ಧ ಜೀವವನ್ನು ವಿನಾಶದಿಂದ ಕಾಪಾಡುವುದು ಕಡ್ಡಾಯವಾಗಿದೆ. ಗರ್ಭದಲ್ಲಿರುವ ಮಗು ಮುಗ್ಧ ಮನುಷ್ಯ ಜೀವಿಯಾಗಿದ್ದು ಅದನ್ನು ಕಾಪಾಡುವುದು ಕಡ್ಡಾಯವಾಗಿದೆ. ಹೆಚ್ಚು ಬಲ್ಲವನು ಅಲ್ಲಾಹು.
ವಿಶೇಷ ಸೂಚನೆ: ಗರ್ಭದಿಂದ ಮಗುವನ್ನು ಹೊರತೆಗೆಯುವುದು ಸಮ್ಮತಾರ್ಹವೆಂದು ಈಗಾಗಲೇ ವಿವರಿಸಲಾದ ಸ್ಥಿತಿಗಳಲ್ಲಿ ಆ ಮಗು ಯಾರದ್ದಾಗಿದೆಯೋ ಅವನ (ಗಂಡನ) ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.
ಈ ಪ್ರಮುಖ ವಿಷಯದ ಬಗ್ಗೆ ನಾವು ಬರೆಯಲು ಉದ್ದೇಶಿಸಿದ ವಿಷಯಗಳು ಇಲ್ಲಿಗೆ ಮುಕ್ತಾಯವಾಗುತ್ತವೆ. ನಾವು ಇಲ್ಲಿ ಮೂಲಭೂತ ವಿಷಯಗಳನ್ನು ಮತ್ತು ನಿಯಮಗಳನ್ನು ಮಾತ್ರ ಉಲ್ಲೇಖಿಸಿದ್ದೇವೆ. ಇದರ ಶಾಖೆಗಳು ಮತ್ತು ವಿವರಣಾತ್ಮಕ ಭಾಗಗಳು ಮತ್ತು ಅವುಗಳಿಗೆ ಸಂಬಂಧಿಸಿದಂತೆ ಮಹಿಳೆಯರಲ್ಲಿ ಸಂಭವಿಸುವ ವಿಷಯಗಳನ್ನು ಉಲ್ಲೇಖಿಸುತ್ತಾ ಹೋದರೆ ಅದು ದಡವಿಲ್ಲದ ಸಮುದ್ರದಂತಾಗಿ ಬಿಡಬಹುದು. ಆದರೆ ಸೂಕ್ಷ್ಮದರ್ಶಿಗಳು ಶಾಖೆಗಳನ್ನು ಮೂಲತತ್ವಕ್ಕೆ ಮತ್ತು ವಿಸ್ತ್ರತ ಭಾಗಗಳನ್ನು ಅವುಗಳ ಸಮಗ್ರಭಾಗಗಳಿಗೆ ಹಾಗೂ ಕಾಯಿದೆಗಳಿಗೆ ತಿರುಗಿಸಿ ಸರಿಯಾಗಿ ಅರ್ಥ ಮಾಡಿಕೊಳ್ಳಲು ಶಕ್ತರಾಗಿದ್ದಾರೆ.
ಅಲ್ಲಾಹನ ಪ್ರವಾದಿಗಳು ತಂದ ಸಂದೇಶವನ್ನು ಅವನ ಸೃಷ್ಟಿಗಳಿಗೆ ತಲುಪಿಸಿಕೊಡುವುದರಲ್ಲಿ ಮತ್ತು ಅವರಿಗೆ ಅದನ್ನು ವಿವರಿಸಿಕೊಡುವುದರಲ್ಲಿ, ತಾವು ಅಲ್ಲಾಹು ಮತ್ತು ಅವನ ಸೃಷ್ಟಿಗಳ ನಡುವಿನ ಮಧ್ಯವರ್ತಿಗಳೆಂಬುದನ್ನು ಫತ್ವಾ ನೀಡುವವರು ತಿಳಿದಿರಬೇಕು. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನಲ್ಲಿರುವ ವಿಷಯಗಳ ಬಗ್ಗೆ ಅವರು ಹೊಣೆಗಾರರಾಗಿದ್ದಾರೆ. ಏಕೆಂದರೆ ಅವೆರಡು ಮೂಲಾಧಾರಗಳಾಗಿದ್ದು, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳಲ್ಲಿರುವ ಪ್ರಕಾರ ಕಾರ್ಯನಿರ್ವಹಿಸಬೇಕೆಂದು ಮನುಷ್ಯರಿಗೆ ಕಡ್ಡಾಯವಾಗಿ ಆದೇಶಿಸಲಾಗಿದೆ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿಗೆ ವಿರುದ್ಧವಾಗಿರುವುದೆಲ್ಲವೂ ತಪ್ಪು ಅಭಿಪ್ರಾಯಗಳಾಗಿದ್ದು, ಅವುಗಳನ್ನು ತಿರಸ್ಕರಿಸುವುದು ಕಡ್ಡಾಯವಾಗಿದೆ. ಅವುಗಳ ಪ್ರಕಾರ ಕಾರ್ಯನಿರ್ವಹಿಸುವುದು ಸಮ್ಮತಾರ್ಹವಲ್ಲ. ಕೆಲವೊಮ್ಮೆ ಆ ಅಭಿಪ್ರಾಯ ಹೇಳಿದ ವ್ಯಕ್ತಿ ತಪ್ಪಿತಸ್ತನಾಗಲಾರ ಮತ್ತು ಅವನು ಅದನ್ನು ಹೇಳಿದ್ದು ಇಜ್ತಿಹಾದಿನ ಆಧಾರದಲ್ಲಾಗಿರಬಹುದು. ಹಾಗಿದ್ದರೆ ಅವನಿಗೆ ಇಜ್ತಿಹಾದ್ ಮಾಡಿದ ಪ್ರತಿಫಲವಿದೆ. ಆದರೆ ಅದು ತಪ್ಪು ಅಭಿಪ್ರಾಯವೆಂದು ತಿಳಿದ ಇತರರು ಅದನ್ನು ಸ್ವೀಕರಿಸುವುದು ಸಮ್ಮತಾರ್ಹವಲ್ಲ.
ಫತ್ವಾ ನೀಡುವವನು ಅಲ್ಲಾಹನ ಸಂಪ್ರೀತಿಯನ್ನು ಪಡೆಯುವುದಕ್ಕಾಗಿ ತನ್ನ ಉದ್ದೇಶವನ್ನು ನಿಷ್ಕಳಂಕಗೊಳಿಸಬೇಕು. ತಾನು ಹೇಳುವ ಪ್ರತಿಯೊಂದು ಅಭಿಪ್ರಾಯದಲ್ಲೂ ಅವನು ಅಲ್ಲಾಹನ ಸಹಾಯವನ್ನು ಬೇಡಬೇಕು. ಸರಿಯಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಲ್ಲಾಹನಲ್ಲಿ ದೃಢತೆ ಮತ್ತು ತೌಫೀಕನ್ನು ಬೇಡಬೇಕು.
ಫತ್ವಾ ನೀಡುವವನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿಲ್ಲಿರುವುದನ್ನು ಮಾತ್ರ ಅವಲಂಬಿಸಬೇಕು. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತನ್ನು ನೋಡಿ ಅಥವಾ ಅವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ವಿದ್ವಾಂಸರ ಮಾತುಗಳನ್ನು ನೋಡಿ ವಿಷಯಗಳನ್ನು ಪರಿಶೀಲಿಸಬೇಕು.
ಹೆಚ್ಚಿನ ಸಂದರ್ಭಗಳಲ್ಲೂ ಒಬ್ಬ ವ್ಯಕ್ತಿಗೆ ಒಂದು ಸಮಸ್ಯೆ ತಲೆದೋರಿದಾಗ ಅವನು ಪರಿಹಾರಕ್ಕಾಗಿ ತನಗೆ ಸಾಧ್ಯವಾಗುವಷ್ಟರ ಮಟ್ಟಿಗೆ ವಿದ್ವಾಂಸರ ಮಾತುಗಳನ್ನು ಪರಿಶೀಲಿಸುತ್ತಾನೆ. ಆದರೆ ಅವನಿಗೆ ಆ ಸಮಸ್ಯೆಯ ಬಗ್ಗೆ ಮನಸ್ಸಿಗೆ ಸಂತೃಪ್ತಿ ನೀಡುವಂತಹ ತೀರ್ಪು ಅವರ ಮಾತುಗಳಲ್ಲಿ ಕಾಣಲು ಸಿಗುವುದಿಲ್ಲ. ಕೆಲವೊಮ್ಮೆ ಅವರ ಮಾತುಗಳಲ್ಲಿ ಆ ಸಮಸ್ಯೆಯ ಬಗ್ಗೆ ಪ್ರಸ್ತಾಪವೇ ಇರುವುದಿಲ್ಲ. ಆದರೆ ಅವನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಸುನ್ನತ್ತಿನ ಕಡೆಗೆ ತಿರುಗಿ ಅದರಲ್ಲಿ ಶೋಧ ನಡೆಸಿದಾಗ, ಅವನಿಗೆ ಅದರ ತೀರ್ಪು ಬಹಳ ಹತ್ತಿರವಿರುವುದಾಗಿ ಮತ್ತು ಸ್ಪಷ್ಟವಾಗಿರುವುದಾಗಿ ಕಾಣುತ್ತದೆ. ಆದರೆ ಇದು ಅವನ ನಿಷ್ಕಳಂಕತೆ, ಜ್ಞಾನ ಮತ್ತು ಗ್ರಹಣಶಕ್ತಿಯನ್ನು ಅವಲಂಬಿಸಿದೆ.
ಫತ್ವಾ ನೀಡುವವನು ಸಮಸ್ಯೆಯ ಬಗ್ಗೆ ಗೊಂದಲದಲ್ಲಿದ್ದರೆ, ತೀರ್ಪು ನೀಡುವುದನ್ನು ತಡ ಮಾಡಬೇಕೇ ಹೊರತು ಆತುರಪಡಬಾರದು. ಎಷ್ಟೋ ಜನರು ಆತುರದಿಂದ ತೀರ್ಪು ನೀಡುತ್ತಾರೆ. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಾವು ತಪ್ಪು ಮಾಡಿದ್ದೇವೆಂದು ಬಹಳ ಹತ್ತಿರದಲ್ಲೇ ಅವರು ಅರಿತುಕೊಂಡು ಪಶ್ಚಾತ್ತಾಪಪಡುತ್ತಾರೆ. ಕೆಲವೊಮ್ಮೆ ಅವರಿಗೆ ತಮ್ಮ ಫತ್ವಾವನ್ನು ಸರಿಪಡಿಸಲು ಕೂಡ ಸಾಧ್ಯವಾಗುವುದಿಲ್ಲ!
ಫತ್ವಾ ನೀಡುವವನು ಆತುರಪಡದವನು ಮತ್ತು ಸ್ಥಿರತೆಯಿರುವವನು ಎಂದು ತಿಳಿದರೆ ಜನರು ಅವನ ಮಾತಿನಲ್ಲಿ ಭರವಸೆಯಿಡುತ್ತಾರೆ ಮತ್ತು ಅದನ್ನು ಪರಿಗಣಿಸುತ್ತಾರೆ. ಆದರೆ ಆತ ಆತುರಪಡುವವನು, ಅತಿ ಹೆಚ್ಚು ತಪ್ಪು ಮಾಡುವವನು ಎಂದು ತಿಳಿದರೆ ಜನರು ಅವನ ಮಾತಿನ ಮೇಲೆ ಭರವಸೆಯಿಡುವುದಿಲ್ಲ. ಆದ್ದರಿಂದ ತನ್ನ ಆತುರತನ ಮತ್ತು ತಪ್ಪುಗಳ ಮೂಲಕ ಅವನು ತನ್ನ ಜ್ಞಾನವನ್ನು ತನಗೆ ಮಾತ್ರವಲ್ಲದೆ ಇತರರಿಗೂ ತಡೆಯುವವನಾಗುತ್ತಾನೆ.
ನಮಗೂ ನಮ್ಮ ಮುಸ್ಲಿಮ್ ಸಹೋದರರಿಗೂ ನೇರವಾದ ಮಾರ್ಗವನ್ನು ತೋರಿಸಲು, ತನ್ನ ವತಿಯ ಕಾಳಜಿಯಿಂದ ನಮ್ಮನ್ನು ಸಂರಕ್ಷಿಸಲು, ತನ್ನ ವತಿಯ ಆರೈಕೆಯಿಂದ ನಮ್ಮ ಕಾಲುಗಳು ಜಾರದಂತೆ ರಕ್ಷಿಸಲು ನಾವು ಸರ್ವಶಕ್ತನಾದ ಅಲ್ಲಾಹನಲ್ಲಿ ಬೇಡುತ್ತೇವೆ. ಖಂಡಿತವಾಗಿಯೂ ಅವನು ಪರಮ ಉದಾರಿಯೂ ಔದಾರ್ಯವುಳ್ಳವನೂ ಆಗಿದ್ದಾನೆ. ನಮ್ಮ ಪ್ರವಾದಿ ಮುಹಮ್ಮದ್(ಸ)ರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸ್ವಹಾಬಾಗಳೆಲ್ಲರ ಮೇಲೆ ಅಲ್ಲಾಹನ ಶಾಂತಿ ಮತ್ತು ಕೃಪೆಯಿರಲಿ. ಅಲ್ಲಾಹನಿಗೆ ಸರ್ವಸ್ತುತಿ. ಅವನ ಅನುಗ್ರಹದಿಂದಲೇ ಸತ್ಕರ್ಮಗಳು ಪೂರ್ಣವಾಗುತ್ತವೆ.
ಇದು ಈ ಕೃತಿಯ ಸಮಾಪ್ತಿಯಾಗಿದೆ. ಇದನ್ನು ಬರೆದವರು ಅಲ್ಲಾಹನ ಆಶ್ರಯವನ್ನು ಅತ್ಯಧಿಕವಾಗಿ ಬೇಡುವ
ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್
ಶುಕ್ರವಾರ ಪೂರ್ವಾಹ್ನ
ಹಿಜರಿ ಶಕೆ 14 ಶಅಬಾನ್ 1392
***
ಪರಿವಿಡಿ
ಅಧ್ಯಾಯ ಒಂದು: ಋತುಸ್ರಾವದ ಅರ್ಥ ಮತ್ತು ಅದರ ಯುಕ್ತಿ 6
ಅಧ್ಯಾಯ ಎರಡು: ಋತುಸ್ರಾವದ ಕಾಲ ಮತ್ತು ಅವಧಿ 8
ಅಧ್ಯಾಯ ಮೂರು: ಋತುಸ್ರಾವದ ಸಮಯದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳು: 25
ಅಧ್ಯಾಯ ನಾಲ್ಕು: ಋತುಸ್ರಾವದ ನಿಯಮಗಳು 34
ಅಧ್ಯಾಯ ಐದು: ರಕ್ತಸ್ರಾವ ಮತ್ತು ಅದರ ನಿಯಮಗಳು 67
ರಕ್ತಸ್ರಾವದ ಸಂದರ್ಭಗಳು: 69
ರಕ್ತಸ್ರಾವವಿರುವ ಮಹಿಳೆಯನ್ನು ಹೋಲುವ ಮಹಿಳೆಯ ಸ್ಥಿತಿ: 77
ರಕ್ತಸ್ರಾವದ ನಿಯಮಗಳು: 80
ಅಧ್ಯಾಯ ಆರು: ಹೆರಿಗೆಸ್ರಾವ ಮತ್ತು ಅದರ ನಿಯಮಗಳು. 84
ಹೆರಿಗೆಸ್ರಾವದ ನಿಯಮಗಳು: 87
ಅಧ್ಯಾಯ ಏಳು: ಋತುಸ್ರಾವವನ್ನು ನಿಲ್ಲಿಸುವ ಅಥವಾ ಆರಂಭಿಸುವ ಔಷಧಿಗಳನ್ನು ಮತ್ತು ಗರ್ಭವನ್ನು ನಿಲ್ಲಿಸುವ ಅಥವಾ ಗರ್ಭಪಾತಕ್ಕೆ ಕಾರಣವಾಗುವ ಔಷಧಿಗಳನ್ನು ಸೇವಿಸುವುದು. 94
***
ಇದನ್ನು ಬುಖಾರಿ, ಕಿತಾಬುಲ್-ಹೈದ್, ಬಾಬ್ ತಖ್ದಿಲ್-ಹಾಇದ ಅಲ್-ಮನಾಸಿಕ ಕುಲ್ಲಹಾ ಇಲ್ಲಾ ಅತ್ತವಾಫ ಬಿಲ್-ಬೈತ್, ಸಂಖ್ಯೆ (305), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಬಯಾನು ವುಜೂಹಿಲ್-ಇಹ್ರಾಮ್, ಸಂಖ್ಯೆ (1211) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್-ಉಮ್ರಾ, ಬಾಬ್ ಅಜ್ರುಲ್-ಉಮ್ರತಿ ಅಲಾ ಖದ್ರಿನ್ನಸಬ್, ಸಂಖ್ಯೆ (1662), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಬಯಾನಿ ವುಜೂಹಿಲ್-ಇಹ್ರಾಮ್, ಸಂಖ್ಯೆ (1211) ರಲ್ಲಿ ವರದಿ ಮಾಡಿದ್ದಾರೆ.
'ಶಾಸನಕರ್ತನು ನಿಯಮಗಳನ್ನು ಸಂಬಂಧಿಸಿರುವ ಹೆಸರುಗಳು' ಎಂಬ ಗ್ರಂಥ (ಪುಟ:35)
ಮೇಲಿನ ಅದೇ ಕೊಂಡಿಯನ್ನು ನೋಡಿ (ಪುಟ:36).
ಮೇಲಿನ ಅದೇ ಕೊಂಡಿಯನ್ನು ನೋಡಿ (ಪುಟ:38).
ಬುಖಾರಿ: ಕಿತಾಬುಲ್ ಈಮಾನ್, ಬಾಬ್ ಅದ್ದೀನು ಯುಸ್ರುನ್, ಸಂಖ್ಯೆ (39), ಅಬೂ ಹುರೈರಾ ರಾದಿಯಲ್ಲಾಹು ಅನ್ಹು ರವರಿಂದ.
ಇದನ್ನು ಬುಖಾರಿ ‘ಕಿತಾಬುಲ್-ಮನಾಕಿಬ್’, ‘ಬಾಬ್ ಸಿಫತು ನ್ನಬೀ ﷺ’, ಹದೀಸ್ ಸಂಖ್ಯೆ (3560) ರಲ್ಲಿ, ಮತ್ತು ಮುಸ್ಲಿಂ ‘ಕಿತಾಬುಲ್-ಫದಾಇಲ್’, ‘ಬಾಬ್ ಮುಬಾಅದತಿಹಿ ﷺ ಲಿಲ್-ಆಸಾಮ್’, ಹದೀಸ್ ಸಂಖ್ಯೆ (77/2327) ರಲ್ಲಿ ವರದಿ ಮಾಡಿದ್ದಾರೆ.
ಮಜ್ಮೂಉಲ್-ಫತಾವಾ (238/19-239).
'ಅಲ್-ಔಸತ್' (356/2).
ನೋಡಿ: ಅಲ್-ಮುಗ್ನಿ (1/405).
ಅಲ್-ಮರ್ವಝೀ ರವರ ಇಖ್ತಿಲಾಫ್ ಅಲ್-ಫುಖಹಾ (ಸ: 193), ಅಲ್-ಅವ್ಸತ್ (2/239).
ಅಲ್-ಮುದವ್ವನ (1/155), ಅನ್ನವಾದಿರ್ ವಝ್ಝಿಯಾದಾತ್ (1/136).
ಮಜ್ಮೂಉಲ್-ಫತಾವಾ (238/19-239).
ಅಲ್-ಉಮ್ (82/1).
ಅಲ್-ಮುಘ್ನೀ (396/1)
ಇದನ್ನು ಅಬೂದಾವೂದ್, ಕಿತಾಬುತ್-ತಹಾರಃ, ಬಾಬ್ ಫಿಲ್-ಮರ್ಅತಿ ತರಾಲ್-ಕುದ್ರತ ವಸ್-ಸುಫ್ರತ ಬಅದತ್-ತುಹ್ರ್, ಸಂಖ್ಯೆ (307) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುಲ್ ಹೈದ್, ಬಾಬು 'ಋತುಚಕ್ರದ ದಿನಗಳಲ್ಲದೆ ಹಳದಿ ಮತ್ತು ಕಂದು ಬಣ್ಣದ ಸ್ರಾವ', ಸಂಖ್ಯೆ (326) ರಲ್ಲಿ ವರದಿ ಮಾಡಿದ್ದಾರೆ.
ಫತ್ಹ್ ಅಲ್-ಬಾರಿ (1/426).
ಸಹೀಹುಲ್ ಬುಖಾರಿ (1/ 71).
ಬುಖಾರಿಯವರು ಕಿತಾಬುಲ್ ಹೈದ್, ಬಾಬು ಇಕ್ಬಾಲಿಲ್ ಮಹೀದಿ ವ ಇದ್ಬಾರಿಹಿ ಎಂಬಲ್ಲಿ, ಹದೀಸ್ ಸಂಖ್ಯೆ (320) ಕ್ಕಿಂತ ಮೊದಲು ಅಡಿಟಿಪ್ಪಣೆಯಲ್ಲಿ ಉಲ್ಲೇಖಿಸಿದ್ದಾರೆ.
ಮೂಲ (19/2-20)
ಅಲ್-ಇನ್ಸಾಫ್‌ನಲ್ಲಿ ಅವರಿಂದ ವರದಿ.
ಅಲ್-ಉಮ್(1/ 83-84)
ಅಲ್-ಮುಘ್ನೀ(226/1)
ಅಲ್-ಮುಘ್ನೀ (257/1).
ಇದನ್ನು ಬುಖಾರಿ ‘ಕಿತಾಬ್ ಮವಾಕೀತು ಸ್ಸಲಾತ್’, ‘ಬಾಬ್ ಮನ್ ಅದ್ರಕ ಮಿನ ಸ್ಸಲಾತಿ ರಕ್’ಅತನ್’, ಹದೀಸ್ ಸಂಖ್ಯೆ (580) ರಲ್ಲಿ, ಮತ್ತು ಮುಸ್ಲಿಂ ‘ಕಿತಾಬುಲ್-ಮಸಾಜಿದ್ ವ ಮವಾದಿ’ಇ ಸ್ಸಲಾತ್’, ‘ಬಾಬ್ ಮನ್ ಅದ್ರಕ ರಕ್’ಅತನ್ ಮಿನ ಸ್ಸಲಾತಿ ಫಕದ್ ಅದ್ರಕ ತಿಲ್ಕ ಸ್ಸಲಾತ್’, ಹದೀಸ್ ಸಂಖ್ಯೆ (607) ರಲ್ಲಿ ಅಬೂ ಹುರೈರಾ ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ‘ಕಿತಾಬು ಮವಾಕೀತಿ ಸ್ಸಲಾತ್’, ‘ಬಾಬ್ ಮನ್ ಅದ್ರಕ ಮಿನಲ್-ಫಜ್ರಿ ರಕ್'ಅತನ್’, ಹದೀಸ್ ಸಂಖ್ಯೆ (579) ರಲ್ಲಿ, ಮತ್ತು ಮುಸ್ಲಿಂ ‘ಕಿತಾಬುಲ್-ಮಸಾಜಿದ್ ವ ಮವಾದಿ’ಇ ಸ್ಸಲಾತ್’, ‘ಬಾಬ್ ಮನ್ ಅದ್ರಕ ರಕ್’ಅತನ್ ಫಕದ್ ಅದ್ರಕ ತಿಲ್ಕ ಸ್ಸಲಾತ್’, ಹದೀಸ್ ಸಂಖ್ಯೆ (608) ರಲ್ಲಿ ಅಬೂ ಹುರೈರಾ ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಅಲ್-ಮಜ್ಮೂಅ' ಶರ್ಹ್ ಅಲ್-ಮುಹಧ್ದಬ್ (3/ 70).
ಇದನ್ನು ಬುಖಾರಿ, ಕಿತಾಬುಲ್-ಹೈದ್, ಬಾಬ್ ಕಿರಾಅತಿ ರ್ರಜುಲಿ ಫೀ ಹಿಜ್ರಿಮ್ರಅತಿಹಿ ವಹಿಯ ಹಾಇದ, ಸಂಖ್ಯೆ (297) ರಲ್ಲಿ, ಮತ್ತು ಮುಸ್ಲಿಂ, ಕಿತಾಬುಲ್-ಹೈದ್, ಬಾಬ್ ಇತ್ತಿಕಾಇ ರ್ರಜುಲಿ ಫೀ ಹಿಜ್ರಿ ಝೌಜತಿಹಿ ವಹಿಯ ಹಾಇದುನ್ ವಕಿರಾಅತಿಲ್-ಕುರಾನ್, ಸಂಖ್ಯೆ (301) ರಲ್ಲಿ ಆಯಿಶಾ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ‘ಕಿತಾಬುಲ್-ಹೈದ್’, ‘ಬಾಬ್ ಶುಹೂದಿಲ್-ಹಾಇದಿಲ್-ಈದೈನಿ ವ ದಅವತಿಲ್-ಮುಸ್ಲಿಮೀನ್, ವ ಯಅ್ತಝಿಲ್ನಲ್-ಮುಸಲ್ಲಾ’, ಸಂಖ್ಯೆ (324) ರಲ್ಲಿ, ಮತ್ತು ಮುಸ್ಲಿಂ, ‘ಕಿತಾಬ್ ಸಲಾತಿಲ್-ಈದೈನ್’, ‘ಬಾಬ್ ಝಿಕ್ರಿ ಇಬಾಹತಿ ಖುರೂಜಿ ನ್ನಿಸಾಇ ಫಿಲ್-ಈದೈನಿ ಇಲಲ್-ಮುಸಲ್ಲಾ ವ ಶುಹೂದಿಲ್-ಖುತ್ಬತಿ, ಮುಫಾರಿಕಾತಿನ್ ಲಿರ್ರಿಜಾಲ್’, ಸಂಖ್ಯೆ (890) ರಲ್ಲಿ ವರದಿ ಮಾಡಿದ್ದಾರೆ.
] ಅಲ್-ಮಜ್ಮೂ(2/ 357)
ಅಲ್-ಅವ್ಸತ್ (2/ 223).
ಫತ್ಹ್ ಅಲ್-ಬಾರಿ (1/ 408).
ನೋಡಿರಿ ಸಹೀಹ್ ಬುಖಾರಿ: ಕಿತಾಬುಲ್-ಹೈದ್, ಬಾಬ್: ಮುಟ್ಟಾದವಳು ಕಅಬಾಲಯದ ತವಾಫ್ ಹೊರತುಪಡಿಸಿ ಉಳಿದ ಎಲ್ಲಾ ಕರ್ಮಗಳನ್ನು ಪೂರೈಸುವುದು, ಮತ್ತು ಫತ್ಹುಲ್-ಬಾರಿ (1/ 407-408).
ಅಲ್-ಮಜ್ಮೂ (2/356).
ಫತ್ಹ್ ಅಲ್-ಬಾರಿ (1/408).
ಇದನ್ನು ಬುಖಾರಿಯವರು ಕಿತಾಬುಲ್ ಹೈದ್, ಬಾಬ್ ತಖ್ದಿಲ್ ಹಾಇದುಲ್ ಮನಾಸಿಕ ಕುಲ್ಲಹಾ ಇಲ್ಲತ್ತವಾಫ ಬಿಲ್ ಬೈತ್, ಹದೀಸ್ ಸಂಖ್ಯೆ (305) ಕ್ಕಿಂತ ಮೊದಲು ಅಡಿಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಹದೀಸನ್ನು ಇಮಾಮ್ ತಿರ್ಮಿಧಿ ರವರು ಅಬ್ವಾಬು ತ್ತಹಾರಃ, ಬಾಬು ಮಾ ಜಾಅ ಫಿಲ್-ಜುನುಬಿ ವಲ್-ಹಾಯಿಝಿ ಅನ್ನಹುಮಾ ಲಾ ಯಖ್ರಆನಿಲ್-ಕುರ್ಆನ್, ಸಂಖ್ಯೆ (131) ರಲ್ಲಿ ವರದಿ ಮಾಡಿದ್ದಾರೆ.
ನೋಡಿ: ಅಲ್-ಇಲಲು ಲಿತ್ತಿರ್ಮಿದಿ (ಪುಟ: 69), ಅಸ್-ಸುನನುಲ್ ಕುಬ್ರಾ ಲಿಲ್-ಬೈಹಖಿ (1/309), ಅಲ್-ಅಹ್ಕಾಮುಶ್ ಶರ್ಇಯ್ಯ ಲಿ ಇಬ್ನಿ ಅಬ್ದಿಲ್ ಹಖ್ (1/504), ಮತ್ತು ನಸ್ಬುರ್ ರಾಯ ಲಿಝ್ಝೈಲಈ (1/195).
ಮಜ್ಮೂಉಲ್-ಫತಾವಾ (26/ 191).
ಇದನ್ನು ಬುಖಾರಿ, ಕಿತಾಬುಲ್ ಹೈದ್, ಬಾಬ್ ಲಾ ತಕ್ದಿಲ್ ಹಾಇದುಸ್ಸಲಾತ್, ಸಂಖ್ಯೆ (321), ಮತ್ತು ಮುಸ್ಲಿಂ, ಕಿತಾಬುಲ್ ಹೈದ್, ಬಾಬ್ ವುಜೂಬಿ ಕದಾಇಸ್ಸೌಮಿ ಅಲಲ್ ಹಾಇದಿ ದೂನಸ್ಸಲಾತ್, ಸಂಖ್ಯೆ (335) ರಲ್ಲಿ ವರದಿ ಮಾಡಿದ್ದಾರೆ. ಪದಗಳು ಮುಸ್ಲಿಂ ಅವರದ್ದಾಗಿವೆ.
ಇದನ್ನು ಬುಖಾರಿ ರವರು ಕಿತಾಬುಲ್ ಇಲ್ಮ್, ‘ಜ್ಞಾನಾರ್ಜನೆಯಲ್ಲಿ ಲಜ್ಜೆ’ ಭಾಗದಲ್ಲಿ, ಸಂಖ್ಯೆ (130) ರಲ್ಲಿ ವರದಿ ಮಾಡಿದ್ದಾರೆ. ಮತ್ತು ಮುಸ್ಲಿಮ್ ರವರು ಕಿತಾಬುಲ್ ಹೈದ್, ‘ಮಹಿಳೆಯ ಮೇಲೆ ಸ್ನಾನ ಕಡ್ಡಾಯವಾಗುವಿಕೆ...’ ಭಾಗದಲ್ಲಿ, ಸಂಖ್ಯೆ (313) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬು ಸ್ಸೌಮ್, ಬಾಬ್ ಇಗತಿಸಾಲಿಸ್ಸಾಇಮ್, ಸಂಖ್ಯೆ (1931), ಮತ್ತು ಮುಸ್ಲಿಂ, ಕಿತಾಬು ಸ್ಸಿಯಾಮ್, ಬಾಬ್ ಸಿಹ್ಹತಿ ಸೌಮಿ ಮನ್ ತಲಅ ಅಲೈಹಿಲ್ ಫಜ್ರು ವ ಹುವ ಜುನುಬ್, ಸಂಖ್ಯೆ (1109) ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್-ಹೈದ್, ಬಾಬ್ ತಖ್ಝಿಲ್-ಹಾಇದ್ ಅಲ್-ಮನಾಸಿಕ ಕುಲ್ಲಹಾ ಇಲ್ಲಾ ತ್ತವಾಫ ಬಿಲ್-ಬೈತ್, ಸಂಖ್ಯೆ (305), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ಬಯಾನಿ ವುಜೂಹಿಲ್-ಇಹ್ರಾಮ್, ಸಂಖ್ಯೆ (1211) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ತವಾಫುಲ್-ವಿದಾಅ್, ಸಂಖ್ಯೆ (1755), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ತವಾಫಿಲ್-ವಿದಾಅ್ ವಸುಖೂತಿಹಿ ಅನಿಲ್-ಹಾಇದ, ಸಂಖ್ಯೆ (1328) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್-ಹಜ್, ಬಾಬ್ ಇಝಾ ಹಾಳತಿಲ್-ಮರ್‌ಅತು ಬಅ್‌ದ ಮಾ ಅಫಾಳತ್, ಸಂಖ್ಯೆ (1757), ಮತ್ತು ಮುಸ್ಲಿಂ, ಕಿತಾಬುಲ್-ಹಜ್, ಬಾಬ್ ವುಜೂಬು ತವಾಫಿಲ್-ವಿದಾಅ್, ಸಂಖ್ಯೆ (1211) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್-ಹೈದ್, ಬಾಬ್ ಶುಹೂದಿಲ್-ಹಾಇದಿಲ್-ಈದೈನಿ ವ ದಅವತಿಲ್-ಮುಸ್ಲಿಮೀನ, ವ ಯಅ್ತಝಿಲ್ನಲ್-ಮುಸಲ್ಲಾ, ಸಂಖ್ಯೆ (324), ಮತ್ತು ಮುಸ್ಲಿಂ, ಕಿತಾಬ್ ಸಲಾತಿಲ್-ಈದೈನ್, ಬಾಬ್ ಝಿಕ್ರಿ ಇಬಾಹತಿ ಖುರೂಜಿ ನ್ನಿಸಾಇ ಫಿಲ್-ಈದೈನಿ ಇಲಲ್-ಮುಸಲ್ಲಾ ವ ಶುಹೂದಿಲ್-ಖುತ್ಬತಿ, ಮುಫಾರಿಕಾತಿ ಲ್ಲಿರ್ರಿಜಾಲ್, ಸಂಖ್ಯೆ (890) ರಲ್ಲಿ ವರದಿ ಮಾಡಿದ್ದಾರೆ.
ಇಮಾಮ್ ಮುಸ್ಲಿಮ್, ಕಿತಾಬುಲ್ ಹೈದ್, ಋತುಮತಿಯು ತನ್ನ ಪತಿಯ ತಲೆಯನ್ನು ತೊಳೆಯುವುದರ ಅನುಮತಿ ಎಂಬ ಅಧ್ಯಾಯ, ಸಂಖ್ಯೆ (302) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುಲ್ ಹೈದ್, ಬಾಬು ಮುಬಾಶರತುಲ್ ಹಾಯಿದ್, ಸಂಖ್ಯೆ (301) ರಲ್ಲಿ ಮತ್ತು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಹೈದ್, ಬಾಬು ಮುಬಾಶರತುಲ್ ಹಾಯಿದ್ ಫೌಕಲ್ ಇಝಾರ್, ಸಂಖ್ಯೆ (293) ರಲ್ಲಿ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುತ್ತಲಾಖ್, ಸಂಖ್ಯೆ (5251), ಮತ್ತು ಮುಸ್ಲಿಂ, ಕಿತಾಬುತ್ತಲಾಖ್, ಬಾಬ್ ತಹ್ರೀಮಿ ತಲಾಖಿಲ್-ಹಾಇದಿ ಬಿಗೈರಿ ರಿದಾಹಾ, ವ ಅನ್ನಹು ಲೌ ಖಾಲಫ ವಕಅತ್ತಲಾಖು, ವ ಯು'ಮರು ಬಿರಜ್'ಅತಿಹಾ, ಸಂಖ್ಯೆ (1471), ಇಬ್ನ್ ಉಮರ್ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ: ಕಿತಾಬುತ್-ತಲಾಖ್, ಬಾಬ್ ಅಲ್-ಖುಲ್ಅ್ ವ ಕೈಫತ್-ತಲಾಖು ಫೀಹಿ, ಸಂಖ್ಯೆ (5273), ಇಬ್ನ್ ಅಬ್ಬಾಸ್ (ರ) ರಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ 'ಹೈದ್' ಅಧ್ಯಾಯದಲ್ಲಿ, 'ಮುಟ್ಟಿನ ಆರಂಭ ಮತ್ತು ಅದರ ಅಂತ್ಯ' ಎಂಬ ಭಾಗದಲ್ಲಿ, ಸಂಖ್ಯೆ (320), ಮತ್ತು ಮುಸ್ಲಿಮ್ 'ಹೈದ್' ಅಧ್ಯಾಯದಲ್ಲಿ, 'ಮುಸ್ತಿಹಾದಃ, ಅವಳ ಸ್ನಾನ ಮತ್ತು ಅವಳ ನಮಾಝ್' ಎಂಬ ಭಾಗದಲ್ಲಿ, ಸಂಖ್ಯೆ (333), ಆಯಿಷಾ (ರದಿಯಲ್ಲಾಹು ಅನ್ಹಾ) ಅವರಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ (ರಹಿಮಹುಲ್ಲಾಹ್) ತಮ್ಮ 'ಹೈದ್' ಅಧ್ಯಾಯದಲ್ಲಿ, 'ಮುಟ್ಟಾದವಳ ಸ್ನಾನ' ಎಂಬ ಭಾಗದಲ್ಲಿ (ಹದೀಸ್ ನಂ. 315), ಮತ್ತು ಮುಸ್ಲಿಮ್ (ರಹಿಮಹುಲ್ಲಾಹ್) ತಮ್ಮ 'ಹೈದ್' ಅಧ್ಯಾಯದಲ್ಲಿ, 'ಮುಟ್ಟಿನಿಂದ ಸ್ನಾನ ಮಾಡಿದವಳು ರಕ್ತದ ಸ್ಥಳದಲ್ಲಿ ಕಸ್ತೂರಿ ಲೇಪಿತ ಬಟ್ಟೆಯ ತುಂಡನ್ನು ಬಳಸುವುದು ಶ್ರೇಷ್ಠ' ಎಂಬ ಭಾಗದಲ್ಲಿ (ಹದೀಸ್ ನಂ. 332), ಆಯಿಷಾ (ರದಿಯಲ್ಲಾಹು ಅನ್ಹಾ) ಅವರಿಂದ ವರದಿ ಮಾಡಿದ್ದಾರೆ.
ಇದನ್ನು ಮುಸ್ಲಿಮ್ ‘ಕಿತಾಬುಲ್ ಹೈದ್’, ‘ಸ್ನಾನ ಮಾಡುವವಳ ಜಡೆಗಳ ತೀರ್ಪು’ ಎಂಬ ಭಾಗದಲ್ಲಿ, ಹದೀಸ್ ಸಂಖ್ಯೆ (330), ಉಮ್ಮು ಸಲಮಾ (ರದಿಯಲ್ಲಾಹು ಅನ್ಹಾ) ಅವರಿಂದ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುಲ್ ವುದೂ, ಬಾಬ್ ಗುಸ್ಲಿ ದ್ದಮ್, ಸಂಖ್ಯೆ (228), ಮತ್ತು ಮುಸ್ಲಿಂ, ಕಿತಾಬುಲ್ ಹೈದ್, ಬಾಬ್ ಅಲ್-ಮುಸ್ತಹಾದತಿ ವಗುಸ್ಲಿಹಾ ವಸಲಾತಿಹಾ, ಸಂಖ್ಯೆ (333), ಆಯಿಷಾ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಅಹ್ಮದ್ (6/349), ಅಬೂದಾವೂದ್ ತಮ್ಮ ಕಿತಾಬುತ್ತಹಾರಃದಲ್ಲಿ, ಭಾಗ: ಋತುಸ್ರಾವ ಆರಂಭವಾದರೆ ನಮಾಝನ್ನು ತ್ಯಜಿಸಬೇಕು, ಸಂಖ್ಯೆ (287), ಮತ್ತು ತಿರ್ಮಿದಿ ಅಬ್ವಾಬುತ್ ತಹಾರಃದಲ್ಲಿ, ಭಾಗ: ಇಸ್ತಿಹಾದಃ ಇರುವ ಸ್ತ್ರೀ ಒಂದೇ ಸ್ನಾನದಿಂದ ಎರಡು ನಮಾಝ್‌ಗಳನ್ನು ಒಟ್ಟುಗೂಡಿಸುವುದು, ಸಂಖ್ಯೆ (128) ರಲ್ಲಿ ಹಮ್ನ ಬಿಂತ್ ಜಹ್ಶ್ (ರ) ರವರಿಂದ ವರದಿ ಮಾಡಿದ್ದಾರೆ.
ಸುನನ್ ಅತ್ತಿರ್ಮಿದಿ: ಅಬ್ವಾಬುತ್ತಹಾರಃ, ಅಧ್ಯಾಯ: ಮುಸ್ತಹಾದಃಳು ಎರಡು ನಮಾಝ್‌ಗಳನ್ನು ಒಂದೇ ಗುಸ್ಲ್‌ನೊಂದಿಗೆ ಒಟ್ಟುಗೂಡಿಸುವುದು, ಹದೀಸ್ ಸಂಖ್ಯೆ (128)ರ ನಂತರ.
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುಲ್ ಹೈದ್, ಬಾಬುಲ್ ಹೈದ್, ಹಾಗೂ ಋತುಚಕ್ರ ಮತ್ತು ಗರ್ಭಧಾರಣೆಯಲ್ಲಿ ಮಹಿಳೆಯರನ್ನು ನಂಬುವುದರ ಕುರಿತು, ಸಂಖ್ಯೆ (325) ರಲ್ಲಿ, ಆಯಿಷಾ (ರಝಿಯಲ್ಲಾಹು ಅನ್ಹಾ) ರವರಿಂದ ವರದಿ ಮಾಡಿದ್ದಾರೆ.
ಮುಸ್ಲಿಂ: ಕಿತಾಬುಲ್ ಹೈದ್, ಅಧ್ಯಾಯ ಮುಸ್ತಹಾದಃ, ಅವಳ ಸ್ನಾನ ಮತ್ತು ನಮಾಝ್, ಸಂಖ್ಯೆ (334)ರಲ್ಲಿ, ಇದನ್ನು ಆಯಿಷಾ (ರ) ರಿಂದ ವರದಿ ಮಾಡಿದ್ದಾರೆ.
ಅಬೂ ದಾವೂದ್‌ರವರು ಕಿತಾಬುತ್ತಹಾರಃದ ಅಧ್ಯಾಯ ‘ಋತುಸ್ರಾವ ಆರಂಭವಾದರೆ ನಮಾಝ್ ತೊರೆಯುವುದು’ ಸಂಖ್ಯೆ (286) ರಲ್ಲಿ, ನಸಾಈಯವರು ಕಿತಾಬುತ್ತಹಾರಃದ ಅಧ್ಯಾಯ ‘ನಿರಂತರ ರಕ್ತಸ್ರಾವ ಆರಂಭವಾಗುವ ಮುನ್ನ ತನ್ನ ಋತುಸ್ರಾವದ ದಿನಗಳನ್ನು ತಿಳಿದಿರುವ ಮಹಿಳೆಯ ಕುರಿತು’ ಸಂಖ್ಯೆ (211) ರಲ್ಲಿ, ಇಬ್ನು ಮಾಜಃರವರು ಕಿತಾಬುತ್ತಹಾರಃ ವ ಸುನನಿಹಾದ ಅಧ್ಯಾಯ ‘ನಿರಂತರ ರಕ್ತಸ್ರಾವ ಆರಂಭವಾಗುವ ಮುನ್ನ ತನ್ನ ಋತುಸ್ರಾವದ ದಿನಗಳನ್ನು ತಿಳಿದಿರುವ ಮಹಿಳೆಯ ಕುರಿತು’ ಸಂಖ್ಯೆ (620) ರಲ್ಲಿ, ಇಬ್ನ್ ಹಿಬ್ಬಾನ್‌ರವರು ತಮ್ಮ ಸಹೀಹ್‌ನಲ್ಲಿ (1348) ಮತ್ತು ಹಾಕಿಮ್‌ರವರು ತಮ್ಮ ಮುಸ್ತದ್ರಕ್‌ನಲ್ಲಿ (618) ಆಯಿಶ(ರ)ರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಅಹ್ಮದ್ (6/439), ಅಬೂದಾವೂದ್: ಕಿತಾಬುತ್ತಹಾರಃ, ಭಾಗ: ಋತುಸ್ರಾವ ಆರಂಭವಾದರೆ ನಮಾಝನ್ನು ತ್ಯಜಿಸುವುದು, ಸಂಖ್ಯೆ (287), ಮತ್ತು ತಿರ್ಮಿದಿ: ಅಬ್ವಾಬುತ್ತಹಾರಃ, ಭಾಗ: ಇಸ್ತಿಹಾದಃಕ್ಕೊಳಗಾದ ಮಹಿಳೆ ಒಂದೇ ಸ್ನಾನದಿಂದ ಎರಡು ನಮಾಝ್‌ಗಳನ್ನು ಒಟ್ಟುಗೂಡಿಸಿ ನಿರ್ವಹಿಸುವುದು, ಸಂಖ್ಯೆ (128) ರಲ್ಲಿ ಹಮ್ನ ಬಿಂತ್ ಜಹ್ಶ್ (ರ) ರವರ ಹದೀಸನ್ನು ಉಲ್ಲೇಖಿಸಿದ್ದಾರೆ.
ಸುನನ್ ಅತ್ತಿರ್ಮಿದಿ: ಅಬ್ವಾಬುತ್ತಹಾರಃ, ಬಾಬ್: 'ನಿರಂತರ ರಕ್ತಸ್ರಾವವಿರುವ ಸ್ತ್ರೀಯು (ಮುಸ್ತಹಾದಃ) ಒಂದೇ ಗುಸ್ಲ್‌ನೊಂದಿಗೆ ಎರಡು ನಮಾಝ್‌ಗಳನ್ನು ಜಂಟಿಗೊಳಿಸುವುದು', ಹದೀಸ್ ಸಂಖ್ಯೆ (128)ರ ನಂತರ.
ಇದನ್ನು ಬುಖಾರಿ, ಕಿತಾಬುಲ್ ವುದೂ, ಬಾಬ್ ಗುಸ್ಲಿದ್ ದಮ್, ಸಂಖ್ಯೆ (228), ಮತ್ತು ಮುಸ್ಲಿಂ, ಕಿತಾಬುಲ್ ಹೈದ್, ಬಾಬ್ ಅಲ್-ಮುಸ್ತಹಾದತಿ ವ ಗುಸ್ಲಿಹಾ ವ ಸಲಾತಿಹಾ, ಸಂಖ್ಯೆ (333), ಆಯಿಷಾ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಅಹ್ಮದ್ (6/204), ಮತ್ತು ಇಬ್ನು ಮಾಜಃ, ಕಿತಾಬುತ್ತಹಾರಃ ವಸುನನಿಹಾ ದ, ‘ರಕ್ತಸ್ರಾವವು ನಿರಂತರವಾಗುವ ಮೊದಲು ತನ್ನ ಋತುಸ್ರಾವದ ದಿನಗಳನ್ನು ಎಣಿಸಿದ ಮಹಿಳೆಯ ಕುರಿತು’ ಎಂಬ ಅಧ್ಯಾಯದಲ್ಲಿ, ಸಂಖ್ಯೆ (624) ಯಲ್ಲಿ, ಆಯಿಷಾ(ರ) ರವರ ಹದೀಸ್'ನಿಂದ ವರದಿ ಮಾಡಿದ್ದಾರೆ.
ಅಲ್-ಮುಗ್ನೀ (252/1-253).
ಕಶ್ಶಾಫ್ ಅಲ್-ಕಿನಾ (219/1)
ಅಲ್ ಮುಗ್ನಿ (253/1).
ಅಲ್-ಮುಗ್ನಿ (253/1).
ಅಲ್-ಮುಗ್ನಿ (2/252). ಉಸ್ಮಾನ್ ಬಿನ್ ಅಬಿಲ್ ಆಸ್ ರವರ ಅಥರ್ ಅನ್ನು ಅಬ್ದುರ್ರಝ್ಝಾಕ್ ಅಲ್-ಮುಸನ್ನಫ್‌ನಲ್ಲಿ (1202), ಇಬ್ನು ಅಬೀ ಶೈಬಾ ಅಲ್-ಮುಸನ್ನಫ್‌ನಲ್ಲಿ (17450), ಅದ್ದಾರಿಮಿ ಅಸ್-ಸುನನ್‌ನಲ್ಲಿ (990) ಮತ್ತು ಇಬ್ನುಲ್ ಜಾರೂದ್ ಅಲ್-ಮುಂತಖಾದಲ್ಲಿ (118) ವರದಿ ಮಾಡಿದ್ದಾರೆ.
ಇದನ್ನು ಬುಖಾರಿ, ಕಿತಾಬುನ್ನಿಕಾಹ್, ಬಾಬುಲ್-ಅಝ್ಲ್, ಹದೀಸ್ ಸಂಖ್ಯೆ (5209), ಮತ್ತು ಮುಸ್ಲಿಂ, ಕಿತಾಬುನ್ನಿಕಾಹ್, ಬಾಬ್ ಹುಕ್ಮಿಲ್-ಅಝ್ಲ್, ಹದೀಸ್ ಸಂಖ್ಯೆ (1440), ಜಾಬಿರ್ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.
ಅಲ್-ಇನ್ಸಾಫ್ (556/2).
ಋತುಸ್ರಾವದಲ್ಲಿ ಗೊಂದಲಕ್ಕೊಳಗಾದ ಮಹಿಳೆಯ ನಿಯಮಗಳು, ಅದ್ದಾರಿಮಿ (ಪು: 17).