ಪ್ರವಾದಿಯವರ ನಮಾಝ್ ವಿಧಾನ (ಕನ್ನಡ)

'ಪ್ರವಾದಿ ﷺ ರವರ ನಮಾಝ್ ವಿಧಾನ' ಎಂಬ ಈ ಪುಸ್ತಕದಲ್ಲಿ, ಗೌರವಾನ್ವಿತ ವಿದ್ವಾಂಸರಾದ ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರು ಪ್ರವಾದಿ ﷺ ರವರ ನಮಾಝಿನ ಸ್ವರೂಪವನ್ನು ಅಧಿಕೃತ ಆಧಾರಗಳನ್ನು ಅವಲಂಬಿಸಿ, ಮುಸ್ಲಿಮರಿಗೆ ಅವರ ನಮಾಝಿನಲ್ಲಿ ಮಾರ್ಗದರ್ಶಿಯಾಗುವುದಕ್ಕಾಗಿ ಸರಳ ಶೈಲಿ ಮತ್ತು ನಿಖರವಾದ ವಿಧಾನದೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದರಲ್ಲಿ ಅವರು ವುದೂವಿನಿಂದ ಹಿಡಿದು ಸಲಾಮ್ ಹೇಳುವವರೆಗಿನ ನಮಾಝಿನ ಸ್ತಂಭಗಳು (ಅರ್ಕಾನ್), ಸುನ್ನತ್‌ಗಳು ಮತ್ತು ಅದರ ಸಂಪೂರ್ಣ ಸ್ವರೂಪವನ್ನು ಪುರಾವೆ ಮತ್ತು ವಿವರಣೆಯೊಂದಿಗೆ ವಿವರಿಸಿದ್ದಾರೆ. ಈ ಮೂಲಕ, ಅತ್ಯಂತ ಶ್ರೇಷ್ಠವಾದ ಈ ಆರಾಧನೆಯಲ್ಲಿ ಪ್ರವಾದಿ ﷺ ರವರನ್ನು ಸಂಪೂರ್ಣವಾಗಿ ಅನುಸರಿಸಲು ಕರೆ ನೀಡಿದ್ದಾರೆ.

  • earth ಭಾಷೆ
    (ಕನ್ನಡ)
  • earth ಲೇಖಕರು:
    الشيخ عبد العزيز بن باز

ಇತರೆ ಅನುವಾದಗಳು 51

PHPWord

 

 

 

كَيْفِيَّةُ صَلَاةِ النَّبِيِّ صَلَّى اللهُ عَلَيْهِ وَسَلَّمَ

 

ಪ್ರವಾದಿಯವರ ನಮಾಝ್ ವಿಧಾನ

 

 

لِفَضِيلَةِ الشَّيْخِ العَلَّامَةِ

عَبْدِ العَزِيزِ بْنِ عَبْدِ اللَّهِ بْنِ بَازٍ

غَفَرَ اللَّهُ لَهُ وَلِوَالِدَيْهِ وَلِلْمُسْلِمِينَ

 

ಗೌರವಾನ್ವಿತ ಶೈಖ್

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

 

بِسْمِ اللهِ الرَّحمَنِ الرَّحِيمِ

್ರವಾದಿಯವರ ನಮಾಝ್ ವಿಧಾನ

ಗೌರವಾನ್ವಿತ ಶೈಖ್

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ

ಸರ್ವಸ್ತುತಿಗಳು ಅಲ್ಲಾಹುವಿಗೆ ಮಾತ್ರ ಮೀಸಲು. ಅವನ ದಾಸ ಮತ್ತು ಸಂದೇಶವಾಹಕರಾದ ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೂ, ಅವರ ಕುಟುಂಬ ಹಾಗೂ ಸಹಾಬಿಗಳ ಮೇಲೂ (ಅಲ್ಲಾಹುವಿನ) ಅನುಗ್ರಹ ಮತ್ತು ಶಾಂತಿಯು ಇರಲಿ. ಮುಂದುವರಿದು ಹೇಳುವುದೇನೆಂದರೆ:

ಇವು ಪ್ರವಾದಿ(ಸ) ರವರ ನಮಾಝಿನ ಸ್ವರೂಪವನ್ನು ವಿವರಿಸುವ ಸಂಕ್ಷಿಪ್ತ ಮಾತುಗಳಾಗಿವೆ. ಇದನ್ನು ಓದುವ ಪ್ರತಿಯೊಬ್ಬ ಮುಸ್ಲಿಂ ಪುರುಷ ಮತ್ತು ಮಹಿಳೆ ಇದರಲ್ಲಿ ಅವರನ್ನು ಅನುಸರಿಸಲು ಶ್ರಮಿಸಬೇಕೆಂಬ ಉದ್ದೇಶದಿಂದ ನಾನು ಇದನ್ನು ಪ್ರಸ್ತುತಪಡಿಸುತ್ತಿದ್ದೇನೆ. ಏಕೆಂದರೆ, ಪ್ರವಾದಿ(ಸ) ರವರು ಹೇಳಿದರು:

(صَلُّوا كَمَا رَأَيْتُمُونِي أُصَلِّي).

"ನಾನು ನಮಾಝ್ ಮಾಡುವುದನ್ನು ನೋಡಿದಂತೆಯೇ ನೀವು ನಮಾಝ್ ಮಾಡಿರಿ."1 ಇಗೋ ಓದುಗರಿಗೆ ನಮಾಝ್‌ನ ಆ ವಿವರಣೆಯನ್ನು ನೀಡುತ್ತಿದ್ದೇನೆ:

1. ಸರಿಯಾಗಿ ವುದೂ ನಿರ್ವಹಿಸುವುದು: ಅಂದರೆ, ಅಲ್ಲಾಹು ಆಜ್ಞಾಪಿಸಿದಂತೆ ವುದೂ ಮಾಡುವುದು. ಏಕೆಂದರೆ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلَّذِينَ ءَامَنُوٓاْ إِذَا قُمۡتُمۡ إِلَى ٱلصَّلَوٰةِ فَٱغۡسِلُواْ وُجُوهَكُمۡ وَأَيۡدِيَكُمۡ إِلَى ٱلۡمَرَافِقِ وَٱمۡسَحُواْ بِرُءُوسِكُمۡ وَأَرۡجُلَكُمۡ إِلَى ٱلۡكَعۡبَيۡنِ...﴾.

"ಓ ಸತ್ಯವಿಶ್ವಾಸಿಗಳೇ, ನೀವು ನಮಾಝಿಗೆ ನಿಂತಾಗ ನಿಮ್ಮ ಮುಖಗಳನ್ನು ತೊಳೆಯಿರಿ, ಮತ್ತು ಮೊಣಕೈಗಳವರೆಗೆ ನಿಮ್ಮ ಕೈಗಳನ್ನು (ತೊಳೆಯಿರಿ), ಮತ್ತು ನಿಮ್ಮ ತಲೆಗಳನ್ನು ಸವರಿರಿ, ಹಾಗೂ ಹರಡುಗಂಟುಗಳವರೆಗೆ ನಿಮ್ಮ ಕಾಲುಗಳನ್ನು (ತೊಳೆಯಿರಿ)." [ಅಲ್-ಮಾಇದ:6]. ಎಂಬ ಸೂಕ್ತಿ.

ಪ್ರವಾದಿ(ಸ) ಯವರು ಹೇಳಿದರು:

َا تُقْبَلُ صَلَاةٌ بِغَيْرِ طُهُورٍ).

"ಶುದ್ಧಿ(ವುದೂ) ಇಲ್ಲದಿದ್ದರೆ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."2.

ಸರಿಯಾಗಿ ನಮಾಝ್ ಮಾಡದ ವ್ಯಕ್ತಿಗೆ ಪ್ರವಾದಿ(ಸ) ಯವರು ಹೇಳಿದರು:

(‌إِذَا ‌قُمْتَ ‌إِلَى ‌الصَّلَاةِ، ‌فَأَسْبِغِ ‌الْوُضُوءَ).

"ನೀನು ನಮಾಝಿಗೆ ನಿಂತರೆ, ಸರಿಯಾಗಿ ವುದೂ ನಿರ್ವಹಿಸು."3.

2. ನಮಾಝ್ ಮಾಡುವವನು ಖಿಬ್ಲಾದ (ಕಅಬಾ) ಕಡೆಗೆ ತಿರುಗಬೇಕು. ಅವನು ಎಲ್ಲೇ ನಮಾಝ್ ಮಾಡುತ್ತಿದ್ದರೂ ತನ್ನ ಸಂಪೂರ್ಣ ದೇಹದೊಂದಿಗೆ ಖಿಬ್ಲಾದ ಕಡೆಗೆ ತಿರುಗಬೇಕು. ತನ್ನ ಹೃದಯದಲ್ಲಿ ತಾನು ನಿರ್ವಹಿಸಲು ಬಯಸುವ ಫರ್ಝ್ (ಕಡ್ಡಾಯ) ಅಥವಾ ನಫಿಲ್ (ಐಚ್ಛಿಕ) ನಮಾಝಿನ ಸಂಕಲ್ಪ(ನಿಯ್ಯತ್) ಮಾಡಬೇಕು. ನಿಯ್ಯತ್ ಅನ್ನು ನಾಲಿಗೆಯಿಂದ ಉಚ್ಚರಿಸಬಾರದು. ಏಕೆಂದರೆ ನಾಲಿಗೆಯಿಂದ ಉಚ್ಚರಿಸುವುದು ನಿಯಮಗೊಳಿಸಲಾಗಿಲ್ಲ. ಬದಲಾಗಿ ಅದು ಬಿದ್ಅತ್ (ನೂತನಾಚಾರ) ಆಗಿದೆ. ಏಕೆಂದರೆ, ಪ್ರವಾದಿ(ಸ) ಯವರು ಅಥವಾ ಅವರ ಸಹಾಬಿಗಳು ನಿಯ್ಯತ್ ಅನ್ನು ಉಚ್ಚರಿಸುತ್ತಿರಲಿಲ್ಲ. ಇಮಾಮ್ ಆಗಿ ಅಥವಾ ಒಬ್ಬಂಟಿಯಾಗಿ ನಮಾಝ್ ಮಾಡುವವರು, ತಮ್ಮ ಮುಂದೆ ಒಂದು ಸುತ್ರವನ್ನು (ಅಡ್ಡ) ಇಟ್ಟುಕೊಂಡು, ಅದರ ಕಡೆಗೆ ನಮಾಝ್ ಮಾಡಬೇಕು. ಖಿಬ್ಲಾದ ಕಡೆಗೆ ಮುಖ ಮಾಡುವುದು ನಮಾಝಿನ ಶರ್ತ್ (ಷರತ್ತು) ಆಗಿದೆ. ಆದರೆ ವಿದ್ವಾಂಸರ ಗ್ರಂಥಗಳಲ್ಲಿ ಸ್ಪಷ್ಟಪಡಿಸಲಾದ ಕೆಲವು ವಿನಾಯಿತಿ ಪಡೆದ ಸಂದರ್ಭಗಳನ್ನು ಹೊರತುಪಡಿಸಿ.

3. ತಕ್ಬೀರತುಲ್ ಇಹ್ರಾಮ್ (ಆರಂಭಿಕ ತಕ್ಬೀರ್) ಪಠಿಸುವುದು: ನಂತರ "ಅಲ್ಲಾಹು ಅಕ್ಬರ್" (ಅರ್ಥ: ಅಲ್ಲಾಹು ಅತ್ಯಂತ ಮಹಾನನು) ಎಂದು ಹೇಳುತ್ತಾ, ದೃಷ್ಟಿಯನ್ನು ಸುಜೂದ್ ಮಾಡುವ ಸ್ಥಳದ ಕಡೆಗೆ ನೆಡಬೇಕು.

4. ತಕ್ಬೀರ್ ಹೇಳುವಾಗ ಕೈಗಳನ್ನು ಭುಜಗಳ ಮಟ್ಟಕ್ಕೆ ಅಥವಾ ಕಿವಿಗಳ ಹತ್ತಿರಕ್ಕೆ ಎತ್ತಬೇಕು.

5. ಕೈಗಳನ್ನು ಎದೆಯ ಮೇಲೆ ಇಡಬೇಕು: ಬಲಗೈಯನ್ನು ಎಡ ಅಂಗೈ, ಮಣಿಕಟ್ಟು ಮತ್ತು ಮುಂದೋಳಿನ ಮೇಲೆ ಇಡಬೇಕು. ಇದು ಪ್ರವಾದಿ(ಸ) ಯವರಿಂದ ದೃಢಪಟ್ಟಿದೆ.

6. ಪ್ರಾರಂಭಿಕ ಪ್ರಾರ್ಥನೆಯನ್ನು (ದುಆ ಅಲ್-ಇಸ್ತಿಫ್ತಾಹ್) ಪಠಿಸುವುದು ಸುನ್ನತ್ ಆಗಿದೆ. ಅದು ಹೀಗಿದೆ:

(اللَّهُمَّ بَاعِدْ بَيْنِي وبيْنَ خَطَايَايَ، كَمَا بَاعَدْتَ بيْنَ المَشْرِقِ والمَغْرِبِ، اللَّهُمَّ نَقِّنِي مِنَ الخَطَايَا كَمَا يُنَقَّى الثَّوْبُ الأبْيَضُ مِنَ الدَّنَسِ، اللَّهُمَّ اغْسِلْ خَطَايَايَ بالمَاءِ والثَّلْجِ والبَرَدِ).

"ಅಲ್ಲಾಹುಮ್ಮ ಬಾಇದ್ ಬೈನೀ ವ ಬೈನ ಖತಾಯಾಯ, ಕಮಾ ಬಾಅದ್‌ತ ಬೈನಲ್ ಮಶ್ರಿಖಿ ವಲ್ ಮಗ್ರಿಬ್. ಅಲ್ಲಾಹುಮ್ಮ ನಖ್ಖಿನೀ ಮಿನಲ್ ಖತಾಯಾ ಕಮಾ ಯುನಖ್ಖ ಸ್ಸೌಬುಲ್ ಅಬ್ಯದು ಮಿನ ದ್ದನಸ್, ಅಲ್ಲಾಹುಮ್ಮ ಗ್ಸಿಲ್ ಖತಾಯಾಯ ಬಿಲ್ ಮಾಇ ವಸ್ಸಲ್ಜಿ ವಲ್ ಬರದ್." (ಅರ್ಥ: ಓ ಅಲ್ಲಾಹ್, ಪೂರ್ವ ಮತ್ತು ಪಶ್ಚಿಮಗಳ ನಡುವೆ ನೀನು ಅಂತರವನ್ನುಂಟು ಮಾಡಿರುವಂತೆ, ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವನ್ನುಂಟು ಮಾಡು. ಓ ಅಲ್ಲಾಹ್, ಬಿಳಿ ಬಟ್ಟೆಯನ್ನು ಕೊಳೆಯಿಂದ ಶುದ್ಧಗೊಳಿಸುವಂತೆ ನನ್ನನ್ನು ಪಾಪಗಳಿಂದ ಶುದ್ಧಗೊಳಿಸು. ಓ ಅಲ್ಲಾಹ್, ನನ್ನ ಪಾಪಗಳನ್ನು ನೀರು, ಹಿಮ ಮತ್ತು ಆಲಿಕಲ್ಲುಗಳಿಂದ ತೊಳೆ.)4.

ನೀವು ಬಯಸಿದರೆ, ಇದರ ಬದಲಾಗಿ ಹೀಗೆ ಪಠಿಸಬಹುದು:

(سُبْحَانَكَ اللَّهُمَّ وبِحَمْدِكَ، وَتَبَارَكَ اسْمُكَ، وَتَعَالَى جَدُّكَ، ولَا إلَهَ غَيْرُكَ).

"ಸುಬ್'ಹಾನಕ ಲ್ಲಾಹುಮ್ಮ ವ ಬಿಹಮ್ದಿಕ, ವ ತಬಾರಕಸ್ಮುಕ, ವ ತಆಲಾ ಜದ್ದುಕ, ವ ಲಾ ಇಲಾಹ ಗೈರುಕ್." (ಅರ್ಥ: ಓ ಅಲ್ಲಾಹ್, ನಾನು ನಿನ್ನ ಸ್ತುತಿಗಳೊಂದಿಗೆ ನಿನ್ನ ಪರಿಶುದ್ಧಿಯನ್ನು ಸಾರುತ್ತೇನೆ. ನಿನ್ನ ಹೆಸರು ಅನುಗ್ರಹಪೂರ್ಣವಾಗಿದೆ, ನಿನ್ನ ಮಹತ್ವ ಉನ್ನತವಾಗಿದೆ ಮತ್ತು ನಿನ್ನ ಹೊರತು ಬೇರೆ ನೈಜ ಆರಾಧ್ಯರಿಲ್ಲ.)5. ಪ್ರವಾದಿ(ಸ) ಯವರಿಂದ ದೃಢಪಟ್ಟಿರುವ ಇತರ ಪ್ರಾರಂಭಿಕ ಪ್ರಾರ್ಥನೆಗಳನ್ನು ಪಠಿಸಿದರೂ ಯಾವುದೇ ತಪ್ಪಿಲ್ಲ. ಆದರೆ, ಕೆಲವೊಮ್ಮೆ ಇದನ್ನು ಮತ್ತು ಕೆಲವೊಮ್ಮೆ ಇನ್ನೊಂದನ್ನು ಪಠಿಸುವುದು ಶ್ರೇಷ್ಠ. ಏಕೆಂದರೆ ಅದು (ಸುನ್ನತ್ತಿನ) ಅನುಸರಣೆಯಲ್ಲಿ ಹೆಚ್ಚು ಪರಿಪೂರ್ಣವಾಗಿದೆ. ನಂತರ ಹೀಗೆ ಪಠಿಸಬೇಕು: "ಅಊಧು ಬಿಲ್ಲಾಹಿ ಮಿನ ಶ್ಶೈತಾನಿ ರ್ರಜೀಮ್." (ಅರ್ಥ: ಶಪಿಸಲ್ಪಟ್ಟ ಶೈತಾನನಿಂದ ನಾನು ಅಲ್ಲಾಹುವಿನಲ್ಲಿ ಅಭಯ ಬೇಡುತ್ತೇನೆ.) "ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್" (ಅರ್ಥ: ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹುವಿನ ನಾಮದಿಂದ.) ನಂತರ ಸೂರ ಫಾತಿಹಾ ಪಠಿಸಬೇಕು. ಏಕೆಂದರೆ, ಪ್ರವಾದಿ(ಸ) ಯವರು ಹೇಳಿದರು:

(لَا صَلَاةَ لِمَنْ لَمْ يَقْرَأْ بفَاتِحَةِ الكِتَابِ) .

"ಫಾತಿಹತುಲ್ ಕಿತಾಬ್ (ಸೂರ ಫಾತಿಹಾ) ಪಠಿಸದವನಿಗೆ ನಮಾಝ್ ಇಲ್ಲ."6. ಅದರ ನಂತರ - "ಆಮೀನ್" ಎಂದು ಹೇಳಬೇಕು - ಜೋರಾಗಿ ಪಠಿಸುವ (ಜಹರಿಯ್ಯ) ನಮಾಝ್‌ಗಳಲ್ಲಿ ಜೋರಾಗಿ ಮತ್ತು ಮೆತ್ತಗೆ ಓದುವ (ಸಿರ್ರಿಯ್ಯ) ನಮಾಝ್‌ಗಳಲ್ಲಿ ಮೆತ್ತಗೆ ಹೇಳಬೇಕು.ನಂತರ ಅವರು ಕುರ್ಆನಿನಿಂದ ಸುಲಭವಾಗಿ ಓದಬಹುದಾದದ್ದನ್ನು ಓದಬೇಕು.ಫಜ್ರ್ ನಮಾಜ್ನಲ್ಲಿ ಫಾತಿಹಾ ನಂತರ ಉದ್ದನೆಯ ಸೂರಗಳನ್ನು (ತಿವಾಲ್ ಅಲ್-ಮುಫಸ್ಸಲ್) ಓದುವುದು ಉತ್ತಮ. ಜುಹರ್, ಅಸರ್ ಮತ್ತು ಇಶಾ ನಮಾಜ್ಗಳಲ್ಲಿ ಮಧ್ಯಮ ಉದ್ದದ ಸೂರಗಳನ್ನು (ಔಸತ್ ಅಲ್-ಮುಫಸ್ಸಲ್) ಓದುವುದು ಉತ್ತಮ. ಮಘ್ರಿಬ್ ನಮಾಜ್ನಲ್ಲಿ ಕೆಲವು ಸಲ ಉದ್ದನೆಯ ಸೂರಗಳನ್ನೂ (ತಿವಾಲ್ ಅಲ್-ಮುಫಸ್ಸಲ್) ಮತ್ತು ಕೆಲವು ಸಲ ಚಿಕ್ಕ ಸೂರಗಳನ್ನೂ (ಕಿಸಾರ್ ಅಲ್-ಮುಫಸ್ಸಲ್) ಓದಬೇಕು. ಇದು ಈ ವಿಷಯದಲ್ಲಿ ಬಂದ ಹದೀಸ್ಗಳ ಪ್ರಕಾರ ಕಾರ್ಯನಿರ್ವಹಿಸುವುದಾಗಿದೆ.

7. ರುಕೂ (ಬಾಗುವುದು): ನಂತರ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಾ, ಕೈಗಳನ್ನು ಭುಜಗಳ ಮಟ್ಟಕ್ಕೆ ಅಥವಾ ಕಿವಿಗಳ ಹತ್ತಿರಕ್ಕೆ ಎತ್ತಿ ರುಕೂ ಮಾಡಬೇಕು. ತಲೆಯನ್ನು ಬೆನ್ನಿಗೆ ಸಮಾನಾಂತರವಾಗಿ ಇಡಬೇಕು. ಕೈಗಳನ್ನು ಮೊಣಕಾಲುಗಳ ಮೇಲೆ, ಬೆರಳುಗಳನ್ನು ಅಗಲಿಸಿ ಇಡಬೇಕು. ರುಕೂನಲ್ಲಿ ತಟಸ್ಥವಾಗಿರಬೇಕು ಮತ್ತು "ಸುಬ್‌ಹಾನ ರಬ್ಬಿಯಲ್ ಅಝೀಮ್" (ಅರ್ಥ: ಮಹೋನ್ನತನಾದ ನನ್ನ ಪರಿಪಾಲಕನು ಪರಿಶುದ್ಧನಾಗಿದ್ದಾನೆ) ಎಂದು ಹೇಳಬೇಕು. ಇದನ್ನು ಮೂರು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸುವುದು ಉತ್ತಮ. ಅದರೊಂದಿಗೆ ಹೀಗೆ ಹೇಳುವುದು ಅಪೇಕ್ಷಣೀಯವಾಗಿದೆ:

(‌سُبْحَانَكَ ‌اللهُمَّ ‌وَبِحَمْدِكَ، ‌اللَّهُمَّ ‌اغْفِرْ ‌لِي).

"ಸುಬ್‌ಹಾನಕ ಲ್ಲಾಹುಮ್ಮ ವ ಬಿಹಮ್ದಿಕ, ಅಲ್ಲಾಹುಮ್ಮಗ್‌ಫಿರ್ ಲೀ" (ಅರ್ಥ: ಓ ಅಲ್ಲಾಹ್, ನಾನು ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಶುದ್ಧಿಯನ್ನು ಸಾರುತ್ತೇನೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು.)7.

8. ರುಕೂನಿಂದ ಎದ್ದೇಳುವುದು (ಇಅತಿದಾಲ್): ನಂತರ ಕೈಗಳನ್ನು ಭುಜಗಳ ಮಟ್ಟಕ್ಕೆ ಅಥವಾ ಕಿವಿಗಳ ಹತ್ತಿರಕ್ಕೆ ಎತ್ತುತ್ತಾ, ರುಕೂನಿಂದ ತಲೆಯನ್ನು ಎತ್ತಬೇಕು, ಹಾಗೂ ಹೀಗೆ ಹೇಳಬೇಕು: "ಸಮಿಅಲ್ಲಾಹು ಲಿಮನ್ ಹಮಿದಹ್" (ಅರ್ಥ: ತನ್ನನ್ನು ಸ್ತುತಿಸಿದವನ ಮಾತನ್ನು ಅಲ್ಲಾಹು ಆಲಿಸಿರುವನು). ಇದು ಇಮಾಮ್ ಅಥವಾ ಒಬ್ಬಂಟಿಯಾಗಿ ನಮಾಝ್ ಮಾಡುವವನಾಗಿದ್ದರೆ ಮಾತ್ರ. ನಂತರ ನಿಂತುಕೊಂಡ ಸ್ಥಿತಿಯಲ್ಲಿ ಹೀಗೆ ಹೇಳಬೇಕು:

(رَبَّنَا ولَكَ الحَمْدُ حَمْدًا كَثِيرًا طَيِّبًا مُبَارَكًا فِيهِ مِلْءَ السَّمَواتِ ومِلْءَ الأرضِ، ومِلْءَ ما شِئتَ مِن شيءٍ بَعدُ).

"ರಬ್ಬನಾ ವ ಲಕಲ್ ಹಮ್ದ್, ಹಮ್ದನ್ ಕಸೀರನ್ ತಯ್ಯಿಬನ್ ಮುಬಾರಕನ್ ಫೀಹ್, ಮಿಲ್‌ಅ ಸ್ಸಮಾವಾತಿ ವ ಮಿಲ್‌ಅಲ್ ಅರ್ದಿ, ವ ಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅದ್" (ಅರ್ಥ: ಓ ನಮ್ಮ ರಬ್‌, ನಿನಗೇ ಸರ್ವಸ್ತುತಿ, ಅತ್ಯಧಿಕವಾದ, ಪವಿತ್ರವಾದ, ಅನುಗ್ರಹಪೂರ್ಣವಾದ ಸ್ತುತಿ. ಆಕಾಶಗಳನ್ನು ತುಂಬುವಷ್ಟು, ಭೂಮಿಯನ್ನು ತುಂಬುವಷ್ಟು ಮತ್ತು ಇವೆರಡರ ನಂತರ ನೀನು ಬಯಸುವ ಎಲ್ಲವನ್ನೂ ತುಂಬುವಷ್ಟು.)8.

ಆದರೆ, ಮುಕ್ತದಿ(ಇಮಾಮನ್ನು ಹಿಂಬಾಲಿಸುವವನು)ಯಾಗಿದ್ದರೆ , ಎದ್ದೇಳುವಾಗ "ರಬ್ಬನಾ ವ ಲಕಲ್ ಹಮ್ದ್" ಎಂದು ಮೇಲೆ ತಿಳಿಸಿದಂತೆ ಕೊನೆಯವರೆಗೆ (ಅಂದರೆ "ಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅದ್" ವರೆಗೆ) ಹೇಳಬೇಕು. ಪ್ರತಿಯೊಬ್ಬರೂ - ಅಂದರೆ ಇಮಾಮ್, ಮುಕ್ತದಿ ಮತ್ತು ಒಬ್ಬಂಟಿಯಾಗಿ ನಮಾಝ್ ಮಾಡುವವರು ಎಲ್ಲರೂ - ಈ ಹೆಚ್ಚುವರಿ ಪ್ರಾರ್ಥನೆಯನ್ನು ಸೇರಿಸಿದರೆ:

(أهْلَ الثَّنَاءِ والْمجْدِ، أحَقُّ مَا قَالَ العَبْدُ، وكُلُّنَا لَكَ عَبْدٌ: اللَّهُمَّ لَا مَانِعَ لِمَا أعْطَيْتَ، ولَا مُعْطِيَ لِمَا مَنَعْتَ، ولَا يَنْفَعُ ذَا الجَدِّ مِنْكَ الجَدُّ) .

"ಅಹ್‌ಲ ಸ್ಸನಾಇ ವಲ್ ಮಜ್ದ್, ಅಹಖ್ಖು ಮಾ ಖಾಲಲ್ ಅಬ್ದ್, ವ ಕುಲ್ಲುನಾ ಲಕ ಅಬ್ದ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್‌ತೈತ, ವ ಲಾ ಮುಅ್‌ತಿಯ ಲಿಮಾ ಮನಅ್‌ತ, ವ ಲಾ ಯನ್‌ಫಉ ದಲ್ ಜದ್ದಿ ಮಿನ್‌ಕಲ್ ಜದ್ದ್" (ಅರ್ಥ: ಓ ಪ್ರಶಂಸೆ ಮತ್ತು ಘನತೆಗೆ ಅರ್ಹನಾದವನೇ, ದಾಸನು ಹೇಳಿದ ಅತ್ಯಂತ ಸತ್ಯವಾದ ಮಾತು ಮತ್ತು ನಾವೆಲ್ಲರೂ ನಿನ್ನ ದಾಸರು. ಓ ಅಲ್ಲಾಹ್, ನೀನು ನೀಡಿದ್ದನ್ನು ತಡೆಯುವವನಿಲ್ಲ, ಮತ್ತು ನೀನು ತಡೆದಿದ್ದನ್ನು ನೀಡುವವನಿಲ್ಲ, ಮತ್ತು ನಿನ್ನ ಮುಂದೆ ಯಾವುದೇ ಸಮರ್ಥನ ಸಾಮರ್ಥ್ಯವು ಅವನಿಗೆ ಪ್ರಯೋಜನ ನೀಡುವುದಿಲ್ಲ.)9. ಅದು ಉತ್ತಮವಾಗಿದೆ. ಏಕೆಂದರೆ ಅದು ಪ್ರವಾದಿ(ಸ) ಯವರಿಂದ ದೃಢಪಟ್ಟಿದೆ.

ಪ್ರತಿಯೊಬ್ಬರೂ - ಅಂದರೆ ಇಮಾಮ್, ಮುಕ್ತದಿ ಮತ್ತು ಒಬ್ಬಂಟಿಯಾಗಿ ನಮಾಝ್ ಮಾಡುವವರು ಎಲ್ಲರೂ - ರುಕೂ ಮಾಡುವ ಮೊದಲು ನಿಂತಿದ್ದಾಗ ಮಾಡಿದಂತೆಯೇ, (ರುಕೂನಿಂದ ಎದ್ದ ನಂತರ) ತಮ್ಮ ಕೈಗಳನ್ನು ಎದೆಯ ಮೇಲೆ ಇಡುವುದು ಅಪೇಕ್ಷಣೀಯವಾಗಿದೆ. ವಾಯಿಲ್ ಬಿನ್ ಹುಜ್ರ್ (ರ) ಮತ್ತು ಸಹ್ಲ್ ಬಿನ್ ಸಅದ್ (ರ) ರವರ ಹದೀಸ್‌ಗಳಲ್ಲಿ ಪ್ರವಾದಿ(ಸ) ಯವರಿಂದ ಇದು ದೃಢಪಟ್ಟಿದೆ.

9. ಸುಜೂದ್ (ಸಾಷ್ಟಾಂಗ): ನಂತರ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಾ ಸುಜೂದ್ ಮಾಡಬೇಕು. ಸಾಧ್ಯವಾದರೆ, ಮೊದಲು ಮೊಣಕಾಲುಗಳನ್ನು ನೆಲದ ಮೇಲೆ ಇಡಬೇಕು, ನಂತರ ಕೈಗಳನ್ನು ಇಡಬೇಕು. ಹಾಗೆ ಮಾಡುವುದು ಕಷ್ಟವಾದರೆ, ಮೊದಲು ಕೈಗಳನ್ನು ಇಟ್ಟು ನಂತರ ಮೊಣಕಾಲುಗಳನ್ನು ಇಡಬಹುದು. ಕಾಲುಗಳ ಮತ್ತು ಕೈಗಳ ಬೆರಳುಗಳನ್ನು ಖಿಬ್ಲಾದ ಕಡೆಗೆ ತಿರುಗಿಸಿರಬೇಕು. ಕೈಗಳ ಬೆರಳುಗಳನ್ನು ಸೇರಿಸಿ, ಚಾಚಿ ಇಡಬೇಕು. ಏಳು ಅಂಗಗಳ ಮೇಲೆ ಸುಜೂದ್ ಮಾಡಬೇಕು: ಹಣೆ ಮತ್ತು ಮೂಗು, ಎರಡು ಕೈಗಳು, ಎರಡು ಮೊಣಕಾಲುಗಳು, ಮತ್ತು ಎರಡು ಪಾದಗಳ ಬೆರಳುಗಳ ಒಳಭಾಗ (ತಳ). ಸುಜೂದ್‌ನಲ್ಲಿರುವಾಗ "ಸುಬ್‌ಹಾನ ರಬ್ಬಿಯಲ್ ಅಅ್‌ಲಾ" (ಅರ್ಥ: ಅತ್ಯುನ್ನತನಾದ ನನ್ನ ಪರಿಪಾಲಕನು ಪರಿಶುದ್ಧನು) ಎಂದು ಹೇಳಬೇಕು. ಇದನ್ನು ಮೂರು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಹೇಳುವುದು ಸುನ್ನತ್ ಆಗಿದೆ. ಅದರೊಂದಿಗೆ ಹೀಗೆ ಹೇಳುವುದು ಅಪೇಕ್ಷಣೀಯವಾಗಿದೆ:

(سُبْحَانَكَ اللَّهُمَّ رَبَّنَا وَبِحَمْدِكَ، اللَّهُمَّ اغْفِرْ لِي).

"ಸುಬ್‌ಹಾನಕ ಲ್ಲಾಹುಮ್ಮ ರಬ್ಬನಾ ವ ಬಿಹಮ್ದಿಕ, ಅಲ್ಲಾಹುಮ್ಮಗ್‌ಫಿರ್ ಲೀ" (ಅರ್ಥ: ಓ ಅಲ್ಲಾಹ್, ಓ ನಮ್ಮ ರಬ್ ನಾನು ನಿನ್ನ ಸ್ತುತಿಯೊಂದಿಗೆ ನಿನ್ನ ಪರಿಶುದ್ಧಿಯನ್ನು ಸಾರುತ್ತೇನೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು.) (ಸುಜೂದ್‌ನಲ್ಲಿ) ಹೆಚ್ಚು ಹೆಚ್ಚು ದುಆ (ಪ್ರಾರ್ಥನೆ) ಮಾಡಬೇಕು. ಏಕೆಂದರೆ, ಪ್ರವಾದಿ(ಸ)ಯವರು ಹೇಳುತ್ತಾರೆ:

(‌أَمَّا ‌الرُّكُوعُ، ‌فَعَظِّمُوا ‌فِيهِ ‌الرَّبَّ، وَأَمَّا السُّجُودُ، فَاجْتَهِدُوا فِي الدُّعَاءِ، فَقَمِنٌ أَنْ يُسْتَجَابَ لَكُمْ).

"ರುಕೂನಲ್ಲಿ ರಬ್‌ಅನ್ನು ಮಹತ್ವಪಡಿಸಿರಿ. ಆದರೆ ಸುಜೂದ್‌ನಲ್ಲಿ, ಪ್ರಾರ್ಥನೆ ಮಾಡಲು ಪರಿಶ್ರಮಿಸಿರಿ. ಏಕೆಂದರೆ ನಿಮ್ಮ ಪ್ರಾರ್ಥನೆಗೆ ಉತ್ತರ ಸಿಗುವ ಸಾಧ್ಯತೆ ಹೆಚ್ಚು."10.

ತನ್ನ ರಬ್‌(ಅಲ್ಲಾಹು)ನೊಂದಿಗೆ ಇಹಲೋಕ ಮತ್ತು ಪರಲೋಕದ ಒಳಿತನ್ನು ಬೇಡಬೇಕು. ನಮಾಝ್ ಫರ್ಝ್ ಅಥವಾ ನಫಿಲ್ ಆಗಿದ್ದರೂ ಸಹ. (ಸುಜೂದ್‌ನಲ್ಲಿ) ಮೇಲ್ತೋಳುಗಳನ್ನು ಪಾರ್ಶ್ವಗಳಿಂದ, ಹೊಟ್ಟೆಯನ್ನು ತೊಡೆಗಳಿಂದ ಮತ್ತು ತೊಡೆಗಳನ್ನು ಕಾಲುಗಳಿಂದ ಸರಿಸಿಡಬೇಕು. ಮೊಣಕೈಗಳನ್ನು ನೆಲದಿಂದ ಎತ್ತಿಡಬೇಕು. ಏಕೆಂದರೆ, ಪ್ರವಾದಿ(ಸ) ಯವರು ಹೇಳಿದರು:

(اعْتَدِلُوا في السُّجُودِ، ولَا يَبْسُطْ أحَدُكُمْ ذِرَاعَيْهِ انْبِسَاطَ الكَلْبِ).

"ಸುಜೂದ್‌ನಲ್ಲಿ ನೇರವಾಗಿರಿ. ನಿಮ್ಮಲ್ಲಿ ಯಾರೂ ತನ್ನ ಮೊಣಕೈಗಳನ್ನು ನಾಯಿಯು ಚಾಚುವಂತೆ ಚಾಚಬಾರದು."11.

10. ಎರಡು ಸುಜೂದ್‌ಗಳ ನಡುವಿನ ಕುಳಿತುಕೊಳ್ಳುವುದು (ಜಲ್ಸ): ನಂತರ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಾ ತಲೆಯನ್ನು ಎತ್ತಬೇಕು. ಎಡ ಪಾದವನ್ನು ಹರಡಿ ಅದರ ಮೇಲೆ ಕುಳಿತುಕೊಳ್ಳಬೇಕು (ಇಫ್ತಿರಾಶ್). ಬಲ ಪಾದವನ್ನು ನೆಟ್ಟಗೆ ನಿಲ್ಲಿಸಬೇಕು (ಬೆರಳುಗಳು ಖಿಬ್ಲಾ ಕಡೆಗೆ ತಿರುಗುವಂತೆ). ಕೈಗಳನ್ನು ತೊಡೆಗಳು ಮತ್ತು ಮೊಣಕಾಲುಗಳ ಮೇಲೆ ಇಡಬೇಕು. (ಈ ಸ್ಥಿತಿಯಲ್ಲಿ) ಹೀಗೆ ಹೇಳಬೇಕು:

(رَبِّ اغْفِرْ لِي وَارْحَمْنِي وَاهْدِنِي وَارْزُقْنِي وَعَافِنِي وَاجْبُرْنِي) .

"ರಬ್ಬಿಗ್‌ಫಿರ್ ಲೀ, ವರ್‌ಹಮ್ನೀ, ವಹ್‌ದಿನೀ, ವರ್‌ಝುಖ್ನೀ, ವ ಆಫಿನೀ, ವಜ್‌ಬುರ್ನೀ" (ಅರ್ಥ: ಓ ನನ್ನ ರಬ್‌, ನನ್ನನ್ನು ಕ್ಷಮಿಸು, ನನ್ನ ಮೇಲೆ ಕರುಣೆ ತೋರು, ನನಗೆ ಮಾರ್ಗದರ್ಶನ ನೀಡು, ನನಗೆ ಜೀವನೋಪಾಯ ನೀಡು, ನನಗೆ ಕ್ಷೇಮ ನೀಡು ಮತ್ತು ನನ್ನ ಸ್ಥಿತಿಯನ್ನು ಸರಿಪಡಿಸು.)12. ಈ ಕುಳಿತುಕೊಳ್ಳುವಿಕೆಯಲ್ಲಿ ಸಾವಧಾನವನ್ನು ಪಾಲಿಸಬೇಕು.

11. ಎರಡನೇ ಸುಜೂದ್: ನಂತರ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಾ ಎರಡನೇ ಸುಜೂದ್ ಮಾಡಬೇಕು ಮತ್ತು ಮೊದಲ ಸುಜೂದ್‌ನಲ್ಲಿ ಮಾಡಿದಂತೆಯೇ ಮಾಡಬೇಕು.

12. ವಿಶ್ರಾಂತಿಯ ಕುಳಿತುಕೊಳ್ಳುವಿಕೆ (ಜಲ್ಸತುಲ್ ಇಸ್ತಿರಾಹ) ಮತ್ತು ಎರಡನೇ ರಕಅತ್‌ಗೆ ಏಳುವುದು: ನಂತರ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಾ ತಲೆ ಎತ್ತಬೇಕು ಮತ್ತು ಎರಡು ಸುಜೂದ್‌ಗಳ ನಡುವೆ ಕುಳಿತಂತೆ ಲಘುವಾಗಿ ಕುಳಿತುಕೊಳ್ಳಬೇಕು. ಇದನ್ನು 'ಜಲ್ಸತುಲ್ ಇಸ್ತಿರಾಹ' (ವಿಶ್ರಾಂತಿಯ ಕುಳಿತುಕೊಳ್ಳುವಿಕೆ) ಎನ್ನುತ್ತಾರೆ. ಇದು ಅಪೇಕ್ಷಣೀಯವಾಗಿದೆ. ಇದನ್ನು ನಿರ್ವಹಿಸದಿದ್ದರೆ ದೋಷವಿಲ್ಲ. ಇದರಲ್ಲಿ ಯಾವುದೇ ನಿರ್ದಿಷ್ಟ ಧಿಕ್ರ್ ಅಥವಾ ದುಆ ಇಲ್ಲ. ನಂತರ ಎರಡನೇ ರಕಅತ್‌ಗಾಗಿ ಎದ್ದು ನಿಲ್ಲಬೇಕು. ಸಾಧ್ಯವಾದರೆ ಮೊಣಕಾಲುಗಳ ಮೇಲೆ ಕೈಯೂರಿ ಎದ್ದೇಳಬೇಕು, ಕಷ್ಟವಾದರೆ ನೆಲದ ಮೇಲೆ (ಕೈ) ಊರಿ ಎದ್ದೇಳಬೇಕು. ನಂತರ ಸೂರ ಫಾತಿಹಾ ಪಠಿಸಬೇಕು ಮತ್ತು ಫಾತಿಹಾದ ನಂತರ ಕುರ್‌ಆನ್‌ನಿಂದ ಸುಲಭವಾದದ್ದನ್ನು ಪಠಿಸಬೇಕು. ನಂತರ ಮೊದಲ ರಕಅತ್‌ನಲ್ಲಿ ಮಾಡಿದಂತೆಯೇ ಮಾಡಬೇಕು.

13. ಎರಡು ರಕಅತ್‌ಗಳ ನಮಾಝ್‌ನಲ್ಲಿ ತಶಹ್ಹುದ್: ನಮಾಝ್ ಎರಡು ರಕಅತ್‌ಗಳದ್ದಾಗಿದ್ದರೆ (ಉದಾ: ಫಜ್ರ್, ಜುಮುಆ, ಈದ್ ನಮಾಝ್‌ಗಳು), ಎರಡನೇ ಸುಜೂದ್‌ನಿಂದ ಎದ್ದ ನಂತರ ಕುಳಿತುಕೊಳ್ಳಬೇಕು. ಬಲ ಪಾದವನ್ನು ನೆಟ್ಟಗೆ ನಿಲ್ಲಿಸಿ (ಬೆರಳುಗಳು ಖಿಬ್ಲಾ ಕಡೆಗೆ ತಿರುಗುವಂತೆ), ಎಡ ಪಾದವನ್ನು ಹರಡಿ ಅದರ ಮೇಲೆ ಕುಳಿತುಕೊಳ್ಳಬೇಕು (ಇಫ್ತಿರಾಶ್). ಬಲಗೈಯನ್ನು ಬಲ ತೊಡೆಯ ಮೇಲಿಡಬೇಕು. ತೋರುಬೆರಳನ್ನು ಹೊರತುಪಡಿಸಿ ಉಳಿದೆಲ್ಲ ಬೆರಳುಗಳನ್ನು ಮಡಚಿ, ತೋರುಬೆರಳಿನಿಂದ ತೌಹೀದ್‌ನ (ಏಕದೇವತ್ವ) ಕಡೆಗೆ ಸೂಚಿಸಬೇಕು. ಅಥವಾ, ಬಲಗೈಯ ಕಿರುಬೆರಳು ಮತ್ತು ಉಂಗುರದ ಬೆರಳನ್ನು ಮಡಚಿ, ಹೆಬ್ಬೆರಳು ಮತ್ತು ಮಧ್ಯದ ಬೆರಳಿನಿಂದ ವೃತ್ತವನ್ನು ಮಾಡಿ, ತೋರುಬೆರಳಿನಿಂದ ಬೊಟ್ಟುಮಾಡಿದರೂ ಅದು ಉತ್ತಮವಾಗಿದೆ. ಏಕೆಂದರೆ ಎರಡೂ ವಿಧಾನಗಳು ಪ್ರವಾದಿ(ಸ) ಯವರಿಂದ ದೃಢಪಟ್ಟಿವೆ. ಕೆಲವೊಮ್ಮೆ ಹೀಗೆ ಮತ್ತು ಕೆಲವೊಮ್ಮೆ ಹಾಗೆ ಮಾಡುವುದು ಉತ್ತಮ. ಎಡಗೈಯನ್ನು ಎಡ ತೊಡೆ ಮತ್ತು ಮೊಣಕಾಲಿನ ಮೇಲಿಡಬೇಕು. ನಂತರ ಈ ಕುಳಿತುಕೊಳ್ಳುವಿಕೆಯಲ್ಲಿ ತಶಹ್ಹುದ್ ಪಠಿಸಬೇಕು, ಅದು ಹೀಗಿದೆ:

(التَّحِيَّاتُ لله والصَّلَوَاتُ والطَّيِّبَاتُ، السَّلَامُ عَلَيْكَ أيُّها النبيُّ ورَحْمَةُ الله وبَرَكَاتُهُ، السَّلَامُ عَلَيْنَا وعلَى عِبَادِ الله الصَّالِحِينَ، أشْهَدُ أنْ لا إلَهَ إلَّا الله وأَشْهَدُ أنَّ مُحَمَّدًا عَبْدُهُ ورَسولُهُ).

"ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತ್, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವ ರಹ್ಮತುಲ್ಲಾಹಿ ವ ಬರಕಾತುಹು, ಅಸ್ಸಲಾಮು ಅಲೈನಾ ವ ಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್, ಅಶ್‌ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು." (ಅರ್ಥ: ಅಭಿವಂದನೆಗಳು, ಅನುಗ್ರಹಗಳು ಮತ್ತು ಉತ್ತಮವಾದವುಗಳು ಅಲ್ಲಾಹುವಿಗೆ ಮೀಸಲು. ಓ ಪ್ರವಾದಿಯವರೇ, ತಮ್ಮ ಮೇಲೆ ಅಲ್ಲಾನ ಶಾಂತಿ, ಕರುಣೆ ಮತ್ತು ಅನುಗ್ರಹಗಳು ಇರಲಿ. ನಮ್ಮ ಮೇಲೂ, ಅಲ್ಲಾಹನ ಎಲ್ಲಾ ಸಜ್ಜನ ದಾಸರ ಮೇಲೂ ಶಾಂತಿಯಿರಲಿ. ಅಲ್ಲಾಹನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಆರಾಧ್ಯನಿಲ್ಲವೆಂದು ನಾನು ಸಾಕ್ಷಿ ಹೇಳುತ್ತೇನೆ ಮತ್ತು ಮುಹಮ್ಮದ್(ಸ) ರವರು ಅವನ ದಾಸರು ಮತ್ತು ಸಂದೇಶವಾಹಕರೆಂದು ಸಾಕ್ಷಿ ಹೇಳುತ್ತೇನೆ.) ನಂತರ ಹೀಗೆ ಪಠಿಸಬೇಕು:

(اللَّهُمَّ صَلِّ علَى مُحَمَّدٍ وعلَى آلِ مُحَمَّدٍ، كما صَلَّيْتَ علَى إبْرَاهِيمَ وعلَى آلِ إبْرَاهِيمَ؛ إنَّكَ حَمِيدٌ مَجِيدٌ، وَبَارِكْ علَى مُحَمَّدٍ وعلَى آلِ مُحَمَّدٍ، كما بَارَكْتَ علَى إبْرَاهِيمَ وعلَى آلِ إبْرَاهِيمَ؛ إنَّكَ حَمِيدٌ مَجِيدٌ) .

"ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್ ವ ಅಲಾ ಆಲಿ ಮುಹಮ್ಮದ್, ಕಮಾ ಸಲ್ಲೈತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ್, ಇನ್ನಕ ಹಮೀದುನ್ ಮಜೀದ್. ವ ಬಾರಿಕ್ ಅಲಾ ಮುಹಮ್ಮದಿನ್ ವ ಅಲಾ ಆಲಿ ಮುಹಮ್ಮದ್, ಕಮಾ ಬಾರಕ್ತ ಅಲಾ ಇಬ್ರಾಹೀಮ ವ ಅಲಾ ಆಲಿ ಇಬ್ರಾಹೀಮ್, ಇನ್ನಕ ಹಮೀದುನ್ ಮಜೀದ್." (ಅರ್ಥ: ಓ ಅಲ್ಲಾಹ್, ಮುಹಮ್ಮದ್(ಸ) ರವರ ಮೇಲೆ ಮತ್ತು ಮುಹಮ್ಮದ್(ಸ) ರವರ ಕುಟುಂಬದ ಮೇಲೆ ಅನುಗ್ರಹ ನೀಡು . ಇಬ್ರಾಹೀಮ್(ಅ) ರವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಅನುಗ್ರಹ ನೀಡಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಘನವಂತನಾಗಿರುವೆ. ಓ ಅಲ್ಲಾಹ್, ಮುಹಮ್ಮದ್(ಸ) ರವರ ಮೇಲೆ ಮತ್ತು ಮುಹಮ್ಮದ್(ಸ) ರವರ ಕುಟುಂಬದ ಮೇಲೆ ಸಮೃದ್ಧಿಯನ್ನು ಕರುಣಿಸು, ಇಬ್ರಾಹೀಮ್(ಅ) ರವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಸಮೃದ್ಧಿಯನ್ನು ಕರುಣಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಘನವಂತನಾಗಿರುವೆ.)13.

ನಂತರ ನಾಲ್ಕು ವಿಷಯಗಳಿಂದ ಅಲ್ಲಾಹುವಿನಲ್ಲಿ ಅಭಯ ಬೇಡುತ್ತಾ ಹೀಗೆ ಹೇಳಬೇಕು:

( اللَّهُمَّ إنِّي أَعُوذُ بِكَ مِن عَذَابِ جَهَنَّمَ، وَمِنْ عَذَابِ القَبْرِ، وَمِنْ فِتْنَةِ المَحْيَا وَالْمَمَاتِ، وَمِنْ شَرِّ فِتْنَةِ المَسِيحِ الدَّجَّالِ) .

"ಅಲ್ಲಾಹುಮ್ಮ ಇನ್ನೀ ಅಊಧು ಬಿಕ ಮಿನ್ ಅಧಾಬಿ ಜಹನ್ನಮ್, ವ ಮಿನ್ ಅಧಾಬಿಲ್ ಖಬ್ರ್, ವ ಮಿನ್ ಫಿತ್ನತಿಲ್ ಮಹ್ಯಾ ವಲ್ ಮಮಾತ್, ವ ಮಿನ್ ಶರ್ರಿ ಫಿತ್ನತಿಲ್ ಮಸೀಹಿ ದ್ದಜಾಲ್." (ಅರ್ಥ: ಓ ಅಲ್ಲಾಹ್, ನಾನು ನಿನ್ನಲ್ಲಿ ನರಕದ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ಮಸೀಹ್ ದಜ್ಜಾಲನ ಪರೀಕ್ಷೆಯ ಕೆಡುಕಿನಿಂದ ಅಭಯ ಬೇಡುತ್ತೇನೆ.)14.

ನಂತರ ಇಹಲೋಕ ಮತ್ತು ಪರಲೋಕದ ಒಳಿತಿಗಾಗಿ ನಿಮಗೆ ಇಷ್ಟವಿರುವ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು. ತಂದೆತಾಯಿಗಾಗಿ ಅಥವಾ ಇತರ ಮುಸ್ಲಿಮರಿಗಾಗಿ ಪ್ರಾರ್ಥಿಸಿದರೂ ತಪ್ಪಿಲ್ಲ - ನಮಾಝ್ ಫರ್ಝ್ ಆಗಿರಲಿ ಅಥವಾ ನಫಿಲ್ ಆಗಿರಲಿ. ಏಕೆಂದರೆ ಇಬ್ನ್ ಮಸ್ಊದ್ (ರ) ರಿಗೆ ಪ್ರವಾದಿ(ಸ) ಯವರು ತಶಹ್ಹುದ್ ಕಲಿಸಿದಾಗ ಹೇಳಿದ ಸಾರ್ವತ್ರಿಕ ಮಾತು ಹೀಗಿದೆ:

(ثُمَّ ‌لِيَتَخَيَّرْ ‌مِنَ ‌الدُّعَاءِ بَعْدُ أَعْجَبَهُ إِلَيْهِ فَيَدْعُو) .

"ನಂತರ ಅವನಿಗೆ ಇಷ್ಟವಾದ ಪ್ರಾರ್ಥನೆಯನ್ನು ಆಯ್ದುಕೊಂಡು ಪ್ರಾರ್ಥಿಸಲಿ)"15. ಇನ್ನೊಂದು ವರದಿಯಲ್ಲಿ:

(‌ثُمَّ ‌لِيَخْتَرْ ‌مِنْ ‌الْمَسْأَلَةِ ‌مَا ‌شَاءَ) .

"ನಂತರ ಅವನು ಬಯಸಿದ್ದನ್ನು ಕೇಳಿಕೊಳ್ಳಲಿ)"16.

ಇದು ಇಹಲೋಕ ಮತ್ತು ಪರಲೋಕದಲ್ಲಿ ದಾಸನಿಗೆ ಪ್ರಯೋಜನಕಾರಿಯಾದ ಎಲ್ಲವನ್ನೂ ಒಳಗೊಳ್ಳುತ್ತದೆ. ನಂತರ ಬಲಕ್ಕೆ ಮತ್ತು ಎಡಕ್ಕೆ ತಿರುಗಿ ಸಲಾಮ್ ಹೇಳಬೇಕು: "ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್, ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್." (ಅರ್ಥ: ನಿಮ್ಮ ಮೇಲೆ ಅಲ್ಲಾಹುವಿನ ಶಾಂತಿ ಮತ್ತು ಕರುಣೆಯಿರಲಿ, ನಿಮ್ಮ ಮೇಲೆ ಅಲ್ಲಾಹುವಿನ ಶಾಂತಿ ಮತ್ತು ಕರುಣೆಯಿರಲಿ).

14. ಮೂರು ಅಥವಾ ನಾಲ್ಕು ರಕಅತ್‌ಗಳ ನಮಾಝ್‌ನಲ್ಲಿ ಅಂತಿಮ ತಶಹ್ಹುದ್ ಮತ್ತು ನಮಾಝಿನ ನಂತರದ ಧಿಕ್ರ್‌ಗಳು: ನಮಾಝ್ ಮೂರು ರಕಅತ್‌ಗಳದ್ದಾಗಿದ್ದರೆ (ಮಗ್ರಿಬ್) ಅಥವಾ ನಾಲ್ಕು ರಕಅತ್‌ಗಳದ್ದಾಗಿದ್ದರೆ (ಝುಹರ್, ಅಸರ್, ಇಶಾ), (ಎರಡನೇ ರಕಅತ್‌ನ ನಂತರ) ಈ ಹಿಂದೆ ತಿಳಿಸಲಾದ ಮೊದಲ ತಶಹ್ಹುದ್ ಅನ್ನು ಪಠಿಸಬೇಕು. ನಂತರ ಮೊಣಕಾಲುಗಳ ಮೇಲೆ ಆಧಾರವಿಟ್ಟು ಎದ್ದು ನಿಲ್ಲಬೇಕು, ಕೈಗಳನ್ನು ಭುಜಗಳ ಮಟ್ಟಕ್ಕೆ ಅಥವಾ ಕಿವಿಗಳ ಹತ್ತಿರಕ್ಕೆ ಎತ್ತುತ್ತಾ "ಅಲ್ಲಾಹು ಅಕ್ಬರ್" ಎಂದು ಹೇಳಬೇಕು. ಹಿಂದೆ ತಿಳಿಸಿದಂತೆ ಕೈಗಳನ್ನು ಎದೆಯ ಮೇಲೆ ಇಡಬೇಕು ಮತ್ತು ಸೂರ ಫಾತಿಹಾ ಮಾತ್ರ ಪಠಿಸಬೇಕು. ಝುಹರ್ ನಮಾಝಿನ ಮೂರನೇ ಮತ್ತು ನಾಲ್ಕನೇ ರಕಅತ್‌ಗಳಲ್ಲಿ ಕೆಲವೊಮ್ಮೆ ಫಾತಿಹಾದ ನಂತರ ಹೆಚ್ಚಿಗೆ ಪಠಿಸಿದರೆ ತಪ್ಪಿಲ್ಲ. ಏಕೆಂದರೆ ಅಬೂ ಸಈದ್ (ರ) ರವರ ಹದೀಸ್‌ನಲ್ಲಿ ಪ್ರವಾದಿ(ಸ) ಯವರಿಂದ ಇದು ದೃಢಪಟ್ಟಿದೆ. ಮೊದಲ ತಶಹ್ಹುದ್ ಪಠಿಸಿದ ನಂತರ ಪ್ರವಾದಿ(ಸ) ಯವರ ಮೇಲೆ ಸಲಾತ್ (ದರೂದ್) ಪಠಿಸದಿದ್ದರೆ ತಪ್ಪಿಲ್ಲ; ಏಕೆಂದರೆ ಅದು ಮೊದಲ ತಶಹ್ಹುದ್‌ನಲ್ಲಿ ಅಪೇಕ್ಷಣೀಯವಾಗಿದೆಯೇ ಹೊರತು ವಾಜಿಬ್ (ಕಡ್ಡಾಯ) ಅಲ್ಲ. ನಂತರ ಮಗ್ರಿಬ್‌ನ ಮೂರನೇ ರಕಅತ್‌ನ ನಂತರ ಮತ್ತು ಝುಹರ್, ಅಸರ್, ಇಶಾದ ನಾಲ್ಕನೇ ರಕಅತ್‌ನ ನಂತರ ಅಂತಿಮ ತಶಹ್ಹುದ್ ಗಾಗಿ ಕುಳಿತುಕೊಳ್ಳಬೇಕು ಮತ್ತು ಎರಡು ರಕಅತ್‌ಗಳ ನಮಾಝ್‌ನಲ್ಲಿ ಹಿಂದೆ (ಹಂತ 13ರಲ್ಲಿ) ತಿಳಿಸಿದಂತೆ (ಪೂರ್ಣ ತಶಹ್ಹುದ್, ಸಲಾತ್ ಮತ್ತು ನಾಲ್ಕು ವಿಷಯಗಳಿಂದ ಅಭಯ ಬೇಡುವ ದುಆ) ಪಠಿಸಬೇಕು. ನಂತರ ಬಲಕ್ಕೆ ಮತ್ತು ಎಡಕ್ಕೆ ತಿರುಗಿ ಸಲಾಮ್ ಹೇಳಬೇಕು. ನಂತರ ಮೂರು ಬಾರಿ "ಅಸ್ತಗ್‌ಫಿರುಲ್ಲಾಹ್ " (ಅರ್ಥ: ನಾನು ಅಲ್ಲಾಹುವಿನಲ್ಲಿ ಕ್ಷಮೆ ಯಾಚಿಸುತ್ತೇನೆ) ಎಂದು ಹೇಳಿ, ನಂತರ ಹೀಗೆ ಹೇಳಬೇಕು:

(اللَّهُمَّ أَنْتَ السَّلَامُ وَمِنْكَ السَّلَامُ، تَبَارَكْتَ يا ذَا الجَلَالِ وَالإِكْرَامِ) .

"ಅಲ್ಲಾಹುಮ್ಮ ಅನ್ತ ಸ್ಸಲಾಮ್, ವ ಮಿನ್‌ಕ ಸ್ಸಲಾಮ್, ತಬಾರಕ್‌ತ ಯಾ ದಲ್ ಜಲಾಲಿ ವಲ್ ಇಕ್ರಾಮ್." (ಅರ್ಥ: ಓ ಅಲ್ಲಾಹ್, ನೀನೇ ಶಾಂತಿ, ಮತ್ತು ನಿನ್ನಿಂದಲೇ ಶಾಂತಿ. ಓ ಘನತೆ ಮತ್ತು ಗೌರವದ ಒಡೆಯನೇ, ನೀನು ಅನುಗ್ರಹಪೂರ್ಣನು.)17. ಇಮಾಮ್ ಆಗಿದ್ದರೆ, ಜನರ ಕಡೆಗೆ ತಿರುಗುವ ಮೊದಲು ಇದನ್ನು ಹೇಳಬೇಕು. ನಂತರ ಹೀಗೆ ಹೇಳಬೇಕು:

َا إلَهَ إلَّا الله وحْدَهُ لا شَرِيكَ لَه، لَهُ المُلْكُ، ولَهُ الحَمْدُ، وَهُوَ عَلَى كُلِّ شيءٍ قَدِيرٌ، لَا حَوْلَ وَلَا قُوَّةَ إلَّا بالله، اللَّهُمَّ لَا مَانِعَ لِمَا أعْطَيْتَ، ولَا مُعْطِيَ لِمَا مَنَعْتَ، وَلَا يَنْفَعُ ذَا الجَدِّ مِنْكَ الجَدُّ، لَا إلَهَ إلَّا الله، وَلَا نَعْبُدُ إلَّا إيَّاهُ، لَهُ النِّعْمَةُ وَلَهُ الفَضْلُ، وَلَهُ الثَّنَاءُ الحَسَنُ، لَا إلَهَ إلَّا الله مُخْلِصِينَ لَهُ الدِّينَ وَلَو كَرِهَ الكَافِرُونَ) .

"ಲಾ ಇಲಾಹ ಇಲ್ಲಲ್ಲಾಹು ವಹ್‌ದಹು ಲಾ ಶರೀಕ ಲಹು, ಲಹುಲ್ ಮುಲ್ಕು ವ ಲಹುಲ್ ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್. ಲಾ ಹೌಲ ವ ಲಾ ಖುವ್ವತ ಇಲ್ಲಾ ಬಿಲ್ಲಾಹ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್‌ತೈತ, ವ ಲಾ ಮುಅ್‌ತಿಯ ಲಿಮಾ ಮನಅ್‌ತ, ವ ಲಾ ಯನ್‌ಫಉ ದಲ್ ಜದ್ದಿ ಮಿನ್‌ಕಲ್ ಜದ್ದ್. ಲಾ ಇಲಾಹ ಇಲ್ಲಲ್ಲಾಹು, ವ ಲಾ ನಅ್‌ಬುದು ಇಲ್ಲಾ ಇಯ್ಯಾಹು, ಲಹು ನ್ನಿಅ್‌ಮತು ವ ಲಹುಲ್ ಫದ್‌ಲು, ವ ಲಹು ಸ್ಸನಾಉಲ್ ಹಸನ್. ಲಾ ಇಲಾಹ ಇಲ್ಲಲ್ಲಾಹು ಮುಖ್‌ಲಿಸೀನ ಲಹುದ್ದೀನ ವ ಲೌ ಕರಿಹಲ್ ಕಾಫಿರೂನ್." (ಅರ್ಥ: ಅಲ್ಲಾಹುವಿನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಆರಾಧ್ಯನಿಲ್ಲ, ಅವನು ಏಕೈಕನು, ಅವನಿಗೆ ಯಾವ ಸಹಭಾಗಿಗಳಿಲ್ಲ. ಸಾಮ್ರಾಜ್ಯ ಅವನದೇ, ಸ್ತುತಿಗಳೆಲ್ಲವೂ ಅವನಿಗೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ಅಲ್ಲಾಹುವಿನ ಹೊರತಾಗಿ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ. ಓ ಅಲ್ಲಾಹ್, ನೀನು ಕೊಟ್ಟದ್ದನ್ನು ತಡೆಯುವವನಿಲ್ಲ, ನೀನು ತಡೆದಿದ್ದನ್ನು ಕೊಡುವವನಿಲ್ಲ. ಯಾವುದೇ ಸಮರ್ಥನ ಸಾಮರ್ಥ್ಯವು ಅವನಿಗೆ ನಿನ್ನ ಮುಂದೆ ಪ್ರಯೋಜನ ನೀಡುವುದಿಲ್ಲ. ಅಲ್ಲಾಹುವಿನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಆರಾಧ್ಯನಿಲ್ಲ. ನಾವು ಅವನನ್ನಲ್ಲದೆ ಬೇರೆ ಯಾರನ್ನೂ ಆರಾಧಿಸುವುದಿಲ್ಲ. ಅನುಗ್ರಹ, ಶ್ರೇಷ್ಠತೆ ಮತ್ತು ಉತ್ತಮ ಪ್ರಶಂಸೆ ಅವನದೇ. ಅಲ್ಲಾಹುವಿನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಆರಾಧ್ಯನಿಲ್ಲ. ಸತ್ಯನಿಷೇಧಿಗಳಿಗೆ ಎಷ್ಟೇ ಅಪ್ರಿಯವಾದರೂ ಸರಿ ನಾವು ಧರ್ಮವನ್ನು ಅವನಿಗಾಗಿಯೇ ನಿಷ್ಕಳಂಕಗೊಳಿಸುತ್ತೇವೆ.)18.

ನಂತರ 33 ಬಾರಿ "ಸುಬ್'ಹಾನಲ್ಲಾಹ್", 33 ಬಾರಿ "ಅಲ್'ಹಮ್ದುಲಿಲ್ಲಾಹ್", 33 ಬಾರಿ "ಅಲ್ಲಾಹು ಅಕ್ಬರ್" ಎಂದು ಹೇಳಬೇಕು. ನೂರನ್ನು ಪೂರ್ಣಗೊಳಿಸಲು ಹೀಗೆ ಹೇಳಬೇಕು: "ಲಾ ಇಲಾಹ ಇಲ್ಲಲ್ಲಾಹು ವಹ್‌ದಹು ಲಾ ಶರೀಕ ಲಹು, ಲಹುಲ್ ಮುಲ್ಕು ವ ಲಹುಲ್ ಹಮ್ದು, ವ ಹುವ ಅಲಾ ಕುಲ್ಲಿ ಶೈಇನ್ ಖದೀರ್." ಪ್ರತಿ (ಕಡ್ಡಾಯ) ನಮಾಝಿನ ನಂತರ ಆಯತುಲ್ ಕುರ್ಸಿ, ಸೂರ ಇಖ್ಲಾಸ್ (ಖುಲ್ ಹುವಲ್ಲಾಹು ಅಹದ್), ಸೂರ ಫಲಖ್ (ಖುಲ್ ಅಊಧು ಬಿ ರಬ್ಬಿಲ್ ಫಲಖ್) ಮತ್ತು ಸೂರ ನಾಸ್ (ಖುಲ್ ಅಊಧು ಬಿ ರಬ್ಬಿನ್ನಾಸ್) ಪಠಿಸಬೇಕು. ಫಜ್ರ್ ಮತ್ತು ಮಗ್ರಿಬ್ ನಮಾಝ್‌ಗಳ ನಂತರ ಈ ಮೂರು ಸೂರಗಳನ್ನು (ಇಖ್ಲಾಸ್, ಫಲಖ್, ನಾಸ್) ಮೂರು ಬಾರಿ ಪುನರಾವರ್ತಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಪ್ರವಾದಿ(ಸ) ಯವರಿಂದ ಈ ಬಗ್ಗೆ ಹದೀಸ್‌ಗಳು ವರದಿಯಾಗಿವೆ. ಈ ಎಲ್ಲಾ ಧಿಕ್ರ್‌ಗಳು (ಸ್ಮರಣೆಗಳು) ಸುನ್ನತ್ ಆಗಿವೆ, ಕಡ್ಡಾಯವಲ್ಲ.

ಪ್ರತಿಯೊಬ್ಬ ಮುಸ್ಲಿಂ ಪುರುಷ ಮತ್ತು ಮಹಿಳೆಗೆ ಝುಹರ್ ನಮಾಝ್‌ಗಿಂತ ಮೊದಲು ನಾಲ್ಕು ರಕಅತ್, ನಂತರ ಎರಡು ರಕಅತ್, ಮಗ್ರಿಬ್ ನಮಾಝ್ ನಂತರ ಎರಡು ರಕಅತ್, ಇಶಾ ನಮಾಝ್ ನಂತರ ಎರಡು ರಕಅತ್ ಮತ್ತು ಫಜ್ರ್ ನಮಾಝ್‌ಗಿಂತ ಮೊದಲು ಎರಡು ರಕಅತ್ ನಮಾಝ್ ಮಾಡುವುದು ನಿಯಮಗೊಳಿಸಲಾಗಿದೆ. ಇವು ಒಟ್ಟು ಹನ್ನೆರಡು ರಕಅತ್‌ಗಳ 'ರವಾತಿಬ್ ಸುನ್ನತ್' ಆಗಿವೆ. ಪ್ರವಾದಿ(ಸ) ಯವರು ಊರಿನಲ್ಲಿದ್ದಾಗ (ಪ್ರಯಾಣದಲ್ಲಿ ಇರದಿದ್ದಾಗ) ಇವುಗಳನ್ನು ತಪ್ಪದೆ ನಿರ್ವಹಿಸುತ್ತಿದ್ದರು. ಪ್ರಯಾಣದಲ್ಲಿರುವಾಗ, ಫಜ್ರ್ ನಮಾಝಿನ ಸುನ್ನತ್ ಮತ್ತು ವಿತ್ರ್ ಹೊರತುಪಡಿಸಿ ಇತರ ರವಾತಿಬ್ ನಮಾಝ್‌ಗಳನ್ನು ನಿರ್ವಹಿಸುತ್ತಿರಲಿಲ್ಲ. ಪ್ರವಾದಿ(ಸ) ಯವರು ಊರಲ್ಲಿದ್ದರೂ ಪ್ರಯಾಣದಲ್ಲಿದ್ದರೂ ಫಜ್ರ್ ನಮಾಝಿನ ಸುನ್ನತ್ ಮತ್ತು ವಿತ್ರ್ ಅನ್ನು ತಪ್ಪದೆ ನಿರ್ವಹಿಸುತ್ತಿದ್ದರು. ಈ ರವಾತಿಬ್ ಮತ್ತು ವಿತ್ರ್ ನಮಾಝ್‌ಗಳನ್ನು ಮನೆಯಲ್ಲಿ ನಿರ್ವಹಿಸುವುದು ಉತ್ತಮ. ಮಸೀದಿಯಲ್ಲಿ ನಿರ್ವಹಿಸಿದರೂ ದೋಷವಿಲ್ಲ. ಪ್ರವಾದಿ(ಸ) ಯವರು ಹೇಳಿದರು:

(أفْضَلُ صَلَاةِ المَرْءِ في بَيْتِهِ، إلَّا الصَّلَاةَ المَكْتُوبَةَ).

"ಕಡ್ಡಾಯ ನಮಾಝ್‌ಗಳನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯ ಅತ್ಯುತ್ತಮ ನಮಾಝ್ ಅವನ ಮನೆಯಲ್ಲಿ ನಿರ್ವಹಿಸುವ ನಮಾಝ್ ಆಗಿದೆ."19.

ಈ ಹನ್ನೆರಡು ರಕಅತ್‌ಗಳನ್ನು ತಪ್ಪದೆ ನಿರ್ವಹಿಸುವುದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತದೆ. ಪ್ರವಾದಿ(ಸ) ಯವರು ಹೇಳಿದರು:

(مَنْ صَلَّى اثْنَتَيْ عَشْرَةَ رَكْعَةً فِي يَومٍ وَلَيْلَةٍ، بُنِيَ لَه بِهِنَّ بَيْتٌ فِي الجَنَّةِ).

"ಯಾರು ಒಂದು ದಿನ ಮತ್ತು ರಾತ್ರಿಯಲ್ಲಿ ಹನ್ನೆರಡು ರಕಅತ್‌ಗಳನ್ನು (ರವಾತಿಬ್ ಸುನ್ನತ್) ನಿರ್ವಹಿಸುತ್ತಾನೋ, ಅವನಿಗೆ ಸ್ವರ್ಗದಲ್ಲಿ ಒಂದು ಮನೆಯನ್ನು ನಿರ್ಮಿಸಲಾಗುವುದು."20.

ಅಸರ್ ನಮಾಝ್‌ಗಿಂತ ಮೊದಲು ನಾಲ್ಕು, ಮಗ್ರಿಬ್ ನಮಾಝ್‌ಗಿಂತ ಮೊದಲು ಎರಡು ಮತ್ತು ಇಶಾ ನಮಾಝ್‌ಗಿಂತ ಮೊದಲು ಎರಡು ರಕಅತ್‌ಗಳನ್ನು (ಹೆಚ್ಚುವರಿಯಾಗಿ) ನಿರ್ವಹಿಸಿದರೆ ಅದು ಉತ್ತಮವಾಗಿದೆ. ಏಕೆಂದರೆ ಪ್ರವಾದಿ(ಸ) ಯವರಿಂದ ಇದು ದೃಢಪಟ್ಟಿದೆ. ಹಾಗೆಯೇ, ಝುಹರ್‌ಗೆ ಮೊದಲು ನಾಲ್ಕು ಮತ್ತು ನಂತರ ನಾಲ್ಕು ರಕಅತ್‌ಗಳನ್ನು ನಿರ್ವಹಿಸಿದರೆ ಅದು ಕೂಡ ಉತ್ತಮವಾಗಿದೆ. ಏಕೆಂದರೆ ಪ್ರವಾದಿ(ಸ) ಯವರು ಹೇಳಿದರು:

(مَنْ ‌حَافَظَ ‌عَلَى ‌أَرْبَعِ ‌رَكَعَاتٍ ‌قَبْلَ ‌الظُّهْرِ، وَأَرْبَعٍ بَعْدَهَا حَرَّمَهُ اللَّهُ عَلَى النَّارِ).

"ಯಾರು ಝುಹರ್‌ಗೆ ಮೊದಲು ನಾಲ್ಕು ಮತ್ತು ನಂತರ ನಾಲ್ಕು ರಕಅತ್‌ಗಳನ್ನು ತಪ್ಪದೆ ನಿರ್ವಹಿಸುತ್ತಾರೋ, ಅಲ್ಲಾಹು ಅವನನ್ನು ನರಕಕ್ಕೆ ನಿಷಿದ್ಧಗೊಳಿಸುತ್ತಾನೆ."21. ಇದರ ಅರ್ಥವೇನೆಂದರೆ, ಝುಹರ್ ನಂತರದ ರವಾತಿಬ್ ಸುನ್ನತ್ ನಮಾಝ್ (2 ರಕಅತ್) ಜೊತೆ ಇನ್ನೂ ಎರಡು ರಕಅತ್‌ಗಳನ್ನು ಸೇರಿಸಿ ನಾಲ್ಕು ಪೂರ್ಣಗೊಳಿಸುವುದು. ಏಕೆಂದರೆ ರವಾತಿಬ್ ಸುನ್ನತ್ ಝುಹರ್‌ಗೆ ಮೊದಲು ನಾಲ್ಕು ಮತ್ತು ನಂತರ ಎರಡು ಆಗಿದೆ. ಆದ್ದರಿಂದ, ನಂತರ ಇನ್ನೂ ಎರಡನ್ನು ಸೇರಿಸಿದರೆ ಉಮ್ಮ್ ಹಬೀಬಾ (ರ) ರವರ ಹದೀಸ್‌ನಲ್ಲಿ ಉಲ್ಲೇಖಿಸಲಾದ (ನರಕದಿಂದ ರಕ್ಷಣೆ) ಪ್ರತಿಫಲ ಸಿಗುತ್ತದೆ.

ಸಹಾಯ ನೀಡಲರ್ಹನು ಅಲ್ಲಾಹು ಮಾತ್ರ. ಅಲ್ಲಾಹುವಿನ ಶಾಂತಿ ಮತ್ತು ಆಶೀರ್ವಾದಗಳು ನಮ್ಮ ಪ್ರವಾದಿ ಮುಹಮ್ಮದ್ ಬಿನ್ ಅಬ್ದುಲ್ಲಾ ರವರ ಮೇಲೂ, ಅವರ ಕುಟುಂಬ, ಅವರ ಸಹಾಬಿಗಳು ಮತ್ತು ಪುನರುತ್ಥಾನ ದಿನದವರೆಗೆ ಅವರನ್ನು ಸತ್ಯದಲ್ಲಿ ಅನುಸರಿಸುವ ಎಲ್ಲರ ಮೇಲೂ ಇರಲಿ.

 

 

 

***

 


ಮುಸ್ಲಿಮ್, ಸಂಖ್ಯೆ (224).

ಬುಖಾರಿ, ಸಂಖ್ಯೆ (5782).

ಬುಖಾರಿ, ಸಂಖ್ಯೆ (744), ಮುಸ್ಲಿಮ್, ಸಂಖ್ಯೆ (598).

ಮುಸ್ಲಿಮ್, ಸಂಖ್ಯೆ (399).

ಬುಖಾರಿ, ಸಂಖ್ಯೆ (756).

ಬುಖಾರಿ, ಸಂಖ್ಯೆ (817), ಮುಸ್ಲಿಮ್, ಸಂಖ್ಯೆ (484).

ಬುಖಾರಿ, ಸಂಖ್ಯೆ (711), ಮುಸ್ಲಿಮ್, ಸಂಖ್ಯೆ (598).

ಮುಸ್ಲಿಮ್, ಸಂಖ್ಯೆ (477).

ಮುಸ್ಲಿಮ್, ಸಂಖ್ಯೆ (479).

ಬುಖಾರಿ, ಸಂಖ್ಯೆ (788), ಮುಸ್ಲಿಮ್, ಸಂಖ್ಯೆ (493).

ತಿರ್ಮಿದಿ, ಸಂಖ್ಯೆ (284), ಅಬೂದಾವೂದ್, ಸಂಖ್ಯೆ (850), ಇಬ್ನ್ ಮಾಜ, ಸಂಖ್ಯೆ (898).

. ಬುಖಾರಿ, ಸಂಖ್ಯೆ (797), ಮುಸ್ಲಿಮ್, ಸಂಖ್ಯೆ (402).

. ಬುಖಾರಿ, ಸಂಖ್ಯೆ (1311), ಮುಸ್ಲಿಮ್, ಸಂಖ್ಯೆ (588).

ನಸಾಯಿ, ಸಂಖ್ಯೆ (1298).

ಮುಸ್ಲಿಮ್, ಸಂಖ್ಯೆ (402).

ಮುಸ್ಲಿಮ್, ಸಂಖ್ಯೆ (591).

ಮುಸ್ಲಿಮ್, ಸಂಖ್ಯೆ (402).

. ಬುಖಾರಿ, ಸಂಖ್ಯೆ (6860).

ಮುಸ್ಲಿಮ್, ಸಂಖ್ಯೆ (728).

ಅಹ್ಮದ್, ಸಂಖ್ಯೆ (25547), ತಿರ್ಮಿದಿ, ಸಂಖ್ಯೆ (393), ಅಬೂದಾವೂದ್, ಸಂಖ್ಯೆ (1077).

ಬುಖಾರಿ, ಸಂಖ್ಯೆ (605).