فَضْلُ عَشْرِ ذِي الحِجَّةِ
ದುಲ್ ಹಿಜ್ಜ ತಿಂಗಳ ಮೊದಲ ಹತ್ತು
ದಿನಗಳ ಶ್ರೇಷ್ಠತೆ
اللَّجْنَةُ العِلْمِيَّةُ
بِرِئَاسَةِ الشُّؤُونِ الدِّينِيَّةِ بِالمَسْجِدِ الحَرَامِ وَالمَسْجِدِ النَّبَوِيِّ
ಮಸ್ಜಿದುಲ್-ಹರಾಮ್ ಮತ್ತು ಮಸ್ಜಿದು ನ್ನಬವಿಯ ಧಾರ್ಮಿಕ
ವ್ಯವಹಾರಗಳ ಅಧ್ಯಕ್ಷತೆಯ ಅಡಿಯಲ್ಲಿರುವ ವೈಜ್ಞಾನಿಕ ಸಮಿತಿ
بِسْمِ اللهِ الرَّحمَنِ الرَّحِيمِ
ಪೀಠಿಕೆ
ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು. ಸಮಸ್ತ ಲೋಕಗಳಿಗೆ ಕರುಣೆಯಾಗಿ ಕಳುಹಿಸಲ್ಪಟ್ಟ ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಚರರ ಮೇಲೆ, ಮತ್ತು ಅವರ ಹೆಜ್ಜೆಗಳನ್ನು ಹಿಂಬಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವವರ ಮೇಲೆ ಲೋಕಾಂತ್ಯದವರೆಗೂ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ. ಮಂದುವರಿದು ಹೇಳುವುದೇನೆಂದರೆ:
ಎರಡು ಪವಿತ್ರ ಮಸೀದಿಗಳ ಸಂದರ್ಶಕರಿಗಾಗಿ, ಅವರು ಇದರಿಂದ ತಮ್ಮ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಿರುವುದಕ್ಕಾಗಿ, ನಾವು ಇದನ್ನು ಸಂಗ್ರಹಿಸಿದ್ದೇವೆ. ಹಾಗೆಯೇ ಪರಮ ಉದಾರಿಯಾದ ಅಲ್ಲಾಹು ಇದರ ಮೂಲಕ ಪ್ರಯೋಜನವನ್ನು ಉಂಟುಮಾಡಲಿ ಮತ್ತು ಇದನ್ನು ಅವನ ಸಂಪ್ರೀತಿಗಾಗಿ ಮಾತ್ರ ರಚಿಸಲಾದ ಒಂದು ಸತ್ಕರ್ಮವನ್ನಾಗಿ ಮಾಡಲಿ ಎಂದು ನಾವು ಆಶಿಸುತ್ತೇವೆ. ನಿಶ್ಚಯವಾಗಿಯೂ ಅವನು ಅತ್ಯುತ್ತಮ ಹೊಣೆಗಾರನು ಮತ್ತು ಅತ್ಯಂತ ಉದಾರವಾಗಿ ಆಶಿಸಲ್ಪಡುವವನಾಗಿದ್ದಾನೆ.
ದುಲ್ಹಿಜ್ಜ ತಿಂಗಳ ಮೊದಲ ಹತ್ತು ದಿನಗಳ ಶ್ರೇಷ್ಠತೆ
ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು ಅತೀವ ಶ್ರೇಷ್ಠತೆಯನ್ನು ಹೊಂದಿವೆ. ಇದನ್ನು ಅಲ್ಲಾಹು ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ತಮ್ಮ ಸುನ್ನತ್ನಲ್ಲಿ ವಿವರಿಸಿದ್ದಾರೆ. ಇವು ಅಲ್ಲಾಹು ತನ್ನ ಗ್ರಂಥದಲ್ಲಿ ಆಣೆಯಿಟ್ಟು ಹೇಳಿದ ದಿನಗಳಾಗಿವೆ:
﴿وَٱلۡفَجۡرِ 1 وَلَيَالٍ عَشۡرٍ 2﴾
"ಪ್ರಭಾತದ ಮೇಲಾಣೆ! ಮತ್ತು ಹತ್ತು ದಿನಗಳ ಮೇಲಾಣೆ!" [ಸೂರ ಫಜ್ರ್: 1-2]، ಇಬ್ನ್ ಅಬ್ಬಾಸ್, ಇಬ್ನು ಝ್ಝಬೈರ್, ಮುಜಾಹಿದ್, ಇಬ್ನ್ ಕಸೀರ್, ಇಬ್ನುಲ್ ಕಯ್ಯಿಮ್ ಮತ್ತು ಹಿಂದಿನ ಹಾಗೂ ನಂತರದ ಅನೇಕ ವಿದ್ವಾಂಸರು ಹೇಳಿದಂತೆ ಇವು ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಾಗಿವೆ1.
ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ಗಿಂತಲೂ ಶ್ರೇಷ್ಠವಾಗಿವೆ. ಇಬ್ನ್ ಅಬ್ಬಾಸ್ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:
«مَا مِنْ أَيَّامٍ الْعَمَلُ الصَّالِحُ فِيهِنَّ أَحَبُّ إِلَى اللَّهِ مِنْ هَذِهِ الْأَيَّامِ الْعَشَرِ»، قَالُوا: يَا رَسُولَ اللَّهِ! وَلا الْجِهَادُ فِي سَبِيلِ اللَّهِ؟ فَقَالَ رَسُولُ اللَّهِ صَلَّى اللَّهُ عَلَيْهِ وَسَلَّمَ: «وَلا الْجِهَادُ فِي سَبِيلِ اللَّهِ، إِلَّا رَجُلٌ خَرَجَ بِنَفْسِهِ وَمَالِهِ فَلَمْ يَرْجِعْ مِنْ ذَٰلِكَ بِشَيْءٍ».
"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲ. ಆದರೆ ಒಬ್ಬ ವ್ಯಕ್ತಿ ತನ್ನ ಪ್ರಾಣ ಮತ್ತು ಸಂಪತ್ತಿನೊಂದಿಗೆ ಹೊರಟು ಅದರಿಂದ ಯಾವುದನ್ನೂ ಹಿಂದಕ್ಕೆ ತರದೆ ಮರಳುವ ಹೊರತು."2.
ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಕರ್ಮಗಳ ಶ್ರೇಷ್ಠತೆಗಳು:
1. ಹಜ್ಜ್ ಮತ್ತು ಉಮ್ರಾ ನಿರ್ವಹಿಸುವುದು: ಇವು ಈ ಹತ್ತು ದಿನಗಳಲ್ಲಿ ಮಾಡುವ ಅತಿಶ್ರೇಷ್ಠ ಕರ್ಮಗಳಾಗಿವೆ. ಪ್ರವಾದಿ (ಸ) ರವರು ಹೇಳಿದರು:
«مَن حَجَّ هَذَا الْبَيْتِ فَلَمْ يَرْفُثْ وَلَمْ يَفْسُقْ رَجَعَ كَيَوْمِ وَلَدَتْهُ أُمُّهُ».
"ಯಾರು ಈ ಭವನದ (ಕಅಬಾ) ಹಜ್ಜ್ ನಿರ್ವಹಿಸುತ್ತಾರೋ ಮತ್ತು ಅದರಲ್ಲಿ ಯಾವುದೇ ಅಶ್ಲೀಲ ಮಾತು ಅಥವಾ ಪಾಪಕಾರ್ಯ ಮಾಡುವುದಿಲ್ಲವೋ, ಅವರು ತಮ್ಮ ತಾಯಿ ಜನ್ಮ ನೀಡಿದ ದಿನದಂತೆ (ಪಾಪಮುಕ್ತರಾಗಿ) ಹಿಂತಿರುಗುತ್ತಾರೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ:
«مَن أَتَى هَذَا الْبَيْتِ فَلَمْ يَرْفُثْ وَلَمْ يَفْسُقْ؛ رَجَعَ كَيَوْمٍ وَلَدَتْهُ أُمُّهُ».
"ಯಾರು ಈ ಭವನಕ್ಕೆ (ಕಅಬಾ) ಬರುತ್ತಾರೋ ಮತ್ತು ಯಾವುದೇ ಅಶ್ಲೀಲ ಮಾತು ಅಥವಾ ಪಾಪಕಾರ್ಯ ಮಾಡುವುದಿಲ್ಲವೋ, ಅವರು ತಮ್ಮ ತಾಯಿ ಜನ್ಮ ನೀಡಿದ ದಿನದಂತೆ (ಪಾಪಮುಕ್ತರಾಗಿ) ಹಿಂತಿರುಗುತ್ತಾರೆ."3 ಅವರ ಮಾತು: "ಯಾರು ಈ ಭವನಕ್ಕೆ ಬರುತ್ತಾರೋ" ಇದರ ಅರ್ಥದಲ್ಲಿ ಹಜ್ಜ್
ಮತ್ತು ಉಮ್ರಾ ಎರಡೂ ಒಳಪಡುತ್ತದೆ. ಅಲ್ಲಾಹನಿಗೆ ಸರ್ವಸ್ತುತಿ. ಪ್ರವಾದಿ (ಸ) ರವರು ಹೇಳಿದರು:
«الْعُمْرَةُ إِلَى الْعُمْرَةِ كَفَّارَةٌ لِمَا بَيْنَهُمَا، وَالْحَجُّ الْمَبْرُورُ لَيْسَ لَهُ جَزَاءٌ إِلَّا الْجَنَّةُ».
"ಒಂದು ಉಮ್ರಾದಿಂದ ಇನ್ನೊಂದು ಉಮ್ರಾ ಅವುಗಳ ನಡುವೆ ಸಂಭವಿಸುವ ಪಾಪಗಳಿಗೆ ಪ್ರಾಯಶ್ಚಿತ್ತವಾಗಿವೆ. ಸ್ವೀಕೃತವಾದ ಹಜ್ಜ್ಗೆ ಸ್ವರ್ಗವಲ್ಲದೆ ಬೇರೆ ಪ್ರತಿಫಲವಿಲ್ಲ."4
2. ಒಂಬತ್ತು ದಿನಗಳಲ್ಲಿ, ಅಥವಾ ಸಾಧ್ಯವಾದಷ್ಟು ದಿನಗಳಲ್ಲಿ ಉಪವಾಸ ಆಚರಿಸುವುದು: ಪ್ರವಾದಿ (ಸ) ರವರು ಹೇಳಿದರು:
«مَا مِنْ أَيَّامٍ الْعَمَلُ الصَّالِحُ فِيهِنَّ أَحَبُّ إِلَى اللَّهِ مِنْ هَذِهِ الْأَيَّامِ الْعَشَرِ».
"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಉಪವಾಸವು ಶ್ರೇಷ್ಠ ಸತ್ಕರ್ಮಗಳಲ್ಲಿ ಒಂದಾಗಿದೆ. ಪ್ರವಾದಿ (ಸ) ರವರು ಉಪವಾಸ ಆಚರಿಸಲು ಪ್ರೇರೇಪಿಸಿದ್ದಾರೆ ಮತ್ತು ಅದರಲ್ಲಿ ಆಸಕ್ತಿ ಮೂಡಿಸಿದ್ದಾರೆ. ಪ್ರವಾದಿ (ಸ) ರವರು ಹೇಳಿದ ಒಂದು ವಚನ ಹೀಗಿದೆ:
«مَا مِنْ عَبْدٍ يَصُومُ يَوْمًا فِي سَبِيلِ اللَّهِ إِلَّا بَاعَدَ اللَّهُ بِذَلِكَ الْيَوْمِ وَجْهَهُ عَنِ النَّارِ سَبْعِينَ خَرِيفًا».
"ಯಾವೊಬ್ಬ ದಾಸನು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸ ಆಚರಿಸಿದರೆ, ಅಲ್ಲಾಹು ಆ ದಿನದ ಕಾರಣದಿಂದ ಅವನ ಮುಖವನ್ನು ನರಕದಿಂದ ಎಪ್ಪತ್ತು ವರ್ಷಗಳಷ್ಟು ದೂರಕ್ಕೆ ಸರಿಸುತ್ತಾನೆ."5
3. ಬಲಿದಿನದಂದು ಮತ್ತು ತಶ್ರೀಕ್ನ ದಿನಗಳಲ್ಲಿ ಕುರ್ಬಾನಿ (ಮೃಗಬಲಿ) ನೀಡುವುದನ್ನು ನಿಯಮಗೊಳಿಸಲಾಗಿದೆ. ಪ್ರವಾದಿ (ಸ) ಅವರು ಹೀಗೆ ಮಾಡಿದರು ಎಂಬುದು ದೃಢಪಟ್ಟಿದೆ:
«ضَحَّى بِكَبْشَيْنِ أَمْلَحَيْنِ، أَقْرَنَيْنِ، ذَبَحَهُمَا بِيَدِهِ، وَسَمَّى وَكَبَّرَ وَوَضَعَ رِجْلَهُ عَلَى صِفَاحِهِمَا».
"ಅವರು (ಪ್ರವಾದಿ) ಎರಡು ಬಿಳಿ-ಕಪ್ಪು ಬಣ್ಣದ, ಕೊಂಬುಗಳುಳ್ಳ ಟಗರುಗಳನ್ನು ಬಲಿ ನೀಡಿದರು. ಅವೆರಡನ್ನೂ ತಮ್ಮ ಕೈಯಿಂದ ಕೊಯ್ದರು, ಬಿಸ್ಮಿಲ್ಲಾ ಮತ್ತು ಅಲ್ಲಾಹು ಅಕ್ಬರ್ ಎಂದು ಹೇಳಿದರು ಮತ್ತು ತಮ್ಮ ಕಾಲನ್ನು ಅವುಗಳ ಕುತ್ತಿಗೆಯ ಪಕ್ಕದಲ್ಲಿ ಇಟ್ಟರು."6
ಆಯಿಶ (ರಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:
«مَا عَمِلَ ابْنُ آدَمَ مِنْ عَمَلٍ يَوْمَ النَّحْرِ أَحَبُّ إِلَى اللَّهِ مِنْ إِهْرَاقِ الدَّمِ، وَإِنَّهُ لَيُؤْتَى يَوْمَ الْقِيَامَةِ بِقُرُونِهَا وَأَشْعَارِهَا وَأَظْلافِهَا، وَإِنَّ الدَّمَ لَيَقَعُ مِنَ اللَّهِ بِمَكَانٍ قَبْلَ أَنْ يَقَعَ فِي الْأَرْضِ، فَطَيِّبُوا بِهَا نَفْسًا».
"ಬಲಿದಿನದಂದು (ಬಕ್ರೀದ್) ಆದಮರ ಪುತ್ರನು ರಕ್ತ ಹರಿಸುವುದಕ್ಕಿಂತ ಅಲ್ಲಾಹನಿಗೆ ಹೆಚ್ಚು ಪ್ರಿಯವಾದ ಯಾವುದೇ ಕಾರ್ಯವನ್ನು ಮಾಡುವುದಿಲ್ಲ. ನಿಶ್ಚಯವಾಗಿಯೂ, ಪುನರುತ್ಥಾನ ದಿನದಂದು ಅದರ ಕೊಂಬುಗಳು, ಕೂದಲುಗಳು ಮತ್ತು ಗೊರಸುಗಳೊಂದಿಗೆ ಅದನ್ನು ತರಲಾಗುವುದು. ರಕ್ತವು ಭೂಮಿಗೆ ಬೀಳುವ ಮೊದಲು ಅದು ಅಲ್ಲಾಹನ ಬಳಿ ಒಂದು ಸ್ಥಾನವನ್ನು ಪಡೆಯುತ್ತದೆ. ಆದ್ದರಿಂದ ಅದರ ಮೂಲಕ ನಿಮ್ಮ ಮನಸ್ಸನ್ನು ಸಂತೋಷಪಡಿಸಿರಿ."7
ದುಲ್-ಹಜ್ಜ್ ತಿಂಗಳ ಹತ್ತು ದಿನಗಳು ಪ್ರಾರಂಭವಾದಾಗ, ಖುರ್ಬಾನಿ ಮಾಡಲು ಉದ್ದೇಶಿಸಿರುವ ವ್ಯಕ್ತಿಯು ತನ್ನ ಕೂದಲು ಮತ್ತು ಚರ್ಮದಿಂದ (ಏನನ್ನೂ ಕತ್ತರಿಸದೆ) ದೂರವಿರಬೇಕು. ಉಮ್ಮು ಸಲಮಾ (ರ) ರಿಂದ ವರದಿಯಾದ ಹದೀಸ್ನಲ್ಲಿ ಪ್ರವಾದಿ (ಸ) ರವರು ಹೇಳಿದರು:
«إِذَا رَأَيْتُمْ هِلَالَ ذِي الْحِجَّةِ وَأَرَادَ أَحَدُكُمْ أَنْ يُضَحِّيَ؛ فَلْيُمْسِكْ عَنْ شَعْرِهِ وَأَظْفَارِهِ».
"ನೀವು ದುಲ್-ಹಿಜ್ಜ ತಿಂಗಳ ಚಂದ್ರನನ್ನು ನೋಡಿದರೆ ಮತ್ತು ನಿಮ್ಮಲ್ಲಿ ಯಾರಾದರೂ ಖುರ್ಬಾನಿ ಮಾಡಲು ಬಯಸಿದರೆ, ಅವರು ತಮ್ಮ ಕೂದಲು ಮತ್ತು ಉಗುರುಗಳಿಂದ (ಅವುಗಳನ್ನು ಕತ್ತರಿಸುವುದರಿಂದ) ದೂರವಿರಲಿ." ಇನ್ನೊಂದು ವರದಿಯಲ್ಲಿ ಹೀಗಿದೆ:
«... فَلَا يَأْخُذَنَّ مِنْ شَعْرِهِ وَلَا مِنْ أَظْفَارِهِ شَيْئًا حَتَّى يُضَحِّيَ».
"...ಕುರ್ಬಾನಿ ಮಾಡುವವರೆಗೆ ಅವರು ತಮ್ಮ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು."8
4. ಈ ಹತ್ತು ದಿನಗಳಲ್ಲಿ ಮತ್ತು ತಶ್ರೀಕ್ನ ದಿನಗಳಲ್ಲಿ ತಕ್ಬೀರ್, ತಹ್ಲೀಲ್, ಮತ್ತು ಧಿಕ್ರ್ (ಅಲ್ಲಾಹನ ಸ್ಮರಣೆ) ಹೇಳುವುದು: ಅಬ್ದುಲ್ಲಾ ಇಬ್ನ್ ಉಮರ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:
«مَا مِنْ أَيَّامٍ أَعْظَمَ عِندَ اللَّهِ وَلَا أَحَبُّ إِلَيْهِ مِنَ الْعَمَلِ فِيهِنَّ مِنْ هَذِهِ الْأَيَّامِ الْعَشَرِ، فَأَكْثِرُوا فِيهِنَّ: مِنَ التَّهْلِيلِ، وَالتَّكْبِيرِ، وَالتَّحْمِيدِ».
"ಈ ಹತ್ತು ದಿನಗಳ ಹೊರತು ಅಲ್ಲಾಹನ ಬಳಿ ಹೆಚ್ಚು ಶ್ರೇಷ್ಠವಾದ ಮತ್ತು ಅವನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ. ಆದ್ದರಿಂದ ಈ ದಿನಗಳಲ್ಲಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್), ತಕ್ಬೀರ್ (ಅಲ್ಲಾಹು ಅಕ್ಬರ್), ಮತ್ತು ತಹ್ಮೀದ್ (ಅಲ್-ಹಮ್ದುಲಿಲ್ಲಾಹ್) ಗಳನ್ನು ಹೆಚ್ಚಾಗಿ ಪಠಿಸಿರಿ."9
ತಕ್ಬೀರ್ ಕೆಳಗೆ ವಿವರಿಸಿದಂತೆ ಎರಡು ವಿಧಗಳಲ್ಲಿವೆ:
ಮೊದಲನೆಯ ವಿಧ: ಅನಿರ್ಬಂಧಿತ ತಕ್ಬೀರ್. ಇದು ನಮಾಝ್ಗಳ ನಂತರ ಹೇಳುವುದಕ್ಕೆ ಮಾತ್ರ ಸೀಮಿತವಲ್ಲ; ಬದಲಾಗಿ ಎಲ್ಲಾ ಸಮಯಗಳಲ್ಲೂ ಇದನ್ನು ಪಠಿಸಬಹುದು.
ಈದುಲ್ ಅದ್ಹಾದ (ಬಕ್ರೀದ್ನ) ಅನಿರ್ಬಂಧಿತ ತಕ್ಬೀರ್ ದುಲ್-ಹಿಜ್ಜ ತಿಂಗಳ ಮೊದಲ ದಿನದಿಂದ ಪ್ರಾರಂಭವಾಗಿ ತಶ್ರೀಕ್ನ ದಿನಗಳ ಕೊನೆಯ ದಿನದವರೆಗೆ, ಎಲ್ಲಾ ಸಮಯಗಳಲ್ಲೂ, ರಾತ್ರಿ, ಹಗಲು, ದಾರಿಯಲ್ಲಿ, ಮಾರುಕಟ್ಟೆಗಳಲ್ಲಿ, ಮಸೀದಿಗಳಲ್ಲಿ, ಮನೆಗಳಲ್ಲಿ, ಮತ್ತು ಅಲ್ಲಾಹನ ಸ್ಮರಣೆ ಮಾಡಲು ಅನುಮತಿಸಲಾದ ಪ್ರತಿಯೊಂದು ಸ್ಥಳದಲ್ಲಿಯೂ ಇರುತ್ತದೆ.
ಎರಡನೆಯ ವಿಧ: ನಿರ್ಬಂಧಿತ ತಕ್ಬೀರ್: ಇದು ಈದುಲ್ ಅದ್ಹಾದಲ್ಲಿ (ಬಕ್ರೀದ್ನಲ್ಲಿ) ವಿಶೇಷವಾಗಿ (ಕಡ್ಡಾಯ) ನಮಾಝ್ಗಳ ನಂತರ ಹೇಳುವುದಕ್ಕೆ ಸೀಮಿತವಾಗಿದೆ. ಅದರ ಸಮಯ ಮತ್ತು ಸ್ವರೂಪ ಈ ಕೆಳಗಿನಂತಿವೆ:
ಮೊದಲನೆಯದಾಗಿ: ನಿರ್ಬಂಧಿತ ತಕ್ಬೀರ್ ಅರಫಾ ದಿನದ ಫಜ್ರ್ ನಮಾಝ್ನ ನಂತರ ಪ್ರಾರಂಭವಾಗುತ್ತದೆ ಮತ್ತು ತಶ್ರೀಕ್ನ ದಿನಗಳ ಮೂರನೆಯ ದಿನದ ಅಸರ್ ನಮಾಝ್ನ ನಂತರ ಕೊನೆಗೊಳ್ಳುತ್ತದೆ. ಇದು ಹಜ್ ನಿರ್ವಹಿಸದವರಿಗಾಗಿ. ಹಜ್ ನಿರ್ವಹಿಸುವವರಿಗೆ ನಿರ್ಬಂಧಿತ ತಕ್ಬೀರ್ ಬಲಿದಿನದ ಝುಹ್ರ್ ನಮಾಝ್ನಿಂದ ಪ್ರಾರಂಭವಾಗುತ್ತದೆ.
ಎರಡನೆಯದಾಗಿ: ತಕ್ಬೀರ್ ಪಠಿಸುವ ರೂಪ: "ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್"10
5. ಹಜ್ ನಿರ್ವಹಿಸದವರು ಈದ್ ನಮಾಝ್ ನಿರ್ವಹಿಸಲು, ಅದಕ್ಕಾಗಿ ಬೇಗನೆ ತೆರಳಲು, ಮತ್ತು ಖುತ್ಬಾ (ಪ್ರವಚನ) ಆಲಿಸಲು ಆಸಕ್ತಿ ತೋರುವುದು: ಏಕೆಂದರೆ ಇದು ಇಸ್ಲಾಮಿನ ಮಹಾನ್ ಚಿಹ್ನೆಗಳಲ್ಲಿ ಒಂದಾಗಿದೆ. ಅದರ ಮಹತ್ವದ ಕಾರಣದಿಂದಾಗಿ ಮಹಿಳೆಯರನ್ನು—ಕನ್ಯೆಯರು ಮತ್ತು ಋತುಮತಿಯಾದವರನ್ನೂ ಸಹ ಅದಕ್ಕಾಗಿ ಹೊರಡಲು ಆದೇಶಿಸಲಾಗಿದೆ. ಉಮ್ಮು ಅತಿಯ್ಯಾ (ರ) ರಿಂದ ವರದಿ. ಅವರು ಹೇಳಿದರು:
«كُنَّا نُؤْمَرُ أَنْ نَخْرُجَ يَوْمَ الْعِيدِ حَتَّى نُخْرِجَ الْبِكْرَ مِنْ خِدْرِهَا، حَتَّى نُخْرِجَ الْحُيَّضَ فَيَكُنَّ خَلْفَ النَّاسِ، فَيُكَبِّرْنَ بِتَكْبِيرِهِمْ، وَيَدْعُونَ بِدَعَائِهِمْ، وَيَرْجُونَ بَرَكَةَ ذَٰلِكَ الْيَوْمِ وَطَهَارَتِهِ».
"ಈದ್ ದಿನದಂದು ನಮಗೆ ಹೊರಡಲು ಆದೇಶಿಸಲಾಗುತ್ತಿತ್ತು. ಎಷ್ಟರಮಟ್ಟಿಗೆ ಎಂದರೆ ನಾವು ಕನ್ಯೆಯರನ್ನು ಅವರ ಕೋಣೆಯಿಂದ ಹೊರತರುತ್ತಿದ್ದೆವು ಮತ್ತು ಋತುಮತಿಯಾದವರನ್ನೂ ಹೊರತರುತ್ತಿದ್ದೆವು. ಅವರು ಜನರ ಹಿಂದೆ ಇರುತ್ತಿದ್ದರು. ಅವರು (ಮುಸ್ಲಿಮರು) ತಕ್ಬೀರ್ ಹೇಳುವಾಗ ಇವರೂ ಭಾಗಿಯಾಗುತ್ತಿದ್ದರು ಮತ್ತು ಅವರು ದುಆ ಮಾಡುವಾಗ ಇವರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರು ಆ ದಿನದ ಸಮೃದ್ಧಿ ಮತ್ತು ಪರಿಶುದ್ಧತೆಯನ್ನು ಆಶಿಸುತ್ತಿದ್ದರು." ಇನ್ನೊಂದು ವರದಿಯಲ್ಲಿ ಹೀಗಿದೆ:
«وَأَمَرَ الْحُيَّضَ أَنْ يَعْتَزِلْنَ مُصَلَّىٰ الْمُسْلِمِينَ».
"ಮತ್ತು ಋತುಮತಿಯಾದವರಿಗೆ ಮುಸ್ಲಿಮರು ನಮಾಝ್ ಮಾಡುವ ಸ್ಥಳದಿಂದ ದೂರವಿರಲು ಆದೇಶಿಸಲಾಗಿತ್ತು."11
6. ಐಚ್ಛಿಕ ಆರಾಧನೆಗಳಂತಹ ಸತ್ಕರ್ಮಗಳನ್ನು ಹೆಚ್ಚಿಸುವುದು: ಉದಾಹರಣೆಗೆ ನಮಾಝ್, ಸದಕಾ (ದಾನ), ಪವಿತ್ರ ಕುರ್ಆನ್ ಪಾರಾಯಣ, ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ನಿಷೇಧಿಸುವುದು, ನೆರೆಹೊರೆಯವರಿಗೆ ಉಪಕಾರ ಮಾಡುವುದು, ರಕ್ತಸಂಬಂಧವನ್ನು ಕಾಪಾಡುವುದು ಮುಂತಾದ ಸತ್ಕರ್ಮಗಳು. ಪ್ರವಾದಿ (ಸ) ರವರ ಸಾಮಾನ್ಯ ಹೇಳಿಕೆಯು ಇದಕ್ಕೆ ಆಧಾರವಾಗಿದೆ:
«مَا مِنْ أَيَّامٍ الْعَمَلُ الصَّالِحُ فِيهِنَّ أَحَبُّ إِلَى اللَّهِ مِنْ هَذِهِ الْأَيَّامِ الْعَشَرِ»، قَالُوا: يَا رَسُولَ اللَّهِ! وَلا الْجِهَادُ فِي سَبِيلِ اللَّهِ؟ فَقَالَ رَسُولُ اللَّهِ صَلَّى اللَّهُ عَلَيْهِ وَسَلَّمَ : «وَلا الْجِهَادُ فِي سَبِيلِ اللَّهِ، إِلَّا رَجُلٌ خَرَجَ بِنَفْسِهِ وَمَالِهِ فَلَمْ يَرْجِعْ مِنْ ذَلِكَ بِشَيْءٍ».
"ಈ ಹತ್ತು ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದೂ ಇಲ್ಲ. ಆದರೆ ಒಬ್ಬ ವ್ಯಕ್ತಿ ತನ್ನ ಪ್ರಾಣ ಮತ್ತು ಸಂಪತ್ತಿನೊಂದಿಗೆ ಹೊರಟು ಅದರಿಂದ ಯಾವುದನ್ನೂ ಹಿಂದಕ್ಕೆ ತರದೆ ಮರಳುವ ಹೊರತು."12.
ನಾವು ಕಲಿತದ್ದನ್ನು ನಮಗೆ ಪ್ರಯೋಜನಕಾರಿಯಾಗಿ ಮಾಡಲು ಮತ್ತು ನಮಗೆ ಪ್ರಯೋಜನಕಾರಿಯಾದುದನ್ನು (ಮಾತ್ರ) ನಮಗೆ ಕಲಿಸಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಪರಮ ಉದಾರಿಯಾಗಿದ್ದಾನೆ. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಹೇರಳವಾಗಿ ವರ್ಷಿಸಲಿ.
***
ಪರಿವಿಡಿ
ದುಲ್ಹಿಜ್ಜ ತಿಂಗಳ ಮೊದಲ ಹತ್ತು ದಿನಗಳ ಶ್ರೇಷ್ಠತೆ 3
ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಕರ್ಮಗಳ ಶ್ರೇಷ್ಠತೆಗಳು: 4
***
ಇದನ್ನು ಬುಖಾರಿ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ. ಇದು ತಿರ್ಮಿದಿಯ ವರದಿಯಲ್ಲಿರುವ ಪದಗಳು.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಅಹ್ಮದ್ ವರದಿ ಮಾಡಿದ್ದಾರೆ.
ನೋಡಿ: ಇಬ್ನ್ ಖುದಾಮ ರವರ ಅಲ್-ಮುಗ್ನಿ (3/290), ಮತ್ತು ಅಶ್ಶರ್ಹುಲ್-ಕಬೀರ್ ಮಅಲ್-ಮುಖ್ನಿಇ ವಲ್-ಇನ್ಸಾಫ್ (5/380).
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ವರದಿ ಮಾಡಿದ್ದಾರೆ, ಮತ್ತು ತಿರ್ಮಿಧಿಯವರ ವರದಿಯೂ ಇದೆ.
ತಫ್ಸೀರ್ ಇಬ್ನ್ ಕಸೀರ್ (4/106), ಝಾದುಲ್-ಮಆದ್ (1/56)].