أَحْكَامُ الهَدْيِ وَالأَضَاحِي وَالتَّذْكِيَةِ
ಹದ್ಯ್, ಉದ್ಹಿಯ ಮತ್ತು ತಝ್ಕಿಯಃದ ನಿಯಮಗಳು
اللَّجْنَةُ العِلْمِيَّةُ
بِرِئَاسَةِ الشُّؤُونِ الدِّينِيَّةِ بِالمَسْجِدِ الحَرَامِ وَالمَسْجِدِ النَّبَوِيِّ
ಮಸ್ಜಿದುಲ್-ಹರಾಮ್ ಮತ್ತು ಮಸ್ಜಿದು ನ್ನಬವಿಯ ಧಾರ್ಮಿಕ ವ್ಯವಹಾರಗಳ ಅಧ್ಯಕ್ಷತೆಯ ಅಡಿಯಲ್ಲಿರುವ ವೈಜ್ಞಾನಿಕ ಸಮಿತಿ
بِسْمِ اللهِ الرَّحمَنِ الرَّحِيمِ
ಹದ್ಯ್, ಉದ್ಹಿಯ ಮತ್ತು ತಝ್ಕಿಯಃದ ನಿಯಮಗಳು
ಪೀಠಿಕೆ
ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹುವಿಗೆ ಮೀಸಲು. ಸಮಸ್ತ ಲೋಕಗಳಿಗೆ ಕಾರುಣ್ಯವಾಗಿ ಕಳುಹಿಸಲ್ಪಟ್ಟ ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಚರರ ಮೇಲೆ ಮತ್ತು ಅವರ ಜೀವನಚರ್ಯೆಯನ್ನು ಹಿಂಬಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವವರ ಮೇಲೆ ಲೋಕಾಂತ್ಯದವರೆಗೂ ಅಲ್ಲಾಹುವಿನ ಸಲಾತ್ ಮತ್ತು ಸಲಾಂ ಇರಲಿ. ಮಂದುವರಿದು ಹೇಳುವುದೇನೆಂದರೆ:
ಇದು ಹದ್ಯ್ (ಹಜ್ನಲ್ಲಿ ಬಲಿ ನೀಡಲಾಗುವ ಪ್ರಾಣಿ), ಉದ್ಹಿಯ (ಕುರ್ಬಾನಿ) ಮತ್ತು ತಝ್ಕಿಯಃ (ಪ್ರಾಣಿ ವಧೆ)ಗಳ ನಿಯಮಗಳಿಗೆ ಸಂಬಂಧಿಸಿದಂತೆ ಒಬ್ಬ ಮುಸಲ್ಮಾನನಿಗೆ ಅಗತ್ಯವಿರುವ ಪ್ರಮುಖ ವಿಷಯಗಳನ್ನು ಒಳಗೊಂಡಿರುವ ಒಂದು ಸಂಕ್ಷಿಪ್ತ ಕೈಪಿಡಿಯಾಗಿದೆ. ಎರಡು ಪವಿತ್ರ ಹರಮ್ಗಳಿಗೆ ಭೇಟಿ ನೀಡುವ ಸಂದರ್ಶಕರು ಮತ್ತು ಸಂದರ್ಶಕಿಯರಿಗೆ, ಅವರು ತಮ್ಮ ಧರ್ಮದ ವಿಷಯಗಳ ಬಗ್ಗೆ ಅರಿವು ಮತ್ತು ಒಳನೋಟವನ್ನು ಹೊಂದುವುದಕ್ಕಾಗಿ ನಾವು ಇದನ್ನು ಸಂಗ್ರಹಿಸಿದ್ದೇವೆ. ಪರಮ ಉದಾರಿಯಾದ ಅಲ್ಲಾಹು ಇದರ ಮೂಲಕ ಪ್ರಯೋಜನವನ್ನು ಉಂಟುಮಾಡಲಿ ಮತ್ತು ಇದನ್ನು ಅವನ ಸಂಪ್ರೀತಿಗಾಗಿ ಮಾತ್ರ ರಚಿಸಲಾದ ಒಂದು ಸತ್ಕರ್ಮವನ್ನಾಗಿ ಮಾಡಲಿ ಎಂದು ನಾವು ಆಶಿಸುತ್ತೇವೆ. ನಿಶ್ಚಯವಾಗಿಯೂ ಅವನು ಅತ್ಯುತ್ತಮ ಹೊಣೆಗಾರನು ಮತ್ತು ಆಶಿಸಲ್ಪಡುವವರ ಪೈಕಿ ಅತ್ಯಂತ ಉದಾರಿಯಾಗಿದ್ದಾನೆ.
ವಿವಿಧ ಭಾಷೆಗಳಲ್ಲಿ ಇಸ್ಲಾಮೀ ವಿಷಯಗಳ ಸೇವಾ ಸಂಘದ ಜ್ಞಾನ ಸಮಿತಿ
ಹದ್ಯ್, ಉದ್ಹಿಯ ಮತ್ತು ತಝ್ಕಿಯಃದ ನಿಯಮಗಳು
ಹದ್ಯ್ (ಹಜ್ನಲ್ಲಿ ಬಲಿ ನೀಡಲಾಗುವ ಪ್ರಾಣಿ): ಹದ್ಯ್ ಎಂದರೆ ಹರಮ್ಗೆ ( ಮಕ್ಕಾದ ಪವಿತ್ರ ಮಸೀದಿ) ಅರ್ಪಿಸಲಾಗುವ ಮತ್ತು ಅಲ್ಲಿ ವಧೆ ಮಾಡಲಾಗುವ ಜಾನುವಾರುಗಳು (ಒಂಟೆ, ದನ, ಕುರಿ) ಮತ್ತು ಇತರ ಪ್ರಾಣಿಗಳು. ಇದನ್ನು ಈ ಹೆಸರಿನಿಂದ ಕರೆಯಲು ಕಾರಣವೇನೆಂದರೆ, ಇದನ್ನು ಸರ್ವಶಕ್ತನಾದ ಅಲ್ಲಾಹುವಿಗೆ ಅರ್ಪಿಸಲಾಗುತ್ತದೆ.
ಉದ್ಹಿಯ (ಕುರ್ಬಾನಿ): ಉದ್ಹಿಯ ಎಂದರೆ ಅಲ್ಲಾಹುವಿಗೆ ಹತ್ತಿರವಾಗಲು ಈದ್ ದಿನ (ಬಕ್ರೀದ್) ಮತ್ತು ತಶ್ರೀಕ್ನ ದಿನಗಳಲ್ಲಿ (ಬಕ್ರೀದ್ ನಂತರದ ಮೂರು ದಿನಗಳು) ಅಲ್ಲಾಹುವಿಗಾಗಿ ವಧೆ ಮಾಡಲಾಗುವ ಪ್ರಾಣಿ.
ಇವೆರಡೂ ನಿಯಮಬದ್ಧವೆಂಬುದರಲ್ಲಿ ಮುಸ್ಲಿಮರು ಒಮ್ಮತಾಭಿಪ್ರಾಯ ಹೊಂದಿದ್ದಾರೆ.
ಅತಿಶ್ರೇಷ್ಠ ಹದ್ಯ್ (ಹಜ್ನಲ್ಲಿ ಬಲಿ ನೀಡಲಾಗುವ ಪ್ರಾಣಿ): ಅತಿಶ್ರೇಷ್ಠ ಹದ್ಯ್ ಎಂದರೆ ಒಂಟೆ, ನಂತರ ದನ (ಬೆಲೆಯು ಹೆಚ್ಚೆಂದು ಮಾತ್ರ), ಅವುಗಳನ್ನು ಪೂರ್ಣವಾಗಿ ಅರ್ಪಿಸಿದರೆ ಮತ್ತು ಅದರ ಮಾಂಸದ ಹೇರಳತೆಯಿಂದ ಬಡವರಿಗೆ ಹೆಚ್ಚು ಪ್ರಯೋಜನವಾಗುತ್ತದೆ - ನಂತರ ಕುರಿ (ಮೇಕೆ).
ಪ್ರತಿಯೊಂದು ಜಾತಿಯಲ್ಲೂ ಅತಿಶ್ರೇಷ್ಠವಾದುದು ಅತ್ಯಂತ ಕೊಬ್ಬಿರುವುದು, ನಂತರ ಹೆಚ್ಚು ಬೆಲೆಯುಳ್ಳದ್ದಾಗಿದೆ. ಅಲ್ಲಾಹು ಹೇಳುತ್ತಾನೆ:
﴿ذَٰلِكَۖ وَمَن يُعَظِّمۡ شَعَٰٓئِرَ ٱللَّهِ فَإِنَّهَا مِن تَقۡوَى ٱلۡقُلُوبِ 32﴾
"ಅದೇಕೆಂದರೆ, ಮತ್ತು ಯಾರು ಅಲ್ಲಾಹುವಿನ ಚಿಹ್ನೆಗಳನ್ನು ಗೌರವಿಸುತ್ತಾನೋ, ಅದು ಹೃದಯಗಳ ಧರ್ಮನಿಷ್ಠೆಯಿಂದಾಗಿದೆ." [ಸೂರ ಅಲ್-ಹಜ್ಜ್: 32].
ಕುರಿಯ ಜಾತಿಯಲ್ಲಿ 'ಜದಅ್' ವಯಸ್ಸಿನದ್ದಲ್ಲದೆ ಬೇರೆ ಸ್ವೀಕಾರಾರ್ಹವಲ್ಲ. ಜದಅ್ ಎಂದರೆ ಆರು ತಿಂಗಳು ಪೂರ್ಣಗೊಂಡಿರುವ ಕುರಿಮರಿ. ಇನ್ನುಳಿದ ಪ್ರಾಣಿಗಳಾದ ಒಂಟೆ, ದನ ಮತ್ತು ಆಡುಗಳಲ್ಲಿ 'ಸನಿಯ್ಯ್' ವಯಸ್ಸಿನದ್ದಾಗಿರಬೇಕು. ಒಂಟೆಗಳಲ್ಲಿ 'ಸನಿಯ್ಯ್' ಎಂದರೆ ಐದು ವರ್ಷ ಪೂರ್ಣಗೊಂಡಿರುವಂತದ್ದು, ದನಗಳಲ್ಲಿ ಎರಡು ವರ್ಷ ಪೂರ್ಣಗೊಂಡಿರುವಂತದ್ದು, ಮತ್ತು ಆಡು/ಮೇಕೆಗಳಲ್ಲಿ ಒಂದು ವರ್ಷ ಪೂರ್ಣಗೊಂಡಿರುವಂತದ್ದು.
ಹದ್ಯ್ನಲ್ಲಿ ಒಂದು ಕುರಿ ಒಬ್ಬ ವ್ಯಕ್ತಿಗೆ ಸಾಕಾಗುತ್ತದೆ. ಉದ್ಹಿಯದಲ್ಲಿ (ಕುರ್ಬಾನಿಯಲ್ಲಿ) ಒಂದು ಕುರಿ ಒಬ್ಬ ವ್ಯಕ್ತಿ ಮತ್ತು ಅವನ ಮನೆಯವರಿಗೆ ಸಾಕಾಗುತ್ತದೆ. ಹದ್ಯ್ ಮತ್ತು ಉದ್ಹಿಯಃದಲ್ಲಿ ಒಂದು ಒಂಟೆ ಮತ್ತು ಒಂದು ದನ ಏಳು ಜನರಿಗೆ ಸಾಕಾಗುತ್ತದೆ. ಇದಕ್ಕೆ ಜಾಬಿರ್ ಬಿನ್ ಅಬ್ದುಲ್ಲಾ (ರ) ರವರ ಹದೀಸ್ ಆಧಾರವಾಗಿದೆ. ಅವರು ಹೇಳಿದರು:
«نَحَرْنَا مَعَ رَسُولِ اللَّهِ صَلَّى اللَّهُ عَلَيْهِ وَسَلَّمَ عَامَ الْحُدَيْبِيَةِ الْبَدَنَةَ عَنْ سَبْعَةٍ، وَالْبَقَرَةَ عَنْ سَبْعَةٍ».
"ನಾವು ಅಲ್ಲಾಹುವಿನ ಸಂದೇಶವಾಹಕರೊಂದಿಗೆ (ಸ) ಹುದೈಬಿಯಾದ ವರ್ಷದಲ್ಲಿ ಒಂದು ಒಂಟೆಯನ್ನು ಏಳು ಜನರ ಪರವಾಗಿ ಮತ್ತು ಒಂದು ದನವನ್ನು ಏಳು ಜನರ ಪರವಾಗಿ ಕೊಯ್ದೆವು." ಇನ್ನೊಂದು ವರದಿಯಲ್ಲಿ ಹೀಗಿದೆ:
«خَرَجْنَا مَعَ رَسُولِ اللَّهِ صَلَّى اللَّهُ عَلَيْهِ وَسَلَّمَ مُهِلِّينَ بِالْحَجِّ فَأَمَرَنَا رَسُولُ اللَّهِ صَلَّى اللَّهُ عَلَيْهِ وَسَلَّمَ أَنْ نَشْتَرِكَ فِي الْإِبِلِ وَالْبَقَرِ كُلُّ سَبْعَةٍ مِّنَّا فِي بَدَنَةٍ».
"ನಾವು ಹಜ್ಗಾಗಿ ಇಹ್ರಾಮ್ ಧರಿಸಿ ಅಲ್ಲಾಹುವಿನ ಸಂದೇಶವಾಹಕರೊಂದಿಗೆ (ಸ) ಹೊರಟೆವು. ಆಗ ಅಲ್ಲಾಹುವಿನ ಸಂದೇಶವಾಹಕರು (ಸ) ಒಂಟೆ ಮತ್ತು ದನಗಳಲ್ಲಿ ಪಾಲುದಾರರಾಗಲು—ನಮ್ಮಲ್ಲಿನ ಪ್ರತಿ ಏಳು ಜನರು ಒಂದು ಒಂಟೆಯಲ್ಲಿ ಪಾಲುದಾರರಾಗಲು ನಮಗೆ ಆದೇಶಿಸಿದರು." ಇನ್ನೊಂದು ವರದಿಯಲ್ಲಿ ಹೀಗಿದೆ:
«حَجَجْنَا مَعَ رَسُولِ اللَّهِ صَلَّى اللَّهُ عَلَيْهِ وَسَلَّمَ فَنَحَرْنَا الْبَعِيرَ عَنْ سَبْعَةٍ، وَالْبَقَرَةَ عَنْ سَبْعَةٍ».
"ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಸ) ಹಜ್ ನಿರ್ವಹಿಸಿದೆವು. ಆಗ ನಾವು ಒಂದು ಒಂಟೆಯನ್ನು ಏಳು ಜನರ ಪರವಾಗಿ ಮತ್ತು ಒಂದು ದನವನ್ನು ಏಳು ಜನರ ಪರವಾಗಿ ವಧೆ ಮಾಡಿದೆವು"1.
ಅಬೂ ಅಯ್ಯೂಬ್ ಅಲ್-ಅನ್ಸಾರಿ (ರ) ರವರ ಹದೀಸ್ನ ಪ್ರಕಾರ, "ಅಲ್ಲಾಹುವಿನ ಸಂದೇಶವಾಹಕರ (ಸ) ಕಾಲದಲ್ಲಿ ಕುರ್ಬಾನಿಗಳು ಹೇಗಿದ್ದವು?" ಎಂದು ಅವರಲ್ಲಿ ಕೇಳಿದಾಗ, ಅವರು ಹೇಳಿದರು:
«كَانَ الرَّجُلُ يُضَحِّي بِالْشَاةِ عَنْهُ وَعَنْ أَهْلِ بَيْتِهِ، فَيَأْكُلُونَ، وَيُطْعِمُونَ، حَتَّى تَبَاهَى النَّاسُ فَصَارَتْ كَمَا تَرَى».
"ಒಬ್ಬ ವ್ಯಕ್ತಿಯು ತನಗಾಗಿ ಮತ್ತು ತನ್ನ ಮನೆಯವರಿಗಾಗಿ ಒಂದು ಕುರಿಯನ್ನು ಕುರ್ಬಾನಿ ಮಾಡುತ್ತಿದ್ದನು. ಅವರು ಅದರಿಂದ ತಿನ್ನುತ್ತಿದ್ದರು ಮತ್ತು ಇತರರಿಗೂ ತಿನ್ನಿಸುತ್ತಿದ್ದರು. ಜನರು ಹೆಮ್ಮೆಪಡಲು ಪ್ರಾರಂಭಿಸುವವರೆಗೆ ಹೀಗೆಯೇ ಇತ್ತು. ನಂತರ ನೀವು ನೋಡುತ್ತಿರುವಂತೆ ಆಯಿತು."2
ಒಂದು ಒಂಟೆ ಅಥವಾ ದನದ ಏಳನೇ ಒಂದು ಭಾಗಕ್ಕಿಂತ ಒಂದು ಕುರಿ (ಪೂರ್ಣವಾಗಿ ಅರ್ಪಿಸುವುದು) ಉತ್ತಮವಾಗಿದೆ.
ಹದ್ಯ್ ಮತ್ತು ಉದ್ಹಿಯಃ ಗಳಿಗಾಗಿ ರೋಗ, ಅಂಗವೈಕಲ್ಯವಿಲ್ಲದ ಮತ್ತು ಕೃಶವಾಗಿಲ್ಲದ ಪ್ರಾಣಿ ಮಾತ್ರ ಸ್ವೀಕಾರಾರ್ಹ. ಸ್ಪಷ್ಟವಾಗಿ ಒಂದು ಕಣ್ಣು ಕಾಣದ ಪ್ರಾಣಿ, ಸಂಪೂರ್ಣ ಕುರುಡಾದ ಪ್ರಾಣಿ, ಅತಿ ತೆಳ್ಳಗಿನ, ಮೂಳೆಗಳಲ್ಲಿ ಮಜ್ಜೆ ಇಲ್ಲದಷ್ಟು ಕೃಶವಾದ ಪ್ರಾಣಿ, ಆರೋಗ್ಯವಂತ ಪ್ರಾಣಿಗಳೊಂದಿಗೆ ನಡೆಯಲು ಸಾಧ್ಯವಾಗದಷ್ಟು ಕುಂಟಾದ ಪ್ರಾಣಿ, ಮುಂಭಾಗದ ಹಲ್ಲುಗಳು ಬುಡದಿಂದಲೇ ಬಿದ್ದುಹೋದ ಪ್ರಾಣಿ, ವಯಸ್ಸಿನ ಕಾರಣದಿಂದ ಕೆಚ್ಚಲು ಬತ್ತಿಹೋಗಿ ಹಾಲು ಬಾರದ ಪ್ರಾಣಿ ಮತ್ತು ರೋಗವು ಸ್ಪಷ್ಟವಾಗಿ ಕಾಣುವಂತಹ ಅಸ್ವಸ್ಥ ಪ್ರಾಣಿ ಸ್ವೀಕಾರಾರ್ಹವಲ್ಲ. ಇದಕ್ಕೆ ಬರಾಅ್ ಬಿನ್ ಆಝಿಬ್ (ರ) ರವರ ಹದೀಸ್ ಆಧಾರವಾಗಿದೆ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಸ) ನಮ್ಮ ಮಧ್ಯೆ ನಿಂತು ಹೇಳಿದರು:
«أَرْبَعٌ لَا تَجُوزُ فِي الْأَضَاحِي: الْعَوْرَاءُ الْبَيِّنُ عَوَرُهَا، وَالْمَرِيضَةُ الْبَيِّنُ مَرَضُهَا، وَالْعَرْجَاءُ الْبَيِّنُ ظَلْعُهَا، وَالْعَجْفَاءُ الَّتِي لا تُنْقِي».
"ನಾಲ್ಕು ರೀತಿಯ ಪ್ರಾಣಿಗಳು ಕುರ್ಬಾನಿಗೆ ಅನುಮತಿಸಲಾಗುವುದಿಲ್ಲ: ಸ್ಪಷ್ಟವಾಗಿ ಒಂದು ಕಣ್ಣು ಕಾಣದ ಪ್ರಾಣಿ, ರೋಗವು ಸ್ಪಷ್ಟವಾಗಿರುವ ಅಸ್ವಸ್ಥ ಪ್ರಾಣಿ, ಕುಂಟುತನವು ಸ್ಪಷ್ಟವಾಗಿರುವ ಕುಂಟಾದ ಪ್ರಾಣಿ, ಮತ್ತು ಮಜ್ಜೆ ಇಲ್ಲದಷ್ಟು ಕೃಶವಾದ (ಅತಿ ತೆಳ್ಳಗಿನ) ಪ್ರಾಣಿ."3
ಇಮಾಮ್ ತಿರ್ಮಿದಿ (ರ) ಹೇಳಿದರು: "ವಿದ್ವಾಂಸರು ಇದರ ಆಧಾರದಲ್ಲಿ ಕರ್ಮವೆಸಗಿದ್ದಾರೆ."4
ಸರಿಯಾದ ಅಭಿಪ್ರಾಯದ ಪ್ರಕಾರ, ತಮತ್ತುಅ್ನ ಹದ್ಯ್ (ತಮತ್ತುಅ್ ಎಂದರೆ ಹಜ್ ನಿರ್ವಹಿಸಲಾಗುವ ಒಂದು ವಿಧಾನ) ಮತ್ತು ಉದ್ಹಿಯಃದ ಪ್ರಾಣಿಗಳನ್ನು ಕೊಯ್ಯುವ ಸಮಯ ಈದ್ ನಮಾಝಿನ ನಂತರದಿಂದ ತಶ್ರೀಕ್ನ ದಿನಗಳ (ಬಕ್ರೀದ್ ನಂತರದ 3 ದಿನಗಳು) ಕೊನೆಯವರೆಗೆ ಇರುತ್ತದೆ.
ಹದ್ಯ್ ನಿಂದಲೂ—ಅದು ತಮತ್ತುಅ್ ಅಥವಾ ಕಿರಾನ್ (ಹಜ್ ನಿರ್ವಹಿಸಲಾಗುವ ಇನ್ನೊಂದು ವಿಧಾನ), ಮತ್ತು ಉದ್ಹಿಯದಿಂದಲೂ ತಿನ್ನುವುದು, ಉಡುಗೊರೆಯಾಗಿ ನೀಡುವುದು ಮತ್ತು ಮೂರು ಭಾಗ ಮಾಡಿ ದಾನ ಮಾಡುವುದು ಅಪೇಕ್ಷಣೀಯವಾಗಿದೆ. ಅಲ್ಲಾಹು ಹೇಳುತ್ತಾನೆ:
﴿...فَكُلُواْ مِنۡهَا وَأَطۡعِمُواْ ٱلۡبَآئِسَ ٱلۡفَقِيرَ﴾
"ನಂತರ ನೀವು ಅದರಿಂದ ತಿನ್ನಿರಿ ಮತ್ತು ಸಂಕಷ್ಟದಲ್ಲಿರುವ ಬಡವನಿಗೂ ತಿನ್ನಲು ಕೊಡಿರಿ." [ಸೂರ ಅಲ್-ಹಜ್ಜ್: 28].
ಆದರೆ ಅದು 'ಜುಬ್ರಾನ್' (ಪ್ರಾಯಶ್ಚಿತ್ತ)ನ ಹದ್ಯ್ ಆಗಿದ್ದರೆ, ಅಂದರೆ ಇಹ್ರಾಮ್ನ ನಿಷಿದ್ಧ ಕಾರ್ಯಗಳಲ್ಲಿ ಯಾವುದಾದರೂ ಒಂದನ್ನು ಮಾಡಿದ ಕಾರಣಕ್ಕಾಗಿ ಅಥವಾ ಒಂದು ಕಡ್ಡಾಯ ಕರ್ಮವನ್ನು ಬಿಟ್ಟ ಕಾರಣಕ್ಕಾಗಿ ನೀಡಲಾಗುವ ಹದ್ಯ್ ಆಗಿದ್ದರೆ, ಅದರಿಂದ ಏನನ್ನೂ ತಿನ್ನಬಾರದು.
ಯಾರು ಕುರ್ಬಾನಿ (ಉದ್ಹಿಯ) ಮಾಡಲು ಉದ್ದೇಶಿಸಿದ್ದಾರೋ, ಅವರು ದುಲ್-ಹಿಜ್ಜಾ ತಿಂಗಳ ಮೊದಲ ಹತ್ತು ದಿನಗಳು ಪ್ರಾರಂಭವಾದಾಗಿನಿಂದ ತಮ್ಮ ಕುರ್ಬಾನಿಯನ್ನು ಕೊಯ್ಯುವವರೆಗೆ ತಮ್ಮ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು. ಅಲ್ಲಾಹುವಿನ ಸಂದೇಶವಾಹಕರು (ಸ) ಹೇಳಿದ್ದಾರೆ:
«إِذَا دَخَلَ الْعَشَرُ، وَأَرَادَ أَحَدُكُمْ أَنْ يُضَحِّيَ؛ فَلَا يَأْخُذْ مِنْ شَعْرِهِ وَلَا مِنْ أَظْفَارِهِ شَيْئًا، حَتَّى يُضَحِّيَ».
"ಹತ್ತು ದಿನಗಳು (ದುಲ್-ಹಿಜ್ಜಾದ ಮೊದಲ ಹತ್ತು ದಿನಗಳು) ಪ್ರಾರಂಭವಾದಾಗ, ಮತ್ತು ನಿಮ್ಮಲ್ಲಿ ಯಾರಾದರೂ ಕುರ್ಬಾನಿ ಮಾಡಲು ಉದ್ದೇಶಿಸಿದ್ದರೆ, ಅವರು ತಮ್ಮ ಕುರ್ಬಾನಿಯನ್ನು ಅರ್ಪಿಸುವವರೆಗೆ ತಮ್ಮ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸದಿರಲಿ."5
ಒಂದು ವೇಳೆ ಯಾರಾದರೂ ಇದನ್ನು ಮಾಡಿದರೆ, ಅವನು ಅಲ್ಲಾಹುವಿನೊಂದಿಗೆ ಕ್ಷಮೆಯಾಚಿಸಬೇಕು. ಅವನು ಯಾವುದೇ ಫಿದ್ಯಾ (ಪರಿಹಾರ) ನೀಡಬೇಕಾಗಿಲ್ಲ.
ಹದ್ಯ್, ಉದ್ಹಿಯ (ಕುರ್ಬಾನಿ) ಮತ್ತು ಇತರ ಪ್ರಾಣಿಗಳನ್ನು ಕೊಯ್ಯುವ ವಿಧಾನ:
1. ವಿವೇಚನೆಯುಳ್ಳ, ಬುದ್ಧಿವಂತ ಮುಸಲ್ಮಾನ, ಅಥವಾ ಕಿತಾಬಿ (ಗ್ರಂಥದ ಜನರು - ಯಹೂದಿ ಅಥವಾ ಕ್ರೈಸ್ತ) ಮಾತ್ರ ಕೊಯ್ಯಬೇಕು. ಕೊಯ್ಯುವವನು ತಝ್ಕಿಯಃ (ಇಸ್ಲಾಮೀ ರೀತಿಯ ಕೊಯ್ಯುವಿಕೆ) ಮಾಡುವ ಉದ್ದೇಶವನ್ನು ಹೊಂದಿರಬೇಕು. ಅಲ್ಲಾಹುವಿಗಲ್ಲದೆ ಬೇರೆಯವರಿಗಾಗಿ ಕೊಯ್ಯಬಾರದು ಮತ್ತು ಅಲ್ಲಾಹುವಿನ ಹೆಸರಲ್ಲದೆ ಬೇರೆಯವರ ಹೆಸರನ್ನು ಹೇಳಬಾರದು. ಕೊಯ್ಯುವಾಗ ಅಥವಾ ನಹ್ರ್ (ಒಂಟೆಯನ್ನು ವಧಿಸುವುದು) ಮಾಡುವಾಗ 'ಬಿಸ್ಮಿಲ್ಲಾ' ಹೇಳಬೇಕು. ಹಲ್ಲು ಅಥವಾ ಉಗುರು ಅಲ್ಲದ ಹರಿತವಾದ ಉಪಕರಣದಿಂದ ಕೊಯ್ಯಬೇಕು. ರಕ್ತವನ್ನು ಅದರ ಸ್ಥಾನದಿಂದ (ಸರಿಯಾಗಿ) ಹರಿಯುವಂತೆ ಮಾಡಬೇಕು.ಕೊಯ್ಯುವವನು ಶರೀಅತ್ ಪ್ರಕಾರ ಕೊಯ್ಯಲು ಅನುಮತಿ ಪಡೆದವನಾಗಿರಬೇಕು6.
2. ಉದ್ಹಿಯಕ್ಕಾಗಿ ಪ್ರಾಣಿಯನ್ನು ಆಯ್ಕೆ ಮಾಡಬೇಕು, ಅತ್ಯಂತ ಪರಿಪೂರ್ಣವಾದ ಕುರ್ಬಾನಿ ಪ್ರಾಣಿಗಳನ್ನು ಆಯ್ಕೆ ಮಾಡಲು ಆಸಕ್ತಿ ತೋರಬೇಕು.
«ضَحَّى رَسُولُ اللَّهِ صَلَّى اللَّهُ عَلَيْهِ وَسَلَّمَ بِكَبْشَيْنِ أَمْلَحَيْنِ، أَقْرَنَيْنِ، ذَبَحَهُمَا بِيَدِهِ، وَسَمَّى، وَكَبَّرَ، وَوَضَعَ رِجْلَهُ عَلَى صِفَاحِهِمَا».
ಅಲ್ಲಾಹುವಿನ ಸಂದೇಶವಾಹಕರು (ಸ) ಕೊಂಬುಗಳಿರುವ, ಬಿಳಿ-ಕಪ್ಪು ಮಿಶ್ರಿತ ಬಣ್ಣದ ಎರಡು ಟಗರುಗಳನ್ನು ಕುರ್ಬಾನಿ ಮಾಡಿದರು. ಅವೆರಡನ್ನೂ ತಮ್ಮ ಕೈಯಿಂದಲೇ ಕೊಯ್ದರು, 'ಬಿಸ್ಮಿಲ್ಲಾ' ಮತ್ತು 'ಅಲ್ಲಾಹು ಅಕ್ಬರ್' ಹೇಳಿದರು. ಮತ್ತು ತಮ್ಮ ಪಾದವನ್ನು ಅವುಗಳ ಕುತ್ತಿಗೆಯ ಪಕ್ಕದಲ್ಲಿ ಇಟ್ಟರು."7
3. ವಧೆ ಮಾಡಲ್ಪಡುವ ಪ್ರಾಣಿಯೊಂದಿಗೆ ಉತ್ತಮವಾಗಿ ವರ್ತಿಸಬೇಕು, ಅಂದರೆ ತಝ್ಕಿಯಃ ಸಮಯದಲ್ಲಿ ಅದಕ್ಕೆ ಆರಾಮ ನೀಡುವ ಎಲ್ಲವನ್ನೂ ಮಾಡಬೇಕು. ಅವುಗಳಲ್ಲಿ ಕೆಲವು ಏನೆಂದರೆ: ಹರಿತವಾದ ಉಪಕರಣದಿಂದ ಕೊಯ್ಯಬೇಕು. ಅದನ್ನು ಕೊಯ್ಯುವ ಅಂಗದ ಬಳಿ ಬಲವಾಗಿ ಮತ್ತು ವೇಗವಾಗಿ ಚಲಾಯಿಸಬೇಕು. ಏಕೆಂದರೆ, ಯಾವುದೇ ಯಾತನೆ ನೀಡದೆ, ಅತ್ಯುತ್ತಮ ರೀತಿಯಲ್ಲಿ ಶೀಘ್ರವಾಗಿ ಪ್ರಾಣ ತೆಗೆಯುವುದು ಅವಶ್ಯಕವಾಗಿದೆ. ಶದ್ದಾದ್ ಬಿನ್ ಔಸ್ (ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಹೇಳಿದರು: ನಾನು ಅಲ್ಲಾಹುವಿನ ಸಂದೇಶವಾಹಕರಿಂದ (ಸ) ಎರಡು ವಿಷಯಗಳನ್ನು ನೆನಪಿಟ್ಟುಕೊಂಡಿದ್ದೇನೆ. ಅವರು ಹೇಳಿದರು:
«إِنَّ اللَّهَ كَتَبَ الْإِحْسَانَ عَلَى كُلِّ شَيْءٍ، فَإِذَا قَتَلْتُمْ فَأَحْسِنُوا الْقِتْلَةَ، وَإِذَا ذَبَحْتُمْ فَأَحْسِنُوا الذَّبْحَ، وَلْيُحِدَّ أَحَدُكُمْ شَفْرَتَهُ، فَلْيُرِحْ ذَبِيحَتَهُ».
"ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಆದ್ದರಿಂದ, ನೀವು ಕೊಲ್ಲುವುದಾದರೆ, ಉತ್ತಮ ರೀತಿಯಲ್ಲಿ ಕೊಲ್ಲಿರಿ; ಮತ್ತು ನೀವು ವಧೆ ಮಾಡುವುದಾದರೆ, ಉತ್ತಮ ರೀತಿಯಲ್ಲಿ ವಧೆ ಮಾಡಿರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಚಾಕುವನ್ನು ಹರಿತಗೊಳಿಸಲಿ ಮತ್ತು ತಮ್ಮ ಪ್ರಾಣಿಗೆ ಆರಾಮ ನೀಡಲಿ."8
ಪ್ರಾಣಿ ನೋಡುವ ರೀತಿಯಲ್ಲಿ ಚಾಕು ಹರಿತಗೊಳಿಸುವುದು ಅಪ್ರಿಯ ಸಂಗತಿಯಾಗಿದೆ. ಇಬ್ನ್ ಉಮರ್ (ರ) ರಿಂದ ವರದಿ. ಅವರು ಹೇಳಿದರು:
أَمَرَ النَّبِيُّ صَلَّى اللَّهُ عَلَيْهِ وَسَلَّمَ بِحَدِّ الشَّفَارِ، وَأَنْ تُوَارَى عَنِ الْبَهَائِمِ، وَقَالَ: «إِذَا ذَبَحَ أَحَدُكُمْ؛ فَلْيُجْهِزْ».
ಪ್ರವಾದಿ (ಸ) ರವರು ಚಾಕುಗಳನ್ನು ಹರಿತಗೊಳಿಸಲು ಮತ್ತು ಅವುಗಳನ್ನು ಪ್ರಾಣಿಗಳಿಂದ ಮರೆಮಾಡಲು ಆದೇಶಿಸಿದರು ಮತ್ತು ಹೇಳಿದರು: "ನಿಮ್ಮಲ್ಲಿ ಯಾರಾದರೂ ಕೊಯ್ಯುವುದಾದರೆ, ಅವನು ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲಿ."9
4. ಕುರ್ಬಾನಿ ಪ್ರಾಣಿಯು ಒಂಟೆಯಾಗಿದ್ದರೆ, ಅದರ ಎಡ ಮುಂಗಾಲನ್ನು ಕಟ್ಟಿ ನಿಂತಿರುವ ಸ್ಥಿತಿಯಲ್ಲಿ 'ನಹ್ರ್' (ಕುತ್ತಿಗೆಯ ಕೆಳಭಾಗಕ್ಕೆ ಇರಿಯುವುದು) ಮಾಡಬೇಕು. ಅಬ್ದುಲ್ಲಾ ಬಿನ್ ಉಮರ್ (ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ: "ಅವರು ಒಬ್ಬ ವ್ಯಕ್ತಿಯ ಬಳಿಗೆ ಬಂದರು. ಅವನು ತನ್ನ ಒಂಟೆಯನ್ನು ಮಲಗಿಸಿ 'ನಹ್ರ್' ಮಾಡಲು ಸಿದ್ಧನಾಗಿದ್ದನು. ಆಗ ಅವರು ಹೇಳಿದರು: 'ಅದನ್ನು ಎಬ್ಬಿಸಿ, (ಎಡಗಾಲು) ಕಟ್ಟಿ ನಿಲ್ಲಿಸಿ (ನಹ್ರ್ ಮಾಡು), ಇದು ಮುಹಮ್ಮದ್ (ಸ) ರವರ ಸುನ್ನತ್ (ಆಗಿದೆ.' "10
5. ಕುರ್ಬಾನಿ ಪ್ರಾಣಿಯು ಒಂಟೆಯಲ್ಲದಿದ್ದರೆ, ಅದನ್ನು ಅದರ ಎಡ ಪಾರ್ಶ್ವದ ಮೇಲೆ ಮಲಗಿಸಿ ವಧೆ ಮಾಡಬೇಕು, ಮತ್ತು ನಿಯಂತ್ರಣ ಸಾಧಿಸಲು ಅದರ ಕುತ್ತಿಗೆಯ ಪಕ್ಕದಲ್ಲಿ ತನ್ನ ಕಾಲನ್ನು ಇಡಬೇಕು. ಅನಸ್ (ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಹೇಳಿದರು:
«ضَحَّى رَسُولُ اللَّهِ صَلَّى اللَّهُ عَلَيْهِ وَسَلَّمَ بِكَبْشَيْنِ، أَمْلَحَيْنِ، أَقْرَنَيْنِ، ذَبَحَهُمَا بِيَدِهِ، وَسَمَّى، وَكَبَّرَ، وَوَضَعَ رِجْلَهُ عَلَى صِفَاحِهِمَا».
"ಅಲ್ಲಾಹುವಿನ ಸಂದೇಶವಾಹಕರು (ಸ) ಕೊಂಬುಗಳಿರುವ, ಬಿಳಿ-ಕಪ್ಪು ಮಿಶ್ರಿತ ಬಣ್ಣದ ಎರಡು ಟಗರುಗಳನ್ನು ಕುರ್ಬಾನಿ ಮಾಡಿದರು. ಅವೆರಡನ್ನೂ ತಮ್ಮ ಕೈಯಿಂದಲೇ ವಧೆ ಮಾಡಿದರು, 'ಬಿಸ್ಮಿಲ್ಲಾ' ಮತ್ತು 'ಅಲ್ಲಾಹು ಅಕ್ಬರ್' ಹೇಳಿದರು. ಮತ್ತು ತಮ್ಮ ಪಾದವನ್ನು ಅವುಗಳ ಕುತ್ತಿಗೆಯ ಪಕ್ಕದಲ್ಲಿ ಇಟ್ಟರು."11
6. ಕೊಯ್ಯುವುದು ಮತ್ತು ನಹ್ರ್ ಮಾಡುವಾಗ 'ಬಿಸ್ಮಿಲ್ಲಾ' ಹೇಳುವುದು ವಾಜಿಬ್ (ಕಡ್ಡಾಯ) ಆಗಿದೆ. ಅಲ್ಲಾಹು ಹೇಳುತ್ತಾನೆ:
﴿فَكُلُواْ مِمَّا ذُكِرَ ٱسۡمُ ٱللَّهِ عَلَيۡهِ إِن كُنتُم بِـَٔايَٰتِهِۦ مُؤۡمِنِينَ 118﴾
"ಯಾವುದರ ಮೇಲೆ ಅಲ್ಲಾಹುವಿನ ಹೆಸರು ಹೇಳಲಾಗಿದೆಯೋ ಅದರಿಂದ ತಿನ್ನಿರಿ. ನೀವು ಅವನ ವಚನಗಳಲ್ಲಿ ವಿಶ್ವಾಸವುಳ್ಳವರಾಗಿದ್ದರೆ." [ಸೂರ ಅಲ್- ಅನ್ ಆಮ್: 118] ಮತ್ತು ಅಲ್ಲಾಹು ಹೇಳುತ್ತಾನೆ:
﴿وَلَا تَأۡكُلُواْ مِمَّا لَمۡ يُذۡكَرِ ٱسۡمُ ٱللَّهِ عَلَيۡهِ وَإِنَّهُۥ لَفِسۡق وَإِنَّ ٱلشَّيَٰطِينَ لَيُوحُونَ إِلَىٰٓ أَوۡلِيَآئِهِمۡ لِيُجَٰدِلُوكُمۡۖ وَإِنۡ أَطَعۡتُمُوهُمۡ إِنَّكُمۡ لَمُشۡرِكُونَ 121﴾
"ಮತ್ತು ಯಾವುದರ ಮೇಲೆ ಅಲ್ಲಾಹುವಿನ ಹೆಸರು ಹೇಳಲಾಗಿಲ್ಲವೋ ಅದರಿಂದ ತಿನ್ನಬೇಡಿರಿ. ನಿಶ್ಚಯವಾಗಿಯೂ ಅದು ಪಾಪಕಾರ್ಯವಾಗಿದೆ ಮತ್ತು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ನಿಮ್ಮೊಂದಿಗೆ ವಾದ ಮಾಡಲು ಪ್ರೇರೇಪಿಸುತ್ತಾರೆ. ಒಂದು ವೇಳೆ ನೀವು ಅವರನ್ನು ಅನುಸರಿಸಿದರೆ, ನಿಶ್ಚಯವಾಗಿಯೂ ನೀವು ಮುಶ್ರಿಕ್ಗಳಾಗುವಿರಿ." [ಸೂರ ಅಲ್- ಅನ್ ಆಮ್: 121] ಪ್ರವಾದಿ(ಸ) ರವರು ಹೇಳಿದರು:
«مَا أَنْهَرَ الدَّمَ وَذُكِرَ اسْمُ اللَّهِ عَلَيْهِ؛ فَكُلُوهُ مَا لَمْ يَكُنْ سِنًّا وَلَا ظُفْرًا».
"ಯಾವುದು ರಕ್ತವನ್ನು ಹರಿಯುವಂತೆ ಮಾಡುತ್ತದೋ ಮತ್ತು ಅದರ ಮೇಲೆ ಅಲ್ಲಾಹುವಿನ ಹೆಸರು ಹೇಳಲಾಗಿದೆಯೋ, ಅದನ್ನು ತಿನ್ನಿರಿ; ಆದರೆ (ಕೊಯ್ಯುವ ಉಪಕರಣವು) ಹಲ್ಲು ಅಥವಾ ಉಗುರು ಆಗಿರಬಾರದು."12
ಬಿಸ್ಮಿಲ್ಲಾದೊಂದಿಗೆ 'ಅಲ್ಲಾಹು ಅಕ್ಬರ್' ಹೇಳುವುದು ಅಪೇಕ್ಷಣೀಯವಾಗಿದೆ. ಜಾಬಿರ್ (ರ) ರವರ ಹದೀಸ್ ಇದಕ್ಕೆ ಆಧಾರವಾಗಿದೆ. ಅವರು ಹೇಳಿದರು: "ನಾನು ಅಲ್ಲಾಹುವಿನ ಸಂದೇಶವಾಹಕರೊಂದಿಗೆ (ಸ) ಈದುಲ್ ಅದ್ಹಾದಂದು ಮುಸಲ್ಲಾದಲ್ಲಿ (ನಮಾಝ್ ಮಾಡುವ ಸ್ಥಳ) ಹಾಜರಿದ್ದೆನು. ಅವರು ತಮ್ಮ ಖುತ್ಬಾವನ್ನು ಮುಗಿಸಿ ತಮ್ಮ ಮಿಂಬರ್ನಿಂದ ಕೆಳಗಿಳಿದಾಗ, ಒಂದು ಟಗರನ್ನು ತರಲಾಯಿತು. ಅಲ್ಲಾಹುವಿನ ಸಂದೇಶವಾಹಕರು (ಸ) ಅದನ್ನು ತಮ್ಮ ಕೈಯಿಂದ ಕೊಯ್ದರು ಮತ್ತು ಹೇಳಿದರು:
«بِسْمِ اللَّهِ وَاللَّهُ أَكْبَرُ، هَذَا عَنِّي وَعَنْ مَنْ لَمْ يُضَحِّ مِنْ أُمَّتِي».
"ಬಿಸ್ಮಿಲ್ಲಾಹಿ ವಲ್ಲಾಹು ಅಕ್ಬರ್. ಇದು ನನ್ನ ಪರವಾಗಿ ಮತ್ತು ನನ್ನ ಉಮ್ಮತ್ (ಸಮುದಾಯ) ನಲ್ಲಿ ಯಾರು ಕುರ್ಬಾನಿ ಮಾಡಿಲ್ಲವೋ ಅವರ ಪರವಾಗಿ."13
7. ಶ್ವಾಸನಾಳ, ಅನ್ನನಾಳ ಮತ್ತು (ಕತ್ತಿನ) ಎರಡು ಮುಖ್ಯ ರಕ್ತನಾಳಗಳನ್ನು ಕತ್ತರಿಸುವುದು ಮತ್ತು ರಕ್ತವನ್ನು ಹರಿಯುವಂತೆ ಮಾಡುವುದು: ಇಮಾಮ್ ಇಬ್ನ್ ಬಾಝ್ (ರಹಿಮಹುಲ್ಲಾಹ್) ಹೇಳುತ್ತಾರೆ: "ನಿಶ್ಚಯವಾಗಿಯೂ ಒಂಟೆ, ದನ ಮತ್ತು ಕುರಿ/ಮೇಕೆಗಳ ನಿಯಮಾನುಸೃತ ತಝ್ಕಿಯಃ (ಕೊಯ್ಯುವಿಕೆ) ಮೂರು ಸ್ಥಿತಿಗಳನ್ನು ಹೊಂದಿದೆ:
ಮೊದಲನೇ ಸ್ಥಿತಿ: ಕೊಯ್ಯುವವನು ಶ್ವಾಸನಾಳ, ಅನ್ನನಾಳ ಮತ್ತು ಎರಡು ಮುಖ್ಯ ರಕ್ತನಾಳಗಳನ್ನು ಕತ್ತರಿಸುವುದು. ಇದು ಕೊಯ್ಯುವಿಕೆಯ ಅತ್ಯಂತ ಪರಿಪೂರ್ಣ ಮತ್ತು ಉತ್ತಮ ವಿಧಾನವಾಗಿದೆ. ಈ ನಾಲ್ಕನ್ನೂ ಕತ್ತರಿಸಿದರೆ, ಎಲ್ಲಾ ವಿದ್ವಾಂಸರ ಪ್ರಕಾರ ಕೊಯ್ಯುವಿಕೆಯು ಹಲಾಲ್ ಆಗುತ್ತದೆ.
ಎರಡನೇ ಸ್ಥಿತಿ: ಶ್ವಾಸನಾಳ, ಅನ್ನನಾಳ ಮತ್ತು ಎರಡು ಮುಖ್ಯ ರಕ್ತನಾಳಗಳಲ್ಲಿ ಒಂದನ್ನು ಕತ್ತರಿಸುವುದು. ಇದು ಮೊದಲನೆಯದಕ್ಕಿಂತ ಕಡಿಮೆ ದರ್ಜೆಯದಾಗಿದ್ದರೂ, ಹಲಾಲ್, ಸರಿಯಾದದ್ದು ಮತ್ತು ಉತ್ತಮವಾದದ್ದಾಗಿದೆ.
ಮೂರನೇ ಸ್ಥಿತಿ: ಎರಡು ಮುಖ್ಯ ರಕ್ತನಾಳಗಳನ್ನು ಕತ್ತರಿಸದೆ, ಕೇವಲ ಶ್ವಾಸನಾಳ ಮತ್ತು ಅನ್ನನಾಳವನ್ನು ಮಾತ್ರ ಕತ್ತರಿಸುವುದು. ಇದೂ ಕೂಡ ಸರಿಯಾದದ್ದು, ಮತ್ತು ಅನೇಕ ವಿದ್ವಾಂಸರು ಇದನ್ನು ಹೇಳಿದ್ದಾರೆ. ಅವರ ಆಧಾರವು ಪ್ರವಾದಿ (ಸ) ರವರ ಈ ವಚನವಾಗಿದೆ:
«مَا أَنْهَرَ الدَّمَ وَذُكِرَ اسْمُ اللَّهِ عَلَيْهِ فَكُلُوا، لَيْسَ السِّنَّ وَالظُّفْرَ».
«ಯಾವುದು ರಕ್ತವನ್ನು ಹರಿಯುವಂತೆ ಮಾಡುತ್ತದೋ ಮತ್ತು ಅದರ ಮೇಲೆ ಅಲ್ಲಾಹುವಿನ ಹೆಸರು ಹೇಳಲಾಗಿದೆಯೋ, ಅದನ್ನು ತಿನ್ನಿರಿ; ಆದರೆ (ಕೊಯ್ಯುವ ಉಪಕರಣವು) ಹಲ್ಲು ಅಥವಾ ಉಗುರು ಆಗಿರಬಾರದು."14 ಮತ್ತು ಈ ವಿಷಯದಲ್ಲಿ ಇದೇ ಆರಿಸಲಾದ ಅಭಿಪ್ರಾಯವಾಗಿದೆ15.
ನಾವು ಕಲಿತದ್ದನ್ನು ನಮಗೆ ಪ್ರಯೋಜನಕಾರಿಯಾಗಿ ಮಾಡಲು ಮತ್ತು ನಮಗೆ ಪ್ರಯೋಜನಕಾರಿಯಾದುದನ್ನು (ಮಾತ್ರ) ನಮಗೆ ಕಲಿಸಲು ನಾವು ಅಲ್ಲಾಹುವಿನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಪರಮ ಉದಾರಿಯಾಗಿದ್ದಾನೆ. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಹೇರಳವಾಗಿ ವರ್ಷಿಸಲಿ.
***
ಇದನ್ನು ತಿರ್ಮಿದಿ ಮತ್ತು ಇಬ್ನ್ ಮಾಜಃ ಕೂಡ ವರದಿ ಮಾಡಿದ್ದಾರೆ.
ಇದನ್ನು ಅಬೂ ದಾವೂದ್, ತಿರ್ಮಿದಿ, ನಸಾಈ ಮತ್ತು ಇಬ್ನ್ ಮಾಜ ವರದಿ ಮಾಡಿದ್ದಾರೆ.
ಇದನ್ನು ತಿರ್ಮಿದಿ ವರದಿ ಮಾಡಿದ್ದಾರೆ.
ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಅಲ್ಲಾಮಾ ಮುಹಮ್ಮದ್ ಬಿನ್ ಉಸೈಮೀನ್ ರವರ 'ಅಹ್ಕಾಮುಲ್-ಉದ್ಹಿಯ', (ಪುಟ 56 – 87).
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಅಹ್ಮದ್ ಮತ್ತು, ಇಬ್ನ್ ಮಾಜ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ಇದನ್ನು ಅಬೂ ದಾವೂದ್ ಮತ್ತು ತಿರ್ಮಿದಿ ವರದಿ ಮಾಡಿದ್ದಾರೆ ಮತ್ತು ಅಲ್ಬಾನಿಯವರು ಇದನ್ನು ಸಹೀಹ್ ಎಂದಿದ್ದಾರೆ.
ಇದನ್ನು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ್ದಾರೆ.
ನೋಡಿ: ಮಜ್ಮೂಅ್ ಫತಾವಾ ಇಬ್ನ್ ಬಾಝ್ (18/26).
ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ.